ಪದ್ಯ ೬: ಧೃತರಾಷ್ಟ್ರ ದುಃಖದಿಂದ ವ್ಯಾಸರಲ್ಲಿ ಏನು ಹೇಳಿದ?

ಅಹುದು ನಿಮ್ಮ ಯುಧಿಷ್ಠಿರನು ಗುಣಿ
ಯಹನು ಭೀಮಾರ್ಜುನರು ಬಲ್ಲಿದ
ರಹರು ಕೃಷ್ಣನ ಕೂರ್ಮೆಯಲ್ಲಿ ಕಪರ್ದಿಯೊಲವಿನಲಿ
ಕುಹಕಿಯೆನ್ನವನ್ನವನೊಳಗೆ ನಿ
ಸ್ಪೃಹರು ವಿದುರಪ್ರಮುಖ ಸುಜನರು
ವಿಹಿತವೆನಗಿನ್ನಾವುದದ ನೀವ್ ಬೆಸಸಿ ಸಾಕೆಂದ (ಗದಾ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಆಗ ಧೃತರಾಷ್ಟ್ರ, ಹೌದು ನಿಮ್ಮ ಯುಧಿಷ್ಠಿರನು ಗುಣಶಾಲಿ, ಭೀಮಾರ್ಜುನರು ಮಹಾ ಪರಾಕ್ರಮಿಗಳು. ಕೃಷ್ಣನ ಸ್ನೇಹ, ಶಿವನ ಪ್ರೀತಿ ಅವರ ಕಡೆಗೇ ಇದೆ. ನನ್ನ ಮಗನು ಕುಹಕಿ, ದುಷ್ಟ; ಅವನ ವಿಷಯದಲ್ಲಿ ವಿದುರನೇ ಮೊದಲಾದ ಸಜ್ಜನರು ನಿಸ್ಫೃಹರು. ಇದು ನಿಜ. ನಾನೀಗ ಮಾಡಬೇಕಾದುದೇನು? ನೀವು ಅಪ್ಪಣೆ ನೀಡಿ ಸಾಕು ಎಂದು ಹೇಳಿದನು.

ಅರ್ಥ:
ಗುಣಿ: ಗುಣಉಳ್ಳವ; ಬಲ್ಲಿದ: ಬಲಿಷ್ಠ; ಒಲವು: ಪ್ರೀತಿ; ಕುಹಕಿ: ದುಷ್ಟ; ನಿಸ್ಪೃಹ: ಆಸೆ ಇಲ್ಲದವ; ಪ್ರಮುಖ: ಮುಖ್ಯರಾದವರು; ಸುಜನ: ಒಳ್ಳೆಯವ; ವಿಹಿತ: ಯೋಗ್ಯ; ಬೆಸಸು: ಹೇಳು, ಆಜ್ಞಾಪಿಸು; ಸಾಕು: ನಿಲ್ಲು; ಕಪರ್ದಿ: ಶಿವ;

ಪದವಿಂಗಡಣೆ:
ಅಹುದು +ನಿಮ್ಮ +ಯುಧಿಷ್ಠಿರನು +ಗುಣಿ
ಯಹನು +ಭೀಮಾರ್ಜುನರು +ಬಲ್ಲಿದ
ರಹರು +ಕೃಷ್ಣನ+ ಕೂರ್ಮೆಯಲ್ಲಿ+ ಕಪರ್ದಿ+ಒಲವಿನಲಿ
ಕುಹಕಿ+ಎನ್ನವನ್ನ್+ಅವನೊಳಗೆ +ನಿ
ಸ್ಪೃಹರು +ವಿದುರ+ಪ್ರಮುಖ +ಸುಜನರು
ವಿಹಿತವೆನಗ್+ಇನ್ನಾವುದ್+ಅದ +ನೀವ್ +ಬೆಸಸಿ+ ಸಾಕೆಂದ

ಅಚ್ಚರಿ:
(೧) ದುರ್ಯೋಧನ ಬಗ್ಗೆ ಹೇಳಿದುದು – ಕುಹಕಿ
(೨) ಪಾಂಡವರ ಬಗ್ಗೆ ತಿಳಿಸಿದ ಪರಿ – ಯುಧಿಷ್ಠಿರನು ಗುಣಿಯಹನು, ಭೀಮಾರ್ಜುನರು ಬಲ್ಲಿದರಹರು

ಪದ್ಯ ೫೮: ಭಾರಧ್ವಾಜರು ದ್ರೋಣರಿಗೆ ಏನನ್ನು ಉಪದೇಶಿಸಿದರು?

ಆದುದವಿವೇಕದಲಿ ಸತ್ಪಥ
ವೈದಿಕಾತಿಕ್ರಮಣವಿನ್ನು ಗ
ತೋದಕದಲುರೆ ಸೇತುಸಂಬಂಧದಲಿ ಫಲವೇನು
ಈ ದುರಾಗ್ರಹ ನಿಲಲಿ ಹಾಯಿಕು
ಕೈದುವನು ಸುಸಮಾಧಿ ಯೋಗದ
ಲೈದು ನಿಜವನು ದೇಹ ನಿಸ್ಪೃಹನಾಗು ನೀನೆಂದ (ದ್ರೋಣ ಪರ್ವ, ೧೮ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅವಿವೇಕದಿಂದ ವೇದವು ವಿಧಿಸಿರುವ ಸನ್ಮಾರ್ಗವನ್ನು ಮೀರಿ ನಡೆದಿರುವೆ, ನೀರೆಲ್ಲಾ ಹರಿದು ಹೋದ ಮೇಲೆ ಕಟ್ಟೆಯನ್ನು ಕಟ್ಟಿದರೇನು ಫಲ. ಇದುವರೆಗೆ ಆದದ್ದೆಲ್ಲಾ ಆಯಿತು, ಇನ್ನಾದರೂ ಈ ದುರಾಗ್ರಹವನ್ನು ಬಿಡು, ಆಯುಧಗಳನ್ನೆಸೆದು, ಸಮಾಧಿಯೋಗದಿಮ್ದ ನಿನ್ನ ನಿಜವನ್ನು ನೀನು ಸಾಧಿಸು, ದೇಹವನ್ನು ಬಯಸಬೇಡ ಎಂದು ಭಾರಧ್ವಾಜರು ಉಪದೇಶಿಸಿದರು.

ಅರ್ಥ:
ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಪಥ: ಮಾರ್ಗ; ವೈದಿಕ: ವೇದಗಳನ್ನು ಬಲ್ಲವನು; ಅತಿಕ್ರಮಣ: ಕ್ರಮವನ್ನು ಉಲ್ಲಂಘಿಸುವುದು; ಗತ: ಕಳೆದ, ಆಗಿ ಹೋದ; ಉದಕ: ನೀರು; ಉರೆ: ಅತಿಶಯವಾಗಿ; ಸೇತು: ಸೇತುವೆ, ಸಂಕ; ಸಂಬಂಧ: ಸಂಪರ್ಕ, ಸಹವಾಸ; ಫಲ: ಪ್ರಯೋಜನ; ದುರಾಗ್ರಹ: ಹಟಮಾರಿತನ; ನಿಲಲಿ: ನಿಲ್ಲು, ತಡೆ; ಹಾಯಿಕು: ಕಳಚು, ತೆಗೆ; ಕೈದು: ಆಯುಧ; ಸಮಾಧಿ: ಏಕಾಗ್ರತೆ, ತನ್ಮಯತೆ; ಯೋಗ: ರೀತಿ, ವಿಧಾನ; ನಿಜ: ದಿಟ; ದೇಹ: ಶರೀರ; ನಿಸ್ಪೃಹ: ಆಸೆ ಇಲ್ಲದವ;

ಪದವಿಂಗಡಣೆ:
ಆದುದ್+ಅವಿವೇಕದಲಿ +ಸತ್ಪಥ
ವೈದಿಕ+ಅತಿಕ್ರಮಣವ್+ಇನ್ನು +ಗತ
ಉದಕದಲ್+ಉರೆ +ಸೇತು+ಸಂಬಂಧದಲಿ +ಫಲವೇನು
ಈ +ದುರಾಗ್ರಹ +ನಿಲಲಿ +ಹಾಯಿಕು
ಕೈದುವನು +ಸುಸಮಾಧಿ +ಯೋಗದಲ್
ಐದು +ನಿಜವನು +ದೇಹ +ನಿಸ್ಪೃಹನಾಗು +ನೀನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗತೋದಕದಲುರೆ ಸೇತುಸಂಬಂಧದಲಿ ಫಲವೇನು

ಪದ್ಯ ೮೨: ಅರ್ಜುನನು ಕೃಷ್ಣನನ್ನು ಹೇಗೆ ವರ್ಣಿಸಿದನು?

ಪರಮಪುಣ್ಯ ಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿರ್ದ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ನೆನೆದ ಮಾತ್ರದಿಂದ ಪರಮಪುಣ್ಯವನ್ನು ಕೊಡುವವನೇ, ಪಾವನ ಚರಿತ್ರನೇ, ಸುಂದರವಾದ ವಿಲಾಸವುಳ್ಲವನೇ, ನಿರ್ಮಲನೇ, ಲೀಲೆಗಾಗಿ ಅನೇಕ ಭುವನಗಳನ್ನು ಪ್ರಕಟಿಸಿದವನೇ, ಅವಯವಗಳಿಲ್ಲದವನೇ, ದ್ವಂದ್ವಗಳಿಲ್ಲದವನೇ, ನಿಸ್ಪೃಹನೇ, ಸಾಟಿಯಿಲ್ಲದವನೇ, ಮಾಯೆಯನ್ನು ಗೆದ್ದವನೇ, ಕರುಣಾಸಾಗರನೇ, ಶ್ರೇಷ್ಠನೇ, ಸುಂದರ ರೂಪವುಳ್ಳವನೇ ನನ್ನನ್ನು ಕರುಣಿಸು ತಂದೆ ಎಂದು ಅರ್ಜುನನು ಬೇಡಿದನು.

ಅರ್ಥ:
ಪರಮ: ಶ್ರೇಷ್ಠ; ಪುಣ್ಯ: ಶುಭವಾದ; ಶ್ಲೋಕ: ದೇವತಾ ಸ್ತುತಿ; ಪಾವನ: ಮಂಗಳ; ಚರಿತ: ಕಥೆ; ಚಾರು: ಸುಂದರ; ವಿಲಾಸ: ಅಂದ, ಸೊಬಗು; ನಿರ್ಮಲ: ಶುದ್ಧ; ವರ: ಶ್ರೇಷ್ಠ; ಕಥನ: ಹೊಗಳುವುದು; ಪ್ರಯುಕ್ತ: ನಿಮಿತ್ತ; ಪ್ರಕಟ: ತೋರು; ಭುವನ: ಜಗತ್ತು; ಶತ: ನೂರು; ನಿರವಯವ: ಅವಯವಗಳಿಲ್ಲದಿರುವವ; ನಿರ್ದ್ವಂದ್ವ: ದ್ವಂದ್ವಗಳಿಲ್ಲದಿರುವವ; ನಿಸ್ಪೃಹ:ಮುಟ್ಟಲಾಗದ; ನಿರ್ಮಾಯ: ಮಾಯೆಯನ್ನು ಮೀರಿದವನು; ಕರುಣಾಕರ: ದಯಾಸಾಗರ; ಮಹಾತ್ಮ: ಶ್ರೇಷ್ಠ; ಮನೋಜ: ಮನ್ಮಥ; ವಿಗ್ರಹ: ರೂಪ; ಕರುಣಿಸು: ದಯೆತೋರು;

ಪದವಿಂಗಡಣೆ:
ಪರಮಪುಣ್ಯ+ ಶ್ಲೋಕ +ಪಾವನ
ಚರಿತ +ಚಾರುವಿಲಾಸ +ನಿರ್ಮಲ
ವರ +ಕಥನ +ಲೀಲಾ +ಪ್ರಯುಕ್ತ +ಪ್ರಕಟ+ಭುವನ+ಶತ
ನಿರವಯವ +ನಿರ್ದ್ವಂದ್ವ +ನಿಸ್ಪೃಹ
ನಿರುಪಮಿತ +ನಿರ್ಮಾಯ +ಕರುಣಾ
ಕರ+ ಮಹಾತ್ಮ +ಮನೋಜ+ವಿಗ್ರಹ +ಕರುಣಿಸೆನಗೆಂದ

ಅಚ್ಚರಿ:
(೧) ನಿ ಕಾರದ ಪದಗಳು – ನಿರವಯವ ನಿರ್ದ್ವಂದ್ವ ನಿಸ್ಪೃಹ ನಿರುಪಮಿತ ನಿರ್ಮಾಯ

ಪದ್ಯ ೭೬: ಯಾರು ಸ್ವರ್ಗಕ್ಕೆ ಹೋಗಲು ಅರ್ಹರು?

ಭೂತದಯೆಯಲಿ ನಡೆವನೀ ತೋ
ರ್ಪಾತ ನಿರ್ಮಳ ಸತ್ಯಭಾಷಿತ
ನೀತ ಪರಹಿತನಿವ ಯಥಾಲಾಭೈಕ ಸಂತೋಷಿ
ಈತ ಶುಚಿರುಚಿಯೀತ ನಿಶ್ಚಲ
ನೀತ ನಿರ್ಭಯ ನೀತ ನಿಸ್ಪೃಹ
ನೀತರಾಗದ್ವೇಷರಹಿತನು ಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೭೬ ಪದ್ಯ)

ತಾತ್ಪರ್ಯ:
ಪಾರ್ಥ ಸ್ವರ್ಗಕ್ಕೆ ಹೋಗುವವರನ್ನು ನೋಡು, ಇವನು ಎಲ್ಲಾ ಪ್ರಾಣಿಗಳಲ್ಲೂ ದಯೆ ತೋರಿಸುವವನು, ಇಲ್ಲಿ ಕಾಣುವವನು ನಿರ್ಮಲ ಮನಸ್ಸುಳ್ಳವನು, ಇವನು ಸತ್ಯವನ್ನೇ ನುಡಿಯುವವನು, ಇವನು ಪರಹಿತ, ಇವನು ಸಿಕ್ಕಷ್ಟರಲ್ಲೇ ಸಂತೋಷ ಪಟ್ಟವನು, ಇವನು ಶುಚಿ, ಇವನು ಉಜ್ವಲ ಗುಣವುಳ್ಳವನು, ಇವನು ಸುಖ ದುಃಖಗಳಿಂದ ಪೀಡಿತನಾಗದೆ ನಿಶ್ಚಲನಾಗಿದ್ದವನು. ಇವನು ಭಯರಹಿತ, ಇವನು ಪರರ ವಸ್ತುವಿಗಾಗಲಿ, ಧನಕ್ಕಾಗಲಿ, ಆಶೆ ಪಡದಿದ್ದವನು, ಇವನು ಬಯಕೆ ದ್ವೇಷಗಳಿಲ್ಲದಿದ್ದವನು ಎಂದು ಮಾತಲಿ ಅರ್ಜುನನಿಗೆ ತೋರಿಸಿದನು.

ಅರ್ಥ:
ಭೂತ: ಜಗತ್ತಿನ ಪ್ರಾಣಿವರ್ಗ; ದಯೆ: ಕರುಣೆ; ನಿರ್ಮಳ: ವಿಮಲ, ಶುದ್ಧ; ಸತ್ಯ: ದಿಟ; ಭಾಷಿತ: ಮಾತು; ಹಿತ: ಪ್ರಿಯಕರವಾದುದು; ಸಂತೋಷ: ಹರ್ಷ; ಪರ: ಬೇರೆ; ಹಿತ: ಒಳಿತು; ಲಾಭ: ಪ್ರಯೋಜನ; ಶುಚಿ: ನಿರ್ಮಲ; ರುಚಿ: ಕಾಂತಿ, ಪ್ರಕಾಶ, ಅಪೇಕ್ಷೆ; ನಿಶ್ಚಲ: ಸ್ಥಿರವಾದುದು; ನಿರ್ಭಯ: ಭಯವಿಲ್ಲದವ; ನಿಸ್ಪೃಹ: ಆಸೆ ಇಲ್ಲದವ; ರಾಗ: ಪ್ರೀತಿ, ಮೋಹ; ದ್ವೇಷ: ವೈರ; ರಹಿತ: ಇಲ್ಲದವ;

ಪದವಿಂಗಡಣೆ:
ಭೂತ+ದಯೆಯಲಿ +ನಡೆವನ್+ಈ +ತೋ
ರ್ಪಾತ +ನಿರ್ಮಳ +ಸತ್ಯಭಾಷಿತನ್
ಈತ+ ಪರಹಿತನಿವ+ ಯಥಾಲಾಭೈಕ+ ಸಂತೋಷಿ
ಈತ +ಶುಚಿರುಚಿ+ಈತ +ನಿಶ್ಚಲನ್
ಈತ +ನಿರ್ಭಯನ್ +ಈತ +ನಿಸ್ಪೃಹನ್
ಈತ+ರಾಗದ್ವೇಷ+ರಹಿತನು +ಪಾರ್ಥ+ ಕೇಳೆಂದ

ಅಚ್ಚರಿ:
(೧) ಸ್ವರ್ಗಕ್ಕೆ ಹೋಗುವ ಗುಣವುಳ್ಳವರು – ಸತ್ಯಭಾಷಿತ, ಭೂತದಯೆ, ನಿರ್ಮಳ, ಪರಹಿತ, ಶುಚಿರುಚಿ, ನಿಶ್ಚಲ, ನಿರ್ಭಯ, ನಿಸ್ಪೃಹ
(೨) ನ ಕಾರದ ಪದಪುಂಜ – ನಿಶ್ಚಲ ನೀತ ನಿರ್ಭಯ ನೀತ ನಿಸ್ಪೃಹ ನೀತರಾಗದ್ವೇಷರಹಿತನು

ಪದ್ಯ ೭೫: ದುರ್ಯೋಧನನು ಶಕುನಿಯನ್ನು ಹೇಗೆ ಸಮರ್ಥಿಸಿಕೊಂಡನು?

ನೀ ಹಿತವನೈ ಶಕುನಿ ರಾಜ
ದ್ರೋಹಿಯೈ ಹುಸಿಯಲ್ಲ ನೀಣೇ
ಹೋಹುದೈ ನಿನಗಾವುದಭಿಮತವಾ ದಿಗಂತರಕೆ
ಐಹಿಕಾಮುಷ್ಮಿಕದ ವಿಭವೋ
ತ್ಸಾಹ ನಿಸ್ಪೃಹರಾವಲೇ ಸಂ
ದೇಹವೇ ನೀವರಿಪಿರೆಂದನು ತೂಗಿ ತುದಿವೆರಳ (ಸಭಾ ಪರ್ವ, ೧೪ ಸಂಧಿ, ೭೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಮಾವ ಶಕುನಿ ನೀನು ನನಗೆ ಹಿತೈಷಿ. ಆದರೆ ವಿದುರನು ನಿನ್ನನ್ನು ರಾಜದ್ರೋಹಿಯೆಂದು ಹೇಳುತ್ತಾನೆ, ಅದು ಸುಳ್ಳಿರಲಾರದು, ನಿನಗೆ ಎಲ್ಲಿಗೆ ಬೇಕೋ ಆ ದಿಕ್ಕಿಗೆ ಹೋಗು ಈ ಲೋಕ, ಪರಲೋಕಗಳ ವೈಭವವು ನಮಗೆ ಬೇಕಾಗಿಲ್ಲವಂತೆ, ಇದರಲ್ಲೇನಾದರೂ ಅನುಮಾನವಿದೆಯೇ, ನಿನಗೆ ಗೊತ್ತಿಲ್ಲ ಬಿಡು ಎನ್ನುತ್ತಾ ತುದಿ ಬೆರಳನ್ನಾಡಿಸಿದನು.

ಅರ್ಥ:
ಹಿತ: ಒಳಿತು; ದ್ರೋಹ: ವಿಶ್ವಾಸಘಾತ, ವಂಚನೆ; ಹುಸಿ: ಸುಳ್ಳು; ಹೋಹು: ಹೋಗು, ತೆರಳು; ಅಭಿಮತ: ಅಭಿಪ್ರಾಯ; ದಿಗಂತ: ದಿಕ್ತಟ, ದಿಕ್ಕಿನ ತುದಿ; ಐಹಿಕ: ಇಹಲೋಕ; ಆಮುಷ್ಮಿಕ: ಪರಲೋಕ; ವಿಭವ: ಸಿರಿ, ಸಂಪತ್ತು; ಉತ್ಸಾಹ: ಹುರುಪು, ಆಸಕ್ತಿ; ನಿಸ್ಪೃಹ: ಆಸೆ ಇಲ್ಲದವ; ಸಂದೇಹ: ಅನುಮಾನ; ಅರಿಪು: ಮನಸ್ಸಿಗೆ ತಿಳಿಯುವಂತೆ ಹೇಳು; ತೂಗಿ: ಅಲ್ಲಾಡಿಸು; ತುದಿ: ಕೊನೆ, ಅಗ್ರ; ವೆರಳು: ಬೆರಳು;

ಪದವಿಂಗಡಣೆ:
ನೀ+ ಹಿತವನೈ+ ಶಕುನಿ +ರಾಜ
ದ್ರೋಹಿಯೈ +ಹುಸಿಯಲ್ಲ+ ನೀನೇ
ಹೋಹುದೈ +ನಿನಗಾವುದ್+ಅಭಿಮತವ್+ಆ+ ದಿಗಂತರಕೆ
ಐಹಿಕ+ ಆಮುಷ್ಮಿಕದ +ವಿಭವ
ಉತ್ಸಾಹ +ನಿಸ್ಪೃಹರ್+ಆವಲೇ +ಸಂ
ದೇಹವೇ +ನೀವ್+ಅರಿಪಿರೆಂದನು +ತೂಗಿ +ತುದಿವೆರಳ

ಅಚ್ಚರಿ:
(೧) ದುರ್ಯೋಧನನ ಭಾವವನ್ನು ಚಿತ್ರಿಸುವ ಪರಿ – ಸಂದೇಹವೇ ನೀವರಿಪಿರೆಂದನು ತೂಗಿ ತುದಿವೆರಳ
(೨) ಐಹಿಕ, ಆಮುಷ್ಮಿಕ – ಪದಗಳ ಬಳಕೆ

ಪದ್ಯ ೩೫: ಧರ್ಮಜನು ಶಕುನಿಗೆ ಏನು ಉತ್ತರವಿನ್ನಿತ್ತನು?

ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು
ಸಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿರಾಗಿಗಳೊಡನೆ ದು
ಸ್ಸಹಕಣಾ ಸಮ್ಮೇಳವೆಂದನು ಧರ್ಮಸುತ ನಗುತ (ಸಭಾ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶಕುನಿಯ ಹಂಗಿಸುವ ನುಡಿಗೆ ಧರ್ಮರಾಯನು, ಶಕುನಿ ನೀವು ಹೇಳಿದ್ದು ನಿಜ, ಸಜ್ಜನರ ಜೊತೆಗೆ ಪಗಡೆಯಾಡಬಹುದು. ನೀವಿಬ್ಬರೂ (ಶಕುನಿ, ದುರ್ಯೋಧನ) ಕುಹಕವಿದ್ಯಾ ಸಾರ್ವಭೌಮರು. ಸಹೃದಯರಿಗೂ, ಮೋಸಗಾರರಿಗೂ, ಅತಿಯಾದ ಆಸೆಯುಳ್ಳವರಿಗೂ, ನಿಸ್ಪೃಹರಿಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಧರ್ಮಜನು ನಗುತ್ತಾ ಹೇಳಿದನು.

ಅರ್ಥ:
ಅಹುದು: ಹೌದು; ಹೊಲ್ಲ: ಹೀನ ವ್ಯಕ್ತಿ, ಕೆಟ್ಟವನು; ಸುಜನ: ಒಳ್ಳೆಯ ವ್ಯಕ್ತಿ; ಕುಹಕ: ಮೋಸ, ವಂಚನೆ; ಸಾರ್ವಭೌಮ: ಚಕ್ರವರ್ತಿ; ಸಹೃದಯ: ಒಳ್ಳೆಯ ವ್ಯಕ್ತಿ; ಕುಟಿಲ: ಕೆಟ್ಟ, ನೀಚ; ನಿಸ್ಪೃಹ: ಆಸೆ ಇಲ್ಲದವ; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ದುಸ್ಸಹ: ಸಹಿಸಲಸಾಧ್ಯವಾದ; ಸಮ್ಮೇಳ: ಸಹವಾಸ; ನಗು: ಸಂತಸ;

ಪದವಿಂಗಡಣೆ:
ಅಹುದು +ಹೊಲ್ಲೆಹವಾವುದ್+ಆಡಲು
ಬಹುದು+ ಸುಜನರ+ ಕೂಡೆ +ನೀವೇ
ಕುಹಕ+ ವಿದ್ಯಾ+ಸಾರ್ವಭೌಮರು +ಶಕುನಿ +ಕೌರವರು
ಸಹೃದಯರಿಗ್+ಅತಿ +ಕುಟಿಲರಲಿ+ ನಿ
ಸ್ಪೃಹರಿಗ್+ಅತಿರಾಗಿಗಳ್+ಒಡನೆ+ ದು
ಸ್ಸಹಕಣಾ +ಸಮ್ಮೇಳವೆಂದನು +ಧರ್ಮಸುತ +ನಗುತ

ಅಚ್ಚರಿ:
(೧) ಸಹೃದಯ, ಕುಟಿಲ, ನಿಸ್ಪೃಹ, ಅತಿರಾಗಿ – ವಿವಿಧ ಜನರ ಸ್ವಭಾವ
(೨) ಶಕುನಿಯನ್ನು ಕರೆದ ಬಗೆ – ನೀವೇ ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು