ಪದ್ಯ ೩೦: ದುರ್ಯೋಧನನು ಏಕೆ ಜರ್ಝರಿತನಾದ?

ನೆಗೆದ ಬುಗಟದೆ ಹಣೆಯಲವರೋ
ಲಗದ ಸಭೆಯಲಿ ನನೆದ ಸೀರೆಯ
ತೆಗಸಿ ಕೊಟ್ಟರು ತಮ್ಮ ಮಡಿವರ್ಗದ ನವಾಂಬರವ
ಬೆಗಡುಗೊಳಿಸಿದರೆನ್ನನವರೋ
ಲಗದ ಸೂಳೆಯರವರ ಸೂಳಿನ
ನಗೆಯ ನೆನೆನೆನೆದೆನ್ನ ಮನ ಜರ್ಝರಿತವಾಯ್ತೆಂದ (ಸಭಾ ಪರ್ವ, ೧೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ನಾನು ಅವರ ಆಸ್ಥಾನದಲ್ಲಿ ಎಡವಿ ಡಿಕ್ಕಿ ಹೊಡೆದು ಹಣೆಯಲ್ಲಿ ಎದ್ದಿರುವ ಬೊರೆ ಇನ್ನು ತಗ್ಗಿಲ್ಲ. ಆಸ್ಥಾನದ ನಡುವೆ ನನ್ನ ಬಟ್ಟೆಗಳು ತೊಯ್ದು ಹೋಗಲು ಅವರು ನನಗೆ ಹೊಸಬಟ್ಟೆಗಳನ್ನು ತೆಗಿಸಿಕೊಟ್ಟರು. ಅವರ ಆಸ್ಥಾನದ ವೇಶ್ಯೆಯರು ಮತ್ತೆ ಮತ್ತೆ ನನ್ನನ್ನು ನೋಡಿ ನಗುತ್ತಿರುವುದು ನನ್ನನ್ನು ದಿಗ್ಭ್ರಮೆಗೊಳಿಸಿದೆ. ಅವರ ನಗೆಯನ್ನು ಮತ್ತೆ ಮತ್ತೆ ನೆನೆದು ನನ್ನ ಎದೆ ಜರ್ಝರಿತವಾಗಿದೆ ಎಂದು ತನ್ನ ದುಃಖವನ್ನು ತೋಡಿಕೊಂಡನು.

ಅರ್ಥ:
ನೆಗೆ:ನೆಗೆತ, ಜಿಗಿತ; ಬುಗುಟು: ತಲೆಯ ಮೇಲಿನ ಬೊರೆ, ಗಾಯ; ಹಣೆ: ಲಲಾಟ, ಭಾಳ; ಓಲಗ: ದರ್ಬಾರು; ಸಭೆ: ಗೋಷ್ಠಿ; ನನೆ: ಒದ್ದೆ, ತೋಯ್ದ; ಸೀರೆ: ಬಟ್ಟೆ; ತೆಗೆಸಿ: ಬಿಚ್ಚಿ; ಕೊಟ್ಟರು: ನೀಡಿದರು; ಮಡಿ: ಸ್ವಚ್ಛ; ನವ: ಹೊಸ; ಅಂಬರ: ಬಟ್ಟೆ; ಬೆಗಡು: ಆಶ್ಚರ್ಯ, ಬೆರಗು; ಸೂಳೆ: ವೇಶ್ಯೆ; ನಗೆ: ಹರ್ಷ, ಸಂತೋಷ; ನೆನೆ: ಜ್ಞಾಪಿಸು; ಮನ: ಮನಸ್ಸು; ಜರ್ಝರಿತ: ಭಗ್ನ, ಚೂರುಚೂರು;

ಪದವಿಂಗಡಣೆ:
ನೆಗೆದ +ಬುಗಟದೆ+ ಹಣೆಯಲ್+ಅವರ್
ಓಲಗದ +ಸಭೆಯಲಿ +ನನೆದ +ಸೀರೆಯ
ತೆಗಸಿ+ ಕೊಟ್ಟರು+ ತಮ್ಮ +ಮಡಿವರ್ಗದ +ನವ+ಅಂಬರವ
ಬೆಗಡು+ಗೊಳಿಸಿದರ್+ಎನ್ನನ್+ಅವರ್+
ಓಲಗದ +ಸೂಳೆಯರ್+ಅವರ +ಸೂಳಿನ
ನಗೆಯ +ನೆನೆನೆನೆದ್+ಎನ್ನ +ಮನ +ಜರ್ಝರಿತವಾಯ್ತೆಂದ

ಅಚ್ಚರಿ:
(೧) ಓಲಗ, ಸಭೆ – ಸಮನಾರ್ಥಕ ಪದ
(೨) ನೆನೆನೆನೆದು – ಮತ್ತೆ ಮತ್ತೆ ಜ್ಞಾಪಿಸಿಕೊಂಡು ಎಂದು ಹೇಳುವ ಪರಿ