ಪದ್ಯ ೫: ಭೀಷ್ಮಾದಿಗಳ ಪರಿಸ್ಥಿತಿ ಹೇಗಿತ್ತು?

ಬೆಗಡಿನಲಿ ಮುದ ಖೇದ ನಯನಾಂ
ಬುಗಳೊಳಾನಂದಾಶ್ರು ಶೋಕದ
ಬಗೆಯೊಳುಬ್ಬಿದ ನಗೆಯಲಾ ಸ್ವೇದದಲಿ ರೋಮಾಂಚ
ದುಗುಡದಲಿ ಪರಿತೋಷ ಕಂದಿದ
ಮೊಗದಲುಜ್ವಲ ವೃತ್ತಿ ಭೀಷ್ಮಾ
ದಿಗಳೊಳಗೆ ಪಲ್ಲಟಿಸುತಿರ್ದುದು ಪಡಿಮುಹೂರ್ತದಲಿ (ಸಭಾ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯ ಸೀರೆಯನ್ನು ಸೆಳೆಯಲು ಮುಂದಾಗಿ ಅದರಲ್ಲಿ ಆಶ್ಚರ್ಯಕರವಾಗಿ ಆಕೆಯ ಮಾನವುಳಿದ ರೀತಿಯು ಭೀಷ್ಮಾದಿಗಳಲ್ಲಿ ಹಲವಾರು ಭಾವನೆಗಳು ಸೇರಿಕೊಂಡವು. ದ್ರೌಪದಿಯ ಸೀರೆಗೆ ಕೈಹಾಕಿದಾಗ ಆಶ್ಚರ್ಯ ಮತ್ತು ದುಃಖದ ಭಾವನೆ, ಹಾಗೆಯೇ ಆಶ್ಚರ್ಯಕರ ರೀತಿಯಲ್ಲಿ ಅವಳ ಮಾನವುಳಿದುದು ಸಂತಸದ ನಗೆ, ಕಣ್ಣೀರೊಡನೆ ಆನಂದಾಶ್ರುಗಳು ಒಮ್ಮೆಗೆ ಹೊರಬಂದವು. ದುಃಖಿತ ಮನಸ್ಥಿತಿಯಲ್ಲಿದ್ದವರಿಂದ ಉಕ್ಕಿಬಂದ ಸಂತಸದ ನಗೆ, ಉದ್ವೇಗದ ಬೆವರೊಂದು ಕಡೆ, ಅದರಲ್ಲೇ ಇನ್ನೊಂದೆಡೆ ರೋಮಾಂಚನ, ದುಃಖದಲ್ಲಿ ಅತಿಶಯ ಸಂತೋಷ, ಬಾಡಿಹೋಗಿದ್ದ ಮುಖದಲ್ಲಿ ಬೆಳಗಿದ ಬೆಳಕು, ಇವು ಭೀಷ್ಮಾದಿಗಳಲ್ಲಿ ಮೂಡಿಬಂದ ಭಾವನೆಗಳು.

ಅರ್ಥ:
ಬೆಗಡು: ಆಶ್ಚರ್ಯ, ಬೆರಗು; ಮುದ: ಸಂತೋಷ; ಖೇದ: ದುಃಖ, ಉಮ್ಮಳ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಆನಂದ: ಸಂತೋಷ; ಆಶ್ರು: ಕಣ್ಣೀರು; ಶೋಕ: ದುಃಖ; ಬಗೆ: ಆಲೋಚನೆ; ಉಬ್ಬು: ಹಿಗ್ಗು; ನಗೆ: ಸಂತಸ; ಸ್ವೇದ: ಬೆವರು; ರೋಮಾಂಚ: ಮೈಗೂದಲು ನಿಮಿರುವಿಕೆ, ಪುಳಕ; ದುಗುಡ: ದುಃಖ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಕಂದು: ಕಳಾಹೀನ; ಮೊಗ: ಮುಖ; ಉಜ್ವಲ: ಪ್ರಕಾಶ; ಉಜ್ವಲವೃತ್ತಿ: ಜ್ವಾಜಲ್ಯಮಾನ ಪ್ರಕಾಶ; ಆದಿ: ಮುಂತಾದ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಡಿ: ಸಮಾನವಾದುದು, ಎಣೆ; ಮುಹೂರ್ತ: ಒಳ್ಳೆಯ ಸಮಯ;

ಪದವಿಂಗಡಣೆ:
ಬೆಗಡಿನಲಿ +ಮುದ +ಖೇದ +ನಯನಾಂ
ಬುಗಳೊಳ್+ಆನಂದ+ಆಶ್ರು+ ಶೋಕದ
ಬಗೆಯೊಳ್+ಉಬ್ಬಿದ +ನಗೆಯಲಾ +ಸ್ವೇದದಲಿ +ರೋಮಾಂಚ
ದುಗುಡದಲಿ +ಪರಿತೋಷ +ಕಂದಿದ
ಮೊಗದಲ್+ಉಜ್ವಲ +ವೃತ್ತಿ +ಭೀಷ್ಮಾ
ದಿಗಳೊಳಗೆ+ ಪಲ್ಲಟಿಸುತಿರ್ದುದು +ಪಡಿ+ಮುಹೂರ್ತದಲಿ

ಅಚ್ಚರಿ:
(೧) ಮುದ ಖೇದ; ಆನಂದ, ಶೋಕ; ದುಗುಡ, ಪರಿತೋಷ – ವೈರುಧ್ಯ ಭಾವನೆಗಳನ್ನು ವಿವರಿಸುವ ಪರಿ