ಪದ್ಯ ೧೦: ಕಂಸನ ಮತ್ತು ಸೃಗಾಲರ ಅಂತ್ಯವು ಹೇಗಾಯಿತು?

ಎಮಗೆ ತಾಯೊಡಹುಟ್ಟಿದನು ನಿ
ರ್ಮಮತೆಯಲಿ ನಿರ್ದಾಟಿಸಿದನಾ
ಕ್ರಮದಲೇ ಕಂಸಂಗೆ ಹಿಂಸಾಕೃತಿಯ ರಚಿಸಿದೆವು
ಸಮರದೊಳಗೆ ಸೃಗಾಲನೃಪನಾ
ಕ್ರಮಿಸಿದನು ಠಕ್ಕಿನಲಿ ಮಾಯಾ
ತಿಮಿರವನು ಮಾಯೆಯಲಿ ಗೆಲಿದವು ಭೂಪ ಕೇಳೆಂದ (ಗದಾ ಪರ್ವ, ೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ಕೇಳು, ನಮ್ಮ ತಾಯಿಯ ಒಡಹುಟ್ಟಿದವನಾದ ಕಂಸನು ನಮಗೆ ಸೋದರಮಾವ. ಮಮತೆಯಿಲ್ಲದೆ, ಹಲವು ಮೋಸಗಳಿಂದ ನಮ್ಮನ್ನು ಕೊಲ್ಲಲು ಹವಣಿಸಿದನು. ಹಿಂಸೆಯಿಂದಲೇ ಅವನನ್ನು ಕೊಂದೆವು. ಸೃಗಾಲನು ಮಾಯಾ ಯುದ್ಧವನ್ನು ಮಾಡಿ ನಮ್ಮನ್ನು ಜಯಿಸಲು ಬಂದಾಗ ಅವನ ಮಾಯೆಯ ಕತ್ತಲನ್ನು ಮಾಯೆಯಿಂದಲೇ ಹೋಗಲಾಡಿಸಿಕೊಂಡೆವು ಎಂದು ಕೃಷ್ಣನು ನುಡಿದನು.

ಅರ್ಥ:
ತಾಯಿ: ಅಮ್ಮ; ಒಡಹುಟ್ಟು: ಜೊತೆಯಲ್ಲಿ ಜನಿಸು; ನಿರ್ಮಮತೆ: ಪ್ರೀತಿಯಿಲ್ಲದ; ನಿರ್ದಾಟಿಸು: ವಿಶೇಷವಾಗಿ ಅಪ್ಪಳಿಸು; ಕ್ರಮ: ರೀತಿ; ಹಿಂಸೆ: ನೋವು; ಆಕೃತಿ: ರಚನೆ; ರಚಿಸು: ನಿರ್ಮಿಸು; ಸಮರ: ಯುದ್ಧ; ನೃಪ: ರಾಜ; ಆಕ್ರಮಿಸು: ದಾಳಿ ನಡೆಸುವುದು; ಠಕ್ಕು: ಮೋಸ; ಮಾಯೆ: ಗಾರುಡಿ; ತಿಮಿರ: ಅಂಧಕಾರ; ಗೆಲಿ: ಜಯಿಸು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎಮಗೆ +ತಾಯ್+ಒಡಹುಟ್ಟಿದನು+ ನಿ
ರ್ಮಮತೆಯಲಿ +ನಿರ್ದಾಟಿಸಿದನ
ಆ+ಕ್ರಮದಲೇ +ಕಂಸಂಗೆ +ಹಿಂಸಾಕೃತಿಯ+ ರಚಿಸಿದೆವು
ಸಮರದೊಳಗೆ+ ಸೃಗಾಲ+ನೃಪನ
ಆಕ್ರಮಿಸಿದನು +ಠಕ್ಕಿನಲಿ+ ಮಾಯಾ
ತಿಮಿರವನು +ಮಾಯೆಯಲಿ +ಗೆಲಿದವು+ ಭೂಪ +ಕೇಳೆಂದ

ಅಚ್ಚರಿ:
(೧) ಗೆಲ್ಲುವ ಕ್ರಮ – ಮಾಯಾ ತಿಮಿರವನು ಮಾಯೆಯಲಿ ಗೆಲಿದವು
(೨) ನಿ ಕಾರದ ಪದಗಳ ಬಳಕೆ – ನಿರ್ಮಮತೆ, ನಿರ್ದಾಟಿಸಿ

ಪದ್ಯ ೫೫: ಕರ್ಮದ ಮಹತ್ವವೇನು?

ಕರ್ಮವೇ ಹೂಡುವುದು ತನುವನು
ಕರ್ಮವೇ ಸಲಹುವುದು ಕಡೆಯಲಿ
ಕರ್ಮವೇ ಕಳಚುವುದು ಜೀವಭ್ರಮೆಯ ಬಾಹಿರರ
ಕರ್ಮ ತಾನೇನಾದಡಾಗಲಿ
ನಿರ್ಮಮತೆಯಲಿ ಮಾಡಿ ನಮ್ಮಲಿ
ನಿರ್ಮಿಸಲು ಕಲಿಪಾರ್ಥ ನೀ ನಿರ್ಲೇಪನಹೆಯೆಂದ (ಭೀಷ್ಮ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಕರ್ಮವೇ ದೇಹಧಾರಣೆಗೆ ಕಾರಣ. ಕರ್ಮವೇ ದೇಹವನ್ನು ಸಲಹುತ್ತದೆ. ಜೀವಭ್ರಮೆಯುಳ್ಳ ಬಾಹಿರರನ್ನು ಕರ್ಮವೇ ಕೊನೆಗೊಳಿಸುತ್ತದೆ. ಕರ್ಮವನ್ನು ನಿರ್ಮಮತೆಯಿಂದ ಮಾಡಿ ನನಗೆ ಅರ್ಪಿಸಿದೆಯಾದರೆ, ಅರ್ಜುನ, ನಿಣು ಕರ್ಮಲೇಪವಿಲ್ಲದವನಾಗುವೆ ಎಂದು ಶ್ರೀಕೃಷ್ಣನು ಹೇಳಿದನು.

ಅರ್ಥ:
ಕರ್ಮ: ಕಾರ್ಯ, ಕೆಲಸ; ಹೂಡು: ಅಣಿಗೊಳಿಸು; ತನು: ದೇಹ; ಸಲಹು: ಕಾಪಾಡು; ಕಡೆ: ಪಕ್ಕ, ಕೊನೆ; ಕಳಚು: ಬೇರ್ಪಡಿಸು; ಜೀವ: ಉಸಿರು; ಭ್ರಮೆ: ಭ್ರಾಂತಿ, ಹುಚ್ಚು; ಬಾಹಿರ: ಹೊರಗೆ; ಮಮತೆ: ಪ್ರೀತಿ; ನಿರ್ಮಿಸು: ಕಟ್ಟು, ರಚಿಸು; ಕಲಿ: ಶೂರ; ನಿರ್ಲೇಪ: ಅಂಟದ, ಲೇಪವಿಲ್ಲದ;

ಪದವಿಂಗಡಣೆ:
ಕರ್ಮವೇ+ ಹೂಡುವುದು +ತನುವನು
ಕರ್ಮವೇ +ಸಲಹುವುದು +ಕಡೆಯಲಿ
ಕರ್ಮವೇ +ಕಳಚುವುದು +ಜೀವ+ಭ್ರಮೆಯ +ಬಾಹಿರರ
ಕರ್ಮ +ತಾನ್+ಏನಾದಡ್+ಆಗಲಿ
ನಿರ್ಮಮತೆಯಲಿ +ಮಾಡಿ +ನಮ್ಮಲಿ
ನಿರ್ಮಿಸಲು +ಕಲಿ+ಪಾರ್ಥ +ನೀ +ನಿರ್ಲೇಪನಹೆಯೆಂದ

ಅಚ್ಚರಿ:
(೧) ಹೂಡಿ, ಸಲಹು, ಕಳಚು – ಕರ್ಮವನ್ನು ಸೂಚಿಸಲು ಬಳಸಿದ ಪದಗಳು

ಪದ್ಯ ೮೮: ಕಾರ್ಯಸಿದ್ಧಿಯ ಮರ್ಮವಾವುದು?

ತಮ್ಮ ಕಾರ್ಯನಿಮಿತ್ತ ಗರ್ವವ
ನೆಮ್ಮಿದೊಡೆ ತದ್ಗರ್ವದಿಂದುರೆ
ದಿಮ್ಮಿತಹುದಾ ಕಾರ್ಯ ಮರ್ತ್ಯ ಚರಾಚರಂಗಳಲಿ
ನಿರ್ಮಮತೆಯಲಿ ನಡೆದುಪಕೃತಿಯೊ
ಳಮ್ಮಹವನೈದುವ ವೊಲೊದಗುವ
ಕರ್ಮಿಗಳನೊಳಹೊಯ್ದುಕೊಳ್ವುದು ಮರ್ಮ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ತನ್ನ ಕಾರ್ಯ ಸಾಧನೆಯಾಗಬೇಕೆಂದರೆ, ಗರ್ವವನ್ನು ಬಿಡಬೇಕು, ಏಕೆಂದರೆ ಗರ್ವದಿಂದ ಕಾರ್ಯವು ಕಠಿಣವಾಗುತ್ತದೆ. ಮನುಷ್ಯರಾಗಲಿ, ಪ್ರಾಣಿಗಳಾಗಲಿ, ಚರಾಚರಗಳಾಗಲಿ ಅವುಗಳ ಬಳಿಗೆ ಹೋಗಿ ಅವರ ಉಪಕಾರವನ್ನು ಪಡೆದು ಅದರಿಂದ ಪರಮ ಸಂತೋಷಗೊಂಡು ಅವರ ಸೌಹಾರ್ದವನ್ನು ಗಳಿಸಿಕೊಳ್ಳುವುದೇ ಕಾರ್ಯಸಿದ್ಧಿಯ ಮರ್ಮವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತಮ್ಮ: ಅವರ; ಕಾರ್ಯ: ಕೆಲಸ; ನಿಮಿತ್ತ: ನೆಪ, ಕಾರಣ; ಗರ್ವ: ಅಹಂಕಾರ; ಉರೆ: ವಿಶೇಷವಾಗಿ; ದಿಮ್ಮಿತು: ದೊಡ್ಡದಾದ, ಬಲಿಷ್ಠವಾದ; ಮರ್ತ್ಯ: ಭೂಮಿ; ಚರಾಚರ: ಜೀವಿಸುವ ಮತ್ತು ಜೀವಿಸದ; ಮಮತೆ: ಪ್ರೀತಿ, ಅಭಿಮಾನ; ನಡೆದು: ಸಾಗಿ; ಉಪಕೃತಿ: ಉಪಕಾರ, ನೆರವು; ಐದು:ಹೊಂದು, ಸೇರು, ಹೋಗು; ಒದಗು: ಸಿಗುವ; ಕರ್ಮಿ: ಕೆಲಸಗಾರ; ಒಳಹೊಯ್ದು: ಸೇರಿಸಿಕೊಳ್ಳು; ಮರ್ಮ: ರಹಸ್ಯವಾಗಿ ಕಾರ್ಯ ನಿರ್ವಹಿಸುವವನು;

ಪದವಿಂಗಡಣೆ:
ತಮ್ಮ+ ಕಾರ್ಯ+ನಿಮಿತ್ತ +ಗರ್ವವನ್
ಎಮ್ಮಿದೊಡೆ +ತದ್ಗರ್ವದಿಂದ್+ಉರೆ
ದಿಮ್ಮಿತಹುದಾ +ಕಾರ್ಯ +ಮರ್ತ್ಯ +ಚರಾಚರಂಗಳಲಿ
ನಿರ್ಮಮತೆಯಲಿ +ನಡೆದ್+ಉಪಕೃತಿಯೊಳ್
ಅಮ್ಮಹವನ್+ಐದುವ +ವೊಲ್+ಒದಗುವ
ಕರ್ಮಿಗಳನ್+ಒಳಹೊಯ್ದುಕೊಳ್ವುದು +ಮರ್ಮ +ಕೇಳೆಂದ

ಅಚ್ಚರಿ:
(೧)ನಿರ್ಮಮತೆ, ಮರ್ಮ, ಕರ್ಮಿ, ಕರ್ಮ – ಪದಗಳ ಬಳಕೆ