ಪದ್ಯ ೨೫: ಕುಂತಿಯು ಮಕ್ಕಳನ್ನು ಎಲ್ಲಿ ಪಾಲಿಸುತ್ತಿದ್ದಳು?

ಪತಿಯ ಸಹಗಮನದಲಿ ಮಾದ್ರೀ
ಸತಿ ಶರೀರವ ಬಿಟ್ಟಳೈವರು
ಸುತರು ಸಹಿತೀ ಕುಂತಿ ಮಿಂದು ಪರೇತ ಕೃತ್ಯವನು
ಶ್ರುತಿವಿಧಾನದೊಳಖಿಳ ಮುನಿ ಸಂ
ತತಿಗಳನು ಮುಂದಿಟ್ಟು ಮಾಡಿಸಿ
ಸುತರ ಪಾಲಿಸುತಿರ್ದಳಾ ಶತಶೃಂಗ ಶೈಲದಲಿ (ಆದಿ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಮಾದ್ರಿಯು ಪತಿಯೊಡನೆ ಸಹಗಮನವನ್ನು ಮಾಡಿ, ಶರೀರವನ್ನು ಬಿಟ್ಟಳು. ಕುಂತಿಯು ಮಕ್ಕಳೊಡನೆ ಸ್ನಾನ ಮಾಡಿ, ವೈದಿಕ ವಿಧಾನದಂತೆ ಮುನಿಗಳು ಹೇಳಿದ ರೀತಿಯಲ್ಲಿ ಅಪರಕ್ರಿಯೆಗಳನ್ನು ಮಾಡಿಸಿ ಶತಶೃಂಗ ಪರ್ವತದಲ್ಲಿ ಮಕ್ಕಳನ್ನು ಪಾಲಿಸುತ್ತಿದ್ದಳು.

ಅರ್ಥ:
ಪತಿ: ಗಂಡ; ಸಹಗಮನ: :ಪತಿಯ ಶವದ ಜೊತೆಯಲ್ಲಿಯೇ ಪತ್ನಿಯು ಚಿತೆಯೇರುವುದು; ಸತಿ: ಹೆಂಡತಿ; ಶರೀರ: ತನು, ದೇಹ; ಬಿಡು: ತೊರೆ; ಸುತರು: ಮಕ್ಕಳು; ಸಹಿತ: ಜೊತೆ; ಮಿಂದು: ಸ್ನಾನಮಾಡು, ತೋಯು; ಪರೇತ: ಹೆಣ, ಶವ, ಅಗಲಿದ; ಕೃತ್ಯ: ಕಾರ್ಯ; ಶ್ರುತಿ: ವೇದ; ವಿಧಾನ: ರೀತಿ; ಅಖಿಳ: ಎಲ್ಲಾ; ಮುನಿ: ಋಷಿ; ಸಂತತಿ: ಕುಲ; ಸುತ: ಮಕ್ಕಳು; ಪಾಲಿಸು: ಕಾಪಾಡು; ಶೈಲ: ಬೆಟ್ಟ;

ಪದವಿಂಗಡಣೆ:
ಪತಿಯ +ಸಹಗಮನದಲಿ +ಮಾದ್ರೀ
ಸತಿ +ಶರೀರವ +ಬಿಟ್ಟಳ್+ಐವರು
ಸುತರು +ಸಹಿತೀ +ಕುಂತಿ +ಮಿಂದು +ಪರೇತ +ಕೃತ್ಯವನು
ಶ್ರುತಿ+ವಿಧಾನದೊಳ್+ಅಖಿಳ +ಮುನಿ +ಸಂ
ತತಿಗಳನು +ಮುಂದಿಟ್ಟು +ಮಾಡಿಸಿ
ಸುತರ+ ಪಾಲಿಸುತಿರ್ದಳಾ +ಶತಶೃಂಗ +ಶೈಲದಲಿ

ಅಚ್ಚರಿ:
(೧) ಪತಿ, ಸತಿ – ಜೋಡಿ ಪದಗಳು
(೨) ಪತಿ, ಸತಿ, ಸಂತತಿ, ಶ್ರುತಿ – ಪ್ರಾಸ ಪದಗಳು

ಪದ್ಯ ೧೫: ಸಂಜಯನು ಯಾರ ನಡಿಗೆಯನ್ನು ನೋಡಿದನು – ೮?

ಭೂತರವ ಭೇತಾಳ ಕಲಹ ವಿ
ಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಆತು ಮರಳಿದು ಹಿಂದ ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ (ಗದಾ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂತಗಳ ಕೂಗು, ಬೇತಾಳಗಳ ಜಗಳ, ನರಿ ಗೂಬೆ ಕಾಗೆಗಳ ರಭಸಕ್ಕೆ ಪಾಂಡವರ ಸೇನೆ ಎಲ್ಲಿ ಬಂದಿತೋ ಎಂದು ಬೆಚ್ಚುತಿದ್ದನು. ಆಗಾಗ ಏನನ್ನಾದರೂ ಹಿಡಿದು ಹಿಂದಕ್ಕೆ ನೋಡುತ್ತಾ ವೈಭವವು ನಾಶವಾಯಿತಲ್ಲಾ ಎಂದು ಛಲದಿಂದ ಉಗ್ರ ಭಾವವನ್ನು ತಾಳುತ್ತಿದ್ದನು.

ಅರ್ಥ:
ಭೂತ: ದೆವ್ವ, ಪಿಶಾಚಿ; ರವ: ಶಬ್ದ; ಭೇತಾಳ: ದೆವ್ವ; ಕಲಹ: ಜಗಳ; ವಿಧೂತ: ಅಲುಗಾಡುವ; ಜಂಬುಕ: ನರಿ; ಘೂಕ: ಗೂಬೆ; ಕಾಕ: ಕಾಗೆ; ವ್ರಾತ: ಗುಂಪು; ರಭಸ: ವೇಗ; ಬೆಚ್ಚು: ಭಯ, ಹೆದರಿಕೆ; ಬಲ: ಶಕ್ತಿ, ಸೈನ್ಯ; ಆತು: ಮುಗಿದ; ಮರಳು: ಹಿಂದಿರುಗು; ಹಿಂದ: ಭೂತ, ನಡೆದ; ನೋಡು: ವೀಕ್ಷಿಸು; ಪರೇತ: ಹೆಣ, ಶವ; ವಿಭವ: ಸಿರಿ, ಸಂಪತ್ತು; ಛಲ: ದೃಢ ನಿಶ್ಚಯ; ಚೇತನ: ಮನಸ್ಸು, ಬುದ್ಧಿ; ಸಲೆ: ಒಂದೇ ಸಮನೆ, ಏಕಪ್ರಕಾರವಾಗಿ; ಚಂಡಿ: ಹಟಮಾರಿತನ, ಛಲ; ಕಳ: ರಣರಂಗ; ಚೌಕ: ಬಯಲು, ಕಣ, ರಂಗ;

ಪದವಿಂಗಡಣೆ:
ಭೂತ+ರವ +ಭೇತಾಳ +ಕಲಹ +ವಿ
ಧೂತ +ಜಂಬುಕ +ಘೂಕ +ಕಾಕ
ವ್ರಾತ +ರಭಸಕೆ +ಬೆಚ್ಚುವನು +ಪಾಂಡವರ +ಬಲವೆಂದು
ಆತು +ಮರಳಿದು+ ಹಿಂದ + ನೋಡಿ+ ಪ
ರೇತ +ವಿಭವವಲಾ +ಎನುತ +ಛಲ
ಚೇತನನು +ಸಲೆ +ಚಂಡಿಯಾದನು +ಕಳನ +ಚೌಕದಲಿ

ಅಚ್ಚರಿ:
(೧) ದುರ್ಯೋಧನನು ಹೆದರುವ ಪರಿ – ಭೂತರವ ಭೇತಾಳ ಕಲಹ ವಿಧೂತ ಜಂಬುಕ ಘೂಕ ಕಾಕ
ವ್ರಾತ ರಭಸಕೆ ಬೆಚ್ಚುವನು
(೨) ದುರ್ಯೋಧನನನ್ನು ಕರೆದ ಪರಿ – ಛಲಚೇತನನು ಸಲೆ ಚಂಡಿಯಾದನು