ಪದ್ಯ ೪೮: ದ್ರೋಣನು ಪಾಂಚಾಲ ಸೈನ್ಯವನ್ನು ಹೇಗೆ ನಾಶ ಮಾಡಿದನು?

ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೂರ್ಯನು ಯಾರ ಸಹಾಯದಿಂದ ಕತ್ತಲನ್ನು ಗೆಲ್ಲುತ್ತಾನೆ? ಶತ್ರುಸೈನ್ಯ ಸಂಹಾರಕ್ಕೆ ದ್ರೋಣನು ಇನ್ನೊಬ್ಬರ ಹಂಗಿಗೊಳಗಾಗುವನೇ? ಪಾಂಚಾಲ ಸೈನ್ಯವನ್ನು ದ್ರೋಣನು ಸಂಹರಿಸಲು ರಕ್ತದ ತೊರೆ ಹರಿದು ಪಾಂಚಾಲ ನಾಯಕರು ಮುಳುಗಿ ಹೋದರು.

ಅರ್ಥ:
ನೆರವು: ಸಹಾಯ; ಅಂಧಕಾರ: ಕತ್ತಲೆ; ಭಾರ: ಹೊರೆ; ರವಿ: ಸೂರ್ಯ; ಗೆಲುವು: ಜಯ; ವೈರಿ: ಶತ್ರು; ಬಲ: ಸೈನ್ಯ; ಭಂಜನ: ನಾಶಕಾರಿ, ಒಡೆಯುವುದು; ಗುರು: ಆಚಾರ್ಯ; ಹಂಗು: ದಾಕ್ಷಿಣ್ಯ, ಆಭಾರ; ಕೆಲಬಲ: ಅಕ್ಕಪಕ್ಕ, ಎಡಬಲ; ಭೂರಿ: ಹೆಚ್ಚು, ಅಧಿಕ; ರಿಪು: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಸಂಹಾರ: ನಾಶ, ಕೊನೆ; ಎದ್ದು: ಮೇಲೇಳು; ರಕುತ: ನೆತ್ತರು; ಪೂರ: ಭರ್ತಿ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಆದಿ: ಮುಂತಾದ; ನಾಯಕ: ಒಡೆಯ;

ಪದವಿಂಗಡಣೆ:
ಆರ +ನೆರವಿಯೊಳ್+ಅಂಧಕಾರದ
ಭಾರವನು +ರವಿ +ಗೆಲುವನ್+ಇನ್ನೀ
ವೈರಿಬಲ+ಭಂಜನಕೆ +ಗುರು +ಹಂಗಹನೆ+ ಕೆಲಬಲಕೆ
ಭೂರಿ +ರಿಪು+ಚತುರಂಗ+ಬಲ+ಸಂ
ಹಾರದಲಿ +ಒರವೆದ್ದ+ ರಕುತದ
ಪೂರದಲಿ +ಮುಳುಗಿದರು +ಪಾಂಚಾಲಾದಿ +ನಾಯಕರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ನೆರವಿಯೊಳಂಧಕಾರದ ಭಾರವನು ರವಿ ಗೆಲುವನ್
(೨) ಯುದ್ಧದ ಭೀಕರತೆ – ರಿಪುಚತುರಂಗಬಲಸಂಹಾರದಲಿ ಒರವೆದ್ದ ರಕುತದ ಪೂರದಲಿ ಮುಳುಗಿದರು