ಪದ್ಯ ೬೦: ದುರ್ಯೋಧನನು ಪಾಂಡವರನ್ನು ಹೇಗೆ ಸೊಲಿಸಬಹುದೆಂದ?

ನೀವು ಚಿತ್ತವಿಸಿದೊಡೆ ನೆತ್ತದೊ
ಳಾವು ಸೋಲಿಸಿ ಕೊಡುವೆವರನು
ನೀವು ಕರೆಸುವುದಿಲ್ಲಿಗುಚಿತ ಪ್ರೀತಿವಚನದಲಿ
ನಾವು ಜಾಣರು ಜೀಯ ಜೂಜಿನ
ಜೀವ ಕಲೆಯಲಿ ಧರ್ಮಸುತನಿದ
ನಾವ ಹವಣೆಂದರಿಯನಾತನ ಜಯಿಸಬಹುದೆಂದ (ಸಭಾ ಪರ್ವ, ೧೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾಮನು ಹೇಳಿದ ಉಪಾಯವನ್ನು ಬಿಚ್ಚಿಟ್ಟನು. ತಂದೆ ನೀವು ಒಪ್ಪುವುದಾದರೆ, ನಾವು ಪಗಡೆಯಾಟದಲ್ಲಿ ಅವರನ್ನು ಸೋಲಿಸಿ ರಾಜ್ಯವನ್ನು ನಿಮಗೆ ಕೊಡಿಸುತ್ತೇವೆ. ನೀವು ಪ್ರಿಯವಚನಗಳಿಂದ ಅವರನ್ನಿಲ್ಲಿಗೆ ಕರೆಸಿಕೊಡಿ. ನಾವು ಜೂಜೆಂಬ ಜೀವಕಲೆಯಲ್ಲಿ ನಿಪುಣರು. ಯುಧಿಷ್ಠಿರನಿಗೆ ಜೂಜೆಂದರೆ ಏನು ಎಂಬದೂ ತಿಳಿದಿಲ್ಲ. ಅವನನ್ನು ಗೆಲ್ಲಬಹುದು ಎಂದು ದುರ್ಯೋಧನನು ತನ್ನ ಕೃತ್ರಿಮ ಉಪಾಯವನ್ನು ತಿಳಿಸಿದನು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ನೆತ್ತ: ಪಗಡೆಯ ದಾಳ; ಸೋಲಿಸು: ಪರಾಭವಗೊಳಿಸು; ಕರೆಸು: ಬರೆಮಾಡು; ಉಚಿತ: ಸರಿಯಾದ; ಪ್ರೀತಿ: ಒಲವು; ವಚನ: ಮಾತು; ಜಾಣರು: ಬುದ್ಧಿವಂತರು; ಜೀಯ: ಒಡೆಯ; ಜೂಜು: ಸಟ್ಟ, ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಜೀವ: ಉಸಿರು; ಕಲೆ: ಕುಶಲವಿದ್ಯೆ, ಸೂಕ್ಷ್ಮ; ಹವಣ: ಮಿತಿ, ಅಳತೆ; ಅರಿ: ತಿಳಿ; ಜಯಿಸು: ಗೆಲ್ಲು;

ಪದವಿಂಗಡಣೆ:
ನೀವು +ಚಿತ್ತವಿಸಿದೊಡೆ+ ನೆತ್ತದೊಳ್
ಆವು +ಸೋಲಿಸಿ +ಕೊಡುವೆವರನು
ನೀವು +ಕರೆಸುವುದ್+ಇಲ್ಲಿಗ್+ಉಚಿತ +ಪ್ರೀತಿ+ವಚನದಲಿ
ನಾವು +ಜಾಣರು +ಜೀಯ +ಜೂಜಿನ
ಜೀವ +ಕಲೆಯಲಿ +ಧರ್ಮಸುತನ್+ಇದನ್
ಆವ +ಹವಣೆಂದ್+ಅರಿಯನ್+ಆತನ+ ಜಯಿಸಬಹುದೆಂದ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜಾಣರು ಜೀಯ ಜೂಜಿನ ಜೀವ