ಪದ್ಯ ೪೬: ಯಾವ ಬಲವು ನಮ್ಮನ್ನು ರಕ್ಷಿಸುತ್ತದೆ?

ದೈವ ಪೌರುಷದೊಳಗೆ ಶಿವ ಶಿವ
ದೈವ ಬಲವೇ ಬಲವಲಾ ನಿ
ರ್ದೈವರಂಗೈತಳಕೆ ಬಂದರೆ ಪರುಷ ಪಾಷಾಣ
ದೈವದೂರರು ಧರ್ಮಹೀನರು
ನೆಯ್ವ ನೆಯ್ಗೆಗಳೆನುತ ಮಿಗೆ ಬಿಸು
ಸುಯ್ವುತಿರ್ದರು ಕರ್ಣ ಕೃಪ ಗುರುನಂದನಾದಿಗಳು (ದ್ರೋಣ ಪರ್ವ, ೧೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ದೈವ ಪೌರುಷ ಬಲಗಳಲ್ಲಿ ದೈವ ಬಲವೇ ಬಲ. ದೈವ ಹೀನರ ಕೈಗೆ ಪರುಷಮಣಿಯು ಸಿಕ್ಕರೂ ಅದು ಕಲ್ಲಾಗಿ ಬಿಡುತ್ತದೆ. ಧರ್ಮವಿಲ್ಲದವರೂ ದೈವಕ್ಕೆ ದೂರರೂ ಆದವರು ನೆಯುವ ನೆಯ್ಗೆ ಕೇವಲ ವ್ಯರ್ಥವಾಗುತ್ತದೆ ಎಂದು ಕರ್ಣ, ಕೃಪ, ಅಶ್ವತ್ಥಾಮರು ನಿಟ್ಟುಸಿರು ಬಿಟ್ಟರು.

ಅರ್ಥ:
ದೈವ: ಭಗವಂತ; ಪೌರುಷ: ಧೈರ್ಯ; ಬಲ: ಶಕ್ತಿ; ಬಂದು: ಆಗಮಿಸು; ಪಾಷಾಣ: ವಿಷ; ದೂರು: ಮೊರೆ, ಅಹವಾಲು; ಧರ್ಮ: ಧಾರಣೆ ಮಾಡಿದುದು; ಹೀನ: ಕೀಳಾದ; ನೆಯ್ಗೆ: ಎಣಿಕೆ, ವಿಚಾರ; ಮಿಗೆ: ಮತ್ತು, ಅಧಿಕ; ಬಿಸುಸುಯ್: ನಿಟ್ಟುಸಿರುಬಿಡು; ನಂದನ: ಮಗ;

ಪದವಿಂಗಡಣೆ:
ದೈವ +ಪೌರುಷದೊಳಗೆ +ಶಿವ+ ಶಿವ
ದೈವ+ ಬಲವೇ +ಬಲವಲಾ +ನಿ
ರ್ದೈವರ್+ಅಂಗೈತಳಕೆ +ಬಂದರೆ +ಪರುಷ +ಪಾಷಾಣ
ದೈವದೂರರು +ಧರ್ಮಹೀನರು
ನೆಯ್ವ +ನೆಯ್ಗೆಗಳೆನುತ+ ಮಿಗೆ +ಬಿಸು
ಸುಯ್ವುತಿರ್ದರು +ಕರ್ಣ +ಕೃಪ +ಗುರುನಂದನಾದಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ದೈವದೂರರು ಧರ್ಮಹೀನರು ನೆಯ್ವ ನೆಯ್ಗೆಗಳೆನುತ

ಪದ್ಯ ೭೧: ಅರ್ಜುನನೇಕೆ ಕಳವಳಗೊಂಡನು?

ಪರುಷ ಕಲ್ಲೆಂದಳುಕಿ ಸುರತರು
ಮರನು ತೆಗೆಯೆಂದಮರಧೇನುವ
ಪರರ ಮನೆಯಲಿ ಮಾರಿ ಚಿಂತಾಮಣಿಗೆ ಕೈದುಡುಕಿ
ಹರಳು ತೆಕ್ಕೆಯಿದೆಂಬ ಪಾಪಿಗೆ
ಪರಮಗುರು ನಾನಾದೆನೈ ಮುರ
ಹರನ ಮೈದುನನೆಂದು ಗರ್ವಿಸಿ ಕೆಟ್ಟೆನಕಟೆಂದ (ಭೀಷ್ಮ ಪರ್ವ, ೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಪರುಷವನ್ನು ಕಲ್ಲೆಂದು, ಕಲ್ಪವೃಕ್ಷವನ್ನು ಮರವೆಂದೂ ತಿಳಿದು ಉಪೇಕ್ಷಿಸಿ, ಕಾಮಧೇನುವು ಹಸುವೆಂದು ಮಾರರಿಗೆ ಮಾರಿ, ಚಿಂತಾಮಣಿಯನ್ನು ಹಿಡಿದು ಗಾಜೆಂದು ಭಾವಿಸುವ ಪಾಪಿಗೆ ನಾನು ಗುರುವಾದೆ, ಕೃಷ್ಣನ ಮೈದುನನೆಂದು ಗರ್ವಿಸಿ ಕೆಟ್ಟೆ ಎಂದು ಅರ್ಜುನನು ಕಳವಳಗೊಂಡನು.

ಅರ್ಥ:
ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಅಳುಕು: ಹೆದರು; ಸುರತರು: ಕಲ್ಪವೃಕ್ಷ; ಮರ: ತರು; ಅಮರದೇನು: ಕಾಮಧೇನು; ಪರ: ಬೇರೆ; ಮನೆ: ಆಲಯ; ಮಾರು: ವಿಕ್ರಯಿಸು; ಚಿಂತಾಮಣಿ: ಸ್ವರ್ಗಲೋಕದ ಒಂದು ದಿವ್ಯ ರತ್ನ; ದುಡುಕು: ಉದ್ಧಟತನ, ಆತುರ; ಹರಳು: ಕಲ್ಲಿನ ಚೂರು; ತೆಕ್ಕೆ: ಗುಂಪು; ಪಾಪಿ: ದುಷ್ಟ; ಪರಮ: ಶ್ರೇಷ್ಠ; ಗುರು: ಆಕಾರ್ಯ; ಮುರಹರ: ಕೃಷ್ಣ; ಮೈದುನ: ತಂಗಿಯ ಗಂಡ; ಗರ್ವ: ಅಹಂಕಾರ; ಕೆಟ್ಟೆ: ಹಾಳಾದೆ; ಏಕತಾ: ಅಯ್ಯೋ;

ಪದವಿಂಗಡಣೆ:
ಪರುಷ +ಕಲ್ಲೆಂದ್ +ಅಳುಕಿ +ಸುರತರು
ಮರನು+ ತೆಗೆಯೆಂದ್ +ಅಮರಧೇನುವ
ಪರರ+ ಮನೆಯಲಿ +ಮಾರಿ +ಚಿಂತಾಮಣಿಗೆ+ ಕೈದುಡುಕಿ
ಹರಳು +ತೆಕ್ಕೆಯಿದ್+ಎಂಬ + ಪಾಪಿಗೆ
ಪರಮಗುರು+ ನಾನಾದೆನೈ + ಮುರ
ಹರನ+ ಮೈದುನನೆಂದು +ಗರ್ವಿಸಿ+ ಕೆಟ್ಟೆನ್ +ಅಕಟೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ: ಪರುಷ ಕಲ್ಲೆಂದಳುಕಿ, ಸುರತರು ಮರನು ತೆಗೆಯೆಂದಮರಧೇನುವ ಪರರ ಮನೆಯಲಿ ಮಾರಿ, ಚಿಂತಾಮಣಿಗೆ ಕೈದುಡುಕಿ ಹರಳು ತೆಕ್ಕೆಯಿದ್

ಪದ್ಯ ೭: ದುರ್ಯೋಧನನು ಯಾವ ವರವನ್ನು ಬೇಡಿದನು?

ಅರಸ ಕೇಳೈ ಹಸ್ತದಲ್ಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಕುರುಕುಲಾಗ್ರಣಿ ನುಡಿದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಗ್ರಾಸವ ಬೇಡಿ ನೀವ್ ನಮಗಿತ್ತ ವರವೆಂದ (ಅರಣ್ಯ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಕೈಯಲ್ಲಿರುವ ಸ್ಪರ್ಶಮಣಿಯನ್ನು ಕಲ್ಲೆಂದು ತಿರಸ್ಕರಿಸಿ, ಗಾಜಿನ ಹರಳನ್ನು ಕಂಡು ಸಂತೋಷಪಡುವ ಮೂಢರಂತೆ ಕೌರವನು, ನಿಮ್ಮ ಪರಿವಾರದಲ್ಲಿರುವ ಎಲ್ಲರೊಡನೆ ಹೋಗಿ ದ್ರೌಪದಿಯ ಊಟವಾದ ಮೇಲೆ ಭೋಜನವನ್ನು ಬೇಡಿರಿ ಎಂದು ಕೌರವನು ಬೇಡಿದನು.

ಅರ್ಥ:
ಅರಸ: ರಾಜ; ಕೇಳ್: ಆಲಿಸು; ಹಸ್ತ: ಕೈ; ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಟೆಕ್ಕೆ: ಬಾವುಟ, ಧ್ವಜ; ಹರಳು: ಕಲ್ಲಿನ ಚೂರು, ನೊರಜು; ಟೆಕ್ಕೆಯಹರಳು: ಗಾಜಿನ ಮಣಿ; ಹರುಷ: ಸಂತಸ; ಮೂಢ: ತಿಳಿಗೇಡಿ, ಮೂರ್ಖ; ಮನುಷ್ಯ: ಮಾನವ; ಕುಲ: ವಂಶ; ಅಗ್ರಣಿ: ಶ್ರೇಷ್ಠ; ನುಡಿ: ಮಾತಾಡು; ಇನಿಬರು: ಇಷ್ಟುಜನ;
ಅರಸಿ: ರಾಣಿ; ಉಣು: ಊಟ; ಗ್ರಾಸ: ತುತ್ತು, ಕಬಳ; ಬೇಡಿ: ಕೇಳಿ; ವರ: ಆಶೀರ್ವಾದ;

ಪದವಿಂಗಡಣೆ:
ಅರಸ +ಕೇಳೈ +ಹಸ್ತದಲ್ಲಿಹ
ಪರುಷವನು +ಕಲ್ಲೆಂದು +ಟೆಕ್ಕೆಯ
ಹರಳಿನಲಿ +ಹರುಷಿಸುವ +ಮೂಢ +ಮನುಷ್ಯರಂದದಲಿ
ಕುರುಕುಲಾಗ್ರಣಿ+ ನುಡಿದನ್+ಇನಿಬರು
ವೆರಸಿ+ ಪಾಂಡವರ್+ಅರಸಿ+ಉಣಲೊಡ
ನಿರದೆ +ಗ್ರಾಸವ +ಬೇಡಿ +ನೀವ್ +ನಮಗಿತ್ತ +ವರವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸ್ತದಲ್ಲಿಹ ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ

ಪದ್ಯ ೨೮: ವಂದಿ ಮಾಗಧರು ಹೇಗೆ ದುಃಖಿಸಿದರು?

ಕಿತ್ತರೋ ಕಲ್ಪದ್ರುಮವ ಕೆಡೆ
ಗುತ್ತಿದರೊ ಸುರಧೇನುವನು ಕೈ
ವರ್ತಿಸಿದರೋ ಪರುಷವನು ಹಾ ಜಲಧಿ ಮಧ್ಯದಲಿ
ಎತ್ತಣದು ಭಾರತದ ರಣ ನಮ
ಗೆತ್ತಲರಸುತ ಬಂದುದಕಟಾ
ಮಿತ್ತುವೆಂದೊರಲಿದರು ವಂದಿಗಳೆರಡು ಥಟ್ಟಿನಲಿ (ಕರ್ಣ ಪರ್ವ, ೨೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ವಂದಿ ಮಾಗಧರು ದುಃಖಪಟ್ಟರು, ಕಲ್ಪವೃಕ್ಷವನ್ನು ಕಿತ್ತು ಹಾಕಿದರು, ಕಾಮಧೇನುವನ್ನು ಇರಿದರು, ಸ್ಪರ್ಷಮಣಿಯನ್ನು ಸಮುದ್ರದ ಮಧ್ಯೆ ಎಸೆದರಲಾ, ಅಯ್ಯೋ ಈ ಮೃತ್ಯು ಸದೃಶವಾದ ಈ ಭಾರದ ಯುದ್ಧವೆಲ್ಲಿತ್ತೋ, ನಮ್ಮನ್ನು ಏಕೆ ಹುಡುಕಿಕೊಂಡು ಬಂದಿತೋ ಎಂದು ಗೋಳಿಟ್ಟರು.

ಅರ್ಥ:
ಕಿತ್ತು: ಹೊರಹಾಕು; ಕಲ್ಪದ್ರುಮ: ಕಲ್ಪವೃಕ್ಷ; ಕೆಡೆ: ಬೀಳು, ಕುಸಿ; ಕುತ್ತು: ಚುಚ್ಚು, ತಿವಿ; ಸುರಧೇನು: ಕಾಮಧೇನು; ಕೈವರ್ತಿಸು: ಅಧೀನಗೊಳಿಸು; ಪರುಷ: ಸ್ಪರ್ಷಮಣಿ; ಜಲಧಿ: ಸಾಗರ; ಮಧ್ಯ: ನಡುವೆ; ಎತ್ತಣ: ಎಲ್ಲಿಯ; ರಣ: ಯುದ್ಧ; ಅರಸುತ: ಹುಡುಕು; ಬಂದುದು: ಆಗಮಿಸು; ಅಕಟ: ಅಯ್ಯೋ; ಒರಲು: ಗೋಳಿಡು; ವಂದಿ: ಹೊಗಳುಭಟ್ಟರು; ಥಟ್ಟು: ಗುಂಪು;

ಪದವಿಂಗಡಣೆ:
ಕಿತ್ತರೋ +ಕಲ್ಪದ್ರುಮವ +ಕೆಡೆ
ಗುತ್ತಿದರೊ +ಸುರಧೇನುವನು+ ಕೈ
ವರ್ತಿಸಿದರೋ +ಪರುಷವನು+ ಹಾ +ಜಲಧಿ+ ಮಧ್ಯದಲಿ
ಎತ್ತಣದು +ಭಾರತದ +ರಣ +ನಮ
ಗೆತ್ತಲ್+ಅರಸುತ+ ಬಂದುದ್+ಅಕಟಾ
ಮಿತ್ತುವ್+ಎಂದ್+ಒರಲಿದರು +ವಂದಿಗಳ್+ಎರಡು +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪದ್ರುಮವ ಕೆಡೆಗುತ್ತಿದರೊ, ಸುರಧೇನುವನು ಕೈ ವರ್ತಿಸಿದರೋ, ಪರುಷವನು ಹಾ ಜಲಧಿ ಮಧ್ಯದಲಿ