ಪದ್ಯ ೭: ವ್ಯಕ್ತಿಯು ಭೂಮಿಯಲ್ಲಿ ಹೇಗೆ ಬದುಕಬೇಕು?

ನೇತ್ರ ನಾಸಿಕ ಪಾಣಿ ಪಾದ
ಶ್ರೋತ್ರವೆಂಬಿವು ತಮ್ಮೊಳೊಂದೇ
ಸೂತ್ರದೊಳು ಸಂಸೃಷ್ಟವಾಗಿ ಸಮಾನ ಬುದ್ಧಿಯಲಿ
ಗಾತ್ರವಿಡಿದಿಹವೋಲು ವಿಶ್ವದ
ಮೈತ್ರಿಯಲಿ ಮನಸಂದು ಪಾತ್ರಾ
ಪಾತ್ರವೆನ್ನದೆ ಬೆರಸಿ ಬದುಕುವುದಧಿಕಗುಣವೆಂದ (ಉದ್ಯೋಗ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಕಣ್ಣು, ಮೂಗು, ಕೈ ಕಾಲು ಕಿವಿ ಎಂದು ಬೇರೆ ಬೇರೆ ಅಂಗಗಳಿದ್ದರೂ ಒಂದೇ ಸೂತ್ರದಿಂದ ಸೃಷ್ಟಿಸಲ್ಪಟ್ಟು ಸಮಾನ ಬುದ್ಧಿಯಿಂದ ದೇಹದಲ್ಲಿರುವಂತೆ ವ್ಯಕ್ತಿಯು ವಿಶ್ವ ಸ್ನೇಹದಿಂದ ಯೋಗ್ಯ ಅಯೋಗ್ಯಗಳ ಭೇದವಿಲ್ಲದೆ ಬೆರಸಿ ಬಾಳುವುದು ಹೆಚ್ಚಿನ ಗುಣ ಎಂದು ಸನತ್ಸುಜಾತರು ತಿಳಿಸುತ್ತಾರೆ.

ಅರ್ಥ:
ನೇತ್ರ: ಕಣ್ಣು, ನಯನ; ನಾಸಿಕ: ಮೂಗು; ಪಾಣಿ: ಹಸ್ತ; ಪಾದ: ಚರಣ, ಕಾಲು; ಶ್ರೋತ್ರ: ಕಿವಿ, ಕರಣ; ಸೂತ್ರ: ನಿಯಮ; ಸಂಸೃಷ್ಟ: ಹುಟ್ಟಿಸಿದ; ಸಮಾನ: ಒಂದೇ ರೀತಿ; ಬುದ್ಧಿ: ತಿಳಿವು, ಅರಿವು, ಚಿತ್ತ; ಗಾತ್ರ: ಒಡಲು, ದೇಹ; ಹಿಡಿ: ತಳೆ, ಗ್ರಹಿಸು; ವಿಶ್ವ: ಜಗತ್ತು; ಮೈತ್ರಿ: ಸ್ನೇಹ; ಮನಸು: ಚಿತ್ತ; ಸಂದು: ಮೂಲೆ, ಕೋನ; ಪಾತ್ರ: ಯೋಗ್ಯತೆ, ಅರ್ಹತೆ; ಅಪಾತ್ರ: ಅಯೋಗ್ಯ; ಬೆರಸು: ಸೇರಿಸು; ಬದುಕು: ಜೀವಿಸು; ಅಧಿಕ: ಹೆಚ್ಚು; ಗುಣ:ನಡತೆ, ಸ್ವಭಾವ;

ಪದವಿಂಗಡಣೆ:
ನೇತ್ರ +ನಾಸಿಕ +ಪಾಣಿ +ಪಾದ
ಶ್ರೋತ್ರವೆಂಬ್+ಇವು+ ತಮ್ಮೊಳ್+ಒಂದೇ
ಸೂತ್ರದೊಳು +ಸಂಸೃಷ್ಟವಾಗಿ +ಸಮಾನ +ಬುದ್ಧಿಯಲಿ
ಗಾತ್ರವಿಡಿದಿಹವೋಲು+ ವಿಶ್ವದ
ಮೈತ್ರಿಯಲಿ +ಮನಸಂದು +ಪಾತ್ರ
ಅಪಾತ್ರವೆನ್ನದೆ +ಬೆರಸಿ+ ಬದುಕುವುದ್+ಅಧಿಕ+ಗುಣವೆಂದ

ಅಚ್ಚರಿ:
(೧) ಜಗತ್ತಿನಲ್ಲಿರುವುದೆಲ್ಲವು ಒಂದೇ, ಇದರಲ್ಲಿ ಯೋಗ್ಯ ಅಯೋಗ್ಯ ರೆಂಬ ಭೇದವಿಲ್ಲ ಎಂದು ಸಾರುವ ಪದ್ಯ
(೨) ೫ ಪಂಚೇದ್ರಿಯಗಳ ಬಳಕೆ – ನೇತ್ರ, ನಾಸಿಕ, ಪಾಣಿ, ಪಾದ, ಶ್ರೋತ್ರ
(೩) ಪಾತ್ರಾಪಾತ್ರ – ಪಾತ್ರ, ಅಪಾತ್ರ ಎಂದು ಹೇಳುವ ಪದ

ಪದ್ಯ ೪೨: ಅರ್ಜುನನ ಎಚ್ಚರಿಕೆ ಮಾತುಗಳು ಹೇಗಿದ್ದವು?

ಗರುಡಿಯಧಿಪತಿಯಾಣೆ ಕೃಷ್ಣನ
ಚರಣ ಸರಸಿಜದಾಣೆ ತ್ರಿಪುರವ
ನುರುಹಿದಭವನ ಪಾದ ಪಂಕಜದಾಣೆ ಮರೆಯೇಕೆ
ಸುರಪ ನೀನೇ ಕಳುಹದಿರ್ದೊಡೆ
ಪರಮ ಮುನಿ ದೂರ್ವಾಸ ನಿನ್ನನು
ನೆರಹಿದಂದವ ಮಾಡುವೆನು ಹರಿಕರುಣವುಂಟೆಮಗೆ (ಆದಿ ಪರ್ವ, ೨೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬಯಕೆಯನ್ನು ಈಡೇರಿಸದಿದ್ದರೆ ಏನು ಮಾಡಬಲ್ಲೆ ಎಂಬ ಎಚ್ಚರಿಕೆಯನ್ನೂ ಇಂದ್ರನಿಗೆ ಪತ್ರದಲ್ಲಿ ಬರದಿದ್ದನು. ವಿದ್ಯೆಕಲಿಸಿದ ಗುರುಗಳಾದ ದ್ರೋಣರ ಮೇಲಾಣೆ, ಕೃಷ್ನನ ಪಾದಪದ್ಮಗಳ ಮೇಲಾಣೆ, ತ್ರಿಪುರಗಳನ್ನು ಸಂಹರಿಸಿದ ಈಶ್ವರನ ಪಾದಕಮಲಗಳ ಮೇಲಾಣೆ, ನೀನು ನಾನು ಕೇಳಿದ ವಸ್ತುಗಳನ್ನು ಕಳಿಸದಿದ್ದರೆ, ಹಿಂದೆ ದೂರ್ವಾಸರು ನಿನ್ನ ಐಶ್ವರ್ಯವನ್ನು ನೀರಿನಲ್ಲದ್ದಿದ್ದಂತೆ ಮಾಡುತ್ತೇನೆ, ಶ್ರೀಹರಿಯ ಕೃಪಾಕಟಾಕ್ಷ ನಮ್ಮಮೇಲಿದೆ, ಎಂದು ಬರೆದಿದ್ದನು.

ಅರ್ಥ:
ಗರುಡಿ: ವ್ಯಾಯಾಮ ಶಾಲೆ; ಅಧಿಪತಿ: ರಾಜ, ಮುಖ್ಯಸ್ಥ; ಗರುಡಿಯಧಿಪತಿ: ದ್ರೋಣಾಚಾರ್ಯ; ಚರಣ: ಪಾದ; ಸರಸಿಜ: ಕಮಲ; ಆಣೆ: ಪ್ರಮಾಣ; ಉರು: ಶ್ರೇಷ್ಠ; ಪಾದ: ಚರಣ; ಪಂಕಜ: ಕಮಲ; ಮರೆ: ಗುಟ್ಟು, ರಹಸ್ಯ; ಸುರಪ: ದೇವೇಂದ್ರ; ಕಳುಹು: ಕಳಿಸು; ಪರಮ: ಶ್ರೇಷ್ಠ; ಮುನಿ: ಋಷಿ; ನೆರ: ಸಹಾಯ; ಮಾಡು: ನೆರವೇರಿಸು; ಹರಿ: ವಿಷ್ಣು; ಕರುಣ: ಕೃಪೆ; ಎಮಗೆ: ನಮಗೆ;

ಪದವಿಂಗಡಣೆ:
ಗರುಡಿ+ಅಧಿಪತಿ+ಯಾಣೆ +ಕೃಷ್ಣನ
ಚರಣ +ಸರಸಿಜದಾಣೆ +ತ್ರಿಪುರವನ್
ಉರುಹಿದಭವನ +ಪಾದ +ಪಂಕಜದಾಣೆ +ಮರೆಯೇಕೆ
ಸುರಪ +ನೀನೇ +ಕಳುಹದಿರ್ದೊಡೆ
ಪರಮ +ಮುನಿ +ದೂರ್ವಾಸ +ನಿನ್ನನು
ನೆರಹಿದಂದವ +ಮಾಡುವೆನು +ಹರಿಕರುಣವುಂಟೆಮಗೆ

ಅಚ್ಚರಿ:
(೧) ಆಣೆ: ೩ ಬಾರಿ ಪ್ರಯೋಗ
(೨) ಸರಸಿಜ, ಪಂಕಜ; ಚರಣ, ಪಾದ – ಸಮನಾರ್ಥಕ ಪದ

ಪದ್ಯ ೨೦: ಧರ್ಮವು ಯುಧಿಷ್ಠಿರನ ರಾಜ್ಯದಲ್ಲಿ ಯಾವ ಸ್ಥಿತಿಯಲ್ಲಿತ್ತು?

ಆದಿಯುಗದೊಳು ಧರ್ಮವಿದ್ದುದು
ಪಾದ ನಾಲ್ಕರ ಗಾಢಗತಿಯಲಿ
ಪಾದವೂಣೆಯವಾದುದಾ ತ್ರೇತಾಪ್ರಭಾವದಲಿ
ಪಾದವೆರಡಡಗಿದುದು ದ್ವಾಪರ
ದಾದಿಯಲ್ಲಿ ಯುಧಿಷ್ಠಿರನ ರಾ
ಜ್ಯೋದಯದಲಂಕುರಿಸಿ ಸುಳಿದುದು ನಾಲ್ಕು ಪಾದದಲಿ (ಆದಿ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ನಾಲ್ಕು ಯುಗಗಳಲ್ಲಿ ಮೊದಲಾದ ಕೃತಯುಗದಲ್ಲಿ ಧರ್ಮವು ನಾಲ್ಕು ಕಾಲುಗಳಲ್ಲಿ ನಿಂತಿತ್ತು, ತ್ರೇತಾಯುಗದ ಪ್ರಭಾವದಿಂದ ಧರ್ಮಕ್ಕೆ ಒಂದು ಕಾಲು ಹೋಗಿ ಮೂರೆ ಕಾಲುಗಳಮೇಲೆ ನಿಂತಿತು, ದ್ವಾಪರದ ಆದಿಯಲ್ಲಿ ಇನ್ನೊಂದು ಕಾಲು ಸಹ ಹೋಗಿ, ಎರಡೇ ಕಾಲುಗಳ ಮೇಲೆ ನಿಂತಿತು,ಆದರೆ ಯುಧಿಷ್ಠಿರನ ರಾಜ್ಯದಲ್ಲಿ ಧರ್ಮಕ್ಕೆ ಹೋಗಿದ್ದ ಎರಡು ಪಾದಗಳು ಚಿಗುರಿ ಅದು ಮತ್ತೆ ನಾಲ್ಕು ಪಾದಗಳ ಮೇಲೆ ನಿಂತಿತು.

ಅರ್ಥ:
ಆದಿ: ಪ್ರಾರಂಭ; ಯುಗ: ದೀರ್ಘವಾದ ಕಾಲಖಂಡ; ಧರ್ಮ: ಧಾರಣ ಮಾಡಿದುದು, ಶ್ರದ್ಧೆ; ಪಾದ: ಚರಣ; ಗಾಢಗತಿ:ವೇಗವಾದ ನಡಿಗೆ; ಊಣೆ: ಊನ, ಅಂಗಹೀನತೆ; ಪ್ರಭಾವ: ಪ್ರಾಬಲ್ಯ; ಅಡಗು: ಮರೆಯಾಗು; ಉದಯ: ಹುಟ್ಟು; ಅಲಂಕರಿಸು: ಶೃಂಗಾರಗೊಳ್ಳು; ಸುಳಿದು:ಕಾಣಿಸಿಕೊಳ್ಳು;

ಪದವಿಂಗಡಣೆ:
ಆದಿ+ಯುಗದೊಳು +ಧರ್ಮವಿದ್ದುದು
ಪಾದ +ನಾಲ್ಕರ +ಗಾಢಗತಿಯಲಿ
ಪಾದ+ವೂಣೆಯವ್+ಆದುದಾ +ತ್ರೇತಾ+ಪ್ರಭಾವದಲಿ
ಪಾದವೆರಡ್+ಅಡಗಿದುದು +ದ್ವಾಪರದ್
ಆದಿಯಲ್ಲಿ +ಯುಧಿಷ್ಠಿರನ+ ರಾ
ಜ್ಯೋದಯದಲ್+ಅಲಂಕುರಿಸಿ+ ಸುಳಿದುದು +ನಾಲ್ಕು +ಪಾದದಲಿ

ಅಚ್ಚರಿ:
(೧) ಯುಧಿಷ್ಠಿರನ ರಾಜ್ಯದಲ್ಲಿ ಧರ್ಮವು ಹೇಗೆ ತನ್ನ ಹಿರಿಮೆಯನ್ನು ಪಡೆಯಿತು ಎಂದು ಸೂಕ್ತವಾಗಿ ವರ್ಣಿಸಲಾಗಿದೆ
(೨)ಆದಿ – ೧, ೫ ಸಾಲಿನ ಮೊದಲ ಪದ, ಪಾದ – ೨,೩, ೪ ಸಾಲಿನ ಮೊದಲ ಪದ (ಒಟ್ಟು ನಾಲ್ಕು ಬಾರಿ ಪ್ರಯೋಗ)
(೩) ಊಣೆ, ಅಡಗು – ಸಮಾನ ಅರ್ಥ ಕೊಡುವ ಪದಗಳ ಬಳಕೆ