ಪದ್ಯ ೨೮: ಕರ್ಣನೆಂಬ ಹೆಸರು ಹೇಗೆ ಬಂತು?

ಅರಸ ಕೇಳೈ ಕರ್ಣ ಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರನದಲಿ
ಸುರನರೋರಗ ನಿಕರವೇ ವಿ
ಸ್ತರಿಸಿದುದು ಕರ್ಣಾಭಿಧಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ (ಆದಿ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಮಗುವಿನ ಹೆಸರು ಕಿವಿಗಳಿಂದ ಕಿವಿಗಳಿಗೆ ಹರಡುತ್ತಾ ಹೋಯಿತು. ದೇವತೆಗಳೂ, ನಾಗರೂ, ಮನುಷ್ಯರೂ ಇವನನ್ನು ಕರ್ಣನೆಂದು ಕರೆದುದರಿಂದ ನಾಮಕರಣದಲ್ಲಿ ಅವನಿಗೆ ಕರ್ಣನೆಂದೇ ಹೆಸರಾಯಿತು. ಮಹಾಪರಾಕ್ರಮಿಯಾದ ಕರ್ನನು ಸೂತನ ಮನೆಯಲ್ಲಿ ಬೆಳೆಯುತ್ತಿದ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಪಾರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು; ಹೆಸರು: ನಾಮ; ಜಗ: ಪ್ರಪಂಚ; ಹರಿ: ಪ್ರವಹಿಸು; ಬಳಿಕ: ನಂತರ; ನಾಮಕರಣ: ಹೆಸರಿಡುವ ಉತ್ಸವ; ಸುರ: ದೇವತೆ; ನರ: ಮನುಷ್ಯ; ಉರಗ: ಹಾವು; ಸುರನರೋರಗ: ಮೂರು ಲೋಕದಲ್ಲೂ; ನಿಕರ: ಗುಂಪು; ವಿಸ್ತರಿಸು: ಹರಡು; ಅಭಿಧಾನ: ಹೆಸರು; ಗುರು: ಶ್ರೇಷ್ಠ; ಪರಾಕ್ರಮಿ: ಶ್ರೂರ; ಬೆಳೆ: ವೃದ್ಧಿಸು, ಏಳಿಗೆ ಹೊಂದು; ಸೂತ: ರಥವನ್ನು ಓಡಿಸುವವ; ಭವನ: ಆಲಯ;

ಪದವಿಂಗಡಣೆ:
ಅರಸ +ಕೇಳೈ +ಕರ್ಣ +ಪಾರಂ
ಪರೆಯೊಳ್+ಈತನ +ಹೆಸರು +ಜಗದಲಿ
ಹರಿದುದ್+ಅಲ್ಲಿಂ +ಬಳಿಕಲ್+ಈತನ+ ನಾಮಕರಣದಲಿ
ಸುರನರೋರಗ+ ನಿಕರವೇ +ವಿ
ಸ್ತರಿಸಿದುದು +ಕರ್ಣ+ಅಭಿಧಾನವ
ಗುರುಪರಾಕ್ರಮಿ +ಬೆಳೆವುತಿರ್ದನು +ಸೂತ+ಭವನದಲಿ

ಅಚ್ಚರಿ:
(೧) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ

ಪದ್ಯ ೨೨: ಮತ್ಸ್ಯಗಂಧಿಯ ಜನನವು ಹೇಗಾಯಿತು?

ಶಾಪಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿದನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯಜಠರದಲಿ (ಆದಿ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಬಳಿಕ ಗಂಗೆಗೆ ಶಾಪವು ವಿಮೋಚನೆಯಾಯಿತು. ಭೀಷ್ಮನು ಶಂತನುವಿಗೆ ಮಗನಾಗಿ ಎಲ್ಲಾ ದಿಕ್ಕುಗಳಲ್ಲೂ ತನ್ನ ಕೀರ್ತಿಯನ್ನು ಹಬ್ಬಿಸಿದನು. ಉಪರಿಚರವಸುವಿನ ವೀರ್ಯವು ಸ್ಖಲಿತವಾಗಿ ಅದನ್ನು ಒಂದು ಮೀನು ನೂಮ್ಗಿತು. ಅದರಿಂದ ವಿರಾಟನೂ ಮತ್ತು ಮತ್ಸ್ಯಗಂಧಿಯೆಂಬುವಳು ಹುಟ್ಟಿದರು.

ಅರ್ಥ:
ಶಾಪ: ನಿಷ್ಠುರದ ನುಡಿ; ಹಿಂಗು: ಕಡಮೆಯಾಗು, ತಗ್ಗು; ಸುರನದಿ: ಗಂಗೆ; ಬಳಿಕ: ನಂತರ; ಪರಾಕ್ರಮಿ: ಶೂರ; ಬೆಳಗು: ಪ್ರಕಾಶಿಸು; ಅಖಿಳ: ಎಲ್ಲಾ; ದಿಕ್ತಟ: ದಿಕ್ಕು; ಭೂಪ: ರಾಜ; ಕೇಳು: ಆಲಿಸು; ವಸು: ದೇವತೆಗಳ ವರ್ಗ; ಗರ್ಭ: ಹೊಟ್ಟೆ; ಮೀನು: ಮತ್ಸ್ಯ; ಬಸುರು: ಹೊಟ್ಟೆ; ವ್ಯಾಪಿಸು: ಹರಡು; ಜನಿಸು: ಹುಟ್ಟು; ಮಿಥುನ:ಅವಳಿ ಜವಳಿ,ಸಂಭೋಗ; ಜಠರ: ಹೊಟ್ಟೆ;

ಪದವಿಂಗಡಣೆ:
ಶಾಪ+ಹಿಂಗಿತು +ಸುರನದಿಗೆ +ಬಳಿಕ
ಆ +ಪರಾಕ್ರಮಿ +ಭೀಷ್ಮ+ ಶಂತನು
ಭೂಪತಿಗೆ +ಮಗನಾಗಿ +ಬೆಳಗಿದನ್+ಅಖಿಳ +ದಿಕ್ತಟವ
ಭೂಪ +ಕೇಳೈ +ಉಪರಿಚರ +ವಸು
ರೂಪ+ಗರ್ಭವು+ ಮೀನ +ಬಸುರಲಿ
ವ್ಯಾಪಿಸಿತು +ಜನಿಸಿದುದು +ಮಿಥುನವು +ಮತ್ಸ್ಯ+ಜಠರದಲಿ

ಅಚ್ಚರಿ:
(೧) ಗರ್ಭ, ಬಸುರು, ಜಠರ – ಸಮಾನಾರ್ಥಕ ಪದ
(೨) ಭೂಪ – ೩, ೪ ಸಾಲಿನ ಮೊದಲ ಪದ