ಪದ್ಯ ೧೯: ಶಕುನಿಯು ಹೇಗೆ ಜಯವನ್ನು ಪಡೆಯುತ್ತೇನೆ ಎಂದನು?

ಕಪಟವನು ನೆರೆ ಮಾಡಿ ಜೂಜಿನೊ
ಳು ಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸದರ ಕೈಕೊಳ್ಳದಿರು ನೀನೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರಿಸುತ್ತಾ, ದುರ್ಯೋಧನ ಜೂಜಿನಲ್ಲಿ ಕಪಟವನ್ನು ಮಾಡಿ ನಾನು ನಿನಗೆ ಜಯವನ್ನು ದೊರಕಿಸಿಕೊಡುತ್ತೇನೆ. ಮೋಸದಲ್ಲಿ ನನ್ನಷ್ಟು ನಿಪುಣರಾದವರು ಈ ಲೋಕದಲ್ಲೇ ಇಲ್ಲ. ಅಪಕೀರ್ತಿಗೆ ನೀನು ಹೆದರಬೇಡ. ನಿಷ್ಕರುಣೆಯಿಂದ ವರ್ತಿಸು. ಭೀಷ್ಮ ವಿದುರ ಮೊದಲಾದ ಅಯೋಗ್ಯರನ್ನು ನೀನು ಅನುಸರಿಸಬೇಡ ಎಂದನು.

ಅರ್ಥ:
ಕಪಟ: ಮೋಸ; ನೆರೆ: ಹೆಚ್ಚು; ಜೂಜು: ದ್ಯೂತ ಕ್ರೀಡೆ; ಪರಿ: ಪರಿಹರಿಸು, ನಾಶಮಾಡು, ಚಲಿಸು; ಕಾರ್ಯ: ಕೆಲಸ; ಜೈಸಿ: ಗೆದ್ದು; ನಿಪುಣ: ಚಾಣಾಕ್ಷ; ಲೋಕ: ಜಗತ್ತು; ಕೈತವ: ಕಪಟ, ವಂಚನೆ; ಅಪದೆಸೆ: ದುರದೃಷ್ಟ; ಭಯ: ಅಂಜಿಕೆ; ನಿಷ್ಕೃಪೆ; ದಯೆಯಿಲ್ಲದ; ಗುರು: ಆಚಾರ್ಯ; ಆದಿ: ಮುಂತಾದ; ಸದರ: ಸಲಿಗೆ, ಸಸಾರ; ಕೈಕೊಳ್ಳು: ಪಡೆ, ದೊರಕು, ಸ್ವೀಕರಿಸು;

ಪದವಿಂಗಡಣೆ:
ಕಪಟವನು +ನೆರೆ +ಮಾಡಿ +ಜೂಜಿನೊ
ಳು +ಪರಿಕಾರ್ಯವ +ಜೈಸಿ +ಕೊಡುವೆನು
ನಿಪುಣರೆನ್ನಂದದಲಿ+ ಲೋಕದೊಳಿಲ್ಲ+ ಕೈತವದ
ಅಪದೆಸೆಗೆ+ ಭಯಗೊಳ್ಳದಿರು +ನಿ
ಷ್ಕೃಪೆಯಲಿರು+ ಗುರು +ಭೀಷ್ಮ +ವಿದುರಾ
ದ್ಯಪ+ಸದರ+ ಕೈಕೊಳ್ಳದಿರು +ನೀನೆಂದನಾ +ಶಕುನಿ

ಅಚ್ಚರಿ:
(೧) ಶಕುನಿಯ ನಿಪುಣತೆ – ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ