ಪದ್ಯ ೩೭: ಅರ್ಜುನನು ಏಕೆ ಕರ್ಣನನು ಕೊಲ್ಲುವುದಿಲ್ಲವೆಂದ -೨?

ಬಿಸುಟು ಹೋದನು ರಥವ ಸಾರಥಿ
ವಸುಧೆಯಲಿ ರಥವೆದ್ದು ಕೆಡೆದುದು
ನಿಶಿತಮಾರ್ಗಣವಿಲ್ಲ ಕಯ್ಯಲಿ ದಿವ್ಯದನುವಿಲ್ಲ
ಎಸುವಡೆಂತೇಳುವುವು ಕಯ್ ನೀ
ಬೆಸಸುವಡೆ ಮನವೆಂತು ಬಂದುದು
ಬಸುರ ಶಿಖಿ ಬಲುಹಾಯ್ತು ಕರ್ಣನ ಕೊಲುವನಲ್ಲೆಂದ (ಕರ್ಣ ಪರ್ವ, ೨೬ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕರ್ಣನ ಸ್ಥಿತಿಯನ್ನು ನೋಡಿ ಅರ್ಜುನ, ಕೃಷ್ಣ, ಇವನ ಸಾರಥಿಯು ಇವನ ರಥವನ್ನು ತೊರೆದು ಹೋಗಿದ್ದಾನೆ, ರಥವು ನೆಲದಲ್ಲಿ ಹೂತು ಹೋಗಿದೆ, ಕೈಯಲ್ಲಿ ಬಿಲ್ಲಿಲ್ಲ, ಬಾಣವಿಲ್ಲ, ಇವನ ಮೇಲೆ ಬಾಣ ಬಿಡಲು ನನ್ನ ಕೈಯಾದರೂ ಹೇಗೆ ಮೇಲೇಳುತ್ತದೆ? ನೀನಗೆ ಅಪ್ಪಣೆ ಕೊಡಲು ಮನಸ್ಸಾದರೂ ಹೇಗೆ ಬರುತ್ತದೆ? ಹೊಟ್ಟೆಯಲ್ಲಿ ಬೆಂಕಿ ಬಿದ್ದಿದೆ, ಬಹಳ ನೋವಾಗಿದೆ, ನಾನು ಕರ್ಣನನ್ನು ಕೊಲ್ಲುವುದಿಲ್ಲ ಎಂದು ಅರ್ಜುನನು ಕೃಷ್ಣನಿಗೆ ಹೇಳಿದನು.

ಅರ್ಥ:
ಬಿಸುಟು: ಹೊರಹಾಕು, ತೊರೆದು; ಹೋಗು: ತೆರಳು; ರಥ: ಬಂಡಿ; ಸಾರಥಿ: ಸೂತ, ರಥವನ್ನು ಓಡಿಸುವವ; ವಸುಧೆ: ಭೂಮಿ; ಕೆಡೆ: ಬೀಳು, ಕುಸಿ; ನಿಶಿತ: ಹರಿತ; ಮಾರ್ಗಣ: ಬಾಣ; ಕಯ್ಯ್: ಹಸ್ತ; ದಿವ್ಯ: ಶ್ರೇಷ್ಠ; ಧನು: ಬಿಲ್ಲು; ಎಸು: ಬಾಣ ಬಿಡು; ಏಳು: ಮೇಲೇರಿಸು; ಬೆಸಸು: ಆಜ್ಞಾಪಿಸು, ಹೇಳು; ಮನ: ಮನಸ್ಸು; ಬಸುರ: ಗರ್ಭ; ಶಿಖಿ: ಬೆಂಕಿ; ಬಲುಹು: ಬಹಳ; ಕೊಲು: ಸಾಯಿಸು;

ಪದವಿಂಗಡಣೆ:
ಬಿಸುಟು +ಹೋದನು +ರಥವ +ಸಾರಥಿ
ವಸುಧೆಯಲಿ +ರಥವ್+ಇದ್ದು +ಕೆಡೆದುದು
ನಿಶಿತಮಾರ್ಗಣವಿಲ್ಲ+ ಕಯ್ಯಲಿ +ದಿವ್ಯದನುವಿಲ್ಲ
ಎಸುವಡ್+ಎಂತ್+ಏಳುವುವು +ಕಯ್ +ನೀ
ಬೆಸಸುವಡೆ +ಮನವೆಂತು +ಬಂದುದು
ಬಸುರ +ಶಿಖಿ +ಬಲುಹಾಯ್ತು +ಕರ್ಣನ +ಕೊಲುವನಲ್ಲೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಸುರ ಶಿಖಿ ಬಲುಹಾಯ್ತು