ಪದ್ಯ ೨೦: ಧರ್ಮಜನು ಯಾರ ಸೇವಕನಾದನು?

ಓಲಗಕೆ ಬಂದಖಿಳರಾಯರ
ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ
ಕಾಲವಾವನನಾವಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ (ವಿರಾಟ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಆಸ್ಥಾನಕ್ಕೆ ಬಂದ ರಾಜರ ಕಿರೀಟಗಳ ಮುತ್ತು ರತ್ನಗಳು ಧರ್ಮಜನ ಪಾದಗಳಿಗೆ ನಿವಾಳಿಮಾಡುತ್ತಿದ್ದವು. ಆದರೆ ಕಾಲವು ಯಾರನ್ನು ಯಾವ ರೀತಿಯಲ್ಲಿ ಕೀಳುಗಳೆಯುತ್ತದೆ ಎನ್ನುವುದು ಮಾತಿಗೆ ಮೀರಿದ್ದು. ಹುಲು ಮಾಂಡಲಿಕನಾದ ವಿರಾಟನು ಧರ್ಮಜನನ್ನು ಇಂದು ತನ್ನ ಸೇವಕನಾಗಿಟ್ಟುಕೊಂಡನು.

ಅರ್ಥ:
ಓಲಗ: ದರ್ಬಾರು; ಬಂದು: ಆಗಮಿಸು; ಅಖಿಳ: ಎಲ್ಲಾ; ರಾಯ: ರಾಜ; ಮೌಳಿ: ಶಿರ; ರಾಜರಮೌಳಿ: ರಾಜರಲ್ಲಿ ಶ್ರೇಷ್ಠನಾದವ; ಮೌಕ್ತಿಕ: ಮುತ್ತು; ಮಣಿ: ಬೆಲೆಬಾಳುವ ರತ್ನ; ಮಯೂಖ: ಕಿರಣ, ರಶ್ಮಿ; ನಿವಾಳಿ: ನೀವಳಿಸುವುದು, ದೃಷ್ಟಿ ತೆಗೆಯುವುದು; ನೆರೆ: ಪಕ್ಕ, ಪಾರ್ಶ್ವ; ಮೆರೆ: ಪ್ರಕಾಶಿಸು; ಪಾದ: ಚರಣ; ಪದ್ಮ: ಕಮಲ; ಯುಗ: ಎರಡು; ಕಾಲ: ಸಮಯ; ಪರಿ: ರೀತಿ; ಕೀಳು: ನೀಅ; ಆಳು: ಸೇವಕ; ಕ್ಷಿತಿಪ: ರಾಜ;

ಪದವಿಂಗಡಣೆ:
ಓಲಗಕೆ +ಬಂದ್+ಅಖಿಳ+ರಾಯರ
ಮೌಳಿ +ಮೌಕ್ತಿಕ+ ಮಣಿ +ಮಯೂಖ +ನಿ
ವಾಳಿಯಲಿ +ನೆರೆ +ಮೆರೆವುದ್+ಆತನ +ಪಾದ +ಪದ್ಮಯುಗ
ಕಾಲವ್+ಆವನನ್+ಆವ+ಪರಿಯಲಿ
ಕೀಳು +ಮಾಡದು +ಧರ್ಮ+ಪುತ್ರನನ್
ಆಳು+ಕೊಂಡನು +ಮತ್ಸ್ಯನೆಲೆ+ ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರಾಜ, ಕ್ಷಿತಿಪ – ಸಮನಾರ್ಥಕ ಪದ
(೨) ಮ ಕಾರದ ಸಾಲು ಪದ – ಮೌಳಿ ಮೌಕ್ತಿಕ ಮಣಿ ಮಯೂಖ
(೩) ಧರ್ಮಜನ ಹಿಂದಿನ ಹಿರಿಮೆ – ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ