ಪದ್ಯ ೧೮: ಭೀಮ ದುರ್ಯೋಧನರು ಹೇಗೆ ಹೋರಾಡಿದರು?

ನೋಡಿದನು ದಂಡೆಯಲಿ ಲಾಗಿಸಿ
ಹೂಡಿದನು ನೃಪ ಭೀಮನಲಿ ಪಯ
ಪಾಡಿನಲಿ ಪಲ್ಲಟಿಸಿದನು ಪಡಿತಳಕೆ ಕುರುರಾಯ
ಘಾಡಿಸಿದನುಪ್ಪರದ ಘಾಯಕೆ
ಕೂಡೆ ತಗ್ಗಿದನನಿಲಸುತ ಖಯ
ಖೋಡಿಯಿಲ್ಲದೆ ಭಟರು ಹೊಯ್ದಾಡಿದರು ಖಾತಿಯಲಿ (ಗದಾ ಪರ್ವ, ೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೌರವನು ದಂಡೆಯಿಂದ ಗುರಿಯಿಟ್ಟು ಪಾದಚಲನೆಯಿಂದ ಗದೆಯಿಂದ ಹೊಡೆಯಲು, ಆ ಏಟಿನಿಂದ ಭೀಮನು ನೊಂದನು. ಯಾವ ವಿಧವಾದ ಹಿಂಜರಿಕೆಯೂ ಇಲ್ಲದೆ ವೀರರಿಬ್ಬರೂ ಹೋರಾಡಿದರು.

ಅರ್ಥ:
ನೋಡು: ವೀಕ್ಷಿಸು; ದಂಡೆ: ತಟ, ಕೂಲ, ದಡ; ಲಾಗು: ನೆಗೆಯುವಿಕೆ, ಲಂಘನ; ಹೂಡು: ಅಣಿಗೊಳಿಸು; ನೃಪ: ರಾಜ; ಪಯ:ಹೆಜ್ಜೆ ಹಾಕುವ ಒಂದು ಕ್ರಮ; ಪಾಡಿ: ಪಡೆ, ಸೈನ್ಯ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಡಿತಳ: ಮುನ್ನುಗ್ಗುವಿಕೆ, ಆಕ್ರಮಣ; ಘಾಡಿಸು: ವ್ಯಾಪಿಸು; ಉಪ್ಪರ: ಎತ್ತರ, ಉನ್ನತಿ; ಘಾಯ: ಪೆಟ್ಟು; ಕೂಡೆ: ಜೊತೆ; ತಗ್ಗು: ಬಾಗು, ಕಡಿಮೆಯಾಗು; ಅನಿಲಸುತ: ಭೀಮ; ಖಯ: ಜಂಬ, ಸೊಕ್ಕು; ಖೋಡಿ: ದುರುಳತನ, ನೀಚತನ; ಭಟ: ಸೈನಿಕ; ಹೊಯ್ದಾಡು: ಹೊಡೆದಾಡು; ಖಾತಿ: ಕೋಪ;

ಪದವಿಂಗಡಣೆ:
ನೋಡಿದನು +ದಂಡೆಯಲಿ +ಲಾಗಿಸಿ
ಹೂಡಿದನು +ನೃಪ +ಭೀಮನಲಿ +ಪಯ
ಪಾಡಿನಲಿ +ಪಲ್ಲಟಿಸಿದನು+ ಪಡಿತಳಕೆ +ಕುರುರಾಯ
ಘಾಡಿಸಿದನುಪ್ಪರದ +ಘಾಯಕೆ
ಕೂಡೆ +ತಗ್ಗಿದನ್+ಅನಿಲಸುತ +ಖಯ
ಖೋಡಿಯಿಲ್ಲದೆ+ ಭಟರು +ಹೊಯ್ದಾಡಿದರು+ ಖಾತಿಯಲಿ

ಅಚ್ಚರಿ:
(೧) ನೋಡಿ, ಹೂಡಿ, ಪಾಡಿ, ಘಾಡಿ, ಖೋಡಿ – ಪ್ರಾಸ ಪದಗಳು

ಪದ್ಯ ೩೧: ಕೌರವನೇಕೆ ಮಂತ್ರಾಕ್ಷರವನ್ನು ಮರೆತನು?

ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ (ಗದಾ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಈ ಘೋಷವನ್ನು ಕೇಳಿ ನಿನ್ನ ಮಗನಿಗೆ ಅತಿಶಯ ಕೋಪಾಗ್ನಿ ಉಕ್ಕಿತು. ರೋಮಾಂಚನಗೊಂಡ ಅವನ ಇಂದ್ರಿಯಗಳು ಮನಸ್ಸು ಉರಿದೆದ್ದವು. ಅಂತರಂಗದಲ್ಲಿ ದುಃಖವುಂಟಾಗಿ, ಜಲಸ್ತಂಭ ಮಂತ್ರದ ಬೀಜಾಕ್ಷರಗಳು ಮರೆತುಹೋದವು. ವೀರಾವೇಶದಿಂದ ನಿನ್ನ ಮಗನು ಕುದಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಗ: ಸುತ; ಉಬ್ಬರ: ಅತಿಶಯ, ಹೆಚ್ಚಳ; ರೋಮಾಂಚನ: ಆಶ್ಚರ್ಯ; ಗಬ್ಬ: ಅಹಂಕಾರ, ಸೊಕ್ಕು; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಕರಣ: ಜ್ಞಾನೇಂದ್ರಿಯ; ಆದಿ: ಮುಂತಾದ; ತುರುಗು: ಸಂದಣಿಸು; ಅಂತಃಖೇದ: ಒಳ ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಕ್ಷರ: ಅಕಾರ ಮೊದಲಾದ ವರ್ಣ; ಜವನಿಕೆ: ತೆರೆ, ಪರದೆ; ನಿರ್ಭರ: ವೇಗ, ರಭಸ; ವೀರ: ಶೂರ; ಆವೇಶ: ರೋಷ, ಆಗ್ರಹ; ಪಲ್ಲಟ: ಮಾರ್ಪಾಟು; ಭೂಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ನಿನ್ನ +ಮಗನ್
ಉಬ್ಬರಿಸಿದನು +ರೋಮಾಂಚದಲಿಗ್
ಅಬ್ಬರಿಸುತ್+ಅಧಿಕ+ಕ್ರೋಧ+ಶಿಖಿ +ಕರಣೇಂದ್ರಿ+ಆದಿಗಳ
ತುರುಗಿದ್+ಅಂತಃ+ಖೇದ +ಮಂತ್ರಾ
ಕ್ಷರಕೆ +ಜವನಿಕೆಯಾದುದೈ +ನಿ
ರ್ಭರದ +ವೀರಾವೇಶದಲಿ +ಪಲ್ಲಟಿಸಿದನು +ಭೂಪ

ಅಚ್ಚರಿ:
(೧) ಮಂತ್ರವನ್ನು ಮರೆತ ಎಂದು ಹೇಳುವ ಪರಿ – ಮಂತ್ರಾಕ್ಷರಕೆ ಜವನಿಕೆಯಾದುದೈ
(೨) ದುರ್ಯೋಧನನ ಸ್ಥಿತಿ – ನಿರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ
(೩) ಅರಸ, ಭೂಪ – ಸಮಾನಾರ್ಥಕ ಪದ, ಮೊದಲ ಮತ್ತು ಕೊನೆಯ ಪದ

ಪದ್ಯ ೨೮: ದುರ್ಯೋಧನನು ತನ್ನ ಸ್ಥಿತಿಯ ಬಗ್ಗೆ ಏನು ಹೇಳಿದ?

ಕೇಳು ಸಂಜಯ ಪೂರ್ವ ಸುಕೃತದ
ಸಾಳಿವನವೊಣಗಿದೊಡೆ ಭಾರಿಯ
ತೋಳುಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ (ಗದಾ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆಗ ದುರ್ಯೋಧನನು ಕಂಬನಿಗಳಿಂದ ತುಂಬಿದವನಾಗಿ, ಸಂಜಯ ಕೇಳು, ಪೂರ್ವ ಪುಣ್ಯದ ಭತ್ತದ ಗದ್ದೆ ಒಣಗಿ ಹೋದರೆ, ಭಾರಿಯ ತೋಳ ಬಂದಿಯನ್ನು ಹಾಕಿಕೊಂಡಿದ್ದ ಜಯಲಕ್ಷ್ಮಿಯ ತೋಳು ಸಡಲವಾಗಿಸಿ ಜಾರಿಬಿದ್ದರೆ, ಹಣೆಯಮೇಲೆ ಬರೆದಿದ್ದ ಲಿಪಿಗಳ ಲೆಕ್ಕಾಚಾರವನ್ನು ವಿಧಿಯ ವಿರೋಧದಿಂದ ತಿರುವು ಮುರುವಾಗಿ ಬರೆದರೆ, ಏನು ಹೇಳಿ ಏನು ಪ್ರಯೋಜನ ಎಂದು ತನ್ನ ಸ್ಥಿತಿಯ ಬಗ್ಗೆ ಸಂಜಯನಿಗೆ ಹೇಳಿದನು.

ಅರ್ಥ:
ಕೇಳು: ಆಲಿಸು; ಪೂರ್ವ: ಹಿಂದೆ; ಸುಕೃತ: ಒಳ್ಳೆಯ ಕೆಲಸ; ಶಾಳಿವನ: ಬತ್ತದ ಗದ್ದೆ; ಒಣಗು: ಜೀವವಿಲ್ಲದ; ಭಾರಿ: ದೊಡ್ಡ; ತೋಳು: ಬಾಹು; ಜಯ: ಗೆಲುವು; ಜಂಗಳ: ಸಡಿಲವಾಗಿ; ಜಾರು: ಕೆಳಗೆ ಬೀಳು; ಭಾಳ: ಹಣೆ; ಲಿಪಿ: ಬರಹ; ಲೆಕ್ಕ: ಎಣಿಕೆ; ಪ್ರತಿಕೂಲ: ಅನುಕೂಲವಲ್ಲದುದು, ವ್ಯತಿರಿಕ್ತವಾದುದು; ವಿಧಿ: ನಿಯಮ; ಪಲ್ಲಟ: ಬದಲಾವಣೆ; ಬರೆ: ಲಿಖಿಸು; ಹೇಳು: ತಿಳಿಸು; ಫಲ: ಪ್ರಯೋಜನ; ತುಂಬು: ಭರ್ತಿ ಮಾಡು; ಅರಸ: ರಾಜ; ಕಂಬನಿ: ಕಣ್ಣೀರು;

ಪದವಿಂಗಡಣೆ:
ಕೇಳು +ಸಂಜಯ +ಪೂರ್ವ +ಸುಕೃತದ
ಸಾಳಿವನ+ಒಣಗಿದೊಡೆ +ಭಾರಿಯ
ತೋಳುಗುತ್ತಿನ+ ಜಯಲಕುಮಿ +ಜಂಗಳವ +ಜಾರಿದಡೆ
ಭಾಳ+ಲಿಪಿಗಳ+ ಲೆಕ್ಕವನು +ಪ್ರತಿ
ಕೂಲವಿಧಿ +ಪಲ್ಲಟಿಸಿ +ಬರೆದಡೆ
ಹೇಳಿ +ಫಲವೇನ್+ಎನುತ +ತುಂಬಿದನ್+ಅರಸ +ಕಂಬನಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪೂರ್ವ ಸುಕೃತದಸಾಳಿವನವೊಣಗಿದೊಡೆ