ಪದ್ಯ ೧೬: ಗಣಿಕೆಯರು ದ್ರೌಪದಿಯ ಬಗ್ಗೆ ಏನು ಮಾತಾಡಿದರು?

ಈಕೆ ಪಾಂಡವಸತಿ ಕಣಾ ತೆಗೆ
ಯೀಕೆಯತಿ ದಾರಿದ್ರಮಾನುಷೆ
ಯೀಕೆಯಲ್ಲೊಳಗಿಹಳು ರಾಣೀವಾಸವೆಂಬರಲೆ
ಈಕೆಯಹುದಲ್ಲಿದಕೆ ಪಣವೇ
ನೀಕೆ ಬಣಗಕಟೆಂದು ಕಾಂತಾ
ನೀಕೆ ತಮ್ಮೊಳು ನುಡಿವುತಿದ್ದುದು ತೋರಿ ಬೆರಳಿನಲಿ (ಅರಣ್ಯ ಪರ್ವ, ೧೯ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಮುಂದೆ ನಿಂತು ಆ ಸಖಿಯರಲ್ಲಿ ಒಬ್ಬೊಬ್ಬರು ಒಂದು ಮಾತನಾಡಿದರು, ಇವಳೇ ಪಾಂಡವರ ಸತಿ, ಅಲ್ಲ ಇವಳು ಅತಿ ದರಿದ್ರ ಹೆಣ್ಣು, ಇವಳು ದ್ರೌಪದಿಯೇ ಅಲ್ಲ, ಅವಳು ಒಳಗಿದ್ದಾಳೆ, ಇವಳೇ ದ್ರೌಪದಿ, ಇವಳು ದ್ರೌಪದಿಯಲ್ಲ, ಏನು ಪಣ ಕಟ್ಟುವಿರಿ, ಇವಳು ಒಬ್ಬ ಕ್ಷುಲ್ಲಕ ಹೆಣ್ಣು, ಒಬ್ಬೊಬ್ಬರೂ ದ್ರೌಪದಿಯನ್ನು ಬೆರಳಿನಿಂದ ತೋರಿಸಿ ಹಂಗಿಸುತ್ತಾ ಮಾತಾಡಿಕೊಳ್ಳುತ್ತಿದ್ದರು.

ಅರ್ಥ:
ಸತಿ: ಹೆಂಡತಿ, ಸ್ತ್ರೀ; ತೆಗೆ: ಹೊರತರು; ಅತಿ: ಬಹಳ; ದಾರಿದ್ರ: ಬಡವ; ಮಾನುಷೆ: ಹೆಂಗಸು; ರಾಣಿ: ಅರಸಿ; ಪಣ: ಜಾತಿ, ವರ್ಣ; ಬಣ: ಗುಂಪು; ಅಕಟ: ಅಯ್ಯೋ; ಕಾಂತಾ: ಸ್ತ್ರೀ; ನುಡಿ: ಮಾತಾಡು; ತೋರು: ಪ್ರಕಟಿಸು; ಬೆರಳು: ಅಂಗುಲಿ;

ಪದವಿಂಗಡಣೆ:
ಈಕೆ +ಪಾಂಡವ+ಸತಿ+ ಕಣಾ +ತೆಗೆ
ಈಕೆ+ಅತಿ+ ದಾರಿದ್ರ+ಮಾನುಷೆ
ಈಕೆ+ಅಲ್ಲ+ಒಳಗಿಹಳು+ ರಾಣೀವಾಸವೆಂಬರಲೆ
ಈಕೆ+ಅಹುದ್+ಅಲ್ಲ+ಇದಕೆ +ಪಣವೇನ್
ಈಕೆ +ಬಣಗ್+ಅಕಟೆಂದು +ಕಾಂತಾನ್
ಈಕೆ+ ತಮ್ಮೊಳು +ನುಡಿವುತಿದ್ದುದು +ತೋರಿ +ಬೆರಳಿನಲಿ

ಅಚ್ಚರಿ:
(೧) ಈಕೆ – ಎಲ್ಲಾ ೬ ಸಾಲುಗಳ ಮೊದಲ ಪದ