ಪದ್ಯ ೧೩: ದುರ್ಯೋಧನನು ಕೌರವ ಸೇನೆಯ ಪರಾಕ್ರಮಿಗಳಿಗೆ ಏನು ಹೇಳಿದನು?

ನೆರೆವಣಿಗೆಯುಳ್ಳರೆ ವಿರೋಧಿಯ
ನಿರಿವುದೋಲೆಯಕಾರತನವನು
ಮೆರೆವುದುಚಿತವಿದೇಕೆ ಡೊಂಬಿನ ಶೌರ್ಯವೊಳಗೊಳಗೆ
ಕಿರುಕುಳರು ನೀವಲ್ಲ ನಿಮ್ಮಲಿ
ಕೊರತೆಯಿಲ್ಲದು ನಮ್ಮ ಪುಣ್ಯದ
ಬರನ ದಿನ ನೀವೇನ ಮಾಡುವಿರೆಂದು ಬಿಸುಸುಯ್ದ (ದ್ರೋಣ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ನಿಮ್ಮಲ್ಲಿ ಹೊಂದಾಣಿಕೆಯಿದ್ದರೆ, ಶತ್ರುವನ್ನು ಕೊಂದು ಶೌರ್ಯವನ್ನು ತೋರಿಸಬೇಕು, ಸೇವೆಯ ಹಿರಿಮೆಯನ್ನು ಮೆರೆಸಬೇಕು, ನಿಮ್ಮ ನಿಮ್ಮಲ್ಲಿ ತೋರುಗಾಣಿಕೆಯ ಸ್ಪರ್ಧೆಯೇಕೆ? ನೀವು ಸಾಮಾನ್ಯರಲ್ಲ, ನಿಮ್ಮಲ್ಲಿ ಯಾವ ಕೊರತೆಯೂ ಇಲ್ಲ. ಆದರೆ ಇಂದು ನಮ್ಮ ಪುಣ್ಯಕ್ಕೆ ಬರ ಬಂದ ದಿನ. ನೀವೇನು ಮಾಡಲು ಸಾಧ್ಯ ಎಂದು ನಿಟ್ಟುಸಿರುಬಿಟ್ಟನು.

ಅರ್ಥ:
ನೆರೆವು: ಸಹಾಯ; ವಿರೋಧಿ: ಶತ್ರು; ಇರಿ: ಚುಚ್ಚು; ಓಲೆಯಕಾರ: ಪರಾಕ್ರಮಿ; ಮೆರೆ: ಶೋಭಿಸು; ಉಚಿತ: ಸರಿಯಾದುದು; ಡೊಂಬು: ಬೂಟಾಟಿಕೆ; ಶೌರ್ಯ: ಪರಾಕ್ರಮ; ಕಿರುಕುಳ: ತೊಂದರೆ; ಕೊರತೆ: ನ್ಯೂನ್ಯತೆ; ಪುಣ್ಯ: ಸದಾಚಾರ; ಬರ: ಕ್ಷಾಮ, ದುರ್ಭಿಕ್ಷ; ದಿನ: ವಾರ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ನೆರೆವಣಿಗೆಯುಳ್ಳರೆ +ವಿರೋಧಿಯ
ನಿರಿವುದ್+ಓಲೆಯಕಾರತನವನು
ಮೆರೆವುದ್+ಉಚಿತವಿದೇಕೆ+ ಡೊಂಬಿನ +ಶೌರ್ಯ+ಒಳಗೊಳಗೆ
ಕಿರುಕುಳರು+ ನೀವಲ್ಲ+ ನಿಮ್ಮಲಿ
ಕೊರತೆಯಿಲ್ಲದು+ ನಮ್ಮ +ಪುಣ್ಯದ
ಬರನ+ ದಿನ+ ನೀವೇನ+ ಮಾಡುವಿರೆಂದು +ಬಿಸುಸುಯ್ದ

ಅಚ್ಚರಿ:
(೧) ತನ್ನ ಸೈನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪರಿ – ಕಿರುಕುಳರು ನೀವಲ್ಲ ನಿಮ್ಮಲಿ ಕೊರತೆಯಿಲ್ಲದು ನಮ್ಮ ಪುಣ್ಯದ ಬರನ ದಿನ ನೀವೇನ ಮಾಡುವಿರಿ
(೨) ಕ, ನ ಪದಗಳ ಬಳಕೆ – ಕಿರುಕುಳರು ನೀವಲ್ಲ ನಿಮ್ಮಲಿ ಕೊರತೆಯಿಲ್ಲದು ನಮ್ಮ

ಪದ್ಯ ೧೬: ಕೃಷ್ಣನು ಯಾವ ವಿದ್ಯೆಯಲ್ಲಿ ನಿಸ್ಸೀಮನೆಂದು ಭೂರಿಶ್ರವನು ಹೇಳಿದನು?

ಅರಿದರೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗೆಗಳನು ಅರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ (ದ್ರೋಣ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಈ ವಿದ್ಯೆಯನು ಅರಿತದ್ದು ಕೃಷ್ಣನಿಂದಲೇ ಇರಬೇಕು. ಕಪಟ ವಿದ್ಯೆಗಳನ್ನು ಇಂದ್ರ, ದ್ರೋಣ, ಶಿವರು ಅರಿಯರು, ಕೃಷ್ಣನು ಮರೆಯಿರಿಗಾರ, ಮೋಸದ ತಂತ್ರಗಳನ್ನು ಮಾಡುವ ಇವನ ಸಂಗದಿಂದ ನೀವು ಅಯ್ಯೋ ಹಾಳಾದಿರಿ ಎಂದು ಭೂರಿಶ್ರವನು ಹೇಳಿದನು.

ಅರ್ಥ:
ಅರಿ: ತಿಳಿ; ವಿದ್ಯ: ಜ್ಞಾನ; ಕಪಟ: ಮೋಸ; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಶಂಕರ: ಶಿವ; ಮರೆ: ಗುಟ್ಟು, ನೆನಪಿನಿಂದ ದೂರ ಮಾಡು; ಇರಿ: ಕರೆ, ಜಿನುಗು; ಅಸುರರ: ರಾಕ್ಷಸ; ಮುರಿ: ಸೀಳು; ಕುಹಕ: ಮೋಸ; ತಂತ್ರ: ಉಪಾಯ; ಹೊರಿಗೆ: ಹೊಣೆಗಾರಿಕೆ, ಭಾರ; ಸಂಗ: ಜೊತೆ; ಕೆಡು: ಹಾಳು; ಅಕಟ: ಅಯ್ಯೋ;

ಪದವಿಂಗಡಣೆ:
ಅರಿದರ್+ಈ+ ವಿದ್ಯವನು+ ಕೃಷ್ಣನೊಳ್
ಅರಿದೆಯಾಗಲು+ ಬೇಕು +ಕಪಟದ
ನೆರೆವಣಿಗೆಗಳನು +ಅರಿಯರ್+ಇಂದ್ರ +ದ್ರೋಣ +ಶಂಕರರು
ಮರೆ +ಮರೆಯಲಿರಿಗಾರನ್+ಅಸುರರ
ಮುರಿದನೆಂಬರು +ಕುಹಕ+ತಂತ್ರದ
ಹೊರಿಗೆವಾಳನ +ಸಂಗದಲಿ+ ನೀವ್+ ಕೆಟ್ಟರ್+ಅಕಟೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಕುಹಕತಂತ್ರದ ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ