ಪದ್ಯ ೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು
ಏಳು ದಿಟವೈಯೆಮ್ಮ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನ ಹಣೆಗಣ್ಣಿನ ಬೆಂಕಿಗೆ ಆಹುತಿಯಾದ ಮನ್ಮಥನ ಯಮನ ದಾರಿಯನ್ನು ಪಾಂಡವರು ಹಿಡಿಯಲಿದ್ದಾರೆ. ಹೇ ಕೃಷ್ಣ ನೀನು ಏಳು, ನನ್ನ ಮಾತು ನಿಜ. ನಮ್ಮ ಭಾಷೆಯನ್ನು ನಡೆಸಿಕೊಡು. ಸಂಕಲ್ಪ ಭಂಗವಾದರೆ ನಾವು ಹಾಳಾದಂತೆ. ಕೃಷ್ಣ ಬೇಗ ಬಾ ಎಂದು ಬೇಡಿದಳು.

ಅರ್ಥ:
ಕಂಠ: ಕೊರಳು; ನೀಲಕಂಠ: ಶಿವ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಆಹುತಿ: ಬಲಿ; ಮುಗ್ಗು: ಬಾಗು, ಮಣಿ; ಕಾಲ: ಸಮಯ; ಕಾಮ: ಮನ್ಮಥ; ಪಥ: ದಾರಿ; ಪಡೆ: ದೊರಕು; ನಂದನ: ಮಕ್ಕಳು; ಏಳು: ಎದ್ದೇಳು; ದಿಟ: ಸತ್ಯ; ನುಡಿ: ಮಾತು; ಪಾಲಿಸು: ರಕ್ಷಿಸು; ಸಂಕಲ್ಪ: ನಿರ್ಧಾರ, ನಿರ್ಣಯ; ಅಳಿ: ನಾಶ; ಹಾಳು: ನಾಶ; ಮೈದೋರು: ಕಾಣಿಸಿಕೋ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ನೀಲಕಂಠನ+ ನೇತ್ರ+ವಹ್ನಿ
ಜ್ವಾಲೆಗ್+ಆಹುತಿಯಾಗಿ +ಮುಗ್ಗಿದ
ಕಾಲ +ಕಾಮನ +ಪಥವ +ಪಡೆವರು+ ಪಾಂಡುನಂದನರು
ಏಳು +ದಿಟವೈ+ಎಮ್ಮ +ನುಡಿಯನು
ಪಾಲಿಸೈ +ಸಂಕಲ್ಪವ್+ಅಳಿದೊಡೆ
ಹಾಳು +ಹೊರುವುದು +ಕೃಷ್ಣ+ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಕಂಠನ ನೇತ್ರವಹ್ನಿಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು

ಪದ್ಯ: ೩೪: ಅರ್ಜುನನು ಏನು ಯೋಚಿಸುತ್ತಾ ಮುನ್ನಡೆದನು?

ನೀಲಕಂಠನ ಮನದ ಬಯಕೆಗೆ
ನೀಲಕಂಠನೆ ಬಲಕೆ ಬಂದುದು
ಮೇಲು ಪೋಗಿನ ಸಿದ್ಧಿ ದೈತ್ಯಾಂತಕನ ಬುದ್ಧಿಯಲಿ
ಕಾಲಗತಿಯಲಿ ಮೇಲೆ ಪರರಿಗ
ಕಾಲಗತಿಯನು ಕಾಬೆನೈಸಲೆ
ಶೂಲಧರನೇ ಬಲ್ಲನೆನುತೈತಂದನಾ ಪಾರ್ಥ (ಅರಣ್ಯ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಶಿವನನ್ನು (ನೀಲಕಂಠ) ಮನಸ್ಸಿನಲ್ಲಿ ಒಲಿಸುವ ಬಯಕೆಯನ್ನಿಟ್ಟುಕೊಂಡು ಹೊರಟ ಅರ್ಜುನನು ದಾರಿಯಲ್ಲಿ ನವಿಲು (ನೀಲಕಂಠ) ಎಡದಿಂದ ಬಲಕ್ಕೆ ಹೋಯಿತು. ಶಕುನಗಳು ಅನುಕೂಲವಾಗಿವೆ ಎಂದು ತಿಳಿದು, ತಪಸ್ಸಿದ್ಧಿ ಶ್ರೀಕೃಷ್ಣನಿಗೆ ಸೇರಿದ್ದು, ಕಾಲ ಕಳೆದು ಕೆಟ್ಟ ಕಾಲವು ಶತ್ರುಗಳಿಗೆ ಪ್ರಾಪ್ತಿಯಾಗುತ್ತದೆ. ಸತ್ಯವೇನೋ ಶಿವನೇ ಬಲ್ಲ ಎಂದು ಯೋಚಿಸುತ್ತಾ ಅರ್ಜುನನು ಮುನ್ನಡೆದನು.

ಅರ್ಥ:
ನೀಲಕಂಠ: ಶಿವ; ಮನ: ಮನಸ್ಸು; ಬಯಕೆ: ಆಸೆ; ಬಲ: ಅಪಸವ್ಯ;ಬಂದು: ಆಗಮಿಸು; ಮೇಲು: ಅಗ್ರಭಾಗ; ಪೋಗು: ಸಾಗು, ಕಳೆ, ದಾಟು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ದೈತ್ಯಾಂತಕ: ರಾಕ್ಷಸರ ಅಂತಕ (ಕೃಷ್ಣ); ಬುದ್ಧಿ: ತಿಳಿವು, ಅರಿವು; ಕಾಲಗತಿ: ಸಮಯದ ಪ್ರವಾಹ; ಪರರು: ಅನ್ಯರು; ಕಾಬುದು: ಕಾಣಬೇಕು; ಐಸಲೆ: ಅಲ್ಲವೇ; ಶೂಲಧರ: ಶಿವ; ಬಲ್ಲ: ತಿಳಿದವ; ಐದು: ಹೋಗಿಸೇರು;

ಪದವಿಂಗಡಣೆ:
ನೀಲಕಂಠನ +ಮನದ +ಬಯಕೆಗೆ
ನೀಲಕಂಠನೆ+ ಬಲಕೆ+ ಬಂದುದು
ಮೇಲು+ ಪೋಗಿನ +ಸಿದ್ಧಿ +ದೈತ್ಯಾಂತಕನ +ಬುದ್ಧಿಯಲಿ
ಕಾಲಗತಿಯಲಿ +ಮೇಲೆ +ಪರರಿಗ್
ಅಕಾಲಗತಿಯನು +ಕಾಬೆನ್+ಐಸಲೆ
ಶೂಲಧರನೇ+ ಬಲ್ಲನ್+ಎನುತ್+ಐತಂದನಾ+ ಪಾರ್ಥ

ಅಚ್ಚರಿ:
(೧) ನೀಲಕಂಠ ಪದದ ಬಳಕೆ ಶಿವ ಮತ್ತು ನವಿಲನ್ನು ಅರ್ಥೈಸುವ ಹಾಗೆ ಪ್ರಯೋಗ
(೨) ಕಾಲಗತಿ, ಅಕಾಲಗತಿ – ಪದಗಳ ಪ್ರಯೋಗ
(೩) ನೀಲಕಂಠ, ಶೂಲಧರ – ಶಿವನ ಹೆಸರುಗಳನ್ನು ಉಲ್ಲೇಖಿಸಿರುವ ಬಗೆ