ಪದ್ಯ ೭೦: ಶ್ರೀಕೃಷ್ಣನಿಗೆ ಯಾರು ದೃಷ್ಟಿ ತೆಗೆದರು?

ಮೇಲೆ ಬೀಳುವ ಮಂದಿಯನು ಕೈ
ಗೋಲಿನವರಪ್ಪಳಿಸೆ ಲಕ್ಷ್ಮೀ
ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ
ಮೇಲು ನೆಲೆಯುಪ್ಪರಿಗೆಗಳವರ
ಬಾಲೆಯರ ಕಡೆಗಂಗಳೆಸೆವ ನಿ
ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ (ವಿರಾಟ ಪರ್ವ, ೧೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ದರ್ಶನಾಕಾಂಕ್ಷಿಗಳಾಗಿ ಮೇಲೆ ನುಗ್ಗಿ ಬಂದ ಜನರನ್ನು ಕೈಯಲ್ಲಿ ಕೋಲನ್ನು ಹಿಡಿದ ಕಾವಲುಗಾರರು ಹೊಡೆಯಲು, ಶ್ರೀಕೃಷ್ಣನು ಅವರನ್ನು ಬಯ್ದು ಸರ್ವರಿಗೂ ದರ್ಶನವನ್ನಿತ್ತನು. ಉಪ್ಪರಿಗೆಯ ಮೇಲೆ ನಿಂತ ತರುಣಿಯರು ತಮ್ಮ ಓರೆನೋಟಗಳಿಂದ ಅವನಿಗೆ ದೃಷ್ಟಿಯನ್ನು ತೆಗೆದರು. ಶ್ರೀಕೃಷ್ಣನು ಅರಮನೆಗೆ ಆಗಮಿಸಿದನು.

ಅರ್ಥ:
ಬೀಳು: ಎರಗು; ಮಂದಿ: ಜನ; ಕೈಗೋಲಿ: ಕಾವಲುಗಾರ; ಅಪ್ಪಳಿಸು: ಹೊಡೆ; ಲಕ್ಷ್ಮೀಲೋಲ: ಲಕ್ಷ್ಮಿಯ ಪ್ರಿಯಕರ; ಜರೆ: ಬಯ್ಯು; ಕಾಣಿಸು: ತೋರು; ಪುರಜನ: ನಗರದ ಜನ; ಮೇಲುನೆಲೆ: ಮಹಡಿ; ಉಪ್ಪರಿಗೆ: ಮಹಡಿ, ಸೌಧ; ವರ: ಶ್ರೇಷ್ಠ; ಬಾಲೆ: ಯುವಕಿ; ಕಡೆ: ತುದಿ; ಕಂಗಳು: ಕಣ್ಣು; ಎಸೆ: ತೋರು; ನಿವಾಳಿ: ದುಷ್ಟದೃಷ್ಟಿ ನಿವಾರಿಸುವುದು; ಕೈಕೊಳು: ನೆರವೇರಿಸು; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಮೇಲೆ +ಬೀಳುವ +ಮಂದಿಯನು +ಕೈ
ಗೋಲಿನವರ್+ಅಪ್ಪಳಿಸೆ +ಲಕ್ಷ್ಮೀ
ಲೋಲನ್+ಅವದಿರ +ಜರೆದು +ಕಾಣಿಸಿಕೊಳುತ +ಪುರಜನವ
ಮೇಲು +ನೆಲೆ+ಉಪ್ಪರಿಗೆಗಳ+ವರ
ಬಾಲೆಯರ +ಕಡೆಗಂಗಳ್+ಎಸೆವ +ನಿ
ವಾಳಿಗಳ+ ಕೈಕೊಳುತ +ಹೊಕ್ಕನು +ರಾಜಮಂದಿರವ

ಅಚ್ಚರಿ:
(೧) ಕೃಷ್ಣನು ಭಕ್ತವತ್ಸಲ ಎಂದು ತೋರುವ ಪರಿ – ಲಕ್ಷ್ಮೀಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ; ಬಾಲೆಯರ ಕಡೆಗಂಗಳೆಸೆವ ನಿವಾಳಿಗಳ ಕೈಕೊಳುತ

ಪದ್ಯ ೨೭: ವಿರಾಟನು ಉತ್ತರನನ್ನು ಹೇಗೆ ಸ್ವಾಗತಿಸಿದನು?

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ (ವಿರಾಟ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ವಿರಾಟನು ಮಗನನ್ನು ಸ್ವಾಗತಿಸುತ್ತಾ, ಮನಗೇ, ನೀನು ವಸುಕುಲದ ರಾಜರಲ್ಲಿ ಚಿಂತಾಮಣಿಯಂತೆ ಅನರ್ಘ್ಯರತ್ನ, ನೀನು ಕೌರವ ಸೈನ್ಯಕ್ಕೆ ಧೂಮಕೇತು, ಮಗೂ ಬಾ ಎಂದು ಕರೆದು, ಆಲಿಂಗಿಸಿ ಕುಳ್ಳಿರಿಸಿದನು. ಸ್ತ್ರೀಯರು ಇವನ ದೃಷ್ಟಿನಿವಾರಣೆಗಾಗಿ ಉಪ್ಪಿನಾರತಿ ಎತ್ತಿದರು, ಉತ್ತಮ ವಸ್ತ್ರಗಳ ನಿವಾಳಿ , ರತ್ನಗಳ ಕಾಣಿಕೆ, ಬಣ್ಣದ ದೀಪಗಳನ್ನು ತಂದು ಸ್ವಾಗತಿಸಿದರು.

ಅರ್ಥ:
ಮಗ: ಪುತ್ರ; ವಸು: ಐಶ್ವರ್ಯ, ಸಂಪತ್ತು; ಕುಲ: ವಂಶ; ನೃಪ: ರಾಜ; ಚಿಂತಾಮಣಿ: ಸ್ವರ್ಗಲೋಕದ ಒಂದು ದಿವ್ಯ ರತ್ನ; ರಾಯ: ರಾಜ; ಮೋಹರ: ಯುದ್ಧ; ಧೂಮಕೇತು: ಅಮಂಗಳಕರವಾದುದು, ಉಲ್ಕೆ; ಕಂದ: ಮಗು; ಬಾ: ಆಗಮಿಸು; ಅಪ್ಪು: ಆಲಿಂಗನ; ಕುಳ್ಳಿರಿಸು: ಆಸೀನನಾಗು; ಕಾಮಿನಿ: ಹೆಣ್ಣು; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಭಿರಾಮ: ಸುಂದರವಾದ; ವಸ್ತ್ರ: ಬಟ್ಟೆ; ನಿವಾಳಿ: ದೃಷ್ಟಿದೋಷ ಪರಿಹಾರಕ್ಕಾಗಿ ಇಳಿ ತೆಗೆಯುವುದು; ರತ್ನ: ಬೆಲೆಬಾಳುವ ಮಣಿ; ಸ್ತೋಮ: ಗುಂಪು; ಬಣ್ಣ: ವರ್ಣ; ಸೊಡರು: ದೀಪ; ಸುಳಿ: ಆವರಿಸು, ಮುತ್ತು; ಹರುಷ: ಸಂತಸ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಬಾ +ಮಗನೆ +ವಸುಕುಲದ +ನೃಪ +ಚಿಂ
ತಾಮಣಿಯೆ +ಕುರುರಾಯ +ಮೋಹರ
ಧೂಮಕೇತುವೆ +ಕಂದ +ಬಾಯೆಂದಪ್ಪಿ+ ಕುಳ್ಳಿರಿಸೆ
ಕಾಮಿನಿಯರ್+ಉಪ್ಪಾರತಿಗಳ್+ಅಭಿ
ರಾಮ+ವಸ್ತ್ರ +ನಿವಾಳಿ +ರತ್ನ
ಸ್ತೋಮ +ಬಣ್ಣದ +ಸೊಡರು +ಸುಳಿದವು+ ಹರುಷದೊಗ್ಗಿನಲಿ

ಅಚ್ಚರಿ:
(೧) ಮಗನನ್ನು ಹೊಗಳಿದ ಪರಿ – ವಸುಕುಲದ ನೃಪ ಚಿಂತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ

ಪದ್ಯ ೨೦: ಧರ್ಮಜನು ಯಾರ ಸೇವಕನಾದನು?

ಓಲಗಕೆ ಬಂದಖಿಳರಾಯರ
ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ
ಕಾಲವಾವನನಾವಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ (ವಿರಾಟ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಆಸ್ಥಾನಕ್ಕೆ ಬಂದ ರಾಜರ ಕಿರೀಟಗಳ ಮುತ್ತು ರತ್ನಗಳು ಧರ್ಮಜನ ಪಾದಗಳಿಗೆ ನಿವಾಳಿಮಾಡುತ್ತಿದ್ದವು. ಆದರೆ ಕಾಲವು ಯಾರನ್ನು ಯಾವ ರೀತಿಯಲ್ಲಿ ಕೀಳುಗಳೆಯುತ್ತದೆ ಎನ್ನುವುದು ಮಾತಿಗೆ ಮೀರಿದ್ದು. ಹುಲು ಮಾಂಡಲಿಕನಾದ ವಿರಾಟನು ಧರ್ಮಜನನ್ನು ಇಂದು ತನ್ನ ಸೇವಕನಾಗಿಟ್ಟುಕೊಂಡನು.

ಅರ್ಥ:
ಓಲಗ: ದರ್ಬಾರು; ಬಂದು: ಆಗಮಿಸು; ಅಖಿಳ: ಎಲ್ಲಾ; ರಾಯ: ರಾಜ; ಮೌಳಿ: ಶಿರ; ರಾಜರಮೌಳಿ: ರಾಜರಲ್ಲಿ ಶ್ರೇಷ್ಠನಾದವ; ಮೌಕ್ತಿಕ: ಮುತ್ತು; ಮಣಿ: ಬೆಲೆಬಾಳುವ ರತ್ನ; ಮಯೂಖ: ಕಿರಣ, ರಶ್ಮಿ; ನಿವಾಳಿ: ನೀವಳಿಸುವುದು, ದೃಷ್ಟಿ ತೆಗೆಯುವುದು; ನೆರೆ: ಪಕ್ಕ, ಪಾರ್ಶ್ವ; ಮೆರೆ: ಪ್ರಕಾಶಿಸು; ಪಾದ: ಚರಣ; ಪದ್ಮ: ಕಮಲ; ಯುಗ: ಎರಡು; ಕಾಲ: ಸಮಯ; ಪರಿ: ರೀತಿ; ಕೀಳು: ನೀಅ; ಆಳು: ಸೇವಕ; ಕ್ಷಿತಿಪ: ರಾಜ;

ಪದವಿಂಗಡಣೆ:
ಓಲಗಕೆ +ಬಂದ್+ಅಖಿಳ+ರಾಯರ
ಮೌಳಿ +ಮೌಕ್ತಿಕ+ ಮಣಿ +ಮಯೂಖ +ನಿ
ವಾಳಿಯಲಿ +ನೆರೆ +ಮೆರೆವುದ್+ಆತನ +ಪಾದ +ಪದ್ಮಯುಗ
ಕಾಲವ್+ಆವನನ್+ಆವ+ಪರಿಯಲಿ
ಕೀಳು +ಮಾಡದು +ಧರ್ಮ+ಪುತ್ರನನ್
ಆಳು+ಕೊಂಡನು +ಮತ್ಸ್ಯನೆಲೆ+ ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರಾಜ, ಕ್ಷಿತಿಪ – ಸಮನಾರ್ಥಕ ಪದ
(೨) ಮ ಕಾರದ ಸಾಲು ಪದ – ಮೌಳಿ ಮೌಕ್ತಿಕ ಮಣಿ ಮಯೂಖ
(೩) ಧರ್ಮಜನ ಹಿಂದಿನ ಹಿರಿಮೆ – ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ

ಪದ್ಯ ೫೭: ಇಂದ್ರನು ಬಾಲೆಯರಿಗೆ ಏನು ಹೇಳಿದನು?

ಕೇಳಿದನು ಹರುಷಾಶ್ರು ಹೊದಿಸಿ ದು
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ
ಬಾಲೆಯರ ಬರಹೇಳು ರತ್ನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿ ಮಂಡಿತ ಚರಣನೆದ್ದನು ಬಂದನಿದಿರಾಗಿ (ಅರಣ್ಯ ಪರ್ವ, ೧೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ದೇವೇಂದ್ರನು ಸಂತೋಷದ ವಿಷಯವನ್ನು ಕೇಳಿ ಅವನ ಸಾವಿರ ಕಣ್ಣುಗಳು ಆನಂದಾಶ್ರುಗಳನ್ನು ಹೊರಸೂಸಿದವು. ಅವನು ರೋಮಾಂಚನಗೊಂಡು ಸಂಪೂರ್ಣ ಸಂತೋಷದಲ್ಲಿ ಮುಳುಗಿದನು. ರತ್ನದಾರತಿಗಳನ್ನು ತೆಗೆದುಕೊಂಡು ಯುವತಿಯರು ಬರಲಿ, ಅರ್ಜುನನಿಗೆ ದೃಷ್ಟಿತೆಗೆಯಲಿ ಎನ್ನುತ್ತಾ ದೇವೆಂದ್ರನು ಎದ್ದು ನನಗಿದಿರಾಗಿ ಬಂದನು.

ಅರ್ಥ:
ಕೇಳು: ಆಲಿಸು; ಹರುಷ: ಸಂತಸ; ಆಶ್ರು: ಕಣ್ಣಿರು; ಹೊದಿ: ಧರಿಸಿಕೊಳ್ಳು; ಆಲಿ: ಕಣ್ಣು; ಸಾವಿರ: ಸಹಸ್ರ; ಉಬ್ಬು: ಹಿಗ್ಗು; ಮೇಲು: ಹೆಚ್ಚಾದ; ಮದ: ಮತ್ತು, ಸೊಕ್ಕು; ರೋಮ: ಕೂದಲ; ಪುಳಕ: ರೋಮಾಂಚನ; ಪೂರ್ಣ: ತುಂಬ; ಸೌಖ್ಯ: ಸುಖ; ಬಾಲೆ: ಹೆಣ್ಣು; ಬರಹೇಳು: ಆಗಮಿಸು; ರತ್ನ: ಬೆಲೆಬಾಳುವ ಮಣಿ; ನಿವಾಳಿಸು: ದೃಷ್ಟಿತೆಗೆಯುವುದು; ತರಹೇಳು: ಬರೆಮಾಡು; ಸುರಮೌಳಿ: ಇಂದ್ರ; ಮಂಡಿತ: ಅಲಂಕೃತವಾದ; ಚರಣ: ಪಾದ; ಎದ್ದು; ಮೇಲೇಳು; ಬಂದು: ಆಗಮಿಸು; ಇದಿರು: ಎದುರು;

ಪದವಿಂಗಡಣೆ:
ಕೇಳಿದನು +ಹರುಷ+ಆಶ್ರು+ ಹೊದಿಸಿದುವ್
ಆಲಿಗಳ+ ಸಾವಿರವನ್+ಉಬ್ಬಿದ
ಮೇಲು+ಮದದ+ ಸರೋಮ+ಪುಳಕದ+ ಪೂರ್ಣ+ಸೌಖ್ಯದಲಿ
ಬಾಲೆಯರ+ ಬರಹೇಳು +ರತ್ನ+ ನಿ
ವಾಳಿಗಳ+ ತರಹೇಳ್+ಎನುತ +ಸುರ
ಮೌಳಿ+ ಮಂಡಿತ+ ಚರಣನೆದ್ದನು+ ಬಂದನ್+ಇದಿರಾಗಿ

ಅಚ್ಚರಿ:
(೧) ಇಂದ್ರನನ್ನು ಕರೆದ ಪರಿ – ಸುರಮೌಳಿ, ಆಲಿಗಳ ಸಾವಿರವನ್;
(೨) ಸಂತೋಷಗೊಂಡನೆಂದು ಹೇಳುವ ಪರಿ – ಹರುಷಾಶ್ರು ಹೊದಿಸಿ ದುವಾಲಿಗಳ ಸಾವಿರವನುಬ್ಬಿದ ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ