ಪದ್ಯ ೨೮: ಅಂಬರೀಷನು ಕೃಷ್ಣನನ್ನು ಹೇಗೆ ಬೇಡಿದನು?

ಮುನ್ನವೇ ಮುನಿದಂಬರೀಷನ
ಬೆನ್ನಹತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆಂಗಿಡಿ ಸುಡಲು ಕಂಗೆಡುತ
ಉನ್ನತೋನ್ನತ ಕೃಷ್ಣರಕ್ಷಿಸು
ಪನ್ನಗಾರಿಧ್ವಜನೆ ರಕ್ಷಿಸು
ಅನ್ಯಗತಿಯಾರೆನುತ ಹಲುಬಿದನಂದು ಭೂಪಾಲ (ಅರಣ್ಯ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹಿಂದೆ ಮಹಾರಾಜ ಅಂಬರೀಷನ ಮೇಲೆ ಕೋಪಗೊಂಡ ದೂರ್ವಾಸನು ಅವನನ್ನು ಶಪಿಸಿ, ಆ ಕೋಪದ ಕೆಂಗಿಡಿಯು ಅಂಬರೀಷನನ್ನು ಸುಡಲು ಹೋಯಿತು. ಆಗ ಅವನು ಪರಾತ್ಪರನಾದ ಕೃಷ್ಣನೇ ರಕ್ಷಿಸು, ಗರುಡಧ್ವಜನೇ ರಕ್ಷಿಸು, ನೀನಲ್ಲದೆ ನನಗಿನ್ನಾರು ಗತಿ ಎಂದು ಬೇಡಿದನು.

ಅರ್ಥ:
ಮುನ್ನ: ಹಿಂದೆ; ಮುನಿ: ಋಷಿ; ಬೆನ್ನಹತ್ತು: ಹಿಂಬಾಲಿಸು; ಹರ: ಈಶ್ವರ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಉದಯಿಸು: ಹುಟ್ಟು; ಕೆಂಗಿಡಿ: ಬೆಂಕಿಯ ಕಿಡಿ; ಸುಡು: ದಹಿಸು; ಕಂಗೆಡು: ದಿಕ್ಕುಕಾಣದಾಗು, ಗಾಬರಿಯಾಗು; ಉನ್ನತ: ಹೆಚ್ಚಿನ; ರಕ್ಷಿಸು: ಕಾಪಾಡು; ಪನ್ನಗ: ಹಾವು; ಅರಿ: ವೈರಿ; ಧ್ವಜ: ಬಾವುಟ; ಅನ್ಯ: ಬೇರೆ; ಗತಿ: ದಾರಿ, ದಿಕ್ಕು; ಹಲುಬು: ಬೇಡು; ಭೂಪಾಲ: ರಾಜ;

ಪದವಿಂಗಡಣೆ:
ಮುನ್ನವೇ +ಮುನಿದ್+ಅಂಬರೀಷನ
ಬೆನ್ನಹತ್ತಲು +ಹರನ+ ನೇತ್ರದ
ವಹ್ನಿಯೊಳಗ್+ಉದಯಿಸಿದ +ಕೆಂಗಿಡಿ +ಸುಡಲು +ಕಂಗೆಡುತ
ಉನ್ನತೋನ್ನತ +ಕೃಷ್ಣ+ರಕ್ಷಿಸು
ಪನ್ನಗ+ಅರಿ+ಧ್ವಜನೆ +ರಕ್ಷಿಸು
ಅನ್ಯಗತಿ+ಆರೆನುತ +ಹಲುಬಿದನ್+ಅಂದು +ಭೂಪಾಲ

ಅಚ್ಚರಿ:
(೧) ಗರುಡ ಎಂದು ಹೇಳಲು ಪನ್ನಗಾರಿ ಪದದ ಬಳಕೆ
(೨) ಕೃಷ್ಣ, ಪನ್ನಗಾರಿಧ್ವಜನೆ – ಕೃಷ್ಣನನ್ನು ಕರೆದ ಪರಿ