ಪದ್ಯ ೫: ಸರ್ಪಾಸ್ತ್ರವು ಯಾವ ಶಬ್ದಮಾಡುತ್ತಾ ಹೊರಹೊಮ್ಮಿತು?

ಬೆರಳಲಂಬನು ತೂಗಲುರಿ ಫೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ (ಕರ್ಣ ಪರ್ವ, ೨೫ ಸಂಧಿ, ೫ ಪದ್ಯ)

ತಾತ್ಪರ್ಯ:
ಕರ್ಣನ ಬೆರಳಿನಲ್ಲಿ ಸರ್ಪಾಸ್ತ್ರವನ್ನು ಹಿಡಿದು ತೂಗಲು ಸರ್ಪವು ಫೂತ್ಕರಿಸಿತು. ಅದರ ಉಸಿರಿನಿಂದ ಬಿಳಿಯ ನೊರೆಯ ವಿಷದ ದ್ರವವು ಸುತ್ತುತ್ತಾ ಎಲ್ಲೆಡೆ ಹಬ್ಬಿತು. ವಿಷರಸದ ಹನಿಗಳು ಸುತ್ತಲೂ ವ್ಯಾಪಿಸಿತು. ಕಿಡಿಗಳ ತಂಡವು ಛಟಛಟವೆಂದು ಸದ್ದು ಮಾಡುತ್ತಿತ್ತು.

ಅರ್ಥ:
ಬೆರಳು: ಅಂಗುಲಿ; ಅಂಬು: ಬಾಣ; ತೂಗು: ಅಲ್ಲಾಡು; ಉರಿ: ಬೆಂಕಿಯ ಕಿಡಿ; ಫೂತ್ಕರಣೆ: ಹೊರಹಾಕು; ಪಂಠಿಸು: ಸುತ್ತುವರಿ; ಸುಯ್ಲು: ನಿಟ್ಟುಸಿರು; ಧರಧುರ: ಆರ್ಭಟ, ಕೋಲಾ ಹಲ; ಬೆಳು: ಬಿಳಿಯ; ನೊರೆ: ಬುರುಗು, ಫೇನ; ಲಹರಿ: ರಭಸ, ಆವೇಗ; ವಿಷ: ನಂಜು, ಗರಳ; ಲೋಳೆ:ಅ೦ಟುಅ೦ಟಾಗಿರುವ ದ್ರವ್ಯ; ಉರವಣಿಸು: ಆತುರಿಸು; ಗರಳ: ವಿಷ; ರಸ: ಸಾರ, ದ್ರವ; ಅಬ್ಬರ:ಆರ್ಭಟ; ಬೊಬ್ಬುಳಿಕೆ: ಗುಳ್ಳೆ, ಬುದ್ಬುದ; ಮುಸುಕು: ಹೊದಿಕೆ; ಹೊರಳು: ಚಲಿಸು; ಕಿಡಿ: ಬೆಂಕಿ; ಛಟ: ಬೆಂಕಿಯ ಕಿಡಿಗಳ ಶಬ್ದ; ಮಸಗು: ಹರಡು; ಅಡಿಗಡಿ: ಹೆಜ್ಜೆ ಹೆಜ್ಜೆ;

ಪದವಿಂಗಡಣೆ:
ಬೆರಳಲ್+ಅಂಬನು +ತೂಗಲ್+ಉರಿ +ಫೂ
ತ್ಕರಣೆಯಲಿ +ಪಂಠಿಸಿತು+ ಸುಯ್ಲಿನ
ಧರಧುರದ+ ಬೆಳುನೊರೆಯ +ಲಹರಿಯ +ವಿಷದ +ಲೋಳೆಗಳ
ಉರವಣಿಸಿದವು+ ಗರಳ+ ರಸದ್
ಅಬ್ಬರದ +ಬೊಬ್ಬುಳಿಕೆಗಳು +ಮುಸುಕಿತು
ಹೊರಳಿ+ಕಿಡಿಗಳ +ಛಟಛಟಧ್ವನಿ+ ಮಸಗಿತ್+ಅಡಿಗಡಿಗೆ

ಅಚ್ಚರಿ:
(೧) ಧರಧುರ, ಛಟಛಟ – ಪದಬಳಕೆ
(೨) ವಿಷವು ಹೊರಹೊಮ್ಮುವ ಪರಿ – ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
(೩) ಸಮನಾರ್ಥಕ ಪದಗಳು – ವಿಷ, ಗರಳ; ಉರಿ, ಕಿಡಿ –