ಪದ್ಯ ೪೦: ಹಣ್ಣನ್ನು ಎಷ್ಟು ಭಾಗಗಳನ್ನಾಗಿ ಮಾಡಿದನು?

ವರ ಮುನೀಶ್ವರನಿತ್ತಫಲವನು
ಹರಿಣಲೋಚನೆಗೀಯಲಾ ಪಂ
ಕರುಹಮುಖಿ ಬಾಗಿನವನಿತ್ತಳು ಮುನಿಪಗೊಲವಿನಲಿ
ಪರಮ ಹರುಷದಿ ಹತ್ತು ಭಾಗಾಂ
ತರವ ಮಾಡಿ ಮುರಾರಿ ಕರೆಕರೆ
ಧರಣಿಸುರರನು ಸರ್ವರನು ಬರಹೇಳು ನೀನೆಂದ (ಅರಣ್ಯ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ವಮುನಿಗಳು ಕೃಷ್ಣನಿಗೆ ನೀಡಿದ ಫಲವನ್ನು ಕೃಷ್ಣನು ದ್ರೌಪದಿಗೆ ಎಲ್ಲರಿಗೂ ನೀಡಲು ಹೇಳಲು, ದ್ರೌಪದಿಯು ಆ ಹಣ್ಣನ್ನು ಬಾಗಿನವಾಗಿ ಕಣ್ವಮಹರ್ಷಿಗಳಿಗೆ ನೀಡಿದಳು. ನಂತರ ಶ್ರೀಕೃಷ್ಣನು ಆ ಹಣ್ಣನ್ನು ಹತ್ತು ಭಾಗಗಳಾಗಿ ವಿಂಗಡಿಸಿ ಬ್ರಾಹ್ಮಣರೆಲ್ಲರನ್ನೂ ಬೇಗ ಕರೆ ಎಂದು ಹೇಳಿದನು.

ಅರ್ಥ:
ವರ: ಶ್ರೇಷ್ಠ; ಮುನಿ: ಋಷಿ; ಇತ್ತ: ನೀಡಿದ; ಫಲ: ಹಣ್ಣು; ಹರಿಣ: ಜಿಂಕೆ; ಲೋಚನ: ಕಣ್ಣು; ಹರಿಣಲೋಚನೆ: ಜಿಂಕೆಯಂತಹ ಕಣ್ಣುಳ್ಳವಳು, ಸುಂದರಿ; ಪಂಕ: ಕೆಸರು; ಪಂಕರುಹ: ಕಮಲ; ಪಂಕರುಹಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ಬಾಗಿನ: ಮುತ್ತೈದೆಗೆ ಕೊಡುವ ಕಾಣಿಕೆ; ಒಲವು: ಪ್ರೀತಿ; ಪರಮ: ಶ್ರೇಷ್ಠ; ಹರುಷ: ಸಂತಸ; ಹತ್ತು: ದಶ; ಭಾಗ: ಚೂರು; ಅಂತರ: ಭೇದ; ಮುರಾರಿ: ಕೃಷ್ಣ; ಕರೆ: ಬರೆಮಾಡು; ಧರಣಿಸುರ: ಬ್ರಾಹ್ಮಣ; ಸರ್ವ: ಎಲ್ಲರು; ಬರಹೇಳು: ಆಗಮಿಸು, ಕರೆ;

ಪದವಿಂಗಡಣೆ:
ವರ +ಮುನೀಶ್ವರನ್+ಇತ್ತ+ಫಲವನು
ಹರಿಣಲೋಚನೆಗ್+ಈಯಲ್+ಆ+ ಪಂ
ಕರುಹಮುಖಿ +ಬಾಗಿನವನ್+ಇತ್ತಳು +ಮುನಿಪಗ್+ಒಲವಿನಲಿ
ಪರಮ +ಹರುಷದಿ+ ಹತ್ತು +ಭಾಗಾಂ
ತರವ+ ಮಾಡಿ +ಮುರಾರಿ +ಕರೆಕರೆ
ಧರಣಿಸುರರನು+ ಸರ್ವರನು +ಬರಹೇಳು +ನೀನೆಂದ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಹರಿಣಲೋಚನೆ, ಪಂಕರುಹಮುಖಿ

ಪದ್ಯ ೨೪: ಕೃಷ್ಣ ವಿದುರನಿಗೆ ಏನು ತಿಳಿಸಲು ಹೇಳಿದ?

ಪರಮ ಪರಿತೋಷದಲಿ ಕೃಷ್ಣನ
ವರಸುಧಾಮಯ ವಚನವನು ಪಂ
ಕರುಹಮುಖಿ ಕೇಳುತ್ತೆ ನೆನೆದಳು ನಯನವಾರಿಯಲಿ
ಮುರಮಥನನಾ ಕುಂತಿಗೆಲ್ಲವ
ನೊರೆದು ವಿದುರನ ಕರೆದು ಕೌರವ
ನರಮನೆಯ ಸಮಯವನು ನೋಡಿದು ತಮಗೆ ಹೇಳೆಂದ (ಉದ್ಯೋಗ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕುಂತಿಯು ಅತ್ಯಂತ ಆನಂದಪರವಶರಾಗಿ ಕೃಷ್ಣನ ಅಮೃತಮಯ ಮಾತನ್ನು ಕೇಳುತ್ತ ಪಾಂಡವರನ್ನು ನೆನೆಯುತ್ತಿದ್ದಂತೆ ಅವಳ ಕಣ್ಣಲ್ಲಿ ನೀರು ತುಂಬಿತು. ಕೃಷ್ಣನು ಕುಂತಿಗೆ ಎಲ್ಲಾ ವಿಚಾರವನ್ನು ತಿಳಿಸಿ ವಿದುರನನ್ನು ಕರೆದು ದುರ್ಯೋಧನನ್ನು ಭೇಟಿಯಾಗಲು ಅವನ್ ಅರಮನೆಯ ಸಮಯವನ್ನು ತಿಳಿಯಲು ಹೇಳಿದ.

ಅರ್ಥ:
ಪರಮ: ಶ್ರೇಷ್ಠ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ, ಅತಿಯಾದ ಆನಂದ; ವರ: ಶ್ರೇಷ್ಠ; ಸುಧ: ಅಮೃತ; ವಚನ: ಮಾತು, ವಾಣಿ; ಪಂಕರುಹ: ಕಮಲ; ಮುಖ: ಆನನ; ಪಂಕರುಹಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು; ಕೇಳು: ಆಲಿಸು; ನೆನೆ: ಜ್ಞಾಪಿಸು; ನಯನ: ಕಣ್ಣು; ವಾರಿ: ನೀರು; ಮುರಮಥ: ಕೃಷ್ಣ; ಒರೆ: ಮಾತು; ಕರೆ: ಬರೆಮಾಡು; ಅರಮನೆ: ಆಲಯ; ಸಮಯ: ಕಾಲ; ನೋಡು: ವೀಕ್ಷಿಸು; ಹೇಳು: ತಿಳಿಸು;

ಪದವಿಂಗಡಣೆ:
ಪರಮ +ಪರಿತೋಷದಲಿ+ ಕೃಷ್ಣನ
ವರಸುಧಾಮಯ +ವಚನವನು +ಪಂ
ಕರುಹಮುಖಿ +ಕೇಳುತ್ತೆ +ನೆನೆದಳು +ನಯನ+ವಾರಿಯಲಿ
ಮುರಮಥನನ್+ಆ+ ಕುಂತಿಗ್+ಎಲ್ಲವನ್
ಒರೆದು +ವಿದುರನ +ಕರೆದು +ಕೌರವನ್
ಅರಮನೆಯ +ಸಮಯವನು +ನೋಡ್+ಇದು +ತಮಗೆ +ಹೇಳೆಂದ

ಅಚ್ಚರಿ:
(೧) ಕಣ್ಣೀರು ಎಂದು ಹೇಳಲು – ನಯನವಾರಿ ಪದದ ಬಳಕೆ
(೨) ಪರಮ, ವರ – ಸಮನಾರ್ಥಕ ಪದ
(೩) ಕೃಷ್ಣ, ಮುರಮಥನ – ಕೃಷ್ಣನಿಗೆ ಬಳಸಿದ ಪದಗಳು
(೪) ಪಂಕರುಹಮುಖಿ, ಕುಂತಿ – ಕುಂತಿಗೆ ಬಳಸಿದ ಪದಗಳು