ಪದ್ಯ ೧೧: ಸಂಜಯನು ಯಾರ ನಡಿಗೆಯನ್ನು ನೋಡಿದನು – ೪?

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ (ಗದಾ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಟ್ಟಿರಕ್ತದಿಂದ ತೋಯಿದ್ದ ಪಾತ್ರೆಯಂತಿದ್ದ ತಲೆಗಳನ್ನು ತಿಂದು ಎಸೆಯುವ ಕೊಬ್ಬನ್ನು ತಿಂದು ಕಾರುವ, ಸತ್ತ ಆನೆಗಳನ್ನು ತಿಂದು ತೆಳ್ಳಗೆ ಮಾಡುವ, ಹೆಣಗಳ ಗಾಯದಲ್ಲಿ ಬಾಯಿಟ್ಟು ಹೀರುವ ಪೂತನಿಗಳನ್ನು ಕಂಡು ಅವನು ಪಕ್ಕಕ್ಕೆ ಸರಿದು ಹೋಗುತ್ತಿದ್ದನು.

ಅರ್ಥ:
ಪಖ್ಖಲೆ: ನೀರಿನ ಚೀಲ, ಕೊಪ್ಪರಿಗೆ; ತೀವು: ತುಂಬು, ಭರ್ತಿಮಾಡು; ಮಂದ: ನಿಧಾನ ಗತಿಯುಳ್ಳದು; ರಕುತ: ನೆತ್ತರು; ತೋದ: ನೆನೆ, ಒದ್ದೆಯಾಗು; ತಲೆ: ಶಿರ; ತಿಂದು: ತಿನ್ನು; ಬಿಸುಡು: ಹೊರಹಾಕು; ನೆಣ: ಕೊಬ್ಬು, ಮೇದಸ್ಸು; ಪೂತನಿ: ರಾಕ್ಷಸಿ; ವೃಂದ: ಗುಂಪು; ಕಂಡು: ನೋಡು; ಓಸರಿಸು: ಓರೆಮಾಡು, ಹಿಂಜರಿ; ದೆಸೆ: ದಿಕ್ಕು; ಬಸೆ: ಕೊಬ್ಬು, ನೆಣ; ಬಾಡಿಸು: ಕಳೆಗುಂದಿಸು; ಸಂದಣಿ: ಗುಂಪು;

ಪದವಿಂಗಡಣೆ:
ಕಂದ +ಪಖ್ಖಲೆಗಳಲಿ +ತೀವಿದ
ಮಂದ +ರಕುತದ+ ತೋದ +ತಲೆಗಳ
ತಿಂದು +ಬಿಸುಡುವ +ನೆಣನ +ಕಾರುವ +ಬಸೆಯ +ಬಾಡಿಸುವ
ಸಂದಣಿಸಿ +ಹರಿದೇರ+ ಬಾಯ್ಗಳೊಳ್
ಒಂದಿ +ಬಾಯ್ಗಳನಿಡುವ +ಪೂತನಿ
ವೃಂದವನು +ಕಂಡ್+ಓಸರಿಸುವನ್+ಅದೊಂದು +ದೆಸೆಗಾಗಿ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತೋದ ತಲೆಗಳ ತಿಂದು
(೨) ಸಂದಣಿಸು, ವೃಂದ – ಸಮಾನಾರ್ಥಕ ಪದ