ಪದ್ಯ ೪: ಧರ್ಮಜನು ಯಾವ ಯಾತ್ರೆಯನ್ನು ಕೈಗೊಂಡನು?

ನುಡಿನುಡಿಗೆ ಸುಕ್ಷೇಮ ಕುಶಲವ
ನಡಿಗಡಿಗೆ ಬೆಸಗೊಂಡ ಪುಳಕದ
ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
ಪೊಡವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜಪರಿವಾರವವನೀದೇವಕುಲ ಸಹಿತ (ಅರಣ್ಯ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಮತ್ತೆ ಮತ್ತೆ ಅರ್ಜುನನ ಕ್ಷೇಮ ಕುಶಲಗಳನ್ನು ವಿಚಾರಿಸಿ ರೋಮಾಂಚನಗೊಂಡನು. ಅತೀವ ಸಂತೋಷ ಭರಿತನಾದನು, ಪುಳಕಜಲವು ಹರಿಯಲಾರಂಭಿಸಿತು, ತನ್ನ ಪರಿವಾರದವರು ಮತ್ತು ಬ್ರಾಹ್ಮಣರೊಡನೆ ಧರ್ಮಜನು ವನವನಗಳಲ್ಲಿ ತೊಳಲುತ್ತಾ ತೀರ್ಥಯಾತ್ರೆಯನ್ನು ಮಾಡಿದನು.

ಅರ್ಥ:
ನುಡಿ: ಮಾತು; ಕ್ಷೇಮ: ನೆಮ್ಮದಿ, ಸುಖ; ಕುಶಲ: ಕ್ಷೇಮ; ಅಡಿಗಡಿಗೆ: ಮತ್ತೆ ಮತ್ತೆ; ಬೆಸಗೊಳ್: ಕೇಳು; ಪುಳಕ: ರೋಮಾಂಚನ; ಗುಡಿಕಟ್ಟು: ಸಂತೋಷಗೊಳ್ಳು; ರೋಮ: ಕೂದಲು; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಪೂರ್ಣ: ತುಂಬ; ಹರುಷ: ಸಂತೋಷ; ಪೊಡವಿ: ಪೃಥ್ವಿ, ಭೂಮಿ; ಅಧಿಪತಿ: ಒಡೆಯ; ಬಳಿಕ: ನಂತರ; ತೊಳಲು: ಅಲೆದಾಡು, ತಿರುಗಾಡು; ಅಡವಿ: ಕಾಡು; ತೀರ್ಥಯಾತ್ರೆ: ಪವಿತ್ರ ಸ್ಥಳಗಳ ದರ್ಶನಕ್ಕಾಗಿ ಮಾಡುವ ಯಾತ್ರೆ; ಮಡದಿ: ಹೆಂಡತಿ; ಪರಿವಾರ: ಸುತ್ತಲಿನವರು, ಪರಿಜನ; ಅವನೀದೇವ: ಬ್ರಾಹ್ಮಣ; ಕುಲ: ವಂಶ; ಸಹಿತ: ಜೊತೆ;

ಪದವಿಂಗಡಣೆ:
ನುಡಿನುಡಿಗೆ +ಸುಕ್ಷೇಮ +ಕುಶಲವನ್
ಅಡಿಗಡಿಗೆ +ಬೆಸಗೊಂಡ +ಪುಳಕದ
ಗುಡಿಯಬೀಡಿನ+ ರೋಮ +ಪುಳಕದ+ ಪೂರ್ಣ +ಹರುಷದಲಿ
ಪೊಡವಿ+ಅಧಿಪತಿ+ ಬಳಿಕ+ ತೊಳಲಿದನ್
ಅಡವಿ+ಅಡವಿಯ +ತೀರ್ಥಯಾತ್ರೆಗೆ
ಮಡದಿ +ನಿಜಪರಿವಾರವ್+ಅವನೀದೇವ+ಕುಲ ಸಹಿತ

ಅಚ್ಚರಿ:
(೧) ಬ್ರಾಹ್ಮಣ ಎಂದು ಹೇಳಲು ಅವನೀದೇವ ಪದದ ಬಳಕೆ
(೨) ಸಂತೋಷಗೊಂಡ ಎಂದು ತಿಳಿಸಲು – ಪುಳಕದ ಗುಡಿಯಬೀಡಿನ ರೋಮ ಪುಳಕದ ಪೂರ್ಣ ಹರುಷದಲಿ
(೩) ರಾಜನೆಂದು ಹೇಳಲು – ಪೊಡವಿಯಧಿಪತಿ
(೪) ಜೋಡಿ ಪದಗಳು: ಅಡಿಗಡಿ, ಅಡವಿಯಡವಿ, ನುಡಿನುಡಿ

ಪದ್ಯ ೧೯: ಕರ್ಣನು ಶಲ್ಯನಿಗೆ ಮಾತುಮಾತಿಗೆ ಹಂಗಿಸಬೇಡ ಎಂದು ಏಕೆ ಹೇಳಿದನು?

ನುಡಿನುಡಿಗೆ ಭಂಗಿಸುವೆ ನೀ ನಿ
ನ್ನಡಿಗಡಿಗೆ ತಲೆಯೊತ್ತುವೆನೊ ನಿ
ನ್ನೊಡನೆ ಬಂದರಿಯೊಡನೆ ತಲೆಯೊತ್ತುವೆನೊ ತವಕದಲಿ
ಪದಿಮುಖದೊಳೌಕುವ ವಿರೋಧಿಯ
ಕಡುಹ ತಗ್ಗಿಸಿ ನಿನ್ನ ಮೆಚ್ಚಿಸಿ
ಕೊದುವೆನಿನ್ನರೆಗಳಿಗೆ ಸೈರಿಸು ಮಾದ್ರಪತಿಯೆಂದ (ಕರ್ಣ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಲ್ಯನ ಮಾತುಗಳನ್ನು ಕೇಳಿದ ಕರ್ಣನು ಕೋಪಗೊಂಡು, ಮಾತುಮಾತಿಗೆ ನನ್ನನು ಅಪಮಾನ ಮಾಡುತ್ತಿರುವೆ ನಾನು ನಿನ್ನೊಡನೆ ಯುದ್ಧಮಾಡಲೋ ಅಥವ ಭೀಮನೊಡನೆ ಯುದ್ಧ ಮಾಡಲೋ, ಈಗ ವೈರಿಯು ಮುಖಾಮುಖಿಯಾಗಿ ಬರುತ್ತಿದ್ದಾನೆ, ಇನ್ನು ಅರ್ಧಗಳಿಗೆ ತಾಳು, ಅವನ ಪರಾಕ್ರಮವನ್ನು ತಗ್ಗಿಸಿ ನಿನ್ನನ್ನು ಮೆಚ್ಚಿಸುತ್ತೇನೆ ಎಂದು ಹೇಳಿದನು.

ಅರ್ಥ:
ನುಡಿನುಡಿ: ಮಾತುಮಾತಿಗು; ಭಂಗ: ಕೆಡುಕು, ಅಪಮಾನ; ಬಂದ: ಬಂದಿರುವ; ಅರಿ: ವೈರಿ; ತಲೆಯೊತ್ತು: ಹೋರಾಡು; ತವಕ: ಕಾತುರ; ಪಡಿಮುಖ: ವೈರಿಯ ಮುಖ; ಔಕು: ಒತ್ತು; ವಿರೋಧ: ಪ್ರತಿ, ವೈರತ್ವ, ಹಗೆತನ; ಕಡುಹು: ಪರಾಕ್ರಮ, ಶೌರ್ಯ; ತಗ್ಗಿಸು: ಕಡಿಮೆಮಾದು; ಮೆಚ್ಚಿಸು: ಇಷ್ಟ , ಪ್ರೀತಿಸು; ಅರೆ: ಅರ್ಧ; ಗಳಿಗೆ: ನಿಮಿಷ, ಕಾಲ; ಸೈರಿಸು: ತಾಳು, ಸಹಿಸು; ಮಾದ್ರಪತಿ: ಮದ್ರ ದೇಶದ ದೊರೆ (ಶಲ್ಯ);

ಪದವಿಂಗಡಣೆ:
ನುಡಿನುಡಿಗೆ +ಭಂಗಿಸುವೆ +ನೀ +ನಿ
ನ್ನಡಿಗಡಿಗೆ +ತಲೆಯೊತ್ತುವೆನೊ+ ನಿ
ನ್ನೊಡನೆ +ಬಂದ್+ಅರಿಯೊಡನೆ +ತಲೆಯೊತ್ತುವೆನೊ +ತವಕದಲಿ
ಪಡಿಮುಖದೊಳ್+ಔಕುವ +ವಿರೋಧಿಯ
ಕಡುಹ +ತಗ್ಗಿಸಿ +ನಿನ್ನ +ಮೆಚ್ಚಿಸಿ
ಕೊಡುವೆನ್+ಇನ್+ಅರೆಗಳಿಗೆ+ ಸೈರಿಸು +ಮಾದ್ರಪತಿಯೆಂದ

ಅಚ್ಚರಿ:
(೧) ತಲೆಯೊತ್ತು – ೨ ಬಾರಿ ಪ್ರಯೋಗ
(೨) ತಗ್ಗಿಸಿ, ಮೆಚ್ಚಿಸಿ – ಪ್ರಾಸ ಪದ