ಪದ್ಯ ೨೮: ಕೌರವನ ರಕ್ಷಣೆಗೆ ಯಾರು ನಿಂತರು?

ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ (ಗದಾ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ಸರೋವರದ ಮಧ್ಯದಲ್ಲಿ ನಿಂತು, ಪಾಳೆಯವನ್ನು ಹಸ್ತಿನಾಪುರಕ್ಕೆ ಕಳುಹಿಸು ಎನಲು, ನಾನಿಲ್ಲಿಗೆ ಬಂದೆನು. ದಾರಿಯ ನಡುವೆ ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮರನ್ನು ನೋಡಿದೆ, ಅವರನ್ನು ಕೌರವನ ರಕ್ಷಣೆಗಾಗಿ ದೊರೆಯ ಬಳಿಗೆ ಕಳುಹಿಸಿದೆ ಎಂದು ಸಂಜಯನು ಹೇಳಿದನು.

ಅರ್ಥ:
ಇಳಿ: ಕೆಳಗೆ ಹೋಗು; ಸರಸಿ: ಸರೋವರ; ಮಧ್ಯ: ನಡುವೆ; ನೃಪ: ರಾಜ; ತಿಲಕ: ಶ್ರೇಷ್ಠ; ನಿಂದು: ನಿಲ್ಲು; ಪಾಳೆಯ: ಬಿಡಾರ; ಕಳುಹು: ತೆರಳು; ಗಜಪುರಿ: ಹಸ್ತಿನಾಪುರ; ಬಂದು: ಆಗಮಿಸು; ಪಥ: ಮಾರ್ಘ; ಮಧ್ಯ: ನಡುವೆ; ಸುಳಿ: ಕಾಣಿಸಿಕೊಳ್ಳು; ಕಂಡು: ನೋಡು; ಗುರು: ಆಚಾರ್ಯ; ಮಗ: ಸುತ; ಉಳಿದ: ಮಿಕ್ಕ; ಕಳುಹು: ಬೀಳ್ಕೊಡು; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಇಳಿದು +ಸರಸಿಯ +ಮಧ್ಯದಲಿ +ನೃಪ
ತಿಲಕ +ನಿಂದನು +ಪಾಳೆಯವ +ನೀ
ಕಳುಹು +ಗಜಪುರಿಗ್+ಎನಲು +ಬಂದೆನು +ಪಥದ +ಮಧ್ಯದಲಿ
ಸುಳಿವ +ಕಂಡೆನು +ಕೃಪನನ್+ಆ+ ಗುರು
ಗಳ+ ಮಗನ+ ಕೃತವರ್ಮಕನನಂದ್
ಉಳಿದ +ಮೂವರ +ಕಳುಹಿದೆನು+ ಕುರುಪತಿಯ+ ಹೊರೆಗಾಗಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ನೃಪತಿಲಕ, ಕುರುಪತಿ

ಪದ್ಯ ೧೫: ಭೀಮನು ದ್ರೋಣರಿಗೇಕೆ ದಾರಿ ಬಿಡಿ ಎಂದನು?

ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ (ದ್ರೋಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲೈ ದ್ರೋಣನೇ, ಅರ್ಜುನ, ಸಾತ್ಯಕಿಯರು ಇನ್ನೂ ಬಾಲಕರು, ಅವರಿಗೆಂತಹ ಹುರುಡು, ಪಂಥ? ನನ್ನಲ್ಲದು ನಡೆಯದು, ಗರುಡಿಯಲ್ಲಿ ನೀವು ನಮಗೆ ಆಚಾರ್ಯರು ಅಲ್ಲಿ ನಮಸ್ಕರಿಸುತ್ತೇನೆ, ಯುದ್ಧಭೂಮಿಯಲ್ಲಿ ಎಂತಹ ನಮಸ್ಕಾರ? ನೀವು ಬಹಳ ವೃದ್ಧರು, ನಿಮಗೆದುರಾಡಬಾರದು, ನಿಮ್ಮ ಸತ್ವ ನನಗೆ ಗೊತ್ತು, ಸುಮ್ಮನೆ ಪಕ್ಕಕ್ಕೆ ಸರಿಯಿರಿ ಎಂದು ಭೀಮನು ದ್ರೋಣರಿಗೆ ಹೇಳಿದನು.

ಅರ್ಥ:
ತರಳ: ಬಾಲಕ; ಅವದಿರು: ಅಷ್ಟುಜನ; ಪಂಥವ: ಹಟ, ಛಲ, ಸ್ಪರ್ಧೆ; ಗರುಡಿ: ವ್ಯಾಯಾಮ ಶಾಲೆ; ವಂದಿಸು: ನಮಸ್ಕರಿಸು; ವಂದನೆ: ನಮಸ್ಕಾರ; ಸಮರ: ಯುದ್ಧ; ಮರುಳು: ಮೂಢ; ಮರುಮಾತು: ಎದುರುತ್ತರ; ವೃದ್ಧ: ಮುದುಕ; ಚಿತ್ತ: ಮನಸ್ಸು; ಹುರುಳು: ಸತ್ತ್ವ, ಸಾರ; ಬಲ್ಲೆ: ತಿಳಿ; ಪಥ: ದಾರಿ; ಬಿಡು: ತೊರೆ; ಕೆಲಸಾರು: ಪಕ್ಕಕ್ಕೆ ಹೋಗು;

ಪದವಿಂಗಡಣೆ:
ತರಳರ್+ಅರ್ಜುನ +ಸಾತ್ಯಕಿಗಳ್+ಅವ
ದಿರಿಗೆ +ಪಂಥವದೇಕೆ +ನಿಮ್ಮನು
ಗರುಡಿಯಲಿ +ವಂದಿಸುವ +ವಂದನೆ+ಯುಂಟೆ +ಸಮರದಲಿ
ಮರುಳಲಾ+ ಮರುಮಾತು +ಕಡು+ವೃ
ದ್ಧರಿಗ್+ಅದೇಕೆಂಬಂತೆ+ ಚಿತ್ತದ
ಹುರುಳ +ಬಲ್ಲೆನು +ಪಥವ+ ಬಿಡಿ +ಕೆಲಸಾರಿ +ಸಾಕೆಂದ

ಅಚ್ಚರಿ:
(೧) ಭೀಮನ ಬಿರುಸು ನುಡಿ – ವಂದನೆಯುಂಟೆ ಸಮರದಲಿ

ಪದ್ಯ ೪೫: ದೂರ್ವಾಸ ಮುನಿಗಳು ಕೃಷ್ಣನನ್ನು ಕುಳಿತುಕೋಳ್ಳಲು ಏಕೆ ಹೇಳಿದರು?

ಯತಿಗಳೈತರೆ ಗಾರುಹಸ್ತ್ಯ
ವ್ರತಿಯು ವಂದಿಸಬೇಹುದಾ ಪ
ದ್ಧತಿ ತೋರುವ ಪಥವಿದೈ ಸಲೆ ನೀನು ವಂದಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಶ್ರುತಿ ಶಿರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತವೆ ಮನಿಪ ಮಂಡಿಸಿದ (ಅರಣ್ಯ ಪರ್ವ, ೧೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಕೃಷ್ಣನು ನಮಸ್ಕರಿಸಿದುದನ್ನು ಕಂಡು, ಯತಿಗಳನ್ನು ಕಂಡೊಡನೆ, ಗೃಹಸ್ಥಾಶ್ರಮಿಯು ವಂದಿಸಬೇಕೆಂಬುದು ಪದ್ಧತಿ, ಅದನ್ನು ನೀನು ತೋರಿಸುತ್ತಿರುವೆ, ನಿನ್ನ ವರ್ತನೆ ಸಹಜವೇ? ಕೃಷ್ನ ನೀನು ಉಪನಿಷ್ತ್ಪ್ರತಿಪಾದ್ಯನಾದ ಪರಬ್ರಹ್ಮನೇ ಆಗಿರುವೆ, ನೀನು ಕುಳಿತುಕೋ, ಗೃಹಸ್ಥನೆಂದು ನತಿಸುವವನೇ ಕುಳಿತುಕೋ ಎಂದು ಶ್ರೀಕೃಷ್ಣನಿಗೆ ಹೇಳಿದರು.

ಅರ್ಥ:
ಯತಿ: ಮುನಿ; ಐತರು: ಬಂದು ಸೇರು; ಗಾರುಹಸ್ತ್ಯ: ಗೃಹಸ್ತ; ವ್ರತಿ: ವ್ರತವನ್ನು ಪಾಲಿಸುವವ; ವಂದಿಸು: ನಮಸ್ಕರಿಸು; ಪದ್ಧತಿ: ರೂಢಿ; ತೋರು: ಗೋಚರಿಸು; ಪಥ: ಮಾರ್ಗ; ಸಲೆ: ಸರಿಯಾಗಿ, ತಕ್ಕಂತೆ; ವಂದಿಸು: ನಮಸ್ಕರಿಸು; ಸಹಜ: ಸ್ವಾಭಾವಿಕವಾದುದು; ಕುಳ್ಳಿರು: ಕೂತುಕೋ; ಶ್ರುತಿ: ವೇದ; ಶಿರೋಮಣಿ: ತಿಲಕಪ್ರಾಯ; ವ್ಯಾಹೃತಿ: ಯಜ್ಞಸಮಯದಲ್ಲಿ ಉಚ್ಚರಿಸುವ, ಭೋ, ಬುವಃ ಸ್ವಃ ಇತ್ಯಾದಿ ಶಬ್ದಗಳು; ಗೃಹಸ್ತ: ಗೃಹಸ್ಥಾಶ್ರಮವನ್ನು ಪಾಲಿಸುವವ; ಮುನಿ: ಋಷಿ; ಮಂಡಿಸು: ಕುಳಿತುಕೊಳ್ಳು;

ಪದವಿಂಗಡಣೆ:
ಯತಿಗಳ್+ಐತರೆ +ಗಾರುಹಸ್ತ್ಯ
ವ್ರತಿಯು +ವಂದಿಸಬೇಹುದಾ +ಪ
ದ್ಧತಿ +ತೋರುವ +ಪಥವಿದೈ+ ಸಲೆ+ ನೀನು +ವಂದಿಪುದು
ಅತಿ+ ಸಹಜವೈ +ಕೃಷ್ಣ +ಕುಳ್ಳಿರು
ಶ್ರುತಿ+ ಶಿರೋಮಣಿ +ಕುಳ್ಳಿರೈ +ವ್ಯಾ
ಹೃತ +ಗೃಹಸ್ಥನು +ಕುಳ್ಳಿರ್+ಎನುತವೆ +ಮನಿಪ +ಮಂಡಿಸಿದ

ಅಚ್ಚರಿ:
(೧) ಕೃಷ್ಣನನ್ನು ಕುಳ್ಳಿರೆಂದು ಹೇಳುವ ಪರಿ – ಕೃಷ್ಣ ಕುಳ್ಳಿರು ಶ್ರುತಿ ಶಿರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತ

ಪದ್ಯ ೧೬: ಜಗತ್ತು ಎಂದು ಹಾಳಾಗುವುದು?

ಒಂದು ವಸ್ತುವನೆರಡು ಮಾಡುವೆ
ನೆಂದು ಬುದ್ಧಿಭ್ರಾಂತಿಯೊಳು ಮನ
ಸಂದು ಸಮ್ಯಜ್ಞಾನದುದಯದ ನೆಲೆಯು ಕಾಣಿಸದೆ
ದಂದುಗಂಬಡುತಿಹುದು ತತ್ತ್ವದ
ಹಿಂದು ಮುಂದರಿಯದೆ ಮಹಾತ್ಮರು
ಬಂದ ಪಥದೊಳು ಬಾರದೇ ಕಿಡುತಿಹುದು ಜಗವೆಂದ (ಉದ್ಯೋಗ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಂದೇ ಇರುವ ಬ್ರಹ್ಮವಸ್ತುವವನ್ನು ಎರಡು ಮಾಡುವೆನೆಂದು ಬುದ್ಧಿಯ ಭ್ರಾಂತಿಯಿಂದ ಸರಿಯಾದ ಜ್ಞಾನೋದಯದ ನೆಲೆಯೇ ಕಾಣಿಸದೆ ತತ್ತ್ವದ ಹಿಂದು ಮುಂದನ್ನು ತಿಳಿಯದೆ, ಮಹಾತ್ಮರು ನಡೆದ ಪಥದಲ್ಲಿ ನಡೆಯದೆ ಜಗತ್ತು ಕೆಡುತ್ತದೆ.

ಅರ್ಥ:
ಒಂದು: ಏಕ; ವಸ್ತು: ಪದಾರ್ಥ; ಎರಡು: ದ್ವಿ, ದ್ವಂದ; ಮಾಡು: ನೆರವೇರಿಸು; ಬುದ್ಧಿ: ಚಿತ್ತ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಮನ: ಮನಸ್ಸು; ಸಂದು: ಸಂದರ್ಭ; ಸಮ್ಯಕ್:ಸರಿಯಾದ; ಜ್ಞಾನ: ವಿದ್ಯೆ; ಉದಯ: ಹುಟ್ಟು; ನೆಲೆ:ನಿವಾಸ; ಕಾಣಿಸು: ತೋರು; ದಂದುಗ: ತೊಡಕು; ತತ್ತ್ವ: ಸಿದ್ಧಾಂತ; ಅರಿ: ತಿಳಿ; ಮಹಾತ್ಮರು: ಶ್ರೇಷ್ಠರು; ಪಥ: ದಾರಿ; ಕಿಡುತಿಹರು: ಕೆಡುಕ ಹೊಂದುತ್ತಿರುವರು; ಜಗ: ಜಗತ್ತು;

ಪದವಿಂಗಡಣೆ:
ಒಂದು +ವಸ್ತುವನ್+ಎರಡು +ಮಾಡುವೆನ್
ಎಂದು +ಬುದ್ಧಿ+ಭ್ರಾಂತಿಯೊಳು +ಮನ
ಸಂದು +ಸಮ್ಯಜ್ಞಾನ+ಉದಯದ +ನೆಲೆಯು +ಕಾಣಿಸದೆ
ದಂದುಗಂ+ಬಡುತಿಹುದು +ತತ್ತ್ವದ
ಹಿಂದು +ಮುಂದ್+ಅರಿಯದೆ +ಮಹಾತ್ಮರು
ಬಂದ +ಪಥದೊಳು +ಬಾರದೇ +ಕಿಡುತಿಹುದು+ ಜಗವೆಂದ

ಅಚ್ಚರಿ:
(೧) ಒಂದು, ಎಂದು, ಸಂದು, ಹಿಂದು – ಪ್ರಾಸ ಪದಗಳು
(೨) ಹಿಂದು ಮುಂದು – ವಿರುದ್ಧ ಪದಗಳು