ಪದ್ಯ ೨೯: ಭೀಮನು ಆಂಜನೇಯನನ್ನು ಹೇಗೆ ಉಪಚರಿಸಿದನು?

ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬರೈಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದುಪ
ಚರಿಸಿದನು ಪವಮಾನನಂದನನಂಜನಾಸುತನ (ಅರಣ್ಯ ಪರ್ವ, ೧೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮನು ಹನುಮಂತನಿಗೆ, ನನಗಿಬ್ಬರು ಅಣ್ಣಂದಿರು, ಧರ್ಮಜ ಮತ್ತು ನೀನು, ನನಗಿಬ್ಬರು ತಂದೆಯರು, ವಾಯುದೇವ ಮತ್ತು ನೀನು, ನನಗಿಬ್ಬರು ಗುರುಗಳು, ವ್ಯಾಸ ಮಹರ್ಷಿಗಳು ಮತ್ತು ನೀನು ಎಂದು ಉಪಚಾರದ ಮಾತುಗಳನ್ನು ಭೀಮನು ನುಡಿದನು.

ಅರ್ಥ:
ಹಿರಿಯ: ದೊಡ್ಡವ; ಧರಣಿಪತಿ: ರಾಜ; ಅಯ್ಯ: ತಂದೆ; ಮಾರುತ: ವಾಯು; ಗುರು: ಆಚಾರ್ಯ; ಬಾದರಾಯಣ: ವ್ಯಾಸ; ಪರಮ: ಶ್ರೇಷ್ಠ; ಋಷಿ: ಮುನಿ; ಉಪಚಾರ: ಸತ್ಕಾರ; ಪವಮಾನ: ವಾಯು; ನಂದನ: ಮಗ; ಅಂಜನಾಸುತ: ಆಂಜನೇಯ;

ಪದವಿಂಗಡಣೆ:
ಹಿರಿಯರ್+ಎನಗಿಬ್ಬರು +ಯುಧಿಷ್ಠಿರ
ಧರಣಿಪತಿ +ನೀನೊಬ್ಬರ್+ಅಯ್ಯಂ
ದಿರುಗಳ್+ಇಬ್ಬರು +ಮಾರುತನು +ನೀನೊಬ್ಬನ್+ಇಂದೆನಗೆ
ಗುರುಗಳಿಬ್ಬರು +ಬಾದರಾಯಣ
ಪರಮಋಷಿ +ನೀನೊಬ್ಬನೆಂದ್+ಉಪ
ಚರಿಸಿದನು +ಪವಮಾನನಂದನನ್+ಅಂಜನಾಸುತನ

ಅಚ್ಚರಿ:
(೧) ಭೀಮ ಮತ್ತು ಆಂಜನೇಯರನ್ನು ಒಟ್ಟಿಗೆ ಕರೆದ ಪರಿ – ಪವಮಾನನಂದನನಂಜನಾಸುತನ

ಪದ್ಯ ೨೮: ಪಾಂಡವರ ಸಂತೋಷವನ್ನು ವರ್ಣಿಸಲಾಗುತ್ತದೆಯೆ?

ಏನನೆಂಬೆನು ಭೂಪ ಕಾಲನ
ಸೂನುವಿನ ಸುಮ್ಮಾನವನು ಪವ
ಮಾನನಂದನನುತ್ಸವವರ್ನರ್ಜುನನ ಹರುಷವನು
ಮಾನನಿಧಿ ಮಾದ್ರೀಕುಮಾರರ
ಸಾನುಭಾವವನಾ ಮಹೀಶನ
ಮಾನಿನಿಯ ಮನದೊಲಾನಭಿವರ್ಣಿಸುವೊಡರಿದೆಂದ (ಸಭಾ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪುರುಷಮೃಗವನ್ನು ಯಜ್ಞಶಾಲೆಯಲ್ಲಿ ಕಟ್ಟಿದಬಳಿಕ ಪಾಂಡವರು ಸಂತೋಷಗೊಂಡರು. ಧರ್ಮಜನ ಸಂತೋಷ, ಭೀಮನ ಉಲ್ಲಾಸ, ಅರ್ಜುನನ ಹರ್ಷ, ನಕುಲಸಹದೇವನ ಅನುಮೋದ, ದ್ರೌಪದಿಯ ಪ್ರೀತಿಗಳನ್ನು ವರ್ಣಿಸಲು ಸಾಧ್ಯವೆ, ಎನ್ನುವಷ್ಟು ಹರ್ಷಭರಿತರಾಗಿದ್ದರು.

ಅರ್ಥ:
ಏನನೆಂಬೆನು: ಏನು ಹೇಳಲಿ; ಭೂಪ: ರಾಜ; ಕಾಲ: ಯಮ; ಸೂನು: ಮಗ; ಸುಮ್ಮಾನ:ಸಂತೋಷ; ಪವಮಾನ: ವಾಯು; ನಂದನ: ಮಗ; ಉತ್ಸವ: ಸಂಭ್ರಮ; ಹರುಷ: ಸಂತೋಷ; ಮಾನ: ಮರ್ಯಾದೆ; ನಿಧಿ: ಐಶ್ವರ್ಯ; ಕುಮಾರ: ಮಗ; ಸಾನುಭಾವ: ಅನುಕಂಪ; ಮಹೀಶ: ರಾಜ; ಮಾನಿನಿ: ಹೆಣ್ಣು; ಒಲವು: ಪ್ರೀತಿ; ಮನ: ಮನಸ್ಸು; ಅಭಿವರ್ಣಿಸು: ವಿಸ್ತರಿಸು;

ಪದವಿಂಗಡಣೆ:
ಏನನ್ +ಎಂಬೆನು +ಭೂಪ +ಕಾಲನ
ಸೂನುವಿನ+ ಸುಮ್ಮಾನವನು +ಪವ
ಮಾನ+ನಂದನನ್+ಉತ್ಸವವನ್+ಅರ್ಜುನನ+ ಹರುಷವನು
ಮಾನನಿಧಿ +ಮಾದ್ರೀ+ಕುಮಾರರ
ಸಾನುಭಾವವನ+ಆ+ ಮಹೀಶನ
ಮಾನಿನಿಯ +ಮನದ್+ಒಲವನ್+ವರ್ಣಿಸುವೊಡರಿದೆಂದ

ಅಚ್ಚರಿ:
(೧) ಧರ್ಮಜನನ್ನು ಕಾಲನಸೂನು, ಭೀಮನನ್ನು ಪವಮಾನನಂದನ ಎಂದು ಕರೆದಿರುವುದು
(೨) ಸುಮ್ಮಾನ, ಉತ್ಸವ, ಹರುಷ, ಸಾನುಭಾವ, ಒಲವು – ಸಂತೋಷವನ್ನು ವರ್ಣಿಸುವ ಪದಗಳು