ಪದ್ಯ ೫೨: ಆನೆಗಳು ಧರ್ಮಜನ ಮೇಲೆ ಹೇಗೆ ಆಕ್ರಮಣ ಮಾಡಿದವು?

ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಭರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬು ಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ (ಗದಾ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕುರುಸೇನೆಯಲ್ಲಿ ಸಾವಿರ ಆನೆಗಳ ನೆತ್ತಿಯನ್ನು ತಿವಿದು ಧರ್ಮಜನ ಮೇಲೆ ಬಿಟ್ಟರು. ಪರಿಘ, ಲೌಡಿ ಮೊದಲಾದ ಆಯುಧಗಳನ್ನು ಆನೆಗಳ ಸೊಂಡಿಲಿಗೆ ಜೋಡಿಸಿ ಬಿಡಲು ಅವು ಮಹಾರಭಸದಿಂದ ಧರ್ಮಜನ ಸಮ್ಮುಖಕ್ಕೆ ಹೋದವು.

ಅರ್ಥ:
ಜೋಡಿಸು: ಕೂಡಿಸು; ಸಾವಿರ: ಸಹಸ್ರ; ಗಜ: ಆನೆ; ಈಡು: ಹೊಡೆಯ ಬೇಕಾದ ವಸ್ತು, ಗುರಿ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ನೆತ್ತಿ: ಶಿರ; ತೋಡು: ಅಗೆ, ಹಳ್ಳ ಮಾಡು; ನೃಪ: ರಾಜ; ಮತ: ವಿಚಾರ; ದೊರೆ: ರಾಜ; ಸಮ್ಮುಖ: ಎದುರು; ಭರಿಕೈ: ಆನೆಯ ಸೊಂಡಿಲು; ಪರಿಘ: ಅಗುಳು, ಲಾಳವಿಂಡಿಗೆ, ಗದೆ; ಲೌಡಿ: ತೊತ್ತು, ದಾಸಿ; ಪಟ್ಟೆಯ: ಎರಡು ಮೊನೆಯ ಕತ್ತಿ; ಉಬ್ಬು: ಹಿಗ್ಗು; ತೂಳು: ಆವೇಶ, ಉನ್ಮಾದ; ಯಮಸುತ: ಧರ್ಮಜ; ಸುತ: ಮಗ; ಪಡಿಮುಖ: ಎದುರು, ಮುಂಭಾಗ;

ಪದವಿಂಗಡಣೆ:
ಜೋಡಿಸಿದ+ ಸಾವಿರ+ ಗಜಂಗಳನ್
ಈಡಿರಿದರ್+ಅಂಕುಶದಿ+ ನೆತ್ತಿಯ
ತೋಡಿಬಿಟ್ಟರು +ನೃಪನ +ಮತದಲಿ +ದೊರೆಯ +ಸಮ್ಮುಖಕೆ
ಜೋಡಿಸಿದ +ಭರಿಕಯ್ಯ +ಪರಿಘದ
ಲೌಡಿಗಳ +ಪಟ್ಟೆಯದಲ್+ಉಬ್ಬುಳಿ
ಗೂಡಿ +ತೂಳಿದವ್+ಆನೆಗಳು +ಯಮಸುತನ+ ಪಡಿಮುಖಕೆ

ಅಚ್ಚರಿ:
(೧) ಸಮ್ಮುಖ, ಪಡಿಮುಖ – ೩, ೬ ಸಾಲಿನ ಕೊನೆಯ ಪದ
(೨) ಜೋಡಿಸಿದ – ೧, ೪ ಸಾಲಿನ ಮೊದಲ ಪದ