ಪದ್ಯ ೯೨: ಯಾವ ಆಯುಧದಲ್ಲಿ ಯುದ್ಧ ಮಾಡಲು ಭೀಮನು ಜರಾಸಂಧನಿಗೆ ಹೇಳಿದನು?

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊಂ
ಕಣಿಯೊ ಗದೆಯೋ ಭಿಂಡಿವಾಳವೊ ಪರಶುತೋಮರವೊ
ಕಣೆಧನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ (ಸಭಾ ಪರ್ವ, ೨ ಸಂಧಿ, ೯೨ ಪದ್ಯ)

ತಾತ್ಪರ್ಯ:
ಯಾವುದರಿಂದ ಯುದ್ಧಮಾಡುವುದು ಎನ್ನುವ ಪ್ರಶ್ನೆಗೆ, ಭೀಮನು ಜರಾಸಂಧನಿಗೆ, ಯುದ್ಧಕ್ಕೆ ನಿನಗಾವ ಆಯುಧವಿದ್ದರೆ ಅನುಕೂಲ? ಲಾಳವಂಡಿಗೆ, ಪರಿಘ, ಕತ್ತಿ, ಡೊಂಕಣಿ, ಗದೆ, ಭೀಂಡಿವಾಳ, ಪರಶು, ತೋಮರ, ಬಿಲ್ಲುಬಾಣ, ಕಕ್ಕಡೆ, ಅಥವ ಮಲ್ಲಯುದ್ಧವೋ, ಈ ಎಲ್ಲಾ ಆಯುಧಗಳಲ್ಲಿ ನಿನಗೆ ಸುಲಭವೆನಿಸುವ ಯಾವುದಾದರೊಂದು ಆಯುಧವನ್ನು ಆರಿಸಿಕೊ ಎಂದು ಭೀಮನು ಜರಾಸಂಧನನ್ನು ಕೆಣಕಿದನು.

ಅರ್ಥ:
ರಣ: ಯುದ್ಧ; ಕೈದು: ಆಯುಧ, ಶಸ್ತ್ರ; ಉಬ್ಬಣ: ಲಾಳವಿಂಡಿಗೆ; ಪರಿಘ:ಅಗುಳು, ಕಬ್ಬಿಣದ ಆಯುಧ; ಸುರಗಿ: ಸಣ್ಣ ಕತ್ತಿ, ಚೂರಿ; ಗದೆ: ಮುದ್ಗರ; ಪರಶು:ಕೊಡಲಿ, ಕುಠಾರ; ತೋಮರ:ಈಟಿಯಂತಹ ಒಂದು ಬಗೆಯ ಆಯುಧ; ಕಣೆ: ಬಾಣ; ಧನು: ಬಿಲ್ಲು; ಕಕ್ಕಡೆ: ಗರಗಸ; ಮುಷ್ಟಿ: ಮಲ್ಲ; ಹಣಿ:ಬಾಗು, ಮಣಿ; ಸದರ: ಸಲಿಗೆ, ಸುಲಭ; ಕೆಣಕು:ಪ್ರಚೋದಿಸು;

ಪದವಿಂಗಡಣೆ:
ರಣದೊಳ್+ಆವುದು +ಕೈದು +ಹಿರಿ+
ಉಬ್ಬಣವೊ +ಪರಿಘವೊ +ಸುರಗಿಯೋ +ಡೊಂ
ಕಣಿಯೊ +ಗದೆಯೋ +ಭಿಂಡಿವಾಳವೊ +ಪರಶು+ತೋಮರವೊ
ಕಣೆಧನುವೊ +ಕಕ್ಕಡೆಯೊ +ಮುಷ್ಟಿಯೊ
ಹಣಿದಕ್+ಆವುದು +ಸದರವ್+ಅದರಲಿ
ಕೆಣಕಿ+ ನೋಡಾ +ತನ್ನನೆಂದನು+ ಭೀಮ +ಮಾಗಧನ

ಅಚ್ಚರಿ:
(೧) ೧೧ ಬಗೆಯ ಆಯುಧಗಳ ಹೆಸರನ್ನು ಹೊಂದಿರುವ ಪದ್ಯ
(೨) ಕಣಿ, ಕಣೆ, ಕೆಣಕಿ – ಪದಗಳ ಬಳಕೆ