ಪದ್ಯ ೧೧: ದುರ್ಯೊಧನನು ಯಾರನ್ನು ಸಮಾಧಾನ ಪಡಿಸಲು ಹೇಳಿದನು?

ಸಾಕದಂತಿರಲಿನ್ನು ವೈರಿ
ವ್ಯಾಕರಣಪಾಂಡಿತ್ಯದಲ್ಲಿ ವಿ
ವೇಕಶೂನ್ಯರು ನಾವು ಮೊದಲಾದೌರ್ಧ್ವದೈಹಿಕವ
ಆಕೆವಾಳರಿಗರುಹಿ ನೀವ
ಸ್ತೋಕಪುಣ್ಯರ ತಿಳುಹಿ ವಿಗಳಿತ
ಶೋಕರೆನಿಸುವುದಂಧನೃಪ ಗಾಂಧಾರಿದೇವಿಯರ (ಗದಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಮಾತಿಗೆ ಉತ್ತರಿಸುತ್ತಾ ದುರ್ಯೋಧನನು, ಅದು ಹಾಗಿರಲಿ, ವೈರ್ಗಳೊಡನೆ ಮಾಡಿದ ಯುದ್ಧದಲ್ಲಿ ನಾವು ಅವಿವೇಕದಿಂದ ವರ್ತಿಸಿದ್ದೇವೆ. ನಮ್ಮನ್ನು ಸೇರಿಸಿ, ಎಲ್ಲರ ಅಂತ್ಯಕ್ರಿಯೆಗಳನ್ನು ಮಾಡಿಸಲು ವೀರರಿಗೆ ತಿಳಿಸಿರಿ. ನಮ್ಮ ತಂದೆ ತಾಯಿಗಳಾದ ಗಾಂಧಾರಿ, ಧೃತರಾಷ್ಟ್ರರನ್ನು ಸಮಾಧಾನ ಪಡಿಸಿ. ಅವರ ಶೋಕವನ್ನು ನಿವಾರಿಸಿರಿ ಎಂದು ಹೇಳಿದನು.

ಅರ್ಥ:
ಸಾಕು: ಕೊನೆ, ಅಂತ್ಯ; ವೈರಿ: ಶತ್ರು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಶೂನ್ಯ: ಬರಿದಾದುದು, ಇಲ್ಲವಾದುದು; ಮೊದಲು: ಮುಂಚೆ; ಉರ್ಧ್ವದೇಹಿಕ: ಸತ್ತ ಮೇಲೆ ಮಾಡುವ ಕರ್ಮ; ಆಕೆವಾಳ: ವೀರ, ಪರಾಕ್ರಮಿ; ಅರುಹು: ತಿಳಿಸು; ಅಸ್ತೋಕ: ಅಧಿಕವಾದ; ಪುಣ್ಯ: ಸದ್ಗುಣ ಯುಕ್ತವಾದ; ವಿಗಳಿತ: ಜಾರಿದ, ಸರಿದ; ಶೋಕ: ದುಃಖ; ಅಂಧನೃಪ: ಧೃತರಾಷ್ಟ್ರ;

ಪದವಿಂಗಡಣೆ:
ಸಾಕ್+ಅದಂತಿರಲ್+ಇನ್ನು+ ವೈರಿ
ವ್ಯಾಕರಣ+ಪಾಂಡಿತ್ಯದಲ್ಲಿ +ವಿ
ವೇಕ+ಶೂನ್ಯರು+ ನಾವು +ಮೊದಲಾದ್+ಊರ್ಧ್ವದೈಹಿಕವ
ಆಕೆವಾಳರಿಗ್+ಅರುಹಿ +ನೀವ್
ಅಸ್ತೋಕಪುಣ್ಯರ+ ತಿಳುಹಿ +ವಿಗಳಿತ
ಶೋಕರೆನಿಸುವುದ್+ಅಂಧನೃಪ +ಗಾಂಧಾರಿ+ದೇವಿಯರ

ಅಚ್ಚರಿ:
(೧) ದುರ್ಯೋಧನನು ತನ್ನ ತಪ್ಪನ್ನು ಒಪ್ಪಿಕೊಳ್ಳುವ ಪರಿ – ವೈರಿ ವ್ಯಾಕರಣಪಾಂಡಿತ್ಯದಲ್ಲಿ ವಿವೇಕಶೂನ್ಯರು ನಾವು

ಪದ್ಯ ೭೩: ದುರ್ಯೋಧನನು ವಿದುರನನ್ನು ಹೇಗೆ ಜರೆದನು?

ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ (ಸಭಾ ಪರ್ವ, ೧೪ ಸಂಧಿ, ೭೩ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರ ಮಾತಿಗೆ ಉತ್ತರಿಸುತ್ತಾ, ವಿದುರಾ ನೀನು ದುಷ್ಟನೇ ಸರಿ, ನಿನ್ನ ಬುದ್ಧಿಗೆ ಸಮಸ್ತ ವಿದ್ಯೆ ಕಲೆಗಳು ತಿಳಿದಿವೆ, ನೀನು ವಿಶಾಲಮತಿಯೆಂದು ಕರೆಯೋಣವೆಂದರೆ ಈ ಜಗತ್ತಿನ ಎಲ್ಲಾ ದಡ್ಡರಿಗೂ ನೀನೇ ಅಧಿದೇವತೆ. ಇದು ಹಿತವೋ ಅಹಿತವೋ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ಪಾಂಡಿತ್ಯ, ಆದರೆ ನಿನ್ನನ್ನು ಇಲ್ಲಿ ಯಾರಾದರೂ ಕೇಳಿರುವವರೇ ಎಂದು ವಿದುರನನ್ನು ಜರೆದನು.

ಅರ್ಥ:
ಖೂಳ: ದುಷ್ಟ; ಸಕಲ: ಎಲ್ಲಾ; ಕಲೆ: ವಿದ್ಯೆ; ಬಾಳುಮನೆ: ತೌರುಮನೆ, ವಾಸಸ್ಥಾನ; ಗಡ: ಅಲ್ಲವೆ; ಬುದ್ಧಿ: ತಿಳಿವು, ಅರಿವು; ವಿಶಾಲ: ವಿಸ್ತಾರ; ಮತಿ: ಬುದ್ಧಿ; ಅಜ್ಞರು: ಅಜ್ಞಾನಿ, ದಡ್ಡ; ಅಧಿದೈವ: ಮುಖ್ಯವಾದ ದೇವರು; ಕೇಳು: ವಿಚಾರಿಸು; ಮೇಣ್: ಅಥವ, ಇಲ್ಲವೇ; ಹಿತ: ಒಳಿತು; ಹೇಳು: ತಿಳಿಸು; ಪಾಂಡಿತ್ಯ: ವಿದ್ವತ್ತು; ರಾಯ: ಒಡೆಯ;

ಪದವಿಂಗಡಣೆ:
ಖೂಳನೆಂಬೆನೆ +ಸಕಲ +ಕಲೆಗಳ
ಬಾಳುಮನೆ +ಗಡ +ನಿನ್ನ +ಬುದ್ಧಿ +ವಿ
ಶಾಲಮತಿ +ನೀನೆಂಬೆನೇ +ಜಗದ್+ಅಜ್ಞರ್+ಅಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ

ಅಚ್ಚರಿ:
(೧) ಖೂಳನೆಂಬೆನೆ, ನೀನೆಂಬೆನೆ – ಪ್ರಾಸ ಪದ
(೨) ವಿದುರನನ್ನು ಬಯ್ಯುವ ಪರಿ – ಜಗದಜ್ಞರಧಿದೈವ
(೩) ಪಂಡಿತರ ಬಗ್ಗೆ ಹೇಳುವ ಪರಿ – ಕೇಳಿದೊಡೆ ಮೇಣಹಿತ ಹಿತವನು ಹೇಳುವುದು ಪಾಂಡಿತ್ಯ

ಪದ್ಯ ೩೮: ಶಿಶುಪಾಲನು ಭೀಷ್ಮರನ್ನು ಹೇಗೆ ಹಂಗಿಸಿದ?

ಈ ಕುರುಕ್ಷಿತಿ ಪಾಲರಲಿ ನೀ
ನಾಕೆವಾಳನು ಗಡ ವಯಃಪರಿ
ಪಾಕವುಳ್ಳವನೀಸುಕಾಲದಲೋದಿದರಿತವಿದೆ
ಕಾಕನುರೆ ಕೊಂಡಾಡಿ ಗೊಲ್ಲರ
ಗೋಕುಲದ ಗೋಪ ಪ್ರಸಂಗ
ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ (ಸಭಾ ಪರ್ವ, ೧೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಶಿಶುಪಾಲನು ಭೀಷ್ಮರನ್ನು ಉದ್ದೇಶಿಸುತ್ತಾ, ಕುರುವಂಶದ ರಾಜರಲ್ಲೆಲ್ಲಾ ನೀನು ಮಹಾಸಾಮರ್ಥ್ಯವುಳ್ಲವನಲ್ಲವೇ? ವಯಸ್ಸೂ ಬಹಳ ಆಗಿದೆ, ಅನುಭವವುಳ್ಲವನು. ಇಷ್ಟುದಿನ ಓದಿ ಅಭ್ಯಾಸಮಾಡಿ ನೀನು ಕಲಿತದ್ದು ಇದೇ ಏನು? ಕ್ಷುಲ್ಲಕವಾದುದನ್ನು ಹೊಗಳಿ, ಗೋಕುಲದಲ್ಲಿ ನಡೆದ ಪ್ರಸಂಗಗಳನ್ನು ಬಿಡಿಬಿಡಿಯಾಗಿ ಹೊಗಳುವ ಪಾಂಡಿತ್ಯ, ನಿನ್ನಲ್ಲಿ ಕಾಣುತ್ತಿದೆಯಲ್ಲಾ ಎಂದು ಭೀಷ್ಮರನ್ನು ಹಂಗಿಸಿದನು.

ಅರ್ಥ:
ಕ್ಷಿತಿ: ಭೂಮಿ; ಕ್ಷಿತಿಪಾಲ: ರಾಜ; ಆಕೆವಾಳ: ವೀರ, ಪರಾಕ್ರಮಿ; ಗಡ: ಅಲ್ಲವೆ; ವಯಃ: ವಯಸ್ಸು; ಪರಿಪಾಕ: ಹೆಚ್ಚು, ಪಕ್ವ; ಈಸು: ಇಷ್ಟು; ಕಾಲ: ಸಮಯ; ಓದು: ಅಭ್ಯಾಸ, ತಿಳಿ; ಅರಿ: ತಿಳುವಳಿಕೆ; ಕಾಕ: ಕಾಗೆ, ಕ್ಷುಲ್ಲಕ; ಉರೆ: ಹೆಚ್ಚು; ಕೊಂಡಾಡು: ಹೊಗಳು; ಗೊಲ್ಲರ: ಗೋಪಾಲಕ; ಗೋಕುಲ: ಗೋವುಗಳ ಹಿಂಡು; ಗೋಪ:ದನಗಾಹಿ, ಗೊಲ್ಲ; ಪ್ರಸಂಗ: ಮಾತುಕತೆ; ಸಂದರ್ಭ; ವ್ಯಾಕರಣ: ನಿಯಮ; ಪಾಂಡಿತ್ಯ: ವಿದ್ವತ್; ಮೆರೆ: ತೋರು;

ಪದವಿಂಗಡಣೆ:
ಈ +ಕುರು+ಕ್ಷಿತಿಪಾಲರಲಿ +ನೀನ್
ಆಕೆವಾಳನು +ಗಡ +ವಯಃ+ಪರಿ
ಪಾಕವುಳ್ಳವನ್+ಈಸು+ಕಾಲದಲ್+ಓದಿದ್+ಅರಿತವಿದೆ
ಕಾಕನುರೆ+ ಕೊಂಡಾಡಿ +ಗೊಲ್ಲರ
ಗೋಕುಲದ +ಗೋಪ +ಪ್ರಸಂಗ
ವ್ಯಾಕರಣ+ ಪಾಂಡಿತ್ಯ +ಮೆರೆದುದು +ಭೀಷ್ಮ +ನಿನಗೆಂದ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗೊಲ್ಲರ ಗೋಕುಲದ ಗೋಪ
(೨) ವ್ಯಾಕರಣ ಪಾಂಡಿತ್ಯ – ಪದಗಳ ಬಳಕೆ

ಪದ್ಯ ೩೬: ಶಿಶುಪಾಲನನ್ನು ಭೀಷ್ಮರು ಹೇಗೆ ಜರೆದರು?

ಏಕೆ ಕನ್ನಡಿ ಕುರುಡರಿಗೆ ತಾ
ನೇಕೆ ಸಾಳಗ ಶುದ್ಧ ಬಧಿರರಿ
ಗೇಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ
ಏಕೆ ಖಳರಿಗೆ ನಯ ವಿಧಾನ
ವ್ಯಾಕರಣ ಪಾಂಡಿತ್ಯ ಫಡ ಲೋ
ಕೈಕ ಪಾತಕನೆಂದು ನುಡಿದನು ಜರೆದು ದಾನವನ (ಸಭಾ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕುರುಡರಿಗೆ ಕನ್ನಡಿಯೇಕೆ? ಶುದ್ಧ ಕಿವುಡನಿಗೆ ಸಂಗೀತವೇಕೆ, ಮೂರ್ಖ ಸಮಾಜದಲ್ಲಿ ಸಾಹಿತ್ಯವೇಕೆ? ನಯವಿಧಾನದ ಪಾಂಡಿತ್ಯವು ಅಸುರರಿಗೇಕೆ? ಛೇ ನೀನು ಲೊಖೈಕ ಪಾತಕ ಎಂದು ಭೀಷ್ಮರು ಶಿಶುಪಾಲನನ್ನು ಜರೆದರು.

ಅರ್ಥ:
ಕನ್ನಡಿ: ಮುಕುರ; ಕುರುಡು: ಕಣ್ಣಿಲ್ಲದವ; ಸಾಳಗ: ಸಂಗೀತದ ವಾದ್ಯ; ಶುದ್ಧ: ಪೂರ್ಣ; ಬಧಿರ:ಕಿವುಡ; ಮೂರ್ಖ: ಮೂಢ; ಸಮಾಜ: ಗುಂಪು; ಸಾಹಿತ್ಯ: ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆ; ಸನ್ನಾಹ: ಅಣಿ ಮಾಡಿಕೊಳ್ಳುವುದು; ಖಳ: ದುಷ್ಟ; ನಯ: ನುಣುಪು, ಮೃದುತ್ವ; ವಿಧಾನ: ರೀತಿ; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಲೋಕ: ಜಗತ್ತು; ಪಾತಕ: ದುಷ್ಟ; ನುಡಿ: ಮಾತಾಡು;

ಪದವಿಂಗಡಣೆ:
ಏಕೆ +ಕನ್ನಡಿ +ಕುರುಡರಿಗೆ +ತಾ
ನೇಕೆ +ಸಾಳಗ +ಶುದ್ಧ +ಬಧಿರರಿಗ್
ಏಕೆ+ ಮೂರ್ಖ+ಸಮಾಜದಲಿ +ಸಾಹಿತ್ಯ +ಸನ್ನಾಹ
ಏಕೆ+ ಖಳರಿಗೆ +ನಯ +ವಿಧಾನ
ವ್ಯಾಕರಣ +ಪಾಂಡಿತ್ಯ +ಫಡ +ಲೋ
ಕೈಕ+ ಪಾತಕನೆಂದು +ನುಡಿದನು +ಜರೆದು +ದಾನವನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಏಕೆ ಕನ್ನಡಿ ಕುರುಡರಿಗೆ, ಏಕೆ ಸಾಳಗ ಶುದ್ಧ ಬಧಿರರಿಗೆ,
ಏಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ, ಏಕೆ ಖಳರಿಗೆ ನಯವಿಧಾನ ವ್ಯಾಕರಣ ಪಾಂಡಿತ್ಯ
(೨) ಶಿಶುಪಾಲನನ್ನು ಬಯ್ಯುವ ಪರಿ – ಫಡ, ಲೋಕೈಕ ಪಾತಕ