ಪದ್ಯ ೪೩: ದುರ್ಯೋಧನನು ಎಲ್ಲಿ ಮಲಗಿದನು?

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ (ಗದಾ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಸೂರ್ಯನೇ ಮೊದಲಾದ ಸಮಸ್ತ ದೇವತೆಗಳಿಗೂ ನಮಸ್ಕರಿಸಿ, ಹೃದಯದಲ್ಲಿ ವರುಣನನ್ನು ಧ್ಯಾನಿಸುತ್ತಾ, ಸುತ್ತನಾಲ್ಕು ದಿಕ್ಕುಗಳನ್ನೂ ನೋಡಿ ಯಾರಿಗೂ ಕಾಣಿಸುತ್ತಿಲ್ಲವೆಂಬುದನ್ನು ನಿರ್ಧರಿಸಿಕೊಂಡು, ದುಷ್ಟಬುದ್ಧಿಯಾದ ಕೌರವನು ಪಾದ, ಮೊಣಕಾಲು, ಸೊಂಟ, ಹೃದಯ ಮುಖ ತಲೆಗಳ ಪರ್ಯಂತ ನೀರಲ್ಲಿ ಮುಳುಗಿ ಕೊಳದ ಮಧ್ಯದಲ್ಲಿ ಮಲಗಿದನು.

ಅರ್ಥ:
ದ್ಯುಮಣಿ: ಸೂರ್ಯ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಸುರರು: ದೇವತೆ; ನಮಿಸು: ವಂದಿಸು; ವರುಣ: ನೀರಿನ ಅಧಿದೇವತೆ; ಧ್ಯಾನ: ಮನನ; ಹೃತ್ಕಮಲ: ಹೃದಯ ಕಮಲ; ನೆಲೆಗೊಳಿಸು: ಸ್ಥಾಪಿಸು; ದೆಸೆ: ದಿಕ್ಕು; ಕುಮತಿ: ಕೆಟ್ಟ ಬುದ್ಧಿಯುಳ್ಳವ; ಇಳಿ: ಜಾರು; ಜಾನು: ಮಂಡಿ, ಮೊಳಕಾಲು; ಕಟಿ: ಸೊಂಟ, ನಡು; ಮುಖ: ಆನನ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಪರಿಯಂತ: ವರೆಗೆ, ತನಕ; ಜಲ: ನೀರು; ಕೊಳ: ಸರಸಿ; ಮಧ್ಯ: ನಡುವೆ; ಅರಸ: ರಾಜ; ಪವಡಿಸು: ಮಲಗು; ಅಮರಿ: ನೆಲತಂಗಡಿ;

ಪದವಿಂಗಡಣೆ:
ದ್ಯುಮಣಿ +ಮೊದಲಾದ್+ಅಖಿಳ+ ಸುರರಿಗೆ
ನಮಿಸಿ+ ವರುಣ+ಧ್ಯಾನವನು +ಹೃ
ತ್ಕಮಲದಲಿ +ನೆಲೆಗೊಳಿಸಿ+ ನಾಲುಕು +ದೆಸೆಯನ್+ಆರೈದು
ಕುಮತಿ+ಇಳಿದನು +ಜಾನು +ಕಟಿ +ಹೃ
ತ್ಕಮಲಗಳ +ಮುಖ +ಮೂರ್ಧ +ಪರಿಯಂತ್
ಅಮರಿದುದು +ಜಲ +ಕೊಳನ +ಮಧ್ಯದಲ್+ಅರಸ +ಪವಡಿಸಿದ

ಅಚ್ಚರಿ:
(೧) ಹೃತ್ಕಮಲ – ೩, ೫ ಸಾಲಿನ ಮೊದಲ ಪದ
(೨) ದುರ್ಯೋಧನನನ್ನು ಕುಮತಿ, ಅರಸ ಎಂದು ಕರೆದಿರುವುದು

ಪದ್ಯ ೮೦: ಭೀಮನು ಎಲ್ಲಿ ಮಲಗಿದನು?

ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ (ವಿರಾಟ ಪರ್ವ, ೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ಭೀಮನ ಕೂದಲುಗಳನ್ನು ಒಪ್ಪವಾಗಿ ಕಟ್ಟಿ, ಸುಗಂಧ ದ್ರವ್ಯಗಲನ್ನು ಲೇಪಿಸಿ, ಹಣೆಯಲ್ಲಿ ಜಯ ತಿಲಕವನ್ನಿಟ್ಟು, ಮಂಗಳಾಕ್ಷತೆಯನ್ನಿಟ್ಟು ದ್ರೌಪದಿಯು ಆ ದುಷ್ಟನನ್ನು ಸಂಹರಿಸು ಎಂದು ಹರಸಿದಳು. ಕಗ್ಗತ್ತಲು ತುಂಬಿದ ಅರಮನೆಯ ನಾಟ್ಯ ಮಂದಿರಕ್ಕೆ ಹೋಗಿ, ನದುವಿನ ಮಂಚದ ಮೇಲೆ ಭೀಮನು ಮಲಗಿದನು.

ಅರ್ಥ:
ಖಳ: ದುಷ್ಟ; ಮುರಿ: ಸೀಳು, ಸಾಯಿಸು; ಅಬಲೆ: ಹೆಣ್ಣು; ನೊಸಲು: ಹಣೆ; ತಿಲಕ: ಬೊಟ್ಟು; ರಚಿಸು: ನಿರ್ಮಿಸು; ಸೇಸೆ: ಮಂಗಳಾಕ್ಷತೆ, ಮಂತ್ರಾಕ್ಷತೆ; ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ಹಿಣಿಲು: ಹೆರಳು, ಜಡೆ; ಹೊಸ: ನವೀನ; ಪರಿ: ರೀತಿ; ಬಲು: ಶಕ್ತಿ, ಪರಾಕ್ರಮ; ಭುಜ: ತೋಳು; ಕಗ್ಗತ್ತಲೆ: ಗಾಢಾಂಧಕಾರ; ಹಬ್ಬುಗೆ: ಹರವು, ವಿಸ್ತಾರ; ನಾಟ್ಯ: ನೃತ್ಯ; ನಿಳಯ: ಮನೆ; ಮಧ್ಯ: ನಡುಭಾಗ; ಮಣಿ: ಬೆಲೆಬಾಳುವ ರತ್ನ; ಮಂಚ: ಪಲ್ಲಂಗ; ಪವಡಿಸು: ಮಲಗು;

ಪದವಿಂಗಡಣೆ:
ಖಳನ +ಮುರಿ+ಎಂದ್+ಅಬಲೆ +ನೊಸಲಲಿ
ತಿಲಕವನು+ ರಚಿಸಿದಳು+ ಸೇಸೆಯ
ತಳಿದಳ್+ಏರಿಸಿ +ತಿಗುರ +ಗೆಲಿದಳು +ಹಿಣಿಲ+ ಹೊಸ +ಪರಿಯ
ಬಲುಭುಜನ +ಹರಸಿದಳು +ಕಗ್ಗ
ತ್ತಲೆಯ +ಹಬ್ಬುಗೆಯೊಳಗೆ+ ನಾಟ್ಯದ
ನಿಳಯ +ಮಧ್ಯದ +ಮಣಿಯ +ಮಂಚದ +ಮೇಲೆ +ಪವಡಿಸಿದ

ಅಚ್ಚರಿ:
(೧) ಮ ಕಾರದ ಪದಗಳು – ಮಧ್ಯದ ಮಣಿಯ ಮಂಚದ ಮೇಲೆ

ಪದ್ಯ ೨೨: ಕಲ್ಪದ ಕೊನೆ ಹೇಗಿರುತ್ತದೆ?

ಅರಸ ಕೇಳ್ ಕಲ್ಪಾಂತದಲಿ ಬಿಡೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲನಿಧಿ ಜಲದೊಳೊಂದಾಯ್ತೇನ ಹೇಳುವೆನು
ಹರಿವಿನೋದದೊಳಾಲದೆಲೆಯಲಿ
ಸಿರಿಸಹಿತ ಪವಡಿಸಿದನಿನಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ (ಅರಣ್ಯ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕಲ್ಪದ ಕೊನೆಗಾಲದಲ್ಲಿ ಬ್ರಹ್ಮಾಂಡವು ಬಿರಿದು, ಹೊರಗಿನ ಆವರಣದ ಸಮುದ್ರವು ಭೂಮಿಯನಾವರಿಸಿದ ನೀರಿನೊಡನೆ ಬೆರೆತು ಹೋದುದನ್ನು ಹೇಗೆ ಹೇಳಲಿ? ವಿಷ್ಣುವು ಲಕ್ಷ್ಮೀ ದೇವಿಯೊಂದಿಗೆ ಒಂದು ಆಲದ ಎಲೆಯ ಮೇಲೆ ಮಲಗಿದ್ದನು. ಆಗ ಸೂರ್ಯಚಂದ್ರರ ಬೆಳಕಿರಲಿಲ್ಲ, ಮಹಾಂಧಕಾರವು ಗಾಢವಾಯಿತು.

ಅರ್ಥ:
ಅರಸ: ರಾಜ; ಕೇಳ್: ಆಲಿಸು; ಕಲ್ಪ: ಬ್ರಹ್ಮನ ಒಂದು ದಿವಸ ಯಾ ಸಹಸ್ರ ಯುಗ; ಅಂತ: ಕೊನೆ; ಬಿಡು: ತೊರೆ, ತ್ಯಜಿಸು; ಬಿರಿ: ಬಿರುಕು, ಸೀಳು; ಬ್ರಹ್ಮಾಂಡ: ಜಗತ್ತು; ಬಹಿರ: ಹೊರಗೆ; ಆವರಣ: ಪ್ರಾಕಾರ, ಸುತ್ತು; ಜಲನಿಧಿ: ಸಾಗರ; ಜಲ: ನೀರು; ಹೇಳು: ತಿಳಿಸು; ಹರಿ: ಕೃಷ್ಣ; ವಿನೋದ: ಸಂತೋಷ; ಆಲ: ವಟವೃಕ್ಷ; ಎಲೆ: ಪರ್ಣ; ಸಿರಿ: ಐಶ್ವರ್ಯ; ಸಹಿತ: ಜೊತೆ; ಪವಡಿಸು: ಮಲಗು; ಇನ: ಸೂರ್ಯ; ಶಶಿ: ಚಂದ್ರ; ಕಿರಣ: ಕಾಂತಿ; ಅಂಧಕಾರ: ಕತ್ತಲೆ; ಭಾರ: ಹೊರೆ;

ಪದವಿಂಗಡಣೆ:
ಅರಸ +ಕೇಳ್ +ಕಲ್ಪಾಂತದಲಿ+ ಬಿಡೆ
ಬಿರಿದುದ್+ಈ+ ಬ್ರಹ್ಮಾಂಡ +ಬಹಿರಾ
ವರಣ+ ಜಲನಿಧಿ +ಜಲದೊಳ್+ಒಂದಾಯ್ತ್+ಏನ+ ಹೇಳುವೆನು
ಹರಿ+ವಿನೋದದೊಳ್ +ಆಲದ್+ಎಲೆಯಲಿ
ಸಿರಿ+ಸಹಿತ+ ಪವಡಿಸಿದನ್+ಇನ+ಶಶಿ
ಕಿರಣವಿಲ್ಲ+ ಮಹಾಂಧಕಾರ+ ಸಭಾರವಾಯ್ತೆಂದ

ಅಚ್ಚರಿ:
(೧) ಹರಿಯ ವಿನೋದ ಲೀಲೆ – ಹರಿವಿನೋದದೊಳಾಲದೆಲೆಯಲಿ ಸಿರಿಸಹಿತ ಪವಡಿಸಿದನಿನಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ