ಪದ್ಯ ೩೨: ಕೃಷ್ಣನು ಬಲರಾಮನನ್ನು ತಡೆದು ಏನು ಕೇಳಿದನು?

ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸಿದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅತಿವೇಗದಿಂದ ಹೋಗಿ ಬಲರಾಮನ ಸೆರಗನ್ನು ಹಿಡಿದು ನಿಲ್ಲಿಸಿದನು. ಅಣ್ಣಾ, ನಿಮ್ಮ ಕೌರವನು ಪಾಂಡವರನ್ನು ಕರೆಸಿ ಧರ್ಮವನ್ನು ಮೀರದೆ ಮೋಸದ ಜೂಜಿನಲ್ಲಿ ಯುಧಿಷ್ಠಿರನನ್ನು ಸೋಲಿಸಿ, ದ್ರೌಪದಿಯ ಸೀರೆಯನ್ನು ಸುಲಿಸಿದನೋ? ಇದು ಧರ್ಮವೆಂದು ಯಾವ ಋಷಿವಾಕ್ಯ ಹೇಳುತ್ತದೆ ಎಂದು ಪ್ರಶ್ನಿಸಿದನು.

ಅರ್ಥ:
ಹರಿ: ಓಡು, ಧಾವಿಸು; ಹಿಡಿ: ಗ್ರಹಿಸು; ನೀಲಾಂಬರ: ನೀಲಿ ಬಟ್ಟೆಯನ್ನು ಧರಿಸಿದವ (ಬಲರಾಮ); ಸೆರಗು: ಉತ್ತರೀಯ, ಬಟ್ಟೆಯ ತುದಿ; ಚರಿಸು: ನಡೆ; ಧರ್ಮ: ಧಾರಣೆ ಮಾಡಿದುದು; ವಿಸ್ತರ: ಹಬ್ಬುಗೆ, ವಿಸ್ತಾರ; ವಿಭಾಡಿಸು: ನಾಶಮಾಡು; ಕರಸು: ಬರೆಮಾಡು; ಕಪಟ: ಮೋಸ; ದ್ಯೂತ: ಪಗಡೆಯಾಟ, ಜೂಜು; ನೃಪ: ರಾಜ; ಸೋಲಿಸು: ಪರಾಭವಗೊಳಿಸು; ಪಟ್ಟದರಸಿ: ಪಟ್ಟದ ರಾಣಿ; ಸುಲಿಸು: ಬಿಚ್ಚಿಸು, ತೆಗೆಸು; ಋಷಿಮತ: ಒಳ್ಳೆಯ ವಿಚಾರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಹರಿದು+ ಹಿಡಿದನು +ಮತ್ತೆ+ ನೀಲಾಂ
ಬರನ +ಸೆರಗನು +ನಿಮ್ಮ +ಕುರುಪತಿ
ಚರಿಸಿದನಲಾ +ಧರ್ಮ+ವಿಸ್ತರವನು +ವಿಭಾಡಿಸಿದೆ
ಕರಸಿ +ಕಪಟ+ದ್ಯೂತದಲಿ +ನೃಪ
ವರನ +ಸೋಲಿಸಿ +ಪಟ್ಟದರಸಿಯ
ಕರಸಿ+ ಸುಲಿಸುವುದಾವ +ಋಷಿಮತವ್ + ಎಂದನ್+ಅಸುರಾರಿ

ಅಚ್ಚರಿ:
(೧) ಬೇಗ ಎಂದು ಹೇಳುವ ಪರಿ – ಹರಿದು ಹಿಡಿದನು
(೨) ಬಲರಾಮನನ್ನು ನೀಲಾಂಬರ ಎಂದು ಕರೆದಿರುವುದು
(೩) ಕರಸಿ – ೪, ೬ ಸಾಲಿನ ಮೊದಲ ಪದ

ಪದ್ಯ ೨೫: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೨?

ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಎಳೊ ಕೌರವ, ಹಿಂದೆ ಯುಧಿಷ್ಠಿರನ ಪಟ್ಟದ ರಾಣಿಯಾದ ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ಸುಲಿಸಿದ ಛಲವು ಎಲ್ಲಿಗೆ ಹೋಯಿತು? ವೈರಿಗಳನ್ನು ಕಾಡಿಗಟ್ಟಿದೆನಂಬ ಸಂತೋಷ ಎಲ್ಲಿಗೆ ಹೋಯಿತು? ಎಲವೋ ದುಷ್ಟಶಿರೋಮಣಿ, ಗಂಧರ್ವನು ನಿನ್ನ ಕೂದಲುಗಳಿಂದ ನಿನ್ನ ಕೈಗಳನ್ನು ಕಟ್ಟಿ ಎಳೆದುಕೊಂಡು ಹೋದಾಗ ಬಿಡಿಸಿದವರು ಯಾರು?

ಅರ್ಥ:
ರಾಯ: ರಾಜ; ಪಟ್ಟದರಸಿ: ಮಹಾರಾಣಿ; ಪಟ್ಟ: ಸ್ಥಾನ; ಸುಲಿಸು: ಕಿತ್ತುಕೊಳ್ಳು; ಛಲ: ದೃಢ ನಿಶ್ಚಯ; ಹಗೆ: ವೈರ; ಹಳುವು: ಕಾಡು; ಹೊಗಿಸು: ಸೇರಿಸು; ಸುಮ್ಮಾನ: ಸಂತೋಷ; ಖಳ: ದುಷ್ತ; ಶಿರೋಮಣಿ: ಅಗ್ರಗಣ್ಯ, ಶ್ರೇಷ್ಠ; ಕೂದಲು: ರೋಮ; ಕೈ: ಹಸ್ತ; ಕಟ್ಟು: ಬಂಧಿಸು; ಖೇಚರ: ಗಗನದಲ್ಲಿ ಸಂಚರಿಸುವವ, ಗಂಧರ್ವ, ದೇವತೆ; ಎಳೆ: ನೂಲಿನ ಎಳೆ, ಸೂತ್ರ; ಬಿಡಿಸು: ಸಡಲಿಸು;

ಪದವಿಂಗಡಣೆ:
ಎಲವೊ +ರಾಯನ +ಪಟ್ಟದರಸಿಯ
ಸುಲಿಸಿದ+ಆ +ಛಲವೆಲ್ಲಿ +ಹಗೆಗಳ
ಹಳುವದಲಿ +ಹೊಗಿಸಿದೆನ್+ಎನಿಪ+ ಸುಮ್ಮಾನ +ತಾನೆಲ್ಲಿ
ಖಳ +ಶಿರೋಮಣಿ +ನಿನ್ನ +ತಲೆಗೂ
ದಲಲಿ +ಕೈಗಳ+ ಕಟ್ಟಿ +ಖೇಚರನ್
ಎಳೆಯೆ +ಬಿಡಿಸಿದರ್+ಆರು +ಕೌರವ +ಎಂದನಾ +ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಹ ಕಾರದ ತ್ರಿವಳಿ ಪದ – ಹಗೆಗಳ ಹಳುವದಲಿ ಹೊಗಿಸಿದೆನೆನಿಪ