ಪದ್ಯ ೨೯: ದ್ರೌಪದಿಯು ಹುಲ್ಲುಕಡ್ಡಿಯನ್ನು ಹಿಡಿದು ಏನೆಂದು ಹೇಳಿದಳು?

ಮರುಳುತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು (ವಿರಾಟ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎಲೈ ಮೂರ್ಖ, ನಾನು ಗಂಧರ್ವರ ಹೆಂಡತಿ, ನಿನ್ನ ದುಷ್ಟತನವನ್ನು ನನ್ನ ಪತಿಯರು ಸೈರಿಸುವುದಿಲ್ಲ. ಅವರು ಮಹಾ ಪರಾಕ್ರಮಿಗಳು. ಆದುದರಿಂದ ಈ ಹುಚ್ಚನ್ನು ಬಿಟ್ಟು ಬಿಡು. ಅಪಕೀರ್ತಿ ನಾರಿಯನ್ನು ಸೇರಬೇಡ. ನಿನ್ನ ಮನೆಗೆ ತೆರಳುವುದೇ ಒಳಿತು ಎಂದು ದ್ರೌಪದಿಯು ಒಂದು ಹುಲ್ಲುಕಡ್ದಿಯನ್ನು ಹಿಡಿದು ಹೇಳಿದಳು.

ಅರ್ಥ:
ಮರುಳು: ಮೂಢ; ಬೇಡ: ತೊರೆ; ಗಂಧರ್ವ: ಖಚರ; ಹೆಂಡತಿ: ಸತಿ, ಭಾರ್ಯ; ದುರುಳ: ದುಷ್ಟ; ಸೈರಿಸು: ತಾಳು, ಸಹನೆ; ಬಲ್ಲ: ತಿಳಿದ; ಸೊರಹು: ಅತಿಯಾಗಿ ಮಾತನಾಡುವಿಕೆ, ಗಳಹು; ಅಪಕೀರ್ತಿ: ಅಪಯಶಸ್ಸು; ನೆರೆ: ಜೊತೆಗೂಡು; ನಿಳಯ: ಮನೆ; ಮರಳು: ಹಿಂದಿರುಗು; ಲೇಸು: ಒಳಿತು; ತೃಣ: ಹುಲ್ಲು; ಹಿಡಿ: ಗ್ರಹಿಸು; ಸಾರು: ಪ್ರಕಟಿಸು;

ಪದವಿಂಗಡಣೆ:
ಮರುಳುತನ +ಬೇಡ್+ಎಲವೊ +ಗಂಧ
ರ್ವರಿಗೆ+ ಹೆಂಡತಿ+ ತಾನು +ನಿನ್ನಯ
ದುರುಳತನವನು+ ಸೈರಿಸರು +ತನ್ನವರು +ಬಲ್ಲಿದರು
ಸೊರಹದಿರು +ಅಪಕೀರ್ತಿ+ನಾರಿಯ
ನೆರೆಯದಿರು+ ನೀ +ನಿನ್ನ +ನಿಳಯಕೆ
ಮರಳುವುದು +ಲೇಸೆಂದು +ತೃಣವನು+ ಹಿಡಿದು +ಸಾರಿದಳು

ಅಚ್ಚರಿ:
(೧) ನ ಕಾರದ ಸಾಲು ಪದ – ನಾರಿಯ ನೆರೆಯದಿರು ನೀ ನಿನ್ನ ನಿಳಯಕೆ
(೨) ಮರುಳು, ಮರಳು – ಪದಗಳ ಬಳಕೆ

ಪದ್ಯ ೧೬: ಧರ್ಮಜನು ಹಣ್ಣನ್ನು ನೋಡಿ ಹೇಗೆ ಪ್ರತಿಕ್ರಯಿಸಿದನು?

ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು (ಅರಣ್ಯ ಪರ್ವ, ೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಮರಿಯಾನೆ ಗಾತ್ರದ ಜಂಬೂಫಲವನ್ನು ಕೊಂಡು ಬೇಗನೆ ನಡೆದು ಧರ್ಮಜನಿದ್ದ ಮನೆಗೆ ತಂದನು. ಇದನ್ನು ನೋಡಿದ ಧರ್ಮಜನು ಆಶ್ಚರ್ಯಪಟ್ಟು ತನ್ನ ಹತ್ತಿರದಲ್ಲಿದ್ದ ತಮ್ಮಂದಿರು, ಋಷಿಗಳನ್ನು ಕರೆದು ಈ ವಿಚಿತ್ರ ಹಣ್ಣನ್ನು ತೋರಿಸಿದನು, ಇದನ್ನು ನೀವೆಲ್ಲಾದರೂ ನೋಡಿದ್ದೀರಾ ಎಂದು ಪ್ರಶ್ನೆಯನ್ನು ಕೇಳಲು, ಋಷಿಮುನಿಗಳು ಈ ಪ್ರಶ್ನೆಗೆ ಶ್ರೀಕೃಷ್ಣನೇ ಉತ್ತರಿಸಬಲ್ಲ ಎಂದು ಹೇಳಿದರು.

ಅರ್ಥ:
ಫಲ: ಹಣ್ಣು; ಕೊಂಡು: ತೆಗೆದು; ಬೇಗ: ಶೀಘ್ರ; ನಲವು: ಸಂತಸ; ನಡೆ: ಚಲಿಸು; ಭೂಪಳ್ ರಾಜ; ನಿಳಯ: ಮನೆ; ಇಳುಹು: ಇಳಿಸು; ಸೂನು: ಮಗ; ಬೆರಗು: ಆಶ್ಚರ್ಯ; ಕೆಲ: ಹತ್ತಿರ; ಅನುಜ: ತಮ್ಮ; ಋಷಿ: ಮುನಿ; ನೋಡಿ: ವೀಕ್ಷಿಸಿ; ನಳಿನನಾಭ: ವಿಷ್ಣು, ಕೃಷ್ಣ; ನಳಿನ: ಕಮಲ; ಬಲ್ಲ: ತಿಳಿ; ಸಕಲ: ಎಲ್ಲಾ;

ಪದವಿಂಗಡಣೆ:
ಫಲವ +ಕೊಂಡ್+ಆ+ ಭೀಮ+ ಬೇಗದಿ
ನಲವಿನಲಿ +ನಡೆತಂದು +ಭೂಪನ
ನಿಳಯದಲಿ +ತಂದ್+ಇಳುಹಿದರೆ+ ಯಮಸೂನು +ಬೆರಗಾಗಿ
ಕೆಲದಲ್+ಇದ್ದ್+ಅನುಜರಿರ+ ಋಷಿ+ ಜನ
ಗಳಿರ+ ನೋಡಿರೆ+ಎನಲು +ಶಿವಶಿವ
ನಳಿನನಾಭನೆ+ ಬಲ್ಲನೆಂದರು +ಸಕಲ +ಋಷಿವರರು

ಅಚ್ಚರಿ:
(೧) ಆಶ್ಚರ್ಯಗೊಂಡಾಗ ಹೇಳುವ ಪದ – ಶಿವ ಶಿವ
(೨) ಧರ್ಮಜನನ್ನು ಯಮಸೂನು, ಕೃಷ್ಣನನ್ನು ನಳಿನನಾಭ ಎಂದು ಕರೆದಿರುವುದು

ಪದ್ಯ ೪: ಇಂದ್ರಪ್ರಸ್ಥವು ಕೃಷ್ಣಾರ್ಜುನರನ್ನು ಹೇಗೆ ಸ್ವಾಗತಿಸಿತು?

ತಳಿತ ಗುಡಿಗಳ ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರತೋರಣದೋರಣದ ನವ ಮಕರತೋರಣದ
ತಳಿಗೆ ತಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯೊಳಿವರು ಹೊಕ್ಕರು ರಾಜಮಂದಿರವ (ಸಭಾ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಕೃಷ್ಣಾರ್ಜುನರು ಖಾಂಡವವನದ ದಹನದಲ್ಲಿ ಇಂದ್ರನನ್ನು ಗೆದ್ದ ಸುದ್ದಿ ಊರೆಲ್ಲ ಹಬ್ಬಲು, ಇಡೀ ಊರೇ ಸಿಂಗಾರಗೊಂಡಿತು. ಮನೆಗಳನ್ನು ಕಲಶಗಳಿಂದ ಅಲಂಕರಿಸಿ ಧ್ವಜಾರೋಹಣಮಾಡಿ, ಬೀದಿಗಳನ್ನು ಒಪ್ಪವಾದ ತೋರಣಗಳಿಂದಲೂ, ಮಕರ ತೋರಣಗಳಿಂದಲೂ ಶೃಂಗರಿಸಿದರು. ಆರತಿಗಳನ್ನು ಎತ್ತುತ್ತಿರಲು ವಾದ್ಯಗಳು ಮೊಳಗಲು, ರಾಜರು ಬಳಸಿ ಹೊಗಳುತ್ತಿರಲು ಕೃಷ್ಣಾರ್ಜುನರು ಅರಮನೆಯನ್ನು ಸೇರಿದರು.

ಅರ್ಥ:
ತಳಿತ: ಚಿಗುರಿದ; ಗುಡಿ: ದೇವಮಂದಿರ; ಸಾಲ:ಪ್ರಾಕಾರ, ಅತ್ತಿಮರ; ಕಲಶ: ಮಂಗಲ ಬಿಂದಿಗೆ, ಕೊಡ; ನಿಳಯ: ಮನೆ; ಬೀದಿ: ರಸ್ತೆ; ತಳಿರು: ಚಿಗುರು; ತೋರಣ: ಹೆಬ್ಬಾಗಿಲು, ಅಲಂಕಾರಿಕ ಬಾಗಿಲು; ನವ: ಹೊಸ; ಮಕರ: ಮೊಸಳೆ; ತಳಿಗೆ:ತಟ್ಟೆ; ತಂಬುಲ:ಎಲೆ ಅಡಿಕೆ, ತಾಂಬೂಲ; ಆರತಿ: ನೀರಾಜನ; ಮಂಗಳ: ಶುಭ; ರಭಸ: ವೇಗ; ಮಂಗಳಿತ: ಮಂಗಳಕರವಾದ; ಅಖಿಳ: ಎಲ್ಲಾ; ಆವಳಿ: ಸಾಲು, ಗುಂಪು; ಹೊಕ್ಕು: ಸೇರು; ರಾಜಮಂದಿರ: ಅರಮನೆ; ಓರಣ: ಕ್ರಮ, ಸಾಲು, ಅಚ್ಚುಕಟ್ಟು; ಒಸಗೆ: ಅಭಿನಂದನೆ, ಕಾಣಿಕೆ;

ಪದವಿಂಗಡಣೆ:
ತಳಿತ +ಗುಡಿಗಳ+ ಸಾಲ +ಕಲಶದ
ನಿಳಯ +ನಿಳಯದ +ಬೀದಿ +ಬೀದಿಯ
ತಳಿರ+ತೋರಣದ್+ ಓರಣದ+ ನವ+ ಮಕರ+ತೋರಣದ
ತಳಿಗೆ+ ತಂಬುಲದ್+ಆರತಿಯ +ಮಂ
ಗಳಿತ +ರಭಸದೊಳ್+ಅಖಿಳ+ ರಾಜಾ
ವಳಿಗಳ್+ಒಸಗೆಯೊಳ್+ಇವರು+ ಹೊಕ್ಕರು +ರಾಜಮಂದಿರವ

ಅಚ್ಚರಿ:
(೧) ತಳಿತ, ತಳಿರ – ಸಮನಾರ್ಥಕ ಪದ, ೧, ೩ ಸಾಲಿನ ಮೊದಲ ಪದ
(೨) ಜೋಡಿ ಪದಗಳು – ೨ ಸಾಲು – ನಿಳಯ ನಿಳಯದ ಬೀದಿ ಬೀದಿಯ
(೩) ತೋರಣ – ೩ ಸಾಲಿನಲ್ಲಿ ೨ ಬಾರಿ ಪ್ರಯೋಗ