ಪದ್ಯ ೭೯: ಯುದ್ಧದಲ್ಲಿ ಯಾರು ಆಯಾಸಗೊಂಡರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ (ದ್ರೋಣ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ಕರ್ಣ, ಶಲ್ಯ, ಜಯದ್ರಥ, ಕೌರವರು ಭೀಮನ ಗದೆಯ ಹೊಡೆತದಿಂದ ಕೈ, ಮೈ ಮನಸ್ಸುಗಳಿಂದ ದಣಿದರು. ಅಷ್ಟರಲ್ಲಿ ಪಶ್ಚಿಮ ಸಮುದ್ರದೊಳಕ್ಕೆ ಜ್ವಲಿಸುವ ಬಡಬಾನಲ ಶಿಖರಕ್ಕೆ ಎರಗುವಂತೆ ಸೂರ್ಯಮಂಡಲವು ಆಕಾಶದಿಂದ ಕೆಳಗಿಳಿಯಿತು.

ಅರ್ಥ:
ತನುಜ: ಮಗ; ಗುರು: ಆಚಾರ್ಯ; ರವಿ: ಸೂರ್ಯ; ಸೂನು: ಮಗ; ಮಾದ್ರೇಶ್ವರ: ಶಲ್ಯ, ಮದ್ರ ದೇಶದ ದೊರೆ; ಆದಿ: ಮುಂತಾದ; ಅರಿ: ಕತ್ತರಿಸು; ಗದೆ: ಮುದ್ಗರ; ಆಘಾತ: ಹೊಡೆತ; ಕೈ: ಹಸ್ತ; ಮೈ: ತನು; ದಣಿ: ಆಯಾಸ; ಮನ: ಮನಸ್ಸು; ತೆರಳು: ಹಿಂದಿರುಗು; ಬಳಿಕ: ನಂತರ; ಅಪರ: ಪಶ್ಚಿಮದಿಕ್ಕು; ಜಲಧಿ: ಸಾಗರ; ಉರಿ: ಬೆಂಕಿ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ದೀಪ್ತ: ಪ್ರಕಾಶವುಳ್ಳ; ಶಿಖರ: ತುದಿ; ಎರಗು: ಬಾಗು; ಪತಂಗ: ಸೂರ್ಯ; ಮಂಡಲ:ವರ್ತುಲಾಕಾರ; ಇಳಿ: ಬಾಗು; ಅಂಬರ: ಆಗಸ;

ಪದವಿಂಗಡಣೆ:
ಗುರು+ತನುಜ +ರವಿ+ಸೂನು +ಮಾದ್ರೇ
ಶ್ವರ +ಜಯದ್ರಥ +ಕೌರವ್+ಆದಿಗಳ್
ಅರಿ +ಗದ+ಆಘಾತದಲಿ +ಕೈ +ಮೈ +ದಣಿದು +ಮನದಣಿದು
ತೆರಳಿದರು +ಬಳಿಕ್+ಅಪರ+ಜಲಧಿಯೊಳ್
ಉರಿವ +ವಡಬನ+ ದೀಪ್ತ+ಶಿಖರದೊಳ್
ಎರಗುವಂತೆ +ಪತಂಗ +ಮಂಡಲವ್+ಇಳಿದುದ್+ಅಂಬರವ

ಅಚ್ಚರಿ:
(೧) ಸೂರ್ಯ ಮುಳುಗಿದ ಎಂದು ಹೇಳುವ ಪರಿ – ಅಪರಜಲಧಿಯೊಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ

ಪದ್ಯ ೩೯: ಕೀಲಗಿರಿಯ ಸುತ್ತವಿರುವ ಗಿರಿಗಳಾವುವು?

ವರ ಸಿತಾಂತರ ಬಿಂದು ಮಂದರ
ಕುರು ರುಚಕಗಳಿವು ಇಂದ್ರದಿಕ್ಕಿನ
ಲುರು ಕಳಿಂಗ ಪತಂಗ ನಿಷಧ ನಿಷಾದ ತಾಮಿಂತು
ತಿರುಗಿ ದಕ್ಷಿಣದಲ್ಲಿ ಮಧುಮಾ
ನ್ಯರಸ ಕುಮುದ ಸುಪಾರ್ಶ್ವವಾ ಪಿಂ
ಜರಗಳಿವು ವಾರುಣ ದಿಶಾಭಾಗದಲಿ ರಂಜಿಪುವು (ಅರಣ್ಯ ಪರ್ವ, ೮ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಸಿತಾಂತರ, ಬಿಂದು, ಮಂದರ, ಕುರುರುಚಕಗಳು ಪೂರ್ವದಲ್ಲೂ ಕಳಿಂಗ, ಪತಂಗ, ನಿಷಧ, ನಿಷಾದಗಳು ದಕ್ಷಿಣದಲ್ಲೂ ಮಧುಮಾನ್ಯ, ಕುಮುದ, ಸುಪಾರ್ಶ್ವ, ಪಿಂಜರಗಳು ಪಶ್ಚಿಮದಲ್ಲೂ ಇರುವ ಗಿರಿಗಳು.

ಅರ್ಥ:
ವರ: ಶ್ರೇಷ್ಠ; ಇಂದ್ರದಿಕ್ಕು: ಪೂರ್ವ; ಇಂದ್ರ: ಸುರಪತಿ; ದಿಕ್ಕು: ದಿಶೆ; ಉರು: ಶ್ರೇಷ್ಠವಾದ; ವಾರುಣದಿಶ: ಪಶ್ಚಿಮದಿಕ್ಕು; ರಂಜಿಸು: ಶೋಭಿಸು;

ಪದವಿಂಗಡಣೆ:
ವರ +ಸಿತಾಂತರ +ಬಿಂದು +ಮಂದರ
ಕುರು +ರುಚಕಗಳಿವು+ ಇಂದ್ರದಿಕ್ಕಿನಲ್
ಉರು +ಕಳಿಂಗ +ಪತಂಗ +ನಿಷಧ +ನಿಷಾದ +ತಾಮಿಂತು
ತಿರುಗಿ +ದಕ್ಷಿಣದಲ್ಲಿ+ ಮಧು+ಮಾ
ನ್ಯರಸ+ ಕುಮುದ +ಸುಪಾರ್ಶ್ವವಾ +ಪಿಂ
ಜರಗಳಿವು +ವಾರುಣ+ ದಿಶಾಭಾಗದಲಿ+ ರಂಜಿಪುವು

ಅಚ್ಚರಿ:
(೧) ಗಿರಿಗಳ ಹೆಸರು: ಸಿತಾಂತರ, ಬಿಂದು, ಮಂದರ, ಕುರುರುಚಕ, ಕಳಿಂಗ, ಪತಂಗ, ನಿಷಧ, ನಿಷಾದ,ಮಧುಮಾನ್ಯ, ಕುಮುದ, ಸುಪಾರ್ಶ್ವ, ಪಿಂಜರ

ಪದ್ಯ ೩೯: ಅರ್ಜುನನ ಎದುರು ಗೆಲ್ಲಲು ಸಾಧ್ಯವೇ?

ಉರಿಯ ಸರಿಗೇರಿದ ಪತಂಗಕೆ
ಮರಳುದಲೆಯೇ ಮತ್ತೆ ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ
ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು ಕೇ
ಳರಸ ಹರಿಬಕೆ ಹೊಕ್ಕ ಸುಭಟರ ಕಾಣೆ ನಾನೆಂದ (ಕರ್ಣ ಪರ್ವ, ೨೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಲೇ ಧೃತರಾಷ್ಟ್ರ ರಾಜನೇ, ಹಬ್ಬಿದ ಬೆಂಕಿಯ ಉರಿಯ ಎತ್ತರಕ್ಕೂ ಹಾರಿ ಒಳಗೆ ಹೊಕ್ಕ ಪಕ್ಷಿಯು ಹೊರಬರಲು ಸಾಧ್ಯವೇ? ಅರ್ಜುನನನ್ನು ವಿರೋಧಿಸಿ ನಿಂತ ವೀರನ ಹೆಂಡತಿಯು ಮುತ್ತೈದೆಯಾಗಿ ಉಳಿಯಲು ಸಾಧ್ಯವೇ? ಹೊಸದಾಗಿ ಅರಳಿದ ಸಂಪಿಗೆಯ ಮಕರಂದವನ್ನು ದುಂಬಿಗಳು ತಮ್ಮ ಮರಿಗಳಿಗೆ ತಂದುಕೊಟ್ಟಾವೇ? ಆ ಯುದ್ಧಕ್ಕೆ ಹೋದ ವೃಷಸೇನನ ಮನ್ನಣೆಯ ಸೈನಿಕರು ನನಗೆ ಕಾಣಲಾಗದು ಎಂದು ಸಂಜಯನು ಹೇಳಿದನು.

ಅರ್ಥ:
ಉರಿ: ಬೆಂಕಿ, ಜ್ವಾಲೆ; ಏರು: ಮೇಲೇಳು; ಪತಂಗ: ಹಕ್ಕಿ, ಪಕ್ಷಿ; ಮರಳು: ಹಿಂದಿರುಗು; ರಣ: ಯುದ್ಧ; ನರ: ಅರ್ಜುನ; ಕಳ: ರಣರಂಗ; ಸತಿ: ಹೆಂಡತಿ ಸುವಾಸಿನಿ: ಮುತ್ತೈದೆ; ಅರಳ: ವಿಕಸಿಸಿದ; ಹೊಸ: ನವೀನ; ಸಂಪದೆ: ಸಂಪಿಗೆ; ಮಧು:ಜೇನು; ಮರಿ: ಚಿಕ್ಕ; ತಹ: ಒಪ್ಪಂದ, ತಂದುಕೊಡು; ತುಂಬಿ: ದುಂಬಿ, ಜೇನು; ಕೇಳು: ಆಲಿಸು; ಅರಸ: ರಾಜ; ಹರಿಬ: ಕಾಳಗ, ಯುದ್ಧ; ಹೊಕ್ಕು: ಸೇರು; ಸುಭಟ: ಪರಾಕ್ರಮಿ; ಕಾಣೆ: ನೋಡಲಾಗದು;

ಪದವಿಂಗಡಣೆ:
ಉರಿಯ +ಸರಿಗೇರಿದ+ ಪತಂಗಕೆ
ಮರಳುದಲೆಯೇ +ಮತ್ತೆ +ರಣದಲಿ
ನರನೊಡನೆ +ಕಳನೇರಿದಾತನ+ ಸತಿ+ ಸುವಾಸಿನಿಯೆ
ಅರಳ+ ಹೊಸ +ಸಂಪದೆಯ +ಮಧುವನು
ಮರಿಗೆ+ ತಹವೇ+ ತುಂಬಿಗಳು +ಕೇಳ್
ಅರಸ +ಹರಿಬಕೆ+ ಹೊಕ್ಕ +ಸುಭಟರ+ ಕಾಣೆ +ನಾನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಸರಿಗೇರಿದ ಪತಂಗಕೆ ಮರಳುದಲೆಯೇ; ರಣದಲಿ
ನರನೊಡನೆ ಕಳನೇರಿದಾತನ ಸತಿ ಸುವಾಸಿನಿಯೆ; ಅರಳ ಹೊಸ ಸಂಪದೆಯ ಮಧುವನು
ಮರಿಗೆ ತಹವೇ ತುಂಬಿಗಳು