ಪದ್ಯ ೪: ಊರ್ವಶಿಯ ಚೆಲುವು ಹೇಗಿತ್ತು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತಿಯೊ ಕಾಮುಕರ ಭಾಗ್ಯ ಸುಪಕ್ವ ಫಲರಸವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೊ ವರ್ಣಿಸುವೊಡರಿದೆಂದ (ಅರಣ್ಯ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಊರ್ವಶಿಯು ಸುಗಂಧದ ಪುತ್ಥಳಿ, ಸೌಂದರ್ಯದ ಎರಕ, ವಿಟರು ಮಾಡಿದ ಪುಣ್ಯದ ಫಲ, ಕಾಮುಕರ ಭಾಗ್ಯದ ಪಕ್ವ ಫಲದ ರಸ, ಮನ್ಮಥನ ವಿಜಯಧ್ವಜ, ಕಾಮಶಾಸ್ತ್ರದ ಮೂಲಮಂತ್ರ, ಅಪ್ಸರ ಸ್ತ್ರೀಯರ ಅಧಿದೇವತೆ ಆಕೆಯನ್ನು ವರ್ಣಿಸಲಸಾಧ್ಯ.

ಅರ್ಥ:
ಪರಿಮಳ: ಸುಗಂಧ; ಪುತ್ಥಳಿ: ಬೊಂಬೆ; ಚೆಲುವು: ಅಂದ; ಕರು: ಎರಕ ಹೊಯ್ಯುವುದಕ್ಕಾಗಿ ಮಾಡಿದ ಅಚ್ಚು; ಎರಕ: ಕಾಯಿಸಿದ ಲೋಹಾದಿಗಳ ದ್ರವವನ್ನು ಅಚ್ಚಿಗೆ ಎರೆಯುವಿಕೆ; ವಿಟ: ಕಾಮುಕ, ವಿಷಯಾಸಕ್ತ; ಪುಣ್ಯ: ಸದಾಚಾರ; ಪರಿಣತಿ: ಅನುಭವಿ, ಬುದ್ಧಿವಂತಿಕೆ; ಕಾಮುಕ: ಕಾಮಾಸಕ್ತನಾದವನು; ಭಾಗ್ಯ: ಸುದೈವ; ಪಕ್ವ: ಹಣ್ಣಾದ; ಫಲ: ಹಣ್ಣು; ರಸ: ಸಾರ; ಸ್ಮರ: ಮನ್ಮಥ; ವಿಜಯ: ಗೆಲುವು; ಧ್ವಜ: ಬಾವುಟ; ಮನ್ಮಥ: ಕಾಮ, ಸ್ಮರ; ಪರಮ: ಶ್ರೇಷ್ಠ; ಶಾಸ್ತ್ರ: ವಿದ್ಯೆ; ಮೂಲ: ಬೇರು; ಮಂತ್ರ: ವಿಚಾರ, ಆಲೋಚನೆ; ಸುರಸತಿ: ಅಪ್ಸರೆ; ಅಧಿದೇವತೆ: ಮುಖ್ಯ ದೇವತೆ; ವರ್ಣಿಸು: ಬಣ್ಣಿಸು, ವಿವರಿಸು; ಅರಿ: ತಿಳಿ;

ಪದವಿಂಗಡಣೆ:
ಪರಿಮಳದ +ಪುತ್ಥಳಿಯೊ +ಚೆಲುವಿನ
ಕರುವಿನ್+ಎರಕವೊ+ ವಿಟರ+ ಪುಣ್ಯದ
ಪರಿಣತಿಯೊ +ಕಾಮುಕರ+ ಭಾಗ್ಯ +ಸುಪಕ್ವ+ ಫಲರಸವೊ
ಸ್ಮರನ+ ವಿಜಯಧ್ವಜವೊ +ಮನ್ಮಥ
ಪರಮ+ ಶಾಸ್ತ್ರದ +ಮೂಲ+ಮಂತ್ರವೊ
ಸುರಸತಿಯರ್+ಅಧಿದೇವತೆಯೊ +ವರ್ಣಿಸುವೊಡ್+ಅರಿದೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ – ಪರಿಮಳದ ಪುತ್ಥಳಿಯೊ; ಚೆಲುವಿನ ಕರುವಿನೆರಕವೊ; ವಿಟರ ಪುಣ್ಯದ ಪರಿಣತಿಯೊ; ಕಾಮುಕರ ಭಾಗ್ಯ ಸುಪಕ್ವ ಫಲರಸವೊ; ಸ್ಮರನ ವಿಜಯಧ್ವಜವೊ; ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ; ಸುರಸತಿಯರಧಿದೇವತೆಯೊ

ಪದ್ಯ ೪೮: ಕರ್ಣನು ಹೇಗೆ ಕಣಕ್ಕೆ ಇಳಿದು ಮತ್ತು ತನ್ನ ಪರಿಣತಿಯನ್ನು ಹೇಗೆ ಪ್ರದರ್ಶಿಸಿದನು?

ಗುರುಗಳಿಗೆ ಕೈಮುಗಿದು ಶಿರದಲಿ
ತರಣಿ ಮಂಡಲಕೆರಗಿ ನೋಡುವ
ನೆರವಿಗಿವನಾರೀತನಾರೆಂಬದ್ಭುತವ ಬೀರಿ
ಅರಸ ಕೇಳೈ ವಿವಿಧ ಶಸ್ತ್ರೋ
ತ್ಕರದ ಶ್ರಮವನು ತೋರಿದನು ಕರಿ
ತುರಗ ರಥವಾಹನದ ಶಿಕ್ಷಾ ವಿದ್ಯಗಳು ಸಹಿತ (ಆದಿ ಪರ್ವ, ೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅರ್ಜುನ ತೋರಿದ ಪ್ರದರ್ಶನ ಅದೇನು ಕೌತುಕ ಎಂದು ಕಣಕ್ಕೆ ಇಳಿದ ಕರ್ಣನು ಗುರುಗಳಿಗೆ ಕೈಮುಗಿದು, ಸೂರ್ಯಮಂಡಲಕ್ಕೆ ತನ್ನ ತಲೆ ಬಾಗಿ ನಮಸ್ಕರಿಸಿ, ಅಲ್ಲಿ ನೆರದಿದ್ದ ನೋಡುಗರು ಆಶ್ಚರ್ಯದಿಂದ ಇವನಾರು, ಇವನಾರು ಎಂದು ನೋಡುತ್ತಿರಲು, ಕರ್ಣನು ವಿವಿಧ ಶಸ್ತ್ರಪ್ರಯೋಗದಲ್ಲಿ, ರಥ, ಕುದುರೆ, ಆನೆ ಗಳ ಏರಾಟದಲ್ಲಿ ತನ್ನ ಪರಿಣತಿಯನ್ನು ತೋರಿದನು.

ಅರ್ಥ:
ಗುರು: ಆಚಾರ್ಯ; ಕೈ: ಕರ, ಹಸ್ತ; ಮುಗಿದು: ಕೊನೆ, ಅಂತ್ಯ; ಶಿರ: ತಲೆ, ಮಸ್ತಕ; ತರಣಿ: ಸೂರ್ಯ; ಮಂಡಲ: ಗುಂಪು, ಸಮೂಹ; ಎರಗಿ:ಬಾಗಿ, ನಮಸ್ಕರಿಸಿ; ನೋಡು: ವೀಕ್ಷಿಸು; ನೆರವಿ: ಗುಂಪು, ಸಮೂಹ; ಅದ್ಭುತ: ಆಶ್ಚರ್ಯ, ವಿಸ್ಮಯ; ಬೀರು: ಎಸೆ, ತೂರು; ಅರಸ:ರಾಜ; ಕೇಳು: ಆಲಿಸು; ವಿವಿಧ: ನಾನಾ, ಅನೇಕ; ಶಸ್ತ್ರ: ಅಸ್ತ್ರ, ಆಯುಧ; ಶ್ರಮ: ಅಭ್ಯಾಸ, ಆಯಾಸ; ತೋರು: ಪ್ರದರ್ಶಿಸು; ಕರಿ: ಆನೆ; ತುರಗ: ಕುದುರೆ; ರಥ: ತೇರು, ಬಂಡಿ; ಶಿಕ್ಷ: ವಿದ್ಯೆ, ಪಾಠ; ಸಹಿತ: ಒಟ್ಟಾಗಿ, ಸಮೇತವಾಗಿ, ಒಡನೆ;

ಪದವಿಂಗಡನೆ:
ಗುರುಗಳಿಗೆ +ಕೈ+ಮುಗಿದು+ ಶಿರದಲಿ
ತರಣಿ+ ಮಂಡಲಕ್+ಎರಗಿ+ ನೋಡುವ
ನೆರವಿಗ್+ಇವನಾರ್+ಈತನಾರ್+ಎಂಬ್+ಅದ್ಭುತವ+ ಬೀರಿ
ಅರಸ+ ಕೇಳೈ+ ವಿವಿಧ+ ಶಸ್ತ್ರೋ
ತ್ಕರದ+ ಶ್ರಮವನು +ತೋರಿದನು +ಕರಿ
ತುರಗ +ರಥ+ವಾಹನದ+ ಶಿಕ್ಷಾ+ ವಿದ್ಯಗಳು+ ಸಹಿತ

ಅಚ್ಚರಿ:
(೧) ಕೈ ಮುಗಿದು, ಎರಗಿ ; ಮಂಡಲ, ನೆರವಿ;ನೋಡು, ತೋರು; ಶಿಕ್ಷ, ವಿದ್ಯೆ – ಒಂದೆ ಅರ್ಥ ಕೊಡುವ ಪದಗಳ ಬಳಕೆ
(೨) ಅರಸ ಇಲ್ಲಿ ಜನಮೇಜಯನನ್ನು ಸಂಭೋದಿಸುತ್ತಿರುವುದು
(೩) ರ ಕಾರವನ್ನು ಹೊಂದಿರುವ ಪದಗಳು: ತರಣಿ, ನೆರವಿ, ಅರಸ, ತುರಗ,ಗುರು, ಕರ, ಕರಿ, ಬೀರಿ, ಶಿರ, ಎರಗಿ, ತೋರು