ಪದ್ಯ ೧೮: ಧರ್ಮಜನ ಆಸ್ಥಾನವೇಕೆ ಶೋಭಿಸದು?

ಪತಿಯಳಿದ ಸತಿಯಿರವು ನಾಯಕ
ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ
ಕೃತಕವಲ್ಲಭಿಮನ್ಯುವಿಲ್ಲದೆ
ಕ್ಷಿತಿಪ ನಿನ್ನಾಸ್ಥಾನ ಮೆರೆಯದು
ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ (ದ್ರೋಣ ಪರ್ವ, ೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಗಂಡನಿಲ್ಲದ ಹೆಂಡತಿ, ನಾಯಕರತ್ನವಿಲ್ಲದ ಪದಕ, ದೈವಸ್ತುತಿಯಿಲ್ಲದ ಕಾವ್ಯ ರಚನೆಯಂತೆ ಅಭಿಮನ್ಯುವಿಲ್ಲದ ನಿನ್ನ ಆಸ್ಥಾನ ಶೋಭಿಸದು, ಎಲೈ ರಾಜನೇ ನನ್ನ ಮಗನ ಸುದ್ದಿಯೇನೆಂದು ಹೆಳು ಎಂದು ಅರ್ಜುನನು ಬೇಡಿದನು.

ಅರ್ಥ:
ಪತಿ: ಗಂಡ; ಅಳಿ: ಸಾವು, ಇಲ್ಲದ; ಸತಿ: ಹೆಣ್ಣು, ಹೆಂಡತಿ; ನಾಯಕ: ಒಡೆಯ; ರತುನ: ರತ್ನ, ಮಣಿ; ಪದಕ: ಬಿಲ್ಲೆ; ದೈವ: ಭಗವಂತ; ಸ್ತುತಿ: ನಾಮಸ್ಮರಣೆ; ಕಾವ್ಯ: ಕವನ; ರಚನೆ: ನಿರ್ಮಿಸು; ಭಾವ: ಅಂತರ್ಗತ ಅರ್ಥ; ಕೃತಕ: ನೈಜವಲ್ಲದ; ಕ್ಷಿತಿಪ: ದೊರೆ, ರಾಜ; ಆಸ್ಥಾನ: ಓಲಗ; ಮೆರೆ: ಶೋಭಿಸು; ಸುತ: ಮಗ; ಸುದ್ದಿ: ವಿಚಾರ; ಮರುಗು: ತಳಮಳ, ಸಂಕಟ; ಹೇಳು: ತಿಳಿಸು;

ಪದವಿಂಗಡಣೆ:
ಪತಿಯಳಿದ +ಸತಿ+ಇರವು +ನಾಯಕ
ರತುನವಿಲ್ಲದ +ಪದಕ +ದೈವ
ಸ್ತುತಿಗಳಿಲ್ಲದ +ಕಾವ್ಯ +ರಚನಾ +ಭಾವದಂದದಲಿ
ಕೃತಕವಲ್+ಅಭಿಮನ್ಯುವಿಲ್ಲದೆ
ಕ್ಷಿತಿಪ +ನಿನ್ನಾಸ್ಥಾನ +ಮೆರೆಯದು
ಸುತನ +ಸುದ್ದಿಯದೇನು +ಮರುಗಿಸಬೇಡ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪತಿಯಳಿದ ಸತಿಯಿರವು ನಾಯಕ ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ

ಪದ್ಯ ೮೧: ಗಂಡನು ಯಾರನ್ನು ತೊರೆಯುವುದುತ್ತಮ?

ಮಡದಿ ನಿಜನಿಳಯವನು ಬಿಟ್ಟಡಿ
ಗಡಿಗೆ ಪರಗೃಹದೊಳಗೆ ಬಾಯನು
ಬಡಿದು ಮನೆಮನೆವಾರ್ತೆಯೆನ್ನದೆ ಬೀದಿಗಲಹವನು
ಒಡರಿಸ್ಚುವ ಪತಿಯೊಬ್ಬನುಂಟೆಂ
ದೆಡಹಿ ಕಾಣ್ದ ದಿಟ್ಟೆ ಹತ್ತನು
ಹಡೆದಡೆಯು ವರ್ಜಿಸುವುದುತ್ತಮ ಪುರುಷರುಗಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೧ ಪದ್ಯ)

ತಾತ್ಪರ್ಯ:
ಹೆಂಡತಿಯಾದವಳು ತನ್ನ ಮನೆ ಅವಳ ಮನೆಯಕೆಲಸಗಳನ್ನು ಬಿಟ್ಟು, ಹೆಜ್ಜೆ ಹೆಜ್ಜೆಗೂ ಬೇರೆಯವರ ಮನೆಯಲ್ಲಿ ಬಾಯ್ಬಡಿದು ಮಾತನಾಡುತ್ತಾ, ತನಗೆ ಒಬ್ಬ ಗಂಡನಿರುವನೆಂಬುದನ್ನು ಮರೆತು, ಅವನನ್ನು ಎಡವಿದರೂ ಗಮನಿಸದಿರುವ ದಿಟ್ಟ ಹೆಂಗಸು ತನ್ನಿಂದ ಹತ್ತು ಮಕ್ಕಳನ್ನು ಪಡೆದಿದ್ದರೂ ಶ್ರೇಷ್ಠ ಪುರುಷನು ಆಕೆಯನ್ನು ತೊರೆಯುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಡದಿ: ಹೆಂಡತಿ; ನಿಜ: ಸ್ವಂತ; ನಿಳಯ: ಆಲಯ,ಮನೆ; ಬಿಟ್ಟು: ತೊರೆದು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ, ಯಾವಾಗಲೂ; ಪರ: ಬೇರೆ; ಗೃಹ: ಮನೆ; ಬಾಯನುಬಡಿದು: ಹರಟು, ಬೊಬ್ಬೆಹಾಕು; ಮನೆ: ಆಲಯ; ವಾರ್ತೆ: ವಿಷಯ; ಬೀದಿ: ರಸ್ತೆ; ಕಲಹ: ಜಗಳ; ಒಡರು: ಮಾಡು, ರಚಿಸು; ಪತಿ: ಗಂಡ; ಎಡಹು: ತಪ್ಪುಮಾಡು, ಮುಗ್ಗರಿಸು; ಕಾಣದ: ಗೋಚರಿಸದ; ಹತ್ತು: ದಶ; ಹಡೆದು: ಪಡೆದು, ಜನ್ಮನೀಡು; ವರ್ಜಿಸು: ತೊರೆ; ಉತ್ತಮ: ಒಳ್ಳೆಯ, ಶ್ರೇಷ್ಠ; ಪುರುಷ: ಗಂಡ;

ಪದವಿಂಗಡಣೆ:
ಮಡದಿ +ನಿಜ+ನಿಳಯವನು +ಬಿಟ್ಟ್+ಅಡಿ
ಗಡಿಗೆ +ಪರ+ಗೃಹದೊಳಗೆ +ಬಾಯನು
ಬಡಿದು +ಮನೆಮನೆ+ವಾರ್ತೆಯೆನ್ನದೆ +ಬೀದಿ+ಕಲಹವನು
ಒಡರಿಚುವ +ಪತಿಯೊಬ್ಬನ್+ಉಂಟೆಂದ್
ಎಡಹಿ +ಕಾಣ್ದ +ದಿಟ್ಟೆ +ಹತ್ತನು
ಹಡೆದಡೆಯು+ ವರ್ಜಿಸುವುದ್+ಉತ್ತಮ +ಪುರುಷರುಗಳೆಂದ

ಅಚ್ಚರಿ:
(೧) ಅಡಿಗಡಿ, ಮನೆಮನೆ – ಜೋಡಿ ಪದಗಳ ಬಳಕೆ
(೨) ಪತಿ, ಮಡದಿ – ಗಂಡ ಹೆಂಡತಿಗೆ ಉಪಯೋಗಿಸಿದ ಪದ

ಪದ್ಯ ೪೬: ಯಾರಿಗೆ ಯಾರು ಆಧಾರ?

ಸತಿಯರಿಗೆ ಗತಿ ಯಾವುದೈ ನಿಜ
ಪತಿಯದಲ್ಲದೆ ವಿಪ್ರಜಾಗಿತೆ
ಹುತವಹನು ವರ್ಣತ್ರಯಕೆ ಭೂದೇವರುಗಳಿರಲು
ಕ್ಷಿತಿಯೊಳಧಿಕವದಾವುದೈ ಭೂ
ಪತಿಯೆ ಕೇಳಿಹಪರದ ಸುಖಸಂ
ಗತಿಯನೊಲುವೊಡೆ ಪೂಜಿಸೈ ಬ್ರಾಹ್ಮಣರ ನೀನೆಂದ (ಉದ್ಯೋಗ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪತ್ನಿಗೆ ಆಧಾರವಾವುದಾದರು ಯಾರು ಎಂದು ಕೇಳಿದರೆ ಅದಕ್ಕೆ ಉತ್ತರ ಅವಳ ನಿಜವಾದ ಪತಿಯೆ, ಹಾಗೆಯೆ ಬ್ರಾಹ್ಮಣರಿಗೆ ಅಗ್ನಿಯೇ ಆಧಾರ, ಜಗತ್ತಿನಲ್ಲುಳಿದ ಮೂರು ವರ್ಣಗಳಿಗೆ ಬ್ರಾಹ್ಮಣರೇ ಆಧಾರ. ಭೂಮಿಯಲ್ಲಿ ಇದೇ ನೀತಿ, ನಿನಗೆ ಇಹಪರಗಳಲ್ಲಿ ಸುಖವು ಬೇಕಾದರೆ ಬ್ರಾಹ್ಮಣರನ್ನು ಪೂಜಿಸು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಸತಿ: ಪತ್ನಿ; ಗತಿ:ಆಧಾರ, ಆಶ್ರಯ; ನಿಜ: ನೈಜ, ಸತ್ಯ; ಪತಿ: ಗಂಡ, ಯಜಮಾನ; ವಿಪ್ರ: ಬ್ರಾಹ್ಮಣ; ಜಾತಿ: ಕುಲ; ಹುತ: ಯಜ್ಞಯಾಗಾದಿಗಳಲ್ಲಿ ಅಗ್ನಿಗೆ ಅರ್ಪಿಸಿದುದು, ಹವಿಸ್ಸು; ವರ್ಣ: ಪ್ರಾಚೀನ ಸಾಮಾಜಿಕ ವ್ಯವಸ್ಥೆಯಲ್ಲಿನ ಪಂಗಡ; ತ್ರಯ: ಮೂರು; ಭೂದೇವ: ಬ್ರಾಹ್ಮಣ; ಕ್ಷಿತಿ: ಭೂಮಿ; ಅಧಿಕ: ಹೆಚ್ಚು; ಭೂಪತಿ: ರಾಜ; ಕೇಳು: ಆಲಿಸು; ಇಹಪರ: ಈ ಲೋಕ ಮತ್ತು ಪರಲೋಕ; ಸುಖ: ನೆಮ್ಮದಿ; ಸಂಗತಿ: ಸೇರುವಿಕೆ, ಸಹವಾಸ; ಒಲವು: ಸ್ನೇಹ, ಪ್ರೀತಿ; ಪೂಜಿಸು: ಅರ್ಚಿಸು; ಬ್ರಾಹ್ಮಣ: ವಿಪ್ರ, ಭೂಸುರ;

ಪದವಿಂಗಡಣೆ:
ಸತಿಯರಿಗೆ+ ಗತಿ +ಯಾವುದೈ +ನಿಜ
ಪತಿ+ಯದಲ್ಲದೆ +ವಿಪ್ರ+ಜಾತಿಗೆ
ಹುತವಹನು +ವರ್ಣತ್ರಯಕೆ+ ಭೂದೇವರುಗಳ್+ಇರಲು
ಕ್ಷಿತಿಯೊಳ್+ಅಧಿಕವದ್+ಆವುದೈ +ಭೂ
ಪತಿಯೆ +ಕೇಳ್+ಇಹಪರದ +ಸುಖ+ಸಂ
ಗತಿಯನ್+ಒಲುವೊಡೆ +ಪೂಜಿಸೈ +ಬ್ರಾಹ್ಮಣರ +ನೀನೆಂದ

ಅಚ್ಚರಿ:
(೧) ಸತಿ, ಪತಿ, ಕ್ಷಿತಿ, ಗತಿ – ಪ್ರಾಸ ಪದಗಳು
(೨) ವಿಪ್ರ, ಭೂದೇವ, ಬ್ರಾಹ್ಮಣ – ಸಮನಾರ್ಥಕ ಪದ

ಪದ್ಯ ೧೯: ಲೋಕ ಕೆಡಲು ಕಾರಣವೇನು?

ಪೊಡವಿಯೊಳಗುದಯಿಸಿದ ದುಷ್ಕೃತ
ಬಿಡದು ಭೂಪರನದು ಪುರೋಹಿತ
ರೆಡೆಗೆ ಬಳಿಕಾ ಮೂರ್ಖ ಶಿಷ್ಯನ ದೋಷ ಗುರುವಿನದು
ಮಡದಿ ಮಾಡಿದ ಪಾತಕವು ಪತಿ
ಗೊಡಲಹುದು ಪರಮಾರ್ಥವಿದು ಪರಿ
ವಿಡಿಯ ನರಿಯದೆ ಕೆಡುವುದೀ ಜಗವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ರಾಜ್ಯದಲ್ಲಿ ನಡೆಯುವ ಪಾಪವು ರಾಜನನ್ನು ಸುತ್ತುತ್ತದೆ. ಅದು ರಾಜಪುರೋಹಿತನಿಗೆ ಸೇರುತ್ತದೆ ಮೂರ್ಖನಾದ ಶಿಷ್ಯನ ದೋಷವು ಗುರುವಿಗೆ ಸೇರುತ್ತದೆ. ಹೆಂಡತಿಯ ಪಾಪ ಗಂಡನಿಗೆ ಸೇರುತ್ತದೆ. ಈ ಕ್ರಮವನ್ನರಿಯದೆ ಲೋಕ ಕೆಡುತ್ತದೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ಪೊಡವಿ:ಪೃಥ್ವಿ, ಭೂಮಿ, ನೆಲ; ಉದಯಿಸು: ಹುಟ್ಟು; ದುಷ್ಕೃತ: ಕೆಟ್ಟ ಕೆಲಸ; ಬಿಡದು: ಹೋಗದು; ಭೂಪ: ರಾಜ; ಪುರೋಹಿತ: ಧಾರ್ಮಿಕ ವ್ರತವನ್ನು ಮಾಡಿಸುವವ; ಬಳಿಕ: ನಂತರ; ಮೂರ್ಖ: ಮೂಢ; ಶಿಷ್ಯ: ವಿದ್ಯಾರ್ಥಿ; ದೋಷ: ತಪ್ಪು; ಗುರು: ಆಚಾರ್ಯ; ಮಡದಿ: ಹೆಂಡತಿ; ಪಾತಕ: ಕೆಟ್ಟಕೆಲಸ, ಪಾಪ; ಪತಿ: ಗಂಡ, ಯಜಮಾನ; ಪರಮಾರ್ಥ: ಶ್ರೇಷ್ಠವಾದ ತಿಳುವಳಿಕೆ; ಪರಿವಿಡಿ: ವ್ಯವಸ್ಥಿತವಾದ ಕ್ರಮ; ಅರಿ: ತಿಳಿ; ಕೆಡು:ಹಾಳಾಗು, ಅಳಿ; ಜಗ: ವಿಶ್ವ; ಮುನಿ: ಋಷಿ;

ಪದವಿಂಗಡಣೆ:
ಪೊಡವಿಯೊಳಗ್+ಉದಯಿಸಿದ +ದುಷ್ಕೃತ
ಬಿಡದು +ಭೂಪರನ್+ಅದು +ಪುರೋಹಿತ
ರೆಡೆಗೆ+ ಬಳಿಕ+ಆ+ ಮೂರ್ಖ +ಶಿಷ್ಯನ +ದೋಷ +ಗುರುವಿನದು
ಮಡದಿ+ ಮಾಡಿದ+ ಪಾತಕವು+ ಪತಿಗ್
ಒಡಲಹುದು +ಪರಮಾರ್ಥವಿದು +ಪರಿ
ವಿಡಿಯನ್ +ಅರಿಯದೆ +ಕೆಡುವುದೀ +ಜಗವೆಂದನಾ +ಮುನಿಪ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಮಡದಿ ಮಾಡಿದ, ಪಾತಕವು ಪತಿಗೆ
(೨) ದುಷ್ಕೃತ, ಪಾತಕ – ಸಮನಾರ್ಥಕ ಪದ

ಪದ್ಯ ೧೨೧: ಯಾರು ಯಾರ ಸಂಗಡದಿಂದ ಕೆಡುತ್ತಾರೆ?

ಯತಿ ಕಿಡುಗು ದುಸ್ಸಂಗದೊಳು ಭೂ
ಪತಿ ಕಿಡುಗು ದುರ್ಮಂತ್ರಿಯೊಳು ವರ
ಸುತ ಕಿಡುಗು ಲಾಲನೆಗಳೊಳು ಕೃಷಿ ಕಿಡುಗುಪೇಕ್ಷೆಯೊಳು
ಮತಿ ಕಿಡುಗು ಮಧುಪಾನದೊಳು ಸ
ದ್ಗತಿ ಕಿಡುಗು ದುರ್ವ್ಯಸನದೊಳು ನಿಜ
ಸತಿ ಕಿಡುಗು ಸ್ವಾತಂತ್ರ್ಯದೊಳು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ಯಾರು ಯಾರ ಸಂಗದಿಂದ ಕೆಡುತ್ತಾರೆ ಎಂದು ವಿದುರ ಇಲ್ಲಿ ವಿವರಿಸಿದ್ದಾರೆ. ಯತಿ (ಸಂನ್ಯಾಸಿ)ಯು ದುಸ್ಸಂಗದಿಂದ ಕೆಡುತ್ತಾನೆ. ರಾಜನು ಕೆಟ್ಟಾ ಮಂತ್ರಿಯಿಂದ ಕೆಡುತ್ತಾನೆ. ಮಗನನ್ನು ಅತಿಯಾಗಿ ಮುದ್ದುಮಾಡಿ ಬೆಳಸಿದರೆ ಆತುನು ಕೆಡುತ್ತಾನೆ, ಅಲಕ್ಷದಿಂದ ಮಾಡುವ ವ್ಯವಸಾಯವು ಕೆಡುತ್ತದೆ. ಮದ್ಯಪಾನದಿಂದ ಬುದ್ಧಿಯು ಕೆಡುತ್ತದೆ, ಕೆಟ್ಟ ವ್ಯಸನಗಳಿಂದ ಸದ್ಗತಿಯು ದೊರೆಯುವುದಿಲ್ಲ ಮತ್ತು ತನ್ನಿಚ್ಛೆ ಬಂದಂತೆ ನಡೆಯುವುದರಿಂದ ಹೆಂಡತಿಯು ಕೆಡುತ್ತಾಳೆ ಎಂದು ವಿದುರ ತಿಳಿಸಿದ.

ಅರ್ಥ:
ಯತಿ: ಇಂದ್ರಿಯ ನಿಗ್ರಹ, ಸಂನ್ಯಾಸಿ; ಕಿಡುಗು: ಅಳಿ, ನಾಶವಾಗು; ದುಸ್ಸಂಗ: ಕೆಟ್ಟವರ ಜೊತೆ; ಭೂಪತಿ: ರಾಜನು; ದುರ್ಮಂತ್ರಿ: ಕೆಟ್ಟ ಸಚಿವ; ವರ: ಶ್ರೇಷ್ಠ; ಸುತ: ಮಗ; ಲಾಲನೆ: ಅಕ್ಕರೆ ತೋರಿಸುವುದು, ಮುದ್ದಾಟ; ಕೃಷಿ: ವ್ಯವಸಾಯ; ಉಪೇಕ್ಷೆ: ಅಲಕ್ಷ್ಯ, ಕಡೆಗಣಿಸುವಿಕೆ; ಮತಿ: ಬುದ್ಧಿ; ಮಧುಪಾನ: ಮಾದಕಪಾನಿಯಗಳನ್ನು ಕುಡಿಯುವುದು; ಸದ್ಗತಿ: ಒಳ್ಳೆಯ ಸ್ಥಿತಿ; ವ್ಯಸನ: ದುಃಖ, ವ್ಯಥೆ; ಸತಿ: ಹೆಂಡತಿ; ಸ್ವಾತಂತ್ಯ: ತನ್ನಿಚ್ಛೆ ಬಂದಂತೆ ನಡೆಯುವುದು;

ಪದವಿಂಗಡಣೆ:
ಯತಿ +ಕಿಡುಗು+ ದುಸ್ಸಂಗದೊಳು+ ಭೂ
ಪತಿ +ಕಿಡುಗು +ದುರ್ಮಂತ್ರಿಯೊಳು +ವರ
ಸುತ +ಕಿಡುಗು +ಲಾಲನೆಗಳೊಳು+ ಕೃಷಿ+ ಕಿಡುಗ್+ಉಪೇಕ್ಷೆಯೊಳು
ಮತಿ +ಕಿಡುಗು +ಮಧುಪಾನದೊಳು +ಸ
ದ್ಗತಿ +ಕಿಡುಗು +ದುರ್ವ್ಯಸನದೊಳು +ನಿಜ
ಸತಿ +ಕಿಡುಗು +ಸ್ವಾತಂತ್ರ್ಯದೊಳು +ಭೂಪಾಲ +ಕೇಳೆಂದ

ಅಚ್ಚರಿ:
(೧) ಕಿಡುಗು – ಪ್ರತಿ ಸಾಲಿನ ೨ನೇ ಪದ
(೨) ಯತಿ, ಪತಿ, ಮತಿ, ಸತಿ, ಸದ್ಗತಿ – ಪ್ರಾಸ ಪದಗಳು
(೩) ದುಸ್ಸಂಗ, ದುರ್ಮತಿ, ದುರ್ವ್ಯಸನ – ದು ಕಾರದ ಪದಗಳ ಬಳಕೆ

ವಿಭೀಷಣನು ಯಾವ ಕಾರಣಕ್ಕಾಗಿ ಯಾಗಕ್ಕೆ ಸಹಾಯ ಮಾಡಲು ಒಪ್ಪಿದನು?

ಕ್ರತುವಿದಸುರಾರಾತಿಗೀ ಕ್ರತು
ಪತಿ ಯುಧಿಷ್ಠಿರ ದೂತನಾನಿದ
ರತಿಶಯವ ನೀ ಬಲ್ಲೆಯೆನೆ ನೋಡಿದನು ತನ್ನವರ
ಇತರ ವಿಧದಿಂದಧಿಕ ಪುಣ್ಯ
ಪ್ರತತಿಯುಂಟೇ ರಾಮಚಂದ್ರನ
ವಿತತ ಕೀರ್ತಿತ್ರೇತೆಯೀ ದ್ವಾಪರದಲಾಯ್ತೆಂದ (ಸಭಾ ಪರ್ವ, ೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಈ ಯಾಗವು ವಿಷ್ಣುವಿನ ಪ್ರೀತರ್ಥ್ಯಕ್ಕಾಗಿ, ಯಜ್ಞಕರ್ತ ಯುಧಿಷ್ಠಿರ, ನಾನವನ ಸೇವಕ, ಈ ವಿವರಗಳನ್ನು ನಾನು ಬಲ್ಲೆ, ಉಳಿದದನ್ನು ನೀನೆ ತಿಳಿದಿರುವೆ ಎಂದು ಘಟೋತ್ಕಚನು ಹೇಳಲು, ವಿಭೀಷಣನು ಪರಿವಾರದವರನ್ನು ನೋಡಿ, ‘ಈ ಯಾಗಕ್ಕೆ ಸಹಾಯ ಮಾಡುವುದರಿಂದ ಬರುವ ಪುಣ್ಯವು ಇನ್ನೇನು ಮಾಡಿದರೂ ಸಿಗದು, ತ್ರೇತಾಯುಗದಲ್ಲಿ ಶ್ರೀರಾಮನು ಕೀರ್ತಿಯೆ, ದ್ವಾಪರಯುಗದಲ್ಲಿ ಶ್ರೀಕೃಷ್ನನ ಕೀರ್ತಿಯು’, ಎಂದನು.

ಅರ್ಥ:
ಕ್ರತು: ಯಾಗ; ಅಸುರ: ದೈತ್ಯ; ಕ್ರತುಪತಿ: ಯಜ್ಞಕರ್ತ; ದೂತ: ಸೇವಕ; ಅತಿಶಯ: ವಿಶೇಷ, ಹೆಚ್ಚುಗಾರಿಕೆ; ಬಲ್ಲೆ: ತಿಳಿದಿರುವೆ; ತನ್ನವರ: ಬಂಧು, ಸಂಬಂಧಿಕರ; ವಿಧ: ರೀತಿ; ಇತರ: ಬೇರೆ; ಅಧಿಕ: ಹೆಚ್ಚು; ಪುಣ್ಯ: ಒಳ್ಳೆಯ ಕರ್ಮದ ಫಲವಾಗಿ ಬರುವ ಸುಖ, ಭಾಗ್ಯ; ಪ್ರತತಿ: ಹರಹು, ಸಮೂಹ; ವಿತತ: ಶ್ರೇಷ್ಠವಾದ; ಕೀರ್ತಿ: ಖ್ಯಾತಿ;

ಪದವಿಂಗಡಣೆ:
ಕ್ರತುವಿದ್+ಅಸುರಾರ್+ಅತಿಗ್+ಈ+ ಕ್ರತು
ಪತಿ +ಯುಧಿಷ್ಠಿರ +ದೂತನಾನ್+ಇದರ್
ಅತಿಶಯವ +ನೀ ಬ+ಲ್ಲೆಯೆನೆ +ನೋಡಿದನು +ತನ್ನವರ
ಇತರ +ವಿಧದಿಂದ್+ಅಧಿಕ+ ಪುಣ್ಯ
ಪ್ರತತಿಯುಂಟೇ +ರಾಮಚಂದ್ರನ
ವಿತತ+ ಕೀರ್ತಿ+ತ್ರೇತೆಯೀ +ದ್ವಾಪರದಲಾಯ್ತೆಂದ

ಅಚ್ಚರಿ:
(೧) ಯುಗಗಳ ಪ್ರಯೋಗದಿಂದ ರಾಮ ಕೃಷ್ಣರನ್ನು ಸಂಭೋದಿಸಿರುವುದು – ಕೀರ್ತಿತ್ರೇತೆಯೀ ದ್ವಾಪರದಲಾಯ್ತೆಂದ
(೨) ಕ್ರತು – ಮೊದಲನೆ ಮತ್ತು ಕೊನೆಯ ಪದ ಒಂದೆ ಆಗಿರುವುದು
(೩) ಪ್ರಾಸ ಪದಗಳು: ರತಿ, ಪತಿ; ಪ್ರತ ವಿತ

ಪದ್ಯ ೬೫: ರಾಜನ ಮಾನವು ಯಾರಿಂದ ಹೋಗುತ್ತದೆ?

ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೬೫ ಪದ್ಯ)

ತಾತ್ಪರ್ಯ:
ಹೆಂಡತಿಯರ ಮೇಲೆ ಮೋಹವಿಟ್ಟುಕೊಂಡು, ಆ ಸ್ತ್ರಿಯರನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕಾಗಿ ಕಾಮುಕರನ್ನು ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಅರಮನೆಯ ಕಾವಲಿಗೆ ನೇಮಿಸಿದರೆ, ಅಂತಹ ರಾಜನ ಮಾನವು ಒಂದು ಮುಹೂರ್ತದಲ್ಲಿ ಇಲ್ಲದಂತಾಗುತ್ತದೆ, ಇದು ನೀನು ತಿಳಿದಿರುವೆಯ ಎಂದು ನಾರದರು ಕೇಳಿದರು.

ಅರ್ಥ:
ಸತಿ: ಗರತಿ, ಹೆಂಡತಿ; ಒಲುಮೆ: ಪ್ರೀತಿ; ವಿಟ: ಕಾಮುಕ, ವಿಷಯಾಸಕ್ತ; ಸ್ಥಿತಿಗತಿ: ದೆಸೆ, ಅವಸ್ಥೆ; ಅತಿಶಯೋಕ್ತಿ: ರೂಢಿಗಿಂತ ಹೆಚ್ಚಾಗಿ ಹೇಳುವುದು; ನುಡಿ: ಮಾತು; ಅರಮನೆ: ರಾಜರ ವಾಸಸ್ಥಾನ; ಕಾಹಿಂಗೆ: ಕಾವಲು; ಪತಿಕರಿಸು:ಅಂಗೀಕರಿಸು; ಜಗ: ಜಗತ್ತು; ಅರಿ: ತಿಳಿ; ಕ್ಷಿತಿ: ಭೂಮಿ; ಅಭಿಮಾನ:ಹೆಮ್ಮೆ, ಆತ್ಮಗೌರವ; ಗತ: ಹಿಂದೆ; ಭೂಪಾಲ: ರಾಜ; ಮುಹೂರ್ತ: ಸಮಯ

ಪದವಿಂಗಡಣೆ:
ಸತಿಯರ್+ಒಲುಮೆಯ +ವಿಟರುಗಳನ್+ಆ
ಸತಿಯರ +ಸ್ಥಿತಿಗತಿಗೆ +ತಾನ್+
ಎಂದತಿಶಯೋಕ್ತಿಯ +ನುಡಿವವರನ್+ಅರಮನೆಯ +ಕಾಹಿಂಗೆ
ಪತಿಕರಿಸಿದರೆ +ಜಗವ್+ಅರಿಯಲಾ
ಕ್ಷಿತಿಪರ್+ಅಭಿಮಾನವು +ಮುಹೂರ್ತಕೆ
ಗತವಹುದು+ ನೀನ್+ಅರಿದಿಹೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ಸತಿ, ಅತಿ, ಕ್ಷಿತಿ, ಪತಿ – ಪ್ರಾಸ ಪದಗಳು

ಪದ್ಯ ೯೦: ಕುಂತಿಗೇಕೆ ವೈಧವ್ಯವಿಲ್ಲ?

ಪತಿ ಮುನಿಯ ಶಾಪದಲಿರಲು ತ
ತ್ಪತಿಯ ಸಮ್ಮತದಿಂದ ದೇವ
ಪ್ರತತಿಯಿಂ ಸುತರಾಯ್ತು ಕುಂತಿಗದಿಲ್ಲ ವೈಧವ್ಯ
ಗತಿಗೆ ಬಾರದು ಪಾರ್ಥನತಿರಥ
ಸುತರೊಳಗ್ಗಳ ಭೀಷ್ಮ ಕುಂತೀ
ಸತಿಗೆ ಸಲುವುದು ನೋಂಪಿ ನೋನಲಿಯೆಂದು ಮುನಿ ನುಡಿದ (ಆದಿ ಪರ್ವ, ೨೧ ಸಂಧಿ ೯೦ ಪದ್ಯ)

ತಾತ್ಪರ್ಯ:
ನಾರದರು ಭೀಷ್ಮನ ಮಾತಿಗೆ ಉತ್ತರಕೊಡುತ್ತಾ, ಹಿಂದೆ ಪಾಂಡುವು ಮುನಿಯ ಶಾಪಕ್ಕೆ ತುತ್ತಾಗಿ ಅಸುಗೈದ. ಪಾಂಡುವಿನ ಸಮ್ಮತಿಯಿಂದ ಕುಂತಿಯು ದೇವತೆಗಳಿಂದ ಪುತ್ರರನ್ನು ಪಡೆದಳು, ಆದುದರಿಂದ ಕುಂತಿಗೆ ವೈದವ್ಯವಿಲ್ಲ. ಅರ್ಜುನನು ಅತಿರಥರಲ್ಲಿ ಶ್ರೇಷ್ಠ. ಆದುದರಿಂದ ಕುಂತಿಯು ವ್ರತವನ್ನಾಚರಿಸಬಹುದು ಎಂದು ನಾರದರು ಹೇಳಿದರು.

ಅರ್ಥ:
ಪತಿ: ಯಜಮಾನ, ಗಂಡ; ಮುನಿ: ಋಷಿ; ಶಾಪ: ನಿಷ್ಠುರದ ನುಡಿ; ಸಮ್ಮತ: ಒಪ್ಪಿಗೆ; ದೇವ: ಸುರರು; ಪ್ರತತಿ: ಗುಂಪು; ಸುತ: ಮಕ್ಕಳು; ವೈದವ್ಯ: ಹೆಂಡತಿಗೆ ಗಂಡನಿಲ್ಲದಿರುವ ಸ್ಥಿತಿ; ಗತಿ: ಇರುವ ಸ್ಥಿತಿ; ಅತಿರಥ: ಪರಾಕ್ರಮಿ; ಅಗ್ಗ:ಶ್ರೇಷ್ಠ; ಸತಿ: ಸ್ತ್ರೀ; ಸಲುವುದು: ಸೇರುವುದು; ನೋಂಪು: ವ್ರತ; ನೋನು: ವ್ರತಮಾಡು; ನುಡಿ: ಮಾತಾಡು;

ಪದವಿಂಗಡಣೆ:
ಪತಿ +ಮುನಿಯ +ಶಾಪದಲ್+ಇರಲು +ತತ್
ಪತಿಯ +ಸಮ್ಮತದಿಂದ +ದೇವ
ಪ್ರತತಿಯಿಂ +ಸುತರಾಯ್ತು +ಕುಂತಿಗದಿಲ್ಲ+ ವೈಧವ್ಯ
ಗತಿಗೆ+ ಬಾರದು+ ಪಾರ್ಥನ್+ಅತಿರಥ
ಸುತರೊಳ್+ಅಗ್ಗಳ+ ಭೀಷ್ಮ +ಕುಂತೀ
ಸತಿಗೆ +ಸಲುವುದು +ನೋಂಪಿ +ನೋನಲಿ+ಯೆಂದು +ಮುನಿ +ನುಡಿದ

ಅಚ್ಚರಿ:
(೧) ಪತಿ, ತತ್ಪತಿ, ಪ್ರತತಿ – ಪ್ರಾಸ ಪದಗಳು – ೧,೨,೩ ಸಾಲಿನ ಮೊದಲ ಪದ
(೨) ಸತಿಗೆ ಸಲುವುದು, ನೋಂಪಿ ನೋನಲಿಯೆಂದು – ಸ, ನ ಕಾರದ ಜೋಡಿ ಪದಗಳು

ಪದ್ಯ ೩೦: ಕೃಷ್ಣನು ಬಲರಾಮನಿಗೆ ದ್ರೌಪದಿಗೆ ಯಾರು ಗಂಡನಾಗುವರು ಎಂದು ಹೇಳಿದನು?

ಕ್ಷಿತಿಯೊಳವರಿಲ್ಲೆಂದು ದ್ರುಪದನ
ಸುತೆಗೆ ಪತಿ ಪರರೆಂದು ಯಂತ್ರ
ಚ್ಯುತಿಗೆ ನೀವುಂಟೆಂದು ತೋರಿತೆ ನಿಮ್ಮ ಚಿತ್ತದಲಿ
ಕ್ಷಿತಿಗೆ ಪಾಂಡವರಲ್ಲದಿಲ್ಲೀ
ಸತಿಗೆ ಪತಿ ಪೆರರಿಲ್ಲ ಕುಂತೀ
ಸುತರನೀಗಳೆ ತೋರುವೆನು ವಸುದೇವನಾಣೆಂದ (ಆದಿ ಪರ್ವ, ೧೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಭೂಮಿಯೊಳಗೆ ಪಾಂಡವರಿಲ್ಲೆಂದು ದ್ರೌಪದಿಗೆ ಬೇರೆಯವರು ಗಂಡನಾಗುತ್ತಾನೆಂದು ನಿಮ್ಮ ಮನಸ್ಸಿನಲ್ಲಿ ತಿಳಿದು ನೀವು ಯಂತ್ರವನ್ನು ಭೇದಿಸಲು ಸಿದ್ದರಾದಿರೆ? ಭೂಮಿಗೆ ಪಾಂಡವರು ಅಲ್ಲವೆಂದಲ್ಲ, ಇಲ್ಲಿ ದ್ರೌಪದಿಗೆ ಪಾಂಡವರು ಬಿಟ್ಟರೆ ಬೇರೆಯವರು ಆಕೆಯನ್ನು ವರಿಸಲಾರರು, ವಸುದೇವನ ಮೇಲೆ ಆಣೆ, ಪಾಂಡವರನ್ನು ನಾನು ಈಗಲೆ ತೊರಿಸುತ್ತೇನೆಂದು ಕೃಷ್ಣನು ಬಲರಾಮನಿಗೆ ಹೇಳಿದನು.

ಅರ್ಥ:
ಕ್ಷಿತಿ: ಭೂಮಿ; ಸುತೆ: ಮಗಳು; ಪತಿ: ಗಂಡ; ಪರರು: ಬೇರೆ; ಯಂತ್ರ: ಉಪಕರಣ; ಚ್ಯುತಿ: ಮುಕ್ಕಾಗು, ಮುರಿ; ತೋರು: ಹೊಳೆ, ಗೋಚರ; ಚಿತ್ತ: ಮನಸ್ಸು; ಸತಿ: ಪತ್ನಿ; ಪೆರರು: ಬೇರೆ; ಸುತ: ಮಕ್ಕಳು; ಆಣೆ: ಪ್ರಮಾಣ, ವಚನ;

ಪದವಿಂಗಡಣೆ:
ಕ್ಷಿತಿಯೊಳ್+ಅವರಿಲ್+ಎಂದು +ದ್ರುಪದನ
ಸುತೆಗೆ +ಪತಿ +ಪರರ್+ಎಂದು +ಯಂತ್ರ
ಚ್ಯುತಿಗೆ+ ನೀವುಂಟೆಂದು +ತೋರಿತೆ +ನಿಮ್ಮ +ಚಿತ್ತದಲಿ
ಕ್ಷಿತಿಗೆ+ ಪಾಂಡವರಲ್ಲದ್+ಇಲ್ಲೀ
ಸತಿಗೆ+ ಪತಿ+ ಪೆರರಿಲ್ಲ+ ಕುಂತೀ
ಸುತರನ್+ಈಗಳೆ+ ತೋರುವೆನು +ವಸುದೇವನ್+ಆಣೆ+ಎಂದ

ಅಚ್ಚರಿ:
(೧) ಸುತೆ, ಸುತ; ಸತಿ, ಪತಿ – ಪುಲ್ಲಿಂಗ ಸ್ತ್ರೀಲಿಂಗ ಪದಗಳು
(೨) ಕ್ಷಿತಿ – ೧, ೪ ಸಾಲಿನ ಮೊದಲ ಪದ; ಪತಿ – ೨, ೫ ಸಾಲಿನ ೨ ಪದ
(೩) ದ್ರುಪದನ ಸುತೆ, ಕುಂತೀ ಸುತರು – ದ್ರೌಪದಿ ಮತ್ತು ಪಾಂಡವರೆಂದು ಉದ್ದೇಶಿಸಲು ಬಳಸಿದ ಪದ
(೪) ಎಂದು ಇಂದ ಕೊನೆಗೊಳ್ಳುವ ಪದಗಳು – ಅವರಿಲ್ಲೆಂದು, ಪರರೆಂದು, ನೀವುಂಟೆಂದು
(೫) ಪರರೆಂದು, ಪೆರರಿಲ್ಲ – ೨, ೫ ಸಾಲಿನ ೩ ಪದಗಳು
(೬) ತೋರು -೩, ೬ ಸಾಲಿನಲ್ಲಿ ಬರುವ ಪದ