ಪದ್ಯ ೪೫: ಧೃತರಾಷ್ಟ್ರನು ಯಾರನ್ನು ಸಂತೈಸಿಸಲು ಧರ್ಮಜನಿಗೆ ಹೇಳಿದನು?

ಸಾಕಿದಂತಿರಲಬಲೆಯರೊಳು
ದ್ರೇಕಿ ನಿಮ್ಮಯ ಹಿರಿಯ ತಾಯು
ದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳರಿವಿನೊ
ಳಾಕೆವಾಳರು ತಿಳಿಹಿ ತಮ್ಮನ
ನಾಕೆಯನು ಕಾಣಿಸುವುದೆಂದನು ವ್ಯಾಸ ವಿದುರರಿಗೆ (ಗದಾ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಧರ್ಮಜನನ್ನು ಉದ್ದೇಶಿಸುತ್ತಾ, ಧರ್ಮಜ ನೀನಾಡಿದ ಮಾತು ಒಳಿತಾಗಿದೆ, ಇದು ನಮಗೆ ಸಾಕು, ನಿಮ್ಮ ತಾಯಿಯ ಉದ್ರೇಕವನ್ನು ನಿವಾರಿಸು. ಶೋಕವೊಂದು ಕಡೆ, ಕೋಪವೊಂಡುಕಡೆ, ಅವುಗಳ ಉಪಟಲವನ್ನು ಆಕೆ ತಡೆದುಕೊಳ್ಳಲಾರಳು ಎಂದು ಹೇಳಿ ವ್ಯಾಸ ವಿದುರರಿಗೆ ಇವರನ್ನು ಕರೆದುಕೊಂಡು ಹೋಗಿ ಆಕೆಯನ್ನು ತೋರಿಸಿರಿ ಎಂದನು.

ಅರ್ಥ:
ಸಾಕು: ನಿಲ್ಲು; ಅಬಲೆ: ಹೆಣ್ಣು; ಉದ್ರೇಕ: ಉದ್ವೇಗ, ತಳಮಳ; ಹಿರಿಯ: ದೊಡ್ಡ; ತಾಯಿ: ಅಮ್ಮ; ಪರಿಹರಿಸು: ಶಮನಗೊಳಿಸು; ಶೋಕ: ದುಃಖ; ಕ್ರೋಧ: ಕೋಪ; ಉಪಟಳ: ಕಿರುಕುಳ; ಸೈರಿಸು: ಸಮಾಧಾನ ಪಡಿಸು; ಅರಿ: ತಿಳಿ; ಆಕೆವಾಳ: ವೀರ, ಪರಾಕ್ರಮಿ; ಕಾಣಿಸು: ನೋದು;

ಪದವಿಂಗಡಣೆ:
ಸಾಕ್+ಇದಂತಿರಲ್+ಅಬಲೆಯರೊಳ್
ಉದ್ರೇಕಿ +ನಿಮ್ಮಯ +ಹಿರಿಯ +ತಾಯ್
ಉದ್ರೇಕವನು +ಪರಿಹರಿಸು +ಶೋಕ+ಕ್ರೋಧದ್+ಉಪಟಳಕೆ
ಆಕೆ +ಸೈರಿಸಲ್+ಅರಿಯಳ್+ಅರಿವಿನೊಳ್
ಆಕೆವಾಳರು+ ತಿಳಿಹಿ +ತಮ್ಮನನ್
ಆಕೆಯನು +ಕಾಣಿಸುವುದೆಂದನು +ವ್ಯಾಸ +ವಿದುರರಿಗೆ

ಅಚ್ಚರಿ:
(೧) ಆಕೆ, ಆಕೆವಾಳ, ಆಕೆಯನು – ಆಕೆ ಪದದ ಬಳಕೆ
(೨) ಗಾಂಧಾರಿಯ ಸ್ಥಿತಿ – ನಿಮ್ಮಯ ಹಿರಿಯ ತಾಯುದ್ರೇಕವನು ಪರಿಹರಿಸು ಶೋಕಕ್ರೋಧದುಪಟಳಕೆ
ಆಕೆ ಸೈರಿಸಲರಿಯಳ್

ಪದ್ಯ ೬: ಕೃಷ್ಣನು ಯಾವ ರಾಜನೀತಿಯನ್ನು ಹೇಳಿದನು?

ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳೆಂದ (ಗದಾ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಉತ್ತರಿಸುತ್ತಾ, ಭರತವಂಶ ಶ್ರೇಷ್ಠನೇ ಕೇಳು, ರಾಜನೀತಿಯಿದು, ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಮಾಯಾವಿಯ ವಿದ್ಯೆಗಳನ್ನು ಮಾಯೆಯಿಂದಲೇ ಪರಿಹರಿಸಬೇಕು. ವಿಷದಿಂದ ವಿಷವನ್ನು ತೆಗೆಯಬೇಕು. ಮಾಯೆಯನ್ನವಲಂಬಿಸಿದವರನ್ನು ಮಾಯೆಯ ಉಪಾಯದಿಂದಲೇ ಕೊಲ್ಲಬೇಕು.

ಅರ್ಥ:
ವಂಶ: ಕುಲ; ಲಲಾಮ: ತಿಲಕ, ಬೊಟ್ಟು; ನೃಪ: ರಾಜ; ವರ: ಶ್ರೇಷ್ಠ; ಪದ್ಧತಿ: ಕ್ರಮ, ರೀತಿ; ಕಂಟಕ: ವಿಪತ್ತು; ಉತ್ತರಿಸು: ದೂರಮಾಡು; ಮಾಯ: ಗಾರುಡಿ, ಇಂದ್ರಜಾಲ; ಪ್ರತಿ: ಸಾಟಿ, ಸಮಾನ; ಗರಳ: ವಿಷ; ಭೂಪ: ರಾಜ; ಉಪಾಯ: ಯುಕ್ತಿ, ಹಂಚಿಕೆ;

ಪದವಿಂಗಡಣೆ:
ಭರತವಂಶಲಲಾಮ +ಕೇಳ್ +ನೃಪ
ವರರ +ಪದ್ಧತಿ+ ಕಂಟಕದಿನ್+
ಉತ್ತರಿಸುವುದು +ಕಂಟಕವ +ಮಾಯಾವಿಗಳ +ವಿದ್ಯೆಗಳ
ಪರಿಹರಿಸುವುದು +ಮಾಯೆಯಿಂ +ಪ್ರತಿ
ಗರಳದಲಿ +ಗರಳವನು +ಮಾಯಾ
ಪರರು +ಮಾಯ+ಉಪಾಯವಧ್ಯರು+ ಭೂಪ +ಕೇಳೆಂದ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಭರತವಂಶಲಲಾಮ
(೨) ರಾಜನೀತಿ – ಕಂಟಕದಿನುತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ ಪರಿಹರಿಸುವುದು ಮಾಯೆಯಿಂ ಪ್ರತಿಗರಳದಲಿ ಗರಳವನು

ಪದ್ಯ ೫೩: ಕರ್ಣನ ಬಾಣವು ಎಲ್ಲಿ ರಂಧ್ರ ಮಾಡಿತು?

ಆರಿದನು ಪರಿಹರಿಸುವರು ಜಂ
ಭಾರಿ ಕೊಟ್ಟನು ಕಮಲಭವ ಕಾ
ಮಾರಿಗಳಿಗುಬ್ಬಸದ ಕೈದುವಜೇಯವೆಂದಿದನು
ಧಾರೆಯಲಿ ದಳ್ಳಿಸುವ ಕಿಡಿಗಳ
ಭಾರಿಯಾಯುಧವಸುರನುರವನು
ಡೋರುಗಳೆದುದು ಹಾಯ್ದುಹೋದುದು ವಾಸವನ ಹೊರೆಗೆ (ದ್ರೋಣ ಪರ್ವ, ೧೬ ಸಂಧಿ, ೫೩ ಪದ್ಯ)

ತಾತ್ಪರ್ಯ:
ಆ ಶಕ್ತಿಯನ್ನು ತಡೆಹಿಡಿಯುವವರು ಯಾರು? ಬ್ರಹ್ಮ, ರುದ್ರರಿಗೆ ಕೃಷ್ಣಸಾಧ್ಯವಾದ ಅಜೇಯ ಆಯುಧ ಎಂದು ಹೇಳಿ ಇಂದ್ರನು ಕರ್ಣನಿಗೆ ಕೊಟ್ಟಿದನು. ಅದರ ಅಲಗುಗಳು ಕಿಡಿಯನ್ನುಗುಳುತ್ತಿದ್ದವು. ಆ ಮಹಾಸ್ತ್ರವು ಘಟೋತ್ಕಚನ ಎದೆಯಲ್ಲಿ ಭಾರಿಯ ರಂಧ್ರ ಕೊರೆದು ಇಂದ್ರನ ಬಳಿಗೆ ಹೋಯಿತು.

ಅರ್ಥ:
ಪರಿಹರಿಸು: ನಿವಾರಿಸು; ಜಂಭಾರಿ: ಇಂದ್ರ; ಕೊಟ್ಟ: ನೀಡಿದ; ಕಮಲಭವ: ಬ್ರಹ್ಮ; ಕಾಮಾರಿ: ಕಾಮನ ವೈರಿ (ಶಂಕರ); ಉಬ್ಬಸ: ಮೇಲುಸಿರು; ಕೈದು: ಆಯುಧ; ಅಜೇಯ: ಗೆಲ್ಲಲಾಗದುದು; ಧಾರೆ: ವರ್ಷ; ದಳ್ಳಿಸು: ಧಗ್ ಎಂದು ಉರಿ; ಕಿಡಿ: ಬೆಂಕಿ; ಭಾರಿ: ದೊಡ್ಡ; ಆಯುಧ: ಶಸ್ತ್ರ; ಅಸುರ: ರಾಕ್ಷಸ; ಉರ: ಎದೆ; ಡೋರು: ರಂಧ್ರ, ತೂತು; ಹಾಯ್ದು: ಹೊಡೆ; ವಾಸವ: ಇಂದ್ರ; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಆರಿದನು +ಪರಿಹರಿಸುವರು +ಜಂ
ಭಾರಿ +ಕೊಟ್ಟನು +ಕಮಲಭವ +ಕಾ
ಮಾರಿಗಳಿಗ್+ ಉಬ್ಬಸದ +ಕೈದುವ್+ಅಜೇಯವೆಂದಿದನು
ಧಾರೆಯಲಿ +ದಳ್ಳಿಸುವ +ಕಿಡಿಗಳ
ಭಾರಿ+ಆಯುಧವ್+ಅಸುರನ್+ಉರವನು
ಡೋರುಗಳೆದುದು +ಹಾಯ್ದುಹೋದುದು +ವಾಸವನ +ಹೊರೆಗೆ

ಅಚ್ಚರಿ:
(೧) ಜಂಭಾರಿ, ವಾಸವ – ಇಂದ್ರನನ್ನು ಕರೆದ ಪರಿ

ಪದ್ಯ ೫೦: ಕೌರವೇಶನಿಗೆ ಗೂಢಚಾರರು ಏನು ಹೇಳಿದರು?

ಇರುಳು ಬೇಹಿನ ಚರರು ಪಾರ್ಥನ
ನಿರುಪಮಿತ ಗಾಡಪ್ರತಿಜ್ಞಾ
ಚರಿತವನು ಕೌರವನ ಸಭೆಯಲಿ ತಂದು ಹರಹಿದರು
ಮರಣ ಸೈಂಧವಗಲ್ಲದಿದ್ದರೆ
ಮರಣ ಪಾರ್ಥಂಗಲ್ಲದೆಡೆಯಲಿ
ಪರಿಹರಿಸುವುದ ಕಾಣೆವೆಂದರು ಚರರು ಭೂಪತಿಗೆ (ದ್ರೋಣ ಪರ್ವ, ೮ ಸಂಧಿ, ೫೦ ಪದ್ಯ)

ತಾತ್ಪರ್ಯ:
ಗೂಢಚಾರರು ಕೌರವನ ಸಭೆಗೆ ಬಂದು ಅರ್ಜುನನ ಕಠೋರ ಪ್ರತಿಜ್ಞೆಯನ್ನು ತಿಳಿಸಿದನು. ನಾಳೆ ಸೈಂಧವನಾದರೂ ಸಾಯಬೇಕು, ಇಲ್ಲವೇ ಅರ್ಜುನನು ಅಗ್ನಿಪ್ರವೇಶ ಮಾಡಬೇಕು. ಇವೆರಡರಲ್ಲಿ ಒಂದನ್ನು ಬಿಟ್ಟು, ಬೇರೇನೂ ಆಗುವಂತಿಲ್ಲ. ಇದನ್ನು ಪರಿಹರಿಸುವ ದಾರಿಯೇ ಇಲ್ಲ ಎಂದು ಚರರು ದೊರೆಗೆ ಹೇಳಿದರು.

ಅರ್ಥ:
ಇರುಳು: ರಾತ್ರಿ; ಬೇಹು: ಗುಪ್ತಚಾರನ ಕೆಲಸ, ಗೂಢಚರ್ಯೆ; ಚರ: ಚಲಿಸುವವನು; ನಿರುಪಮಿತ: ಎಣೆ ಇಲ್ಲದ, ಹೋಲಿಕೆ ಇಲ್ಲದ; ಗಾಢ: ಅತಿಶಯ; ಪ್ರತಿಜ್ಞೆ: ಪ್ರಮಾಣ; ಚರಿತ: ನಡವಳಿಕೆ; ಸಭೆ: ಓಲಗ; ಹರಹು: ವಿಸ್ತಾರ, ವೈಶಾಲ್ಯ; ಮರಣ: ಸಾವು; ಸೈಂಧವ: ಜಯದ್ರಥ; ಪರಿಹರ: ನಿವಾರಣೆ; ಕಾಣು: ತೋರು; ಭೂಪತಿ: ರಾಜ;

ಪದವಿಂಗಡಣೆ:
ಇರುಳು +ಬೇಹಿನ +ಚರರು +ಪಾರ್ಥನ
ನಿರುಪಮಿತ +ಗಾಡ+ಪ್ರತಿಜ್ಞಾ
ಚರಿತವನು +ಕೌರವನ +ಸಭೆಯಲಿ +ತಂದು +ಹರಹಿದರು
ಮರಣ+ ಸೈಂಧವಗ್+ಅಲ್ಲದಿದ್ದರೆ
ಮರಣ +ಪಾರ್ಥಂಗ್+ಅಲ್ಲದ್+ಎಡೆಯಲಿ
ಪರಿಹರಿಸುವುದ +ಕಾಣೆವೆಂದರು +ಚರರು +ಭೂಪತಿಗೆ

ಅಚ್ಚರಿ:
(೧) ಪಾರ್ಥನ ಪ್ರತಿಜ್ಞೆಯ ಬಗ್ಗೆ ಹೇಳಿದ ಪರಿ – ಪಾರ್ಥನ ನಿರುಪಮಿತ ಗಾಡಪ್ರತಿಜ್ಞಾ ಚರಿತ