ಪದ್ಯ ೧೦: ವ್ಯಾಸರು ಧೃತರಾಷ್ಟ್ರನನ್ನು ಹೇಗೆ ಆರೈಸಿದರು?

ಎತ್ತಿದರು ಧರಣಿಪನ ಕಂಗಳೊ
ಳೊತ್ತಿದರು ಪನ್ನೀರನುಸುರಿನ
ತತ್ತಳವನಾರೈದರೊಯ್ಯನೆ ತಾಳವೃಂತದಲಿ
ಬಿತ್ತಿ ತಂಗಾಳಿಯನು ಶೋಕದ
ಹತ್ತಿಗೆಗೆ ಹೊರೆದೆಗೆದು ಮರವೆಯ
ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ (ಗದಾ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ವ್ಯಾಸರು ಧೃತರಾಷ್ಟ್ರನನ್ನು ಎತ್ತಿ, ಪನ್ನೀರಿನಿಂದ ಅವನ ಕಣ್ತೊಳೆದು, ಬದುಕಿರುವನೋ ಇಲ್ಲವೋ ಎಂದು ಉಸಿರನ್ನು ಪರೀಕ್ಷಿಸಿ ತಾಳೆಯ ಬೀಸಣಿಕೆಯಿಂದ ತಂಗಾಳಿಯನ್ನು ಬೀಸಿದರು. ಆಗ ಧೃತರಾಷ್ಟ್ರನು ಶೋಕದ ಮೂರ್ಛೆಯಿಂದ ಹೊರ ಬಂದು, ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡನು. ವ್ಯಾಸರು ಅವನಲ್ಲಿ ಹೀಗೆ ನುಡಿದರು.

ಅರ್ಥ:
ಎತ್ತು: ಮೇಲೇಳು; ಧರಣಿಪ: ರಾಜ; ಕಂಗಳು: ಕಣ್ಣು, ನಯನ; ಒತ್ತು: ಮುತ್ತು, ಸ್ಪರ್ಶ; ಪನ್ನೀರು: ತಂಪಾದ ನೀರು; ಉಸುರು: ಪ್ರಾಣ; ತತ್ತ: ಹೊಂದಿದ; ವೃಂತ: ಎಲೆ, ಹೂ, ಹಣ್ಣುಗಳ ತೊಟ್ಟು, ಚೂಚುಕ; ತಾಳ: ತಾಳೆಗರಿ; ಬಿತ್ತು: ಉಂಟುಮಾಡು; ತಂಗಾಳಿ: ತಂಪಾದ ಗಾಳಿ; ಶೋಕ: ದುಃಖ; ಹತ್ತಿ: ತೂಲ; ಹೊರೆ: ಭಾರ; ತೆಗೆ: ಹೊರತರು; ಮರವೆ: ಜ್ಞಾಪಕದಿಂದ ದೂರವಾಗು; ಚಿತ್ತ: ಮನಸ್ಸು; ಚೇತರಿಸು: ಎಚ್ಚರಗೊಳಿಸು; ಮೆಲ್ಲನೆ:ನಿಧಾನ; ನುಡಿ: ಮಾತಾಡು; ಮುನಿಪ: ಋಷಿ;

ಪದವಿಂಗಡಣೆ:
ಎತ್ತಿದರು+ ಧರಣಿಪನ+ ಕಂಗಳೊಳ್
ಒತ್ತಿದರು +ಪನ್ನೀರನ್+ಉಸುರಿನ
ತತ್ತಳವನ್+ಆರೈದರ್+ಒಯ್ಯನೆ+ ತಾಳ+ವೃಂತದಲಿ
ಬಿತ್ತಿ+ ತಂಗಾಳಿಯನು +ಶೋಕದ
ಹತ್ತಿಗೆಗೆ +ಹೊರೆದೆಗೆದು +ಮರವೆಯ
ಚಿತ್ತವನು +ಚೇತರಿಸಿ +ಮೆಲ್ಲನೆ +ನುಡಿಸಿದನು +ಮುನಿಪ

ಅಚ್ಚರಿ:
(೧) ತ ಕಾರದ ಜೋಡಿ ಪದ – ತತ್ತಳವನಾರೈದರೊಯ್ಯನೆ ತಾಳವೃಂತದಲಿ
(೨) ಸಮಾಧಾನ ಪಡಿಸುವ ಪರಿ – ಬಿತ್ತಿ ತಂಗಾಳಿಯನು ಶೋಕದ ಹತ್ತಿಗೆಗೆ ಹೊರೆದೆಗೆದು

ಪದ್ಯ ೧೦: ದುರ್ಯೋಧನನ ಸ್ಥಿತಿ ಹೇಗಿತ್ತು?

ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಲದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ (ಶಲ್ಯ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪನ್ನೀರನ್ನು ದೊರೆಯ ಕಣ್ಣುಗಳಿಗೆ ಚುಮುಕಿಸಿ, ಹಿಡಿದೆತ್ತಿ ಕೂಡಿಸಿದರೆ, ದುರ್ಯೋಧನನು ಏನಪ್ಪಾ ಕರ್ಣ ಎಂದು ಕಣ್ಣುತೆರೆದು, ಥಟ್ಟನೆ ನೀಂತು ಕರ್ಣ, ರಾತ್ರಿಯಾಯಿತು ಸೈನ್ಯವನ್ನು ಪಾಳೆಯಕ್ಕೆ ಕಳುಹಿಸು ಎನ್ನಲು, ಶೋಕವು ಮತ್ತೆ ಹೆಚ್ಚಾಗಿ ಕಣ್ಣುಮುಚ್ಚಿ ಮೂರ್ಛಿತನಾದನು.

ಅರ್ಥ:
ತಳಿ: ಚಿಮುಕಿಸು, ಸಿಂಪಡಿಸು; ಪನ್ನೀರು: ತಂಪಾದ ನೀರು; ಅಕ್ಷಿ: ಕಣ್ಣು; ಚಳೆ: ಸಿಂಪಡಿಸುವುದು, ಚಿಮುಕಿಸುವುದು; ಹಿಡಿದು: ಗ್ರಹಿಸು; ಎತ್ತು: ಮೇಲೆ ತರು; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಮಲಗು: ನಿದ್ರಿಸು; ಕಂದೆರೆ: ಕಣ್ಣನ್ನು ಬಿಡು; ಘಳಿಲು: ಒಮ್ಮೆಲೆ; ಎದ್ದು: ಮೇಲೇಳು, ಎಚ್ಚರಗೊಳ್ಳು; ತೆಗೆ: ಹೊರತರು; ದಳ: ಸೈನ್ಯ; ಇರುಳು: ರಾತ್ರಿ; ಶೋಕ: ದುಃಖ; ಕಳವಳ: ಗೊಂದಲ; ಅರೆ: ಅರ್ಧ; ಮುಚ್ಚು: ಮರೆಮಾಡು, ಹೊದಿಸು; ಕಣ್ಣು: ನಯನ; ಮೈಮರೆ: ಎಚ್ಚರತಪ್ಪು;

ಪದವಿಂಗಡಣೆ:
ತಳಿತಳಿದು +ಪನ್ನೀರನ್+ಅಕ್ಷಿಗೆ
ಚಳೆಯವನು +ಹಿಡಿದೆತ್ತಿ +ಗುರುಸುತ
ಮಲಗಿಸಿದಡ್+ಏನಯ್ಯ +ಕರ್ಣ +ಎನುತ್ತ +ಕಂದೆರೆದು
ಘಳಿಲನೆದ್ದನು +ಕರ್ಣ +ತೆಗೆಸೈ
ದಳವನ್+ಇರುಳಾಯ್ತೆಂದು +ಶೋಕದ
ಕಳವಳದಲ್+ಅರೆ+ಮುಚ್ಚುಗಣ್ಣಲಿ +ಮತ್ತೆ +ಮೈಮರೆದ

ಅಚ್ಚರಿ:
(೧) ಅಕ್ಷಿ, ಕಣ್ಣು – ಸಮಾನಾರ್ಥಕ ಪದ
(೨) ಕಂದೆರೆದು, ಮುಚ್ಚುಗಣ್ಣು – ಕಣ್ಣಿನ ಸ್ಥಿತಿಯನ್ನು ತೋರುವ ಪದಗಳು
(೩) ತಳಿತಳಿ, ಕಳವಳ – ಪದಗಳ ಬಳಕೆ

ಪದ್ಯ ೮೧: ಮದುವೆಯು ಎಂದು ನಡೆಯಿತು?

ವರ ಚತುರ್ಥಿಯೊಳಿರುಳು ಮೆರೆದರು
ಪುರದಲುತ್ಸಾಹದಲಿ ದಂಪತಿ
ವರರು ಭೂಮೀಚಾರ ಚಮರದ ಚಾತುರಂಗದಲಿ
ಮರುದಿವಸವವಭೃತವ ನೆರೆ ವಿ
ಸ್ತರಿಸಿದರು ಪನ್ನೀರ ಹೊಂಗೊ
ಪ್ಪರಿಗೆಗಳ ಕುಂಕುಮದ ನವಪರಿಮಳದ ರಚನೆಯೊಳು (ವಿರಾಟ ಪರ್ವ, ೧೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ಚತುರ್ಥಿಯ ರಾತ್ರಿ ನವದಂಪತಿಗಳ ಮೆರವಣಿಗೆ ಚತುರಂಗ ಸೈನ್ಯದ ಜೊತೆ ಪುರದಲ್ಲಿ ನಡೆಯಿತು. ಮರುದಿವಸ ಓಕಳಿಯಾಟವಾಯಿತು, ಚಿನ್ನದ ಬಣ್ಣದಿಂದ ಅಲಂಕೃತಗೊಂಡ ಉಪ್ಪರಿಗೆಗಳಲ್ಲಿ ಪರಿಮಳ ಭರಿತವಾದ ಕುಂಕುಮದ ಓಕಳಿಯು ಸಿದ್ಧವಾಯಿತು.

ಅರ್ಥ:
ವರ: ಶ್ರೇಷ್ಠ; ಇರುಳು: ರಾತ್ರಿ; ಮೆರೆ: ಹೊಳೆ, ಪ್ರಕಾಶಿಸು; ಪುರ: ಊರು; ಉತ್ಸಾಹ: ಸಂಭ್ರಮ; ದಂಪತಿ: ಗಂಡ ಹೆಂಡತಿ; ಭೂಮೀಚಾರ: ಭೂಮಿಯ ಮೇಲೆ ಚಲಿಸುವ; ಚಮರ: ಚಾಮರ; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಮರುದಿವಸ: ನಾಳೆ; ಅವಭೃತ: ಯಾಗದ ಅನಂತರ ಮಾಡುವ ಮಂಗಳಸ್ನಾನ; ನೆರೆ: ಪಕ್ಕ, ಪಾರ್ಶ್ವ; ವಿಸ್ತರ: ಹರಡು; ಪನ್ನೀರು: ಸುಗಂಧದ ನೀರು; ಉಪ್ಪರಿಗೆ: ಮಹಡಿ, ಸೌಧ; ಕುಂಕುಮ: ಕೆಂಪು ಬಣ್ಣದ ಪುಡಿ; ನವ: ಹೊಸ; ಪರಿಮಳ: ಸುಗಂಧ; ರಚನೆ: ನಿರ್ಮಾಣ;

ಪದವಿಂಗಡಣೆ:
ವರ +ಚತುರ್ಥಿಯೊಳ್+ಇರುಳು +ಮೆರೆದರು
ಪುರದಲ್+ಉತ್ಸಾಹದಲಿ+ ದಂಪತಿ
ವರರು +ಭೂಮೀಚಾರ +ಚಮರದ +ಚಾತುರಂಗದಲಿ
ಮರುದಿವಸವ್+ಅವಭೃತವ +ನೆರೆ +ವಿ
ಸ್ತರಿಸಿದರು+ ಪನ್ನೀರ +ಹೊಂಗೊ
ಪ್ಪರಿಗೆಗಳ +ಕುಂಕುಮದ +ನವ+ಪರಿಮಳದ +ರಚನೆಯೊಳು

ಅಚ್ಚರಿ:
(೧) ದಂಪತಿಗಳ ಮೆರವಣಿಗೆಯಾಯಿತು ಎಂದು ಹೇಳಲು – ದಂಪತಿವರರು ಭೂಮೀಚಾರ