ಪದ್ಯ ೪೭: ಕೃಷ್ಣನು ಭೀಮನಲ್ಲಿ ಹೇಗೆ ಜೀವ ತುಂಬಿದನು?

ಅರಸ ಕೇಳಾಕ್ಷಣದೊಳನಿಲ
ಸ್ಮರಣೆಯನು ಹರಿ ಮಾಡಿದನು ಸಂ
ಚರಿಸಿದನು ತತ್ತನುಜನಂಗೋಪಾಂಗವೀಥಿಯಲಿ
ತರತರದ ನಾಡಿಗಳೊಳಗೆವಿ
ಸ್ತರಿಸಿ ಮೂಲಾಧಾರದಲಿ ಚೇ
ತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ (ಗದಾ ಪರ್ವ, ೭ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆ ಸಮಯದಲ್ಲಿ ಶ್ರೀಕೃಷ್ಣನು ವಾಯುದೇವನನ್ನು ಸ್ಮರಿಸಿದನು. ಆತನು ತನ್ನ ಮಗನ ಅಂಗೋಪಾಂಗಗಳಲ್ಲಿ ಎಲ್ಲಾ ನಾಡಿಗಳಲ್ಲೂ ಆಡಿ, ಮೂಲಾಧಾರದಲ್ಲಿ ಚೇತನವನ್ನು ನೀಡಿದನು, ಭೀಮನು ಸಜೀವನಾದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಣ: ಸಮಯ; ಅನಿಲ: ವಾಯು; ಸ್ಮರಣೆ: ಜ್ಞಾಪಕ; ಹರಿ: ಕೃಷ್ಣ; ಸಂಚರಿಸು: ಹರಿದಾಡು; ತನುಜ: ಮಗ; ಅಂಗೋಪಾಂಗ: ದೇಹದ ಅಂಗಗಳು; ವೀಥಿ: ಮಾರ್ಗ, ದಾರಿ; ತರತರ: ಹಲವಾರು; ನಾಡಿ: ಧಮನಿ; ವಿಸ್ತರಿಸು: ಹರಡು; ಮೂಲಾಧಾರ: ಕುಂಡಲಿನಿಯ ಮೂಲ ಸ್ಥಾನ; ಚೇತರಿಸು: ಎಚ್ಚರಿಸು; ಅಂಗ: ದೇಹದ ಭಾಗ; ಜೀವ: ಪ್ರಾಣ; ಸಮೀರ: ವಾಯು; ಪಸರಿಸು: ಹರಡು; ಅಗೆ: ಅಂಕುರ;

ಪದವಿಂಗಡಣೆ:
ಅರಸ +ಕೇಳ್+ಆ+ ಕ್ಷಣದೊಳ್+ಅನಿಲ
ಸ್ಮರಣೆಯನು +ಹರಿ +ಮಾಡಿದನು +ಸಂ
ಚರಿಸಿದನು +ತತ್+ತನುಜನ್+ಅಂಗೋಪಾಂಗ+ವೀಥಿಯಲಿ
ತರತರದ +ನಾಡಿಗಳೊಳ್+ಅಗೆ+ವಿ
ಸ್ತರಿಸಿ +ಮೂಲಾಧಾರದಲಿ +ಚೇ
ತರಿಸಿ +ಸರ್ವಾಂಗದಲಿ +ಜೀವ+ಸಮೀರ +ಪಸರಿಸಿದ

ಅಚ್ಚರಿ:
(೧) ಜೀವ ತುಂಬಿದ ಪರಿ – ತರತರದ ನಾಡಿಗಳೊಳಗೆವಿಸ್ತರಿಸಿ ಮೂಲಾಧಾರದಲಿ ಚೇತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ
(೨) ಅನಿಲ, ಸಮೀರ – ಸಮಾನಾರ್ಥಕ ಪದ

ಪದ್ಯ ೫೬: ಯುದ್ಧವನ್ನು ನೋಡಲು ಯಾರು ಬಂದರು?

ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು (ಗದಾ ಪರ್ವ, ೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಇಬ್ಬರ ನಡುವೆ ಯುದ್ಧವು ಜೋರಾಯಿತು. ಇವರ ಯುದ್ಧವನು ದೇವತೆಗಳೂ, ಮನುಷ್ಯರೂ ನಿರೀಕ್ಷಿಸುತ್ತಿರುವ ಸಮಯದಲ್ಲಿ ಈಶಾನ್ಯದಿಕ್ಕಿನೀಂದ ಒನಕೆಯನ್ನು ಭುಜದ ಮೇಲಿಟ್ಟು ನೀಲಾಂಬರವನ್ನು ಧರಿಸಿ ಮುನಿಗಳ ಸಮೂಹದ ನಡುವೆ ಬಲರಾಮನು ಬರುತ್ತಿರುವುದನ್ನು ಕೃಷ್ಣನು ಪಾಂಡವರೂ ಕಂಡರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಉಬ್ಬು: ಹೆಚ್ಚಾಗು; ಉಬ್ಬು: ಕಣ್ಣಿನ ಮೇಲಿನ ರೋಮಾಳಿ; ಧುರ: ಯುದ್ಧ, ಕಾಳಗ; ಥಟ್ಟಣೆ: ಗುಂಪು; ಪಸರಿಸು: ಹರಡು; ಸುರ: ಅಮರ; ನರ: ಮನುಷ್ಯ; ಸಮಯ: ಕಾಲ; ಪೂರ್ವೋತ್ತರ: ಹಿಂದೆ ನಡೆದ; ದೆಸೆ: ದಿಕ್ಕು; ವರ: ಶ್ರೇಷ್ಟ; ಮುನಿ: ಋಷಿ; ಸ್ತೋಮ: ಗುಂಪು; ನಡುವೆ: ಮಧ್ಯ; ಕಂಧರ: ಕೊರಳು; ಮುಸಲ: ಗದೆ; ವಿಮಳ: ನಿರ್ಮಲ; ಅಂಬರ: ಬಟ್ಟೆ; ಸುಳಿ: ಕಾಣಿಸಿಕೊಳ್ಳು;

ಪದವಿಂಗಡಣೆ:
ಅರಸ +ಕೇಳ್+ಇವರಿಬ್ಬರ್+ಉಬ್ಬಿನ
ಧುರದ+ ಥಟ್ಟಣೆ+ ಪಸರಿಸಿತು +ಸುರ
ನರರನ್+ಆ+ ಸಮಯದಲಿ+ ಪೂರ್ವೋತ್ತರದ+ ದೆಸೆಯಿಂದ
ವರ +ಮುನಿಸ್ತೋಮದ+ ನಡುವೆ+ ಕಂ
ಧರದ +ಮುಸಲದ +ವಿಮಳ +ನೀಲಾಂ
ಬರದ +ರಾಮನ +ಸುಳಿವ +ಕಂಡರು +ಕೃಷ್ಣ+ ಪಾಂಡವರು

ಅಚ್ಚರಿ:
(೧) ಬಲರಾಮನ ವಿವರಣೆ – ವರ ಮುನಿಸ್ತೋಮದ ನಡುವೆ ಕಂಧರದ ಮುಸಲದ ವಿಮಳ ನೀಲಾಂ
ಬರದ ರಾಮನ

ಪದ್ಯ ೮: ಧರ್ಮಜನ ದುಃಖ ಹೇಗೆ ಹೊರಬಂತು?

ಹೊಳಲ ಗಜಬಜವಡಗಿತರಮನೆ
ಯೊಳಗೆ ಪಸರಿಸಿತತುಳ ಶೋಕದ
ಜಲಧಿ ಭೂಪಾಲಕನ ಸೈರಣೆಗಾಯ್ತು ಮಹನವಮಿ
ಒಳಗುರಿವ ಹಸಿಮರನ ತುದಿಯಲಿ
ಜಲವೊಗುವವೊಲು ಹೃದಯ ಶಿಖಿಯುರೆ
ತಳಿತು ಲೋಚನವಾರಿ ತುಳುಕಿತು ಪವನಜಾದಿಗಳ (ದ್ರೋಣ ಪರ್ವ, ೭ ಸಂಧಿ, ೮ ಪದ್ಯ)

ತಾತ್ಪರ್ಯ:
ಬೀಡಿನ ಗಲಭೆಯೇನೋ ಅಡಗಿತು, ಆದರೆ ಅರಮನೆಯೊಳಗಿನ ಶೋಕ ಹೆಚ್ಚಾಗಿ ಹಬ್ಬಿತು. ಧರ್ಮಜನ ಸೈರಣೆ ನಾಶವಾಯಿತು. ಒಳಗೇ ಉರಿಯುವ ಹಸಿ ಕಟ್ಟಿಗೆಯ ತುದಿಯಲ್ಲಿ ನೀರು ಹೊರಬರುವಂತೆ, ಮನಸ್ಸಿನಲ್ಲಿ ಬೆಂಕಿ ಬಿದ್ದು ಹೊರ ಬಂದು ಕಣ್ಣೀರು ಹೊರಹೊಮ್ಮಿತು.

ಅರ್ಥ:
ಹೊಳಲು: ಪಟ್ಟಣ; ಪ್ರಕಾಶ; ಗಜಬಜ: ಗೊಂದಲ; ಅಡಗು: ಅವಿತುಕೊಳ್ಳು; ಪಸರಿಸು: ಹರದು; ಅತುಳ: ಬಹಳ; ಶೋಕ: ದುಃಖ; ಜಲಧಿ: ಸಾಗರ; ಭೂಪಾಲಕ: ರಾಜ; ಸೈರಣೆ: ತಾಳ್ಮೆ, ಸಹನೆ; ಉರಿ: ಬೆಂಕಿ; ಹಸಿ: ಹೊಸದು, ತಾಜಾ; ಮರ: ತರು, ವೃಕ್ಷ; ತುದಿ: ಅಗ್ರಭಾಗ; ಜಲ: ನೀರು; ಹೃದಯ: ಎದೆ; ಶಿಖಿ: ಬೆಂಕಿ; ತಳಿತ: ಚಿಗುರಿದ; ಲೋಚನವಾರಿ: ಕಣ್ಣೀರು; ತುಳುಕು: ಹೊರಸೂಸುವಿಕೆ; ಪವನಜ: ವಾಯುಪುತ್ರ (ಭೀಮ); ಆದಿ: ಮುಂತಾದ;

ಪದವಿಂಗಡಣೆ:
ಹೊಳಲ +ಗಜಬಜವ್+ಅಡಗಿತ್+ಅರಮನೆ
ಯೊಳಗೆ +ಪಸರಿಸಿತ್+ಅತುಳ +ಶೋಕದ
ಜಲಧಿ +ಭೂಪಾಲಕನ +ಸೈರಣೆಗಾಯ್ತು +ಮಹನವಮಿ
ಒಳಗ್+ಉರಿವ +ಹಸಿಮರನ +ತುದಿಯಲಿ
ಜಲವೊಗುವವೊಲು +ಹೃದಯ +ಶಿಖಿಯುರೆ
ತಳಿತು +ಲೋಚನವಾರಿ +ತುಳುಕಿತು +ಪವನಜಾದಿಗಳ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಳಗುರಿವ ಹಸಿಮರನ ತುದಿಯಲಿ ಜಲವೊಗುವವೊಲು

ಪದ್ಯ ೨೧: ಅರ್ಜುನ ಭೀಷ್ಮರ ಯುದ್ಧವು ಹೇಗೆ ನಡೆಯಿತು?

ನೊಂದು ಸೈರಿಸಿ ಮತ್ತೆ ಸರಳಿನ
ಸಂದಣಿಯ ಸೈಗರೆದನರ್ಜುನ
ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು
ಮುಂದೆ ನಿಲಲರಿಯದೆ ವಿತಾಳಿಸಿ
ಮಂದಗತಿಯೊಳು ಕೆಲಸಿಡಿದು ಹರಿ
ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ (ಭೀಷ್ಮ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನ ಹೊಡೆತಗಳಿಂದ ನೊಂದ ಅರ್ಜುನನು ಸೈರಿಸಿಕೊಂಡು ಶಿವನೇ ಭಲೇ ಎನ್ನುತ್ತಿರಲು ಭೀಷ್ಮನ ಮೇಲೆ ಬಾಣಪ್ರಯೋಗ ಮಾಡಿದನು. ಅರ್ಜುನನೆದುರು ನಿಲ್ಲಲಾರದೆ ಭೀಷ್ಮನು ಮೆಲ್ಲನೆ ಸುಧಾರಿಸಿಕೊಡು ಪಕ್ಕಕ್ಕೆ ಸರಿದು, ಸಿಟ್ಟಿನಿಂದ ಮತ್ತೆ ಮತ್ತೆ ಅರ್ಜುನನನ್ನು ಘಾತಿಸಲಾರಂಭಿಸಿದನು.

ಅರ್ಥ:
ನೊಂದು: ನೋವುಂಡು; ಸೈರಿಸು: ತಾಳು, ಸಹಿಸು; ಸರಳು: ಬಾಣ; ಸಂದಣಿ: ಗುಂಪು; ಸೈ:ಸರಿಯಾದುದು, ತಕ್ಕದ್ದು; ಕರೆದು: ಬರೆಮಾಡು; ಇಂದುಧರ: ಈಶ್ವರ; ಮಝ: ಭಲೇ; ಭಾಪು: ಭೇಷ್; ಪಸರಿಸು: ಹರಡು; ಅಂಬು: ಬಾಣ; ಮುಂದೆ: ಎದುರು; ನಿಲಲು: ನಿಲ್ಲಲು; ವಿತಾಳಿಸು: ಹೆಚ್ಚಾಗು, ಅಧಿಕವಾಗು; ಮಂದಗತಿ: ನಿಧಾನ; ಕೆಲಸಿಡಿ: ಪಕ್ಕಕ್ಕೆ ಹಾರು; ಹರಿ: ಇಂದ್ರ; ನಂದನ: ಮಗ; ಬಿಡು: ತೊರೆ; ಎಸು: ಬಾಣ ಪ್ರಯೋಗ ಮಾಡು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ನೊಂದು +ಸೈರಿಸಿ+ ಮತ್ತೆ +ಸರಳಿನ
ಸಂದಣಿಯ +ಸೈಗರೆದನ್+ಅರ್ಜುನನ್
ಇಂದುಧರ +ಮಝ +ಭಾಪುರೆನೆ +ಪಸರಿಸಿದವ್+ಅಂಬುಗಳು
ಮುಂದೆ +ನಿಲಲ್+ಅರಿಯದೆ+ ವಿತಾಳಿಸಿ
ಮಂದಗತಿಯೊಳು +ಕೆಲಸಿಡಿದು+ ಹರಿ
ನಂದನನ+ ಬಿಡದ್+ಎಸುತ +ಬಂದನು +ಭೀಷ್ಮ +ಮುಳಿಸಿನಲಿ

ಅಚ್ಚರಿ:
(೧) ಭೀಷ್ಮನನ್ನು ಹೊಗಳಿದ ಪರಿ – ಸರಳಿನ ಸಂದಣಿಯ ಸೈಗರೆದನರ್ಜುನನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು