ಪದ್ಯ ೪೧: ಬಲರಾಮನು ಕೃಷಂಗೆ ಏನು ಹೇಳಿದನು?

ದುಗುಡದಲಿ ಹರಿ ರೌಹಿಣೀಯನ
ಮೊಗವ ನೋಡಿದಡಾತನಿದು ಕಾ
ಳೆಗವಲೇ ಕೃತಸಮಯರಾದಿರಿ ಪೂರ್ವಕಾಲದಲಿ
ಹಗೆಯ ಬಿಡಿ ಕುರುಪತಿಯ ಸಂಧಿಗೆ
ಸೊಗಸಿ ನಿಲಲಿ ಯುಧಿಷ್ಠಿರನ ಮಾ
ತುಗಳ ಕೆಡಿಸದಿರೆಂದನಾ ಕೃಷಂಗೆ ಬಲರಾಮ (ಗದಾ ಪರ್ವ, ೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದುಃಖಿಸುತ್ತಾ ಬಲರಾಮನ ಕಡೆಗೆ ನೋಡಲು, ಅವನು, ಇದು ಯುದ್ಧ, ಹಿಂದೆ ನೀವು ಗೆದ್ದಿದ್ದಿರಿ, ಈಗ ನಿಮ್ಮ ಕಾಲ ಕೆಟ್ಟಿತು, ವೈರವನ್ನು ಬಿಟ್ಟು ಕೌರವನೊಂದಿಗೆ ಸಂಧಿಯನ್ನು ಮಾಡಿಕೊಳ್ಳಿರಿ, ಧರ್ಮಜನ ಮಾತನ್ನು ಕೆಡಿಸಬೇಡಿ ಎಂದನು.

ಅರ್ಥ:
ದುಗುಡ: ದುಃಖ; ಹರಿ: ವಿಷ್ಣು; ರೌಹಿಣೀಯ: ಬಲರಾಮ; ಮೊಗ: ಮುಖ; ನೋಡು: ವೀಕ್ಷಿಸು; ಕಾಳೆಗ: ಯುದ್ಧ; ಕೃತ: ಕಾರ್ಯ; ಸಮಯ: ಕಾಲ; ಪೂರ್ವ: ಹಿಂದಿನ; ಹಗೆ: ವೈರಿ; ಬಿಡಿ: ತೊರೆ; ಸಂಧಿ: ರಾಜಿ, ಒಡಂಬಡಿಕೆ; ಸೊಗಸು: ಅಂದ, ಚೆಲುವು; ನಿಲುವು: ಅಭಿಪ್ರಾಯ, ಅಭಿಮತ; ನಿಲು: ತಡೆ; ಮಾತು: ನುಡಿ; ಕೆಡಸು: ಹಾಳುಮಾಡು;

ಪದವಿಂಗಡಣೆ:
ದುಗುಡದಲಿ +ಹರಿ +ರೌಹಿಣೀಯನ
ಮೊಗವ +ನೋಡಿದಡ್+ಆತನ್+ಇದು +ಕಾ
ಳೆಗವಲೇ +ಕೃತ+ಸಮಯರಾದಿರಿ +ಪೂರ್ವಕಾಲದಲಿ
ಹಗೆಯ +ಬಿಡಿ +ಕುರುಪತಿಯ +ಸಂಧಿಗೆ
ಸೊಗಸಿ +ನಿಲಲಿ +ಯುಧಿಷ್ಠಿರನ+ ಮಾ
ತುಗಳ +ಕೆಡಿಸದಿರ್+ಎಂದನಾ +ಕೃಷಂಗೆ +ಬಲರಾಮ

ಅಚ್ಚರಿ:
(೧) ಬಲರಾಮನ ಕಿವಿಮಾತು – ಹಗೆಯ ಬಿಡಿ ಕುರುಪತಿಯ ಸಂಧಿಗೆ ಸೊಗಸಿ ನಿಲಲಿ
(೨) ರೌಹಿಣೀಯ – ಬಲರಾಮನನ್ನು ಕರೆದ ಪರಿ

ಪದ್ಯ ೨೪: ಧೃಷ್ಟದ್ಯುಮ್ನನು ಯಾರನ್ನು ಕರೆಸಿದನು?

ಹಿಂದೆ ಸೆಳೆದುದು ವೈರಿ ಬಲ ಭಟ
ವೃಂದ ನಿಲಲಿ ಕಿರೀಟಿ ಭೀಮರ
ಕುಂದುಗಾಬುದು ಲೋಕ ನಮ್ಮನು ತೆಗೆದು ಹಿಂಗಿದರೆ
ಬಂದ ಜಯವಕ್ಕುವುದು ರಜನಿಯ
ಕೊಂದೆವಾದರೆ ನಮಗೆ ಸರಿಯಿ
ಲ್ಲೆಂದು ಧೃಷ್ಟದ್ಯುಮ್ನ ಕರೆಸಿದನಖಿಳನಾಯಕರ (ದ್ರೋಣ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ನಮ್ಮಿಂದ ಹಿಂದೆ ಸರಿದಿದ್ದ ವೈರಿ ಸೈನ್ಯವು ಈ ರಾತ್ರಿ ಯುದ್ಧಕ್ಕೆ ಆಯುಧವನ್ನು ಸಜ್ಜುಮಾಡಿ ಕೊಂಡು ಬಂದಿದೆ. ನಮ್ಮನ್ನು ಅವರು ಸೋಲಿಸಿದರೆ ಭೀಮಾರ್ಜುನರ ಬಲಹೀನತೆಯಿಂದ ಸೋಲಾಯಿತು ಎಂದು ಲೋಕವು ನಮ್ಮನ್ನು ದೂರುತ್ತದೆ. ಈ ರಾತ್ರಿಯನ್ನು ಕಳೆದರೆ ನಾವು ಗೆದ್ದಂತೆ. ನಮಗೆ ಯಾರು ಸಮಾನರು ಎಂದುಕೊಂಡು ಧೃಷ್ಟದ್ಯುಮ್ನನು ಸೇನಾನಾಯಕರನ್ನು ಕರೆಸಿದನು.

ಅರ್ಥ:
ಹಿಂದೆ: ಭೂತಕಾಲ, ಆಗಿಹೋದ; ಸೆಳೆ: ಆಕರ್ಷಿಸು; ವೈರಿ: ಶತ್ರು; ಬಲ: ಸೈನ್ಯ; ಭಟ: ಪರಾಕ್ರಮಿ; ವೃಂದ: ಗುಂಪು; ನಿಲಲಿ: ನಿಂತುಕೊಳ್ಳು; ಕಿರೀಟಿ: ಅರ್ಜುನ; ಕುಂದು: ಕೊರತೆ, ನೂನ್ಯತೆ; ಲೋಕ: ಜಗತ್ತು; ತೆಗೆ: ಹೊರತರು; ಹಿಂಗು: ಕಡಮೆಯಾಗು; ಬಂದು: ಆಗಮಿಸು; ಜಯ: ಗೆಲುವು; ರಜನಿ: ರಾತ್ರಿ; ಕೊಂದು: ಸಾಯಿಸು, ತಳ್ಳು; ಸರಿ: ಸಮಾನ; ಕರೆಸು: ಬರೆಮಾಡು; ಅಖಿಳ: ಎಲ್ಲಾ; ನಾಯಕ: ಒಡೆಯ;

ಪದವಿಂಗಡಣೆ:
ಹಿಂದೆ +ಸೆಳೆದುದು +ವೈರಿ +ಬಲ +ಭಟ
ವೃಂದ +ನಿಲಲಿ +ಕಿರೀಟಿ +ಭೀಮರ
ಕುಂದುಗಾಬುದು +ಲೋಕ +ನಮ್ಮನು +ತೆಗೆದು +ಹಿಂಗಿದರೆ
ಬಂದ+ ಜಯವಕ್ಕುವುದು +ರಜನಿಯ
ಕೊಂದೆವಾದರೆ+ ನಮಗೆ +ಸರಿಯಿ
ಲ್ಲೆಂದು +ಧೃಷ್ಟದ್ಯುಮ್ನ +ಕರೆಸಿದನ್+ಅಖಿಳ+ನಾಯಕರ

ಅಚ್ಚರಿ:
(೧) ಈ ರಾತ್ರಿ ಕಳೆದರೆ ಎಂದು ಹೇಳುವ ಪರಿ – ರಜನಿಯ ಕೊಂದೆವಾದರೆ ನಮಗೆ ಸರಿಯಿಲ್ಲೆಂದು
(೨) ಜಗ ನಮ್ಮನ್ನು ಆಡಿಕೊಳ್ಳುತ್ತದೆ ಎಂದು ಹೇಳುವ ಪರಿ – ಲೋಕ ನಮ್ಮನು ತೆಗೆದು ಹಿಂಗಿದರೆ ಬಂದ ಜಯವಕ್ಕುವುದು

ಪದ್ಯ ೫೨: ಶ್ರೀಕೃಷ್ಣನ ಸ್ವಭಾವ ಎಂತಹುದು?

ಇತ್ತನವರಿಗೆ ಸಮಯವನು ದೇ
ವೋತ್ತಮನು ನಿಗಮೌಘವರಸಿದ
ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ
ಹೆತ್ತ ಮಕ್ಕಳು ನಿಲಲಿ ಭಕ್ತರ
ನಿತ್ತ ಕರೆ ನೆನೆವರಿಗೆ ತನ್ನನು
ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ (ವಿರಾಟ ಪರ್ವ, ೧೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ದೇವೋತ್ತಮನಾದ ಶ್ರೀಕೃಷ್ಣನು ಎಂಥವನೆಂದರೆ, ವೇದಗಳು ತನ್ನನ್ನು ಹುಡುಕಿಕೊಂಡು ಬಂದರೆ ಅತ್ತಿತ್ತ ಸರಿದು ಅವಕ್ಕೆ ಸಿಗುವವನಲ್ಲ. ಮನನಶೀಲರಾದ ಮುನಿಗಳ ಮನಸ್ಸಿಗೆ ತೋರುವವನಲ್ಲ. ನನ್ನ ಮಕ್ಕಳು ದೂರನಿಲ್ಲಲಿ, ಭಕ್ತರನ್ನು ನನ್ನ ಹತ್ತಿರಕ್ಕೆ ಕರೆಯಿರಿ, ಅವರಿಗೆ ನನ್ನನ್ನೇ ಕೊಟ್ಟುಕೊಂಡು ಜೀವಿಸುತ್ತೇನೆ ಎನ್ನುವಂತಹ ಮನೋಭಾವದ ಸಾಧು, ಅವನು ಪಾಂಡವರತ್ತ ನಡೆದು ಬಂದನು.

ಅರ್ಥ:
ಸಮಯ: ಕಾಲ; ದೇವೋತ್ತಮ: ದೇವರಲ್ಲಿ ಶ್ರೇಷ್ಠನಾದವ; ನಿಗಮ: ವೇದ; ಔಘ: ಗುಂಪು; ಅತ್ತಲಿತ್ತಲು: ಅಲ್ಲಿ ಇಲ್ಲಿ; ಸರಿವ: ಚಲಿಸುವ; ಮುನಿ: ಋಷಿ; ಮನ: ಚಿತ್ತ; ಮೈಗೊಡು: ತೋರು; ಹೆತ್ತ: ಜನಿಸಿದ; ಮಕ್ಕಳು: ಸುತರು; ನಿಲು: ನಿಲ್ಲು; ಭಕ್ತ: ಆರಾಧಕ; ಕರೆ: ಬರೆಮಾದು; ನೆನೆ: ಜ್ಞಾಪಿಸು; ತೆತ್ತು: ನೀಡು; ಬದುಕು: ಜೀವಿಸು; ಬೋಳೆ: ಸಾಧು ಸ್ವಭಾವದ; ಅರಸ: ರಾಜ; ನಡೆ: ಚಲಿಸು;ಆರಸು: ಹುಡುಕು;

ಪದವಿಂಗಡಣೆ:
ಇತ್ತನ್+ಅವರಿಗೆ+ ಸಮಯವನು +ದೇ
ವೋತ್ತಮನು +ನಿಗಮ+ಔಘವ್+ಅರಸಿದಡ್
ಅತ್ತಲಿತ್ತಲು +ಸರಿವ +ಮುನಿಗಳ+ ಮನಕೆ +ಮೈಗೊಡದ
ಹೆತ್ತ +ಮಕ್ಕಳು +ನಿಲಲಿ +ಭಕ್ತರನ್
ಇತ್ತ +ಕರೆ +ನೆನೆವರಿಗೆ +ತನ್ನನು
ತೆತ್ತು+ಬದುಕುವೆನೆಂಬ +ಬೋಳೆಯರ್+ಅರಸ +ನಡೆತಂದ

ಅಚ್ಚರಿ:
(೧) ಕೃಷ್ಣನ ಹಿರಿಮೆ – ಭಕ್ತರನಿತ್ತ ಕರೆ ನೆನೆವರಿಗೆ ತನ್ನನು ತೆತ್ತು ಬದುಕುವೆನೆಂಬ ಬೋಳೆಯರರಸ