ಪದ್ಯ ೪೨: ದುರ್ಯೋಧನನು ಜಲಸ್ತಂಭನಕ್ಕೆ ಹೇಗೆ ತಯಾರಾದನು?

ಚರಣವದನಕ್ಷಾಲನಾಂತಃ
ಕರಣಶುದ್ಧಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಫುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ (ಗದಾ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕಾಲು, ಮುಖಗಳನ್ನು ತೊಳೆದು, ಶುದ್ಧಮನಸ್ಸಿನಿಂದ ಆಚಮನವನ್ನು ಮಾಡಿ, ಪ್ರಣವಪೂರ್ವಕವಾಗಿ ಅಂಗನ್ಯಾಸಾದಿಗಳನ್ನು ಮಾಡಿ ವರುಣ ಮಂತ್ರಾಕ್ಷರಗಳನ್ನು ಜಪಿಸಿ ಅಂತರಂಗದಲ್ಲಿ ಜಲಸ್ತಂಭ ಮಂತ್ರವನ್ನು ಜಪಿಸಿದನು.

ಅರ್ಥ:
ಚರಣ: ಪಾದ; ವದನ: ಮುಖ; ಅಂತಃಕರಣ: ಒಳಮನಸ್ಸು; ಶುದ್ಧಿ: ನಿರ್ಮಲ; ಆಚಮನ: ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಮಂತ್ರಪೂರ‍್ವಕವಾಗಿ ಸೇವಿಸುವುದು; ವಿಸ್ತರಣ: ವಿಶಾಲ; ಪ್ರಣವ: ಓಂಕಾರ; ಅಂಗ: ದೇಹದ ಭಾಗ; ನ್ಯಾಸ: ಜಪ ಮತ್ತು ಪೂಜೆಯ ಕಾಲಗಳಲ್ಲಿ ಮಂತ್ರಪೂರ್ವಕವಾಗಿ ಅಂಗಗಳನ್ನು ಮುಟ್ಟಿಕೊಳ್ಳುವಿಕೆ; ವಿಧಿ: ನಿಯಮ; ವರುಣ: ನೀರಿನ ಅಧಿದೇವತೆ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಪರಿಕರಣ: ಸಲಕರಣೆ, ಸಾಮಗ್ರಿ; ನಿರ್ಣಿಕ್ತ: ಶುದ್ಧಗೊಳಿಸಲ್ಪಟ್ಟ; ಚೇತ: ಮನಸ್ಸು; ಸ್ಫುರಣ: ಹೊಳಪು; ಸಲಿಲ: ಜಲ; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ಅವನೀಶ: ರಾಜ; ಮಂತ್ರಿಸು: ಉಚ್ಚರಿಸು;

ಪದವಿಂಗಡಣೆ:
ಚರಣ+ವದನಕ್ಷಾಲನ್+ಅಂತಃ
ಕರಣ+ಶುದ್ಧಿಯಲ್+ಆಚಮನ+ವಿ
ಸ್ತರಣದಲಿ +ಸತ್ಪ್ರಣವವ್+ಅಂಗನ್ಯಾಸ+ವಿಧಿಗಳಲಿ
ವರುಣ +ಮಂತ್ರಾಕ್ಷರದ+ ಜಪ+ಪರಿ
ಕರಣದಲಿ +ನಿರ್ಣಿಕ್ತ+ ಚೇತಃ
ಸ್ಫುರಣ +ಸಲಿಲ+ಸ್ತಂಭನವನ್+ಅವನೀಶ +ಮಂತ್ರಿಸಿದ

ಅಚ್ಚರಿ:
(೧) ಚರಣ, ವರುಣ, ವಿಸ್ತರಣ, ಸ್ಫುರಣ, ಪರಿಕರಣ, ಕರಣ – ಪ್ರಾಸ ಪದಗಳು