ಪದ್ಯ ೧೧: ಭೀಮಾರ್ಜುನರ ಸಾಹಸವನ್ನು ಧರ್ಮಜನು ಹೇಗೆ ತಿಳಿಸಿದನು?

ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರಪುರದಲಿ
ಕೆಲವು ದಿನವಿರಲರ್ಜುನಂಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತಕವಚರ
ಗೆಲಿದು ಬಂದನು ಪಾರ್ಥನದರೊಳು
ಕೆಲಬರಸುರರ ಕಾದಿಕೊಂದನು ಭೀಮನಡವಿಯಲಿ (ಅರಣ್ಯ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಷ್ಣ ಒಂದಾದ ಮೇಲೊಂದು ಹಲವು ಕಾಡುಗಳಲ್ಲಿ ನಾವು ಅಲೆದೆವು. ಅರ್ಜುನನು ಪಾಶುಪತಾಸ್ತ್ರವನ್ನು ಪಡೆದ ಮೇಲೆ ಕಾಲಕೇಯನಿವಾತ ಕವಚರನ್ನು ಸಂಹರಿಸಿದನು. ಅವನಿಗೆ ಊರ್ವಶಿಯು ಶಾಪವನ್ನು ನೀಡಿದಳು, ಇಲ್ಲಿ ಭೀಮನು ಅನೇಕ ರಾಕ್ಷಸರನ್ನು ಸಂಹರಿಸಿದನು.

ಅರ್ಥ:
ತೊಳಲು: ಬವಣೆ, ಸಂಕಟ; ಹಳುವ: ಕಾಡು; ಅಮರಪುರ: ಸ್ವರ್ಗ; ಕೆಲವು: ಸ್ವಲ್ಪ; ದಿನ: ದಿವಸ; ಶಾಪ: ನಿಷ್ಠುರದ ನುಡಿ; ಖಳ: ದುಷ್ಟ; ಗೆಲುವು: ಜಯ; ಅಸುರ: ರಾಕ್ಷಸ; ಕಾದು: ಹೋರಾಡು; ಕೊಂದು: ಸಾಯಿಸು; ಅಡವಿ: ಕಾಡು;

ಪದವಿಂಗಡಣೆ:
ತೊಳಲಿದೆವಲಾ+ ಕೃಷ್ಣ +ತಪ್ಪದೆ
ಹಳುವ+ ಹಳುವ್+ಅವನ್+ಅಮರಪುರದಲಿ
ಕೆಲವು +ದಿನವಿರಲ್+ಅರ್ಜುನಂಗಾಯ್ತ್+ಊರ್ವಶಿಯ +ಶಾಪ
ಖಳರನಲ್ಲಿ +ನಿವಾತಕವಚರ
ಗೆಲಿದು +ಬಂದನು +ಪಾರ್ಥನ್+ಅದರೊಳು
ಕೆಲಬರ್+ಅಸುರರ +ಕಾದಿಕೊಂದನು+ ಭೀಮನ್+ಅಡವಿಯಲಿ

ಅಚ್ಚರಿ:
(೧) ಪದರಚನೆ – ಹಳುವವನಮರಪುರದಲಿ

ಪದ್ಯ ೫೪: ಭಟರು ಇಂದ್ರನಿಗೆ ಏನು ಹೇಳಿದರು?

ಕಟ್ಟುಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿಹುಡಿಯಾಯ್ತು ದನುಜರ
ಹುಟ್ಟು ಉರಿದುದು ಜೀಯ ಚಿತ್ತೈಸೆಂದರಿಂದ್ರಂಗೆ (ಅರಣ್ಯ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಒಡೆಯಾ, ವಿಜಯ ಧ್ವಜವನ್ನೇರಿಸು, ದುರುಳತನದಿಂದ ಮೆರೆಯುತ್ತಿದ್ದ ದಾನವರ ಪರಾಕ್ರಮಿಗಳು ಅಳಿಸಿಹೋಗಿದ್ದಾರೆ, ನೀನ ನೆಟ್ಟ ಸಸಿ ಕಲ್ಪವೃಕ್ಷದ ಸಸಿ, ಅದು ಬಯಸಿದುದನ್ನು ನೀಡುತ್ತದೆ, ಶತ್ರುಗಳಾದ ನಿವಾತಕವಚರ ಸೈನ್ಯ ಪುಡಿಯಾಯಿತು, ಅಸುರರ ಹುಟ್ಟಡಗಿತು ಎಂದು ಭಟರು ಇಂದ್ರನಿಗೆ ಹೇಳಿದರು.

ಅರ್ಥ:
ಕಟ್ಟು: ಹೂಡು; ಗುಡಿ: ಧ್ವಜ, ಬಾವುಟ; ಖೋಡಿ: ದುರುಳತನ; ಜಗಜಟ್ಟಿ: ಪರಾಕ್ರಮಿ; ನುಗ್ಗು: ಚೂರಾಗು; ನಟ್ಟ: ಹೂಳು, ನಿಲ್ಲಿಸು; ಸಸಿ: ಎಳೆಯ ಗಿಡ, ಸಸ್ಯ; ಸುರ: ದೇವತೆ; ಕುಜ: ಗಿಡ, ಮರ; ಸುರಕುಜ: ದೇವತೆಗಳ ಮರ, ಕಲ್ಪವೃಕ್ಷ; ಕೊಡು: ನೀಡು; ಮನೋರಥ: ಆಸೆ, ಬಯಕೆ; ಕೆಟ್ಟು: ಹಾಳಾಗು; ಅಹಿತ: ವೈರಿ; ಥಟ್ಟು: ಗುಂಪು; ಹುಡಿ: ಪುಡಿ; ದನುಜ: ರಾಕ್ಷಸ; ಹುಟ್ಟು: ಜನನ; ಉರಿ: ಸುಡು; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು; ಇಂದ್ರ: ಶಕ್ರ;

ಪದವಿಂಗಡಣೆ:
ಕಟ್ಟು+ಗುಡಿಯನು +ಖೋಡಿಯೇ +ಜಗ
ಜಟ್ಟಿಗಳು +ನುಗ್ಗಾಯ್ತಲೇ +ನೀ
ನಟ್ಟ +ಸಸಿ +ಸುರಕುಜವಲೇ +ಕೊಡದೇ +ಮನೋರಥವ
ಕೆಟ್ಟುದ್+ಅಹಿತ +ನಿವಾತಕವಚರ
ಥಟ್ಟು +ಹುಡಿಹುಡಿಯಾಯ್ತು +ದನುಜರ
ಹುಟ್ಟು +ಉರಿದುದು +ಜೀಯ +ಚಿತ್ತೈಸೆಂದರ್+ಇಂದ್ರಂಗೆ

ಅಚ್ಚರಿ:
(೧) ಅರ್ಜುನನ ಹಿರಿಮೆಯನ್ನು ಹೊಗಳುವ ಪರಿ – ನೀನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ

ಪದ್ಯ ೪೮: ಕಾಲಕೇಯರ ಬಲ ಎಂತಹುದು?

ಕೆರಳಿತಲ್ಲಿ ನಿವತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ (ಅರಣ್ಯ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಿವಾತ ಕವಚರ ಸಾವನ್ನು ಕೇಳಿದ ಕಾಲಕೇಯರು ಕೆರಳಿದರು. ನಾನು ಅವರ ಊರ ಬಳಿ ಬರುತ್ತಿದ್ದಂತೆ ನನ್ನನ್ನು ತಡೆಯಲು ನನ್ನ ರಥಕ್ಕೆ ಅಡ್ಡ ಬಂದರು. ಅಣ್ಣ ಕೇಳು, ಅವರು ಮಾಯಾ ಯುದ್ಧ ವಿಶಾರದರು. ನಿವಾತಕವಚರಿಗಿಂತ ಎರಡು ಸಾವಿರ ಪಟ್ಟು ಬಲ ಶಾಲಿಗಳು.

ಅರ್ಥ:
ಕೆರಳು: ರೇಗು, ಕನಲು; ಮರಣ: ಸಾವು; ವಾರ್ತೆ: ಸುದ್ದಿ; ಕೇಳಿ: ಆಲಿಸು; ಅಸುರ: ದಾನವ; ಪುರ: ಊರು; ಬಾಹೆ: ಹೊರಗೆ; ಹಾಯ್ದು: ಹೊಡೆ; ತರುಬು: ತಡೆ, ನಿಲ್ಲಿಸು; ರಥ: ಬಂಡಿ; ಅರಸ: ರಾಜ; ಚಿತ್ತೈಸು: ಆಲಿಸು; ಅವದಿರು: ಅವರು; ಪರಿ: ರೀತಿ, ಬಗೆ; ಮಾಯೆ: ಗಾರುಡಿ, ಇಂದ್ರಜಾಲ; ರಚನೆ: ನಿರ್ಮಾಣ, ಸೃಷ್ಟಿ; ರಂಜಿಸು: ಹೊಳೆ, ಪ್ರಕಾಶಿಸು; ಸಾವಿರ: ಸಹಸ್ರ; ಮಡಿ: ಪಟ್ಟು; ಮಿಗಿಲು: ಹೆಚ್ಚು;

ಪದವಿಂಗಡಣೆ:
ಕೆರಳಿತಲ್ಲಿ+ ನಿವಾತಕವಚರ
ಮರಣ +ವಾರ್ತೆಯ +ಕೇಳಿದ್+ಅಸುರರು
ಪುರದ +ಬಾಹೆಯೊಳ್+ಅಡ್ಡ+ಹಾಯ್ದರು+ ತರುಬಿದರು+ ರಥವ
ಅರಸ+ ಚಿತ್ತೈಸ್+ಅವದಿರಲಿ+ ಪರಿ
ಪರಿಯ +ಮಾಯಾರಚನೆ+ ರಂಜಿಸಿತ್
ಎರಡು+ ಸಾವಿರ+ ಮಡಿಗೆ +ಮಿಗಿಲು +ನಿವಾತ+ಕವಚರಿಗೆ

ಅಚ್ಚರಿ:
(೧) ನಿವಾತಕವಚ – ೧, ೬ ಸಾಲಿನ ಕೊನೆಯ ಪದ
(೨) ಕಾಲಕೇಯರ ಬಲದ ಸಾಮರ್ಥ್ಯ – ಪರಿಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ

ಪದ್ಯ ೨೬: ಅರ್ಜುನನ ಮೇಲೆ ಯಾವ ದೂರನ್ನು ಹೇಳಿದರು?

ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳನು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು (ಅರಣ್ಯ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೈತ್ಯರ ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆಯೊಳಕ್ಕೆ ಹೋಗುವಂತೆ ಮಾಡಿದೆನು. ನೊಂದ ಅವರು ನಿವಾತಕವಚರಿಗೆ ನನ್ನ ಮೇಲೆ ದೂರು ಹೇಳಿದರು. ಒಡೆಯ, ಯುದ್ಧಕ್ಕೆ ಬಂದವನು ದೇವತೆಗಳಂತೆ ತೋರುವುದಿಲ್ಲ, ಅವನು ವೀರ, ಯುದ್ಧ ವ್ಯಾಕರಣದ ಪಂಡಿತ ಎಂದು ವರ್ಣಿಸಿದರು.

ಅರ್ಥ:
ನೂಕು: ತಳ್ಳು; ದೈತ್ಯ: ರಾಕ್ಷಸ; ಚೂಣಿ: ಮುಂಭಾಗ; ಮುರಿ: ಸೀಳು; ಔಕು: ಒತ್ತು; ದುರ್ಗ: ಕೋಟೆ; ಹೊಗಿಸು: ಹೋಗು, ತೆರಳು; ವ್ಯಾಕುಲ: ದುಃಖ, ವ್ಯಥೆ; ಸೂಸು: ಎರಚು, ಚಲ್ಲು; ಭಯ: ಅಂಜಿಕೆ; ಆಕೆವಾಳ: ಪರಾಕ್ರಮಿ; ಜೀಯ: ಒಡೆಯ; ದಿವೌಕ: ದೇವತೆ; ಪರಿ: ರೀತಿ; ಯುದ್ಧ: ಕಾಳಗ; ವ್ಯಾಕರಣ: ನಿಯಮ; ಪಾಂಡಿತ್ಯ: ತಿಳಿದವ, ವಿದ್ವತ್ತು; ದೂರು: ಆರೋಪ ಮಾಡು, ಆಕ್ಷೇಪಿಸು;

ಪದವಿಂಗಡಣೆ:
ನೂಕಿ +ದೈತ್ಯರ +ಚೂಣಿಯನು +ಮುರಿದ್
ಔಕಿ+ ದುರ್ಗವ+ ಹೊಗಿಸಿದೆನು +ಸ
ವ್ಯಾಕುಲರು +ಸೂಸಿದರು+ ಭಯವ +ನಿವಾತಕವಚರಿಗೆ
ಆಕೆವಾಳನು+ ಜೀಯ +ನಮ್ಮ +ದಿ
ವೌಕಸರ+ ಪರಿಯಲ್ಲ+ ಯುದ್ಧ
ವ್ಯಾಕರಣ+ ಪಾಂಡಿತ್ಯವುಂಟ್+ಎಂದೆನ್ನ+ ದೂರಿದರು

ಅಚ್ಚರಿ:
(೧) ಸುರರಿಗೆ ದಿವೌಕಸರ ಪದದ ಬಳಕೆ
(೨) ಪರಾಕ್ರಮಿ ಎಂದು ಹೇಳುವ ಪರಿ – ದಿವೌಕಸರ ಪರಿಯಲ್ಲ ಯುದ್ಧವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು