ಪದ್ಯ ೯: ಕೀಚಕನೇಕೆ ನಡುಗಿದನು?

ಕುಡಿತೆಗಂಗಳ ಚಪಳೆಯುಂಗುರ
ವಿಡಿಯನಡುವಿನ ನೀರೆ ಹಂಸೆಯ
ನಡೆಯ ನವಿಲಿನ ಮೌಳಿಕಾತಿ ಪಯೋಜ ಪರಿಮಳದ
ಕಡು ಚೆಲುವೆ ಬರಲವನು ತನು ನಡ
ನಡುಗಿನಿಂದನದಾವ ಹೆಂಗುಸು
ಪಡೆದಳೀ ಚೆಲುವಿಕೆಯನೆನುತಡಿಗಡಿಗೆ ಬೆರಗಾದ (ವಿರಾಟ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಬೊಗಸೆಕಣ್ಣಿನ ಚೆಲುವೆ, ನಾಲ್ಕು ಬೆರಳುಗಳಿಂದ ಹಿಡಿಮಾಡಿದರೆ ಅಷ್ಟು ಚಿಕ್ಕ ನಡುವಿನ ಸುಂದರಿ, ಹಂಸಗಮನೆ, ನವಿಲಿನ ತಲೆಯಂತಹ ತಲೆಯುಳ್ಳವಳು, ಕಮಲಗಂಧಿನಿಯಾದ ಬಹಳ ಸುಂದರಿಯಾದ ದ್ರೌಪದಿಯು ಬರಲು, ಇನ್ನಾವ ಹೆಂಗಸು ಇವಳ ಸೌಂದರ್ಯವನ್ನು ಹೊಂದಲು ಸಾಧ್ಯ ಎನ್ನಿಸಿ ಕೀಚಕನು ನಡುಗಿದನು.

ಅರ್ಥ:
ಕುಡಿತೆ: ಬೊಗಸೆ, ಸೇರೆ; ಕಂಗಳು: ಕಣ್ಣು; ಚಪಲೆ: ಚಂಚಲ ಸ್ವಭಾವ; ಉಂಗುರ: ಬೆರಳಲ್ಲಿ ಧರಿಸುವ ಆಭರಣ; ವಿಡಿ: ಹಿಡಿ, ಗ್ರಹಿಸು; ನಡು: ಮಧ್ಯ; ನೀರೆ: ಸ್ತ್ರೀ, ಚೆಲುವೆ; ಹಂಸ: ಮರಾಲ; ನಡೆ: ಓಡಾಟ; ಮೌಳಿ: ಶಿರ; ನವಿಲು: ಮಯೂರ; ಕಾತಿ: ಗರತಿ; ಪಯೋಜ: ಕಮಲ; ಪರಿಮಳ: ಸುಗಂಧ; ಕಡು: ಬಹಳ; ಚೆಲುವು: ಅಂದ; ಬರಲು: ಆಗಮಿಸು; ತನು: ದೇಹ; ನಡುಗು: ಕಂಪಿಸು; ನಿಂದು: ನಿಲ್ಲು; ಹೆಂಗುಸು: ಸ್ತ್ರೀ; ಪಡೆ: ಹೊಂದು, ತಾಳು; ಚೆಲುವು: ಸೌಂದರ್ಯ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಕುಡಿತೆ+ಕಂಗಳ +ಚಪಳೆ+ಉಂಗುರ
ವಿಡಿಯ+ನಡುವಿನ+ ನೀರೆ+ ಹಂಸೆಯ
ನಡೆಯ+ ನವಿಲಿನ+ ಮೌಳಿ+ಕಾತಿ +ಪಯೋಜ +ಪರಿಮಳದ
ಕಡು +ಚೆಲುವೆ +ಬರಲವನು +ತನು +ನಡ
ನಡುಗಿ+ನಿಂದನ್+ಅದಾವ +ಹೆಂಗುಸು
ಪಡೆದಳೀ +ಚೆಲುವಿಕೆಯನ್+ಎನುತ್+ಅಡಿಗಡಿಗೆ +ಬೆರಗಾದ

ಅಚ್ಚರಿ:
(೧) ದ್ರೌಪದಿಯ ಸೌಂದರ್ಯವನ್ನು ವಿವರಿಸುವ ಪರಿ – ಕುಡಿತೆಗಂಗಳ ಚಪಳೆ; ಉಂಗುರ ವಿಡಿಯನಡುವಿನ ನೀರೆ; ಹಂಸೆಯ ನಡೆಯ, ನವಿಲಿನ ಮೌಳಿಕಾತಿ, ಪಯೋಜ ಪರಿಮಳದ ಕಡು ಚೆಲುವೆ