ಪದ್ಯ ೯: ವೈಶಂಪಾಯನರು ಭಾರತ ಗ್ರಂಥವನ್ನು ಹೇಗೆ ಪೂಜಿಸಿದರು?

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶ್ತಮಖಾದಿ ಸಮಸ್ತ ದೇವ
ಪ್ರತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈ ಮುಗಿದು ವಿಮಲಜ್ಞಾನ ಮುದ್ರೆಯಲಿ (ಆದಿ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ವೈಶಂಪಾಯನ ಮಹರ್ಷಿಯು ಮಹತಾದ ಭಾರತ ಗ್ರಂಥವನ್ನು ಉತ್ತಮ ಗಂಧಾಕ್ಷತೆಗಳಿಂದ ಪೂಜಿಸಿದನು. ಬಳಿಕ ಸೂರ್ಯಚಂದ್ರರು ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಪಂಚಮಹಾಭೂತಗಳಿಗೆ ನಮಸ್ಕರಿಸಿದನು. ಇಂದ್ರನೇ ಮೊದಲಾದ ಸಮಸ್ತದೇವತೆಗಳಿಗೂ, ಬ್ರಹ್ಮ, ಶಿವರಿಗೂ ನಮಸ್ಕರಿಸಿ ಜ್ಞಾನಮುದ್ರೆಯನು ಧರಿಸಿದನು.

ಅರ್ಥ:
ವಿತತ: ವಿಸ್ತಾರವಾದ; ಪುಸ್ತಕ: ಗ್ರಂಥ; ಗಂಧ: ಚಂದನ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರ್ಚಿಸು: ಪೂಜಿಸು; ಸೋಮ: ಚಂದ್ರ; ಸೂರ್ಯ: ರವಿ; ಕ್ಷಿತಿ: ಭೂಮಿ; ಜಲ: ನೀರು; ಅನಲ: ಅಗ್ನಿ; ವಾಯು: ಗಾಳಿ; ಗಗನ: ಆಗಸ; ಆದಿ: ಮೊದಲಾದ; ಅಭಿನಮಿಸು: ನಮಸ್ಕರಿಸು; ಶತ: ನೂರು; ಮಖ: ಯಾಗ, ಯಜ್ಞ; ಆದಿ: ಮೊದಲಾದ; ಸಮಸ್ತ: ಎಲ್ಲಾ; ದೇವ: ಭಗವಂತ; ಪ್ರತತಿ: ಗುಂಪು, ಸಮೂಹ; ಎರಗು: ನಮಸ್ಕರಿಸು; ಸರೋಜಭವ: ಬ್ರಹ್ಮ; ಸರೋಜ: ಕಮಲ; ಪಶುಪತಿ: ಶಿವ; ಕೈಮುಗಿ: ನಮಸ್ಕರಿಸು; ವಿಮಲ: ನಿರ್ಮಲ; ಜ್ಞಾನ: ತಿಳಿವಳಿಕೆ, ಅರಿವು; ಮುದ್ರೆ: ಚಿಹ್ನೆ;

ಪದವಿಂಗಡಣೆ:
ವಿತತ +ಪುಸ್ತಕವನು +ಸುಗಂಧ
ಅಕ್ಷತೆಯೊಳ್+ಅರ್ಚಿಸಿ +ಸೋಮ +ಸೂರ್ಯ
ಕ್ಷಿತಿ+ ಜಲ+ಅನಲ +ವಾಯು +ಗಗನಾದಿಗಳಿಗ್+ಅಭಿನಮಿಸಿ
ಶತ+ಮಖಾದಿ +ಸಮಸ್ತ+ ದೇವ
ಪ್ರತಿಗ್+ಎರಗಿ +ಸರೋಜಭವ +ಪಶು
ಪತಿಗಳಿಗೆ +ಕೈ+ ಮುಗಿದು+ ವಿಮಲ+ಜ್ಞಾನ+ ಮುದ್ರೆಯಲಿ

ಅಚ್ಚರಿ:
(೧) ಕೈಮುಗಿ, ಎರಗ, ಅಭಿನಮಿಸು – ಸಾಮ್ಯಾರ್ಥ ಪದ

ಪದ್ಯ ೯: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಕುಶಲವೇ ಕುರುರಾಯನೂಳಿಗ
ವೆಸಕದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಂಗಳಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತಲಾ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ನೋಡಿ, ನೀವು ಕುಶಲವೇ, ಕೌರವನ ಆಟೋಪವು ನಿಮ್ಮ ಮೇಲೆ ಉಪಟಳ ಮಾಡುತ್ತಿಲ್ಲವೆ? ವನವಾಸದ ಅವಧಿಯು ತೀರುತ್ತಾ ಬಂದಿತೇ? ಕಾಡು ಮೇಡುಗಳಲ್ಲಿ ಅಲೆದಾಡಿದಿರಲ್ಲವೇ? ಶಿವನ ಬಾಣವು ಅರ್ಜುನನಿಗೆ ವಶವಾಯಿತಲ್ಲವೇ? ನಿಮ್ಮನ್ನು ನೋಡಿದ ಈ ಗಳಿಗೆ ನಮಗೆ ಶುಭಕರವಾಯಿತು ಎಂದು ಹೇಳಿ ಧರ್ಮಜನನ್ನು ಆಲಿಂಗಿಸಿಕೊಂಡನು.

ಅರ್ಥ:
ಕುಶಲ: ಕ್ಷೇಮ; ಊಳಿಗ: ಕೆಲಸ, ಕಾರ್ಯ; ಎಸಕ: ಕೆಲಸ, ಕಾಂತಿ; ಅವಧಿ: ಗಡು, ಸಮಯದ ಪರಿಮಿತಿ; ದೆಸೆ: ದಿಕ್ಕು; ಸಮೀಪ: ಹತ್ತಿರ; ತೊಳಲು: ಅಲೆದಾಡು, ತಿರುಗಾಡು; ವನ: ಕಾಡು; ಪಶುಪತಿ: ಶಂಕರ; ಅಂಬು: ಬಾಣ; ಕೈವರ್ತಿಸು: ವಶವಾಯಿತು; ಒಸಗೆ: ಶುಭ; ಪುಣ್ಯ: ಸದಾಚಾರ; ಹರಿ: ಕೃಷ್ಣ; ಮಹೀಪತಿ: ರಾಜ;

ಪದವಿಂಗಡಣೆ:
ಕುಶಲವೇ+ ಕುರುರಾಯನ್+ಊಳಿಗವ್
ಎಸಕದಲೆ+ ನಿಮ್ಮತ್ತಲ್+ಅವಧಿಯ
ದೆಸೆ +ಸಮೀಪವೆ +ತೊಳಲಿದಿರೆಲಾ +ವನವನಂಗಳಲಿ
ಪಶುಪತಿಯು +ಹಿಡಿವ್+ಅಂಬು +ಕೈವ
ರ್ತಿಸಿತಲಾ +ಪಾರ್ಥಂಗೆ +ನಮಗಿಂದ್
ಒಸಗೆಯಾಯಿತು +ಪುಣ್ಯವೆಂದನು +ಹರಿ +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ಸರಳತೆ: ನಮಗಿಂದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ

ಪದ್ಯ ೩೩: ಶಿವನನ್ನು ದೇವತೆಗಳು ಹೇಗೆ ಓಲೈಸಿದರು?

ಪಾಶುಪತ್ಯದ ಪಟ್ಟವಾಯ್ತು ಮ
ಹೇಶನಲಿಬ್ರಹ್ಮಾದಿ ದೇವರು
ವಾಸಿವಟ್ಟವ ಬಿಟ್ಟರೋಲೈಸಿದರು ಪಶುಪತಿಯ
ಪಾಶುಪತಸುವ್ರತನ ಧರಿಸಿದು
ದಾ ಸುಪರ್ವಸ್ತೋಮ ವಿಶ್ವಾ
ಧೀಶನೆಸೆದನು ಕೋಟಿ ಶತ ಸೂರ್ಯ ಪ್ರಕಾಶದಲಿ (ಕರ್ಣ ಪರ್ವ, ೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ದೇವತೆಗಳೆಲ್ಲರೂ ಶಿವನಿಗೆ ಪಾಶುಪತ ಎಂಬ ಪದವಿಯನ್ನು ನೀಡಿ ಗೌರವಿಸಿದರು. ಬ್ರಹ್ಮನೇ ಮೊದಲಾದವರು ತಮ್ಮ ಪ್ರತಿಷ್ಠೆ, ಅಹಂಕಾರಗಳನ್ನು ಮರೆತು ಪಶುಪತಿಯನ್ನು ಓಲೈಸಿದರು. ಶಿವನು ನೂರು ಕೋಟಿ ಸೂರ್ಯಪ್ರಕಾಶನದಿಂದ ಶೋಭಿಸಿದನು, ದೇವತೆಗಳೆಲ್ಲರೂ ಪಾಶುಪತ ವ್ರತವನ್ನು ಕೈಗೊಂಡರು.

ಅರ್ಥ:
ಪಾಶುಪತ್ಯ: ಪಶುಗಳ ಅಧಿಪತ್ಯದ ಪಟ್ಟ; ಪಟ್ಟ: ಅಧಿಕಾರ, ಗೌರವಸೂಚಕ ಹೆಸರು; ಮಹೇಶ: ಶಿವ, ಶಂಕರ; ಬ್ರಹ್ಮ: ಅಜ; ಆದಿ: ಮುಂತಾದ; ದೇವರು: ಭಗವಂತ, ಸುರರು; ವಾಸಿವಟ್ಟ; ಉತ್ತಮ ಪದವಿ; ಬಿಟ್ಟರು: ತ್ಯಜಿಸು; ಓಲೈಸು: ಉಪಚರಿಸು; ಸುವ್ರತ: ಒಳ್ಳೆಯ ವಿಧಿ, ಉತ್ತಮವಾದ ನೇಮ; ಧರಿಸು: ಹಿಡಿ, ತೆಗೆದುಕೊಳ್ಳು, ಹೊರು; ಸುಪರ್ವ: ಪುಣ್ಯಕಾಲ, ಆನಂದ; ಸ್ತೋಮ: ಗುಂಪು; ವಿಶ್ವಾಧೀಶ: ಜಗತ್ತಿಗೆ ಒಡೆಯ; ಕೋಟಿ: ಲೆಕ್ಕವಿಲ್ಲದಷ್ಟು; ಶತ: ನೂರು; ಸೂರ್ಯ: ಭಾನು, ರವಿ; ಪ್ರಕಾಶ: ಕಾಂತಿ, ಪ್ರಭೆ;

ಪದವಿಂಗಡಣೆ:
ಪಾಶುಪತ್ಯದ +ಪಟ್ಟವಾಯ್ತು +ಮ
ಹೇಶನಲಿ+ಬ್ರಹ್ಮಾದಿ +ದೇವರು
ವಾಸಿವಟ್ಟವ +ಬಿಟ್ಟರ್+ಓಲೈಸಿದರು +ಪಶುಪತಿಯ
ಪಾಶುಪತ+ಸುವ್ರತನ+ ಧರಿಸಿದುದ್
ಆ+ ಸುಪರ್ವ+ಸ್ತೋಮ +ವಿಶ್ವಾ
ಧೀಶನ್+ಎಸೆದನು +ಕೋಟಿ +ಶತ +ಸೂರ್ಯ +ಪ್ರಕಾಶದಲಿ

ಅಚ್ಚರಿ:
(೧) ಶಿವನನ್ನು ಕರೆದಿರುವ ಹೆಸರುಗಳು – ಮಹೇಶ, ಪಶುಪತಿ, ವಿಶ್ವಾಧೀಶ
(೨) ಸುವ್ರತ, ಸುಪರ್ವಸ್ತೋಮ – ಸು ಕಾರದ ಪದಗಳ ಬಳಕೆ
(೩) ಶ, ಸ ವನ್ನು ಎರಡನೇ ಅಕ್ಷರವನ್ನಾಗಿ ಷಟ್ಪದಿಯಲ್ಲಿ ಬಳಸಿರುವುದು

ಪದ್ಯ ೩೧: ದೇವತೆಗಳು ಶಿವನೆಗೇಕೆ ಜಯಕಾರವನ್ನು ಕೂಗಿದರು?

ತುಬ್ಬಿಕೊಟ್ಟುದವಿದ್ಯೆಯನು ಸುಧೆ
ಗೊಬ್ಬುಗಳ ಗಂಡಿಗರ ಗಾಢದ
ಗರ್ಭವನು ಹೊಳ್ಳಿಸಿತು ಗರಳಗ್ರೀವನುಪದೇಶ
ಹುಬ್ಬಿನಲಿ ಮಾತಾಡಿ ತಮ್ಮೊಳ
ಗೊಬ್ಬರೊಬ್ಬರು ತಿಳಿದು ಸಕಳ ಸು
ಪರ್ಬಜನವೆರಗಿದುದು ಜಯಜಯ ವೆನುತ ಪಶುಪತಿಗೆ (ಕರ್ಣ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಮೃತಪಾನವನ್ನು ಮಾಡಿ ಕೊಬ್ಬಿ ತಾವೇ ಪೌರುಷರೆಂದು, ಗಂಡಸರೆಂದು ಭ್ರಮಿಸಿದ ದೇವತೆಗಳ ಗಾಢವಾದ ಅವಿದ್ಯೆಯನ್ನು ವಿಷಕಂಠನಾದ ಶಿವನ ಉಪದೇಶವು ತೊಲಗಿಸಿತು. ಅವರೆಲ್ಲರೂ ಕಣ್ನಸನ್ನೆಯಿಂದ ಒಬ್ಬರನ್ನೊಬ್ಬರು ನೋಡಿ ಅರಿತು ಜಯಕಾರವನ್ನು ಮಾಡುತ್ತ ಶಿವನಿಗೆ ನಮಸ್ಕರಿಸಿದರು.

ಅರ್ಥ:
ತುಬ್ಬು: ಬಹಿರಂಗವಾಗುವುದು; ಅವಿದ್ಯೆ: ಅಜ್ಞಾನ; ಸುಧೆ: ಅಮೃತ; ಕೊಬ್ಬು: ಸೊಕ್ಕು, ಅಹಂಕಾರ; ಗಂಡಿಗ: ಗಂಡಸು, ಪೌರುಷವುಳ್ಳವನು; ಗಾಢ: ಹೆಚ್ಚಾದ, ಅತಿಶಯವಾದ; ಗರ್ಭ:ಹೊಟ್ಟೆ, ಉದರ; ಹೊಳ್ಳಿಸು: ಟೊಳ್ಳು ಮಾಡು, ಪೊಳ್ಳಾಗಿಸು; ಗರಳ:ವಿಷ; ಗ್ರೀವ: ಕಂಠ, ಗಂಟಲು, ಕತ್ತು; ಉಪದೇಶ: ಬುದ್ಧಿವಾದ; ಹುಬ್ಬು: ಕಣ್ಣಿನ ಮೇಲಿರುವ ಕೂದಲಿನ ಸಾಲು; ಮಾತಾಡು: ಹೇಳು; ತಿಳಿ: ಅರ್ಥೈಸು; ಸಕಳ: ಎಲ್ಲಾ, ಸರ್ವ; ಸುಪರ್ಬ: ದೇವತೆ; ಜನ: ಗುಂಪು; ಎರಗು: ನಮಸ್ಕರಿಸು; ಜಯ: ಹೊಗಳು, ವಿಜಯವಾಣಿ; ಪಶುಪತಿ: ಶಿವ;

ಪದವಿಂಗಡಣೆ:
ತುಬ್ಬಿಕೊಟ್ಟುದ್+ಅವಿದ್ಯೆಯನು +ಸುಧೆ
ಗೊಬ್ಬುಗಳ +ಗಂಡಿಗರ +ಗಾಢದ
ಗರ್ಭವನು +ಹೊಳ್ಳಿಸಿತು +ಗರಳಗ್ರೀವನ್+ಉಪದೇಶ
ಹುಬ್ಬಿನಲಿ +ಮಾತಾಡಿ +ತಮ್ಮೊಳಗ್
ಒಬ್ಬರೊಬ್ಬರು +ತಿಳಿದು +ಸಕಳ +ಸು
ಪರ್ಬಜನವ್+ಎರಗಿದುದು +ಜಯಜಯ +ವೆನುತ +ಪಶುಪತಿಗೆ

ಅಚ್ಚರಿ:
(೧) ಶಿವನನ್ನು ಗರಳಗ್ರೀವ, ಪಶುಪತಿ ಎಂದು ಕರೆದಿರುವುದು
(೨) ಗ ಕಾರದ ಸಾಲು ಪದಗಳು – ಗೊಬ್ಬುಗಳ ಗಂಡಿಗರ ಗಾಢದ ಗರ್ಭವನು

ಪದ್ಯ ೨೬: ಯುಧಿಷ್ಠಿರ ನಾರದರನ್ನು ಹೇಗೆ ಕೊಂಡಾಡಿದರು?

ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮ ಸಂಸೃತಿವಹ್ನಿದಗ್ಧರಿಗಮೃತ ವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮರ್ಥ್ಯದ ಸಗಾಢದ
ಎಸಕ ನಿಮಗುಂಟೆಂದು ಕೊಂಡಾಡಿದನು ನಾರದನ (ಸಭಾ ಪರ್ವ, ೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾರದರನ್ನು ಮಧುಪರ್ಕಾದಿಗಳಿಂದ ಸತ್ಕರಿಸಿದ ಬಳಿಕ ಅವರ ಯೋಗಕ್ಷೇಮವನ್ನು ವಿಚಾರಿಸಿ, ನಿಮ್ಮ ಪಾದಗಳ ಆಗಮನದಿಂದ ನಮಗೆ ಇಂದು ಶುಭದ ಏಳಿಗೆಯಾಯಿತು. ಸಂಸಾರವೆಂಬ ಬೆಂಕಿಯ ಜ್ವಾಲೆಯಿಂದ ಸುಟ್ಟುಹೋದ ನಮಗೆ ನಿಮ್ಮ ದರುಶನವು ಅಮೃತದ ಮಳೆಯಂತೆ ತಂಪನ್ನು ನೀಡಿದೆ, ಶಿವ, ಬ್ರಹ್ಮ, ವಿಷ್ಣು ಇವರಿಗೆ ಸರಿಸಮಾನದ ಸಾಮರ್ಥ್ಯವನ್ನು ಹೊಂದಿರುವ ನಿಮಗೆ ಅವರೊಂದಿಗೆ ಸಲಿಗೆಯೂ ಇದೆ ಎಂದು ಧರ್ಮರಾಯನು ನಾರದರನ್ನು ಕೊಂಡಾಡಿದನು.

ಅರ್ಥ:
ಕುಶಲ: ಕ್ಷೇಮ; ಅಂಘ್ರಿ: ಪಾದ; ಒಸಗೆ: ಶುಭ; ದರುಶನ: ಕಾಣುವುದು; ಅಸಮ: ಅಸದೃಶವಾದ; ಸಂಸೃತಿ: ಐಹಿಕ ಜೀವನ, ಸಂಸಾರ; ವಹ್ನಿ: ಅಗ್ನಿ; ದಗ್ಧ:ದಹಿಸಿದುದು; ಅಮೃತ: ಸುಧಾ; ವರ್ಷ: ಮಳೆ; ಪಶುಪತಿ: ಈಶ್ವರ; ಪರಮೇಷ್ಠಿ:ಬ್ರಹ್ಮ; ಮುರದ್ವಿಷ: ವಿಷ್ಣು; ಸಾಮರ್ಥ್ಯ:ದಕ್ಷತೆ, ಯೋಗ್ಯತೆ; ಸಗಾಢ: ವೈಭವ, ಜೋರು; ಎಸಕ:ಕಾಂತಿ, ತೇಜಸ್ಸು; ಕೊಂಡಾಡು: ಹೊಗಳು;

ಪದವಿಂಗಡಣೆ:
ಕುಶಲವೇ +ನಿಮ್ಮ್+ಅಂಘ್ರಿಗಳಿಗ್+ಇಂದ್
ಒಸಗೆಯಾಯಿತು +ನಮಗೆ +ದರುಶನವ್
ಅಸಮ +ಸಂಸೃತಿ+ವಹ್ನಿ+ದಗ್ಧರಿಗ್+ಅಮೃತ +ವರ್ಷವಲೆ
ಪಶುಪತಿಯ+ ಪರಮೇಷ್ಠಿಯಾ+ ಮುರ
ದ್ವಿಷನ +ಸಾಮರ್ಥ್ಯದ +ಸಗಾಢದ
ಎಸಕ +ನಿಮಗುಂಟೆಂದು+ ಕೊಂಡಾಡಿದನು +ನಾರದನ

ಅಚ್ಚರಿ:
(೧) ಸಂಸಾರದಲಿ ಬೆಂದ ಎಂದು ಸೂಚಿಸಲು ಬಳಸಿದ ಪದ – ಸಂಸೃತಿವಹ್ನಿದಗ್ಧ
(೨) ಶಿವ, ಬ್ರಹ್ಮ, ವಿಷ್ಣು ವನ್ನು ಹೇಳಲು ಬಳಸಿದ ಪದ – ಪಶುಪತಿ, ಪರಮೇಷ್ಠಿ, ಮುರದ್ವಿಷ

ಪದ್ಯ ೬೦: ದೇವೇಂದ್ರನು ಕುಂತಿಗೆ ಯಾವ ವರವನಿತ್ತನು?

ಸುತನನಿತ್ತೆನು ನಿನಗೆ ಲೋಕ
ತ್ರಿತಯದಲಿ ಬಲುಗೈ ಕಣಾ ಪಶು
ಪತಿಗೆ ಪುರುಷೋತ್ತಮಗೆ ಸರಿಮಿಗಿಲೆಂಬ ಸಂದೇಹ
ಶತಭವಾಂತರ ಪುಣ್ಯತರು ಕಾ
ಮಿತವ ಫಲಿಸಿತು ಹೋಗೆನುತ ಸುರ
ಪತಿ ಲತಾಂಗಿಗೆ ವರವನಿತ್ತಡರಿದನು ಗಗನವನು (ಆದಿ ಪರ್ವ, ೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕುಂತಿಯ ಇಂಗಿತವನ್ನು ಅರಿತ ದೇವೇಂದ್ರನು ಎಲೈ ಕುಂತಿಯೇ, ನಿನಗೆ ಒಬ್ಬ ಮಗನನ್ನು ದಯಪಾಲಿಸುತ್ತೇನೆ. ಅವನು ಮೂರುಲೋಕದಲ್ಲೂ ಅತಿ ವೀರನಾಗುತ್ತಾನೆ, ಶಿವ ಮತ್ತು ವಿಷ್ಣು ವಿಗೂ ಸರಿಸಮನಾದವನೇ ಎಂಬ ಅನುಮಾನವೂ ಬರುತ್ತದೆ. ನಿನ್ನ ಎಲ್ಲ ಹಿಂದಿನ ಜನ್ಮದ ಪುಣ್ಯದ ವೃಕ್ಷ ಈಗ ಫಲ ಬಿಟ್ಟಿದೆ ಎಂದು ಹೇಳಿ ಹಿಂದಿರುಗಿದನು.

ಅರ್ಥ:
ಸುತ: ಮಗ; ಪಶುಪತಿ: ಈಶ್ವರ; ಪುರುಷೋತ್ತಮ: ವಿಷ್ಣು
ಬಲುಗೈ: ಶೂರ, ಪರಾಕ್ರಮಿ; ಸಂದೇಹ: ಅನುಮಾನ
ಭಾವಾಂತರ: ಜನ್ಮಾಂತರ; ತರು: ವೃಕ್ಷ, ಮರ; ಕಾಮಿತ: ಆಸೆ
ಸುರಪತಿ: ಇಂದ್ರ; ಲತಾಂಗಿ: ಬಳ್ಳಿಯಂತೆ ಕೋಮಲವಾದ ಶರೀರವುಳ್ಳವಳು, ಕೋಮಲೆ

ಪದವಿಂಗಡನೆ:
ಸುತನನ್ +ಇತ್ತೆನು; ಪುರುಷ+ಉತ್ತಮ; ಸರಿಮಿಗಿಲ್+ಎಂಬ

ಅಚ್ಚರಿ:
(೧) ೩ ಮತ್ತು ೬ ಸಾಲಿನ ಮೊದಲನೇ ಪದ “ಪತಿ” ಯಾಗಿರುವುದು, ಒಂದು ಪಶುಪತಿ ಮತ್ತೊಂದು ಸುರಪತಿ