ಪದ್ಯ ೨೩: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹೊಕ್ಕನು?

ರಥವ ಸಂವರಿಸಿದನು ನಿಜ ಸಾ
ರಥಿಯ ಬೋಳೈಸಿದನು ಬಳಿಕತಿ
ರಥ ಮಹಾರಥ ರಾಜಿಗಿತ್ತನು ರಣಕೆ ವೀಳೆಯವ
ಪೃಥೆಯ ಮಕ್ಕಳ ಕರೆ ಮಹೀಸಂ
ಪ್ರಥಿತಬಲರನು ಕರೆಯೆನುತ ನಿ
ರ್ಮಥಿತರಿಪು ಪರಬಲವ ಹೊಕ್ಕನು ಬಿಟ್ಟ ಸೂಟಿಯಲಿ (ದ್ರೋಣ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೋಣನು ರಥವನ್ನು ಸರಿಯಾಗಿ ಸಿದ್ಧಗೊಳಿಸಿದನು. ಸಾರಥಿಯನ್ನು ಮನ್ನಿಸಿದನು. ಅತಿರಥ, ಮಹಾರಥರಿಗೆ ರಣವೀಳೆಯವನ್ನು ಕೊಟ್ಟನು. ಕುಂತಿಯ ಮಕ್ಕಳನ್ನು ಕರೆಯಿರಿ, ಭೂಮಿಯಲ್ಲಿ ಪ್ರಖ್ಯಾತಿ ಪಡೆದ ಬಲಶಾಲಿಗಳನ್ನು ನನ್ನೊಡನೆ ಯುದ್ಧಕ್ಕೆ ಕರೆಯಿರಿ ಎಂದು ಶತ್ರು ವಿನಾಶಕನಾದ ದ್ರೋನನು ಪಾಂಡವರ ಸೈನ್ಯವನ್ನು ಹೊಕ್ಕನು.

ಅರ್ಥ:
ರಥ: ಬಂಡಿ; ಸಂವರಿಸು: ಸಂಗ್ರಹಿಸು; ಸಾರಥಿ: ಸೂತ; ಬೋಳೈಸು: ಸಂತೈಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಮಹಾರಥ: ಮಹಾ ಪರಾಕ್ರಮಿ; ರಾಜಿ: ಹೊಂದಾಣಿಕೆ; ವೀಳೆ: ತಾಂಬೂಲ; ಪೃಥೆ: ಕುಂತಿ; ಮಕ್ಕಳು: ಸುತರು; ಕರೆ: ಬರೆಮಾಡು; ಮಹೀ: ಭೂಮಿ; ಸಂಪ್ರಥಿತ: ಅತಿ ಪ್ರಸಿದ್ಧವಾದ; ಬಲರು: ಪರಾಕ್ರಮಿಗಳು; ಕರೆ: ಬರೆಮಾಡು; ರಿಪು: ವೈರಿ; ಪರಬಲ: ಶತ್ರು ಸೈನ್ಯ; ಹೊಕ್ಕು: ಸೇರು; ಸೂಟಿ: ವೇಗ;

ಪದವಿಂಗಡಣೆ:
ರಥವ +ಸಂವರಿಸಿದನು +ನಿಜ+ ಸಾ
ರಥಿಯ +ಬೋಳೈಸಿದನು +ಬಳಿಕ್+ಅತಿ
ರಥ +ಮಹಾರಥ +ರಾಜಿಗಿತ್ತನು +ರಣಕೆ +ವೀಳೆಯವ
ಪೃಥೆಯ +ಮಕ್ಕಳ +ಕರೆ +ಮಹೀ+ಸಂ
ಪ್ರಥಿತ+ಬಲರನು +ಕರೆ+ಎನುತ +ನಿ
ರ್ಮಥಿತ+ ರಿಪು +ಪರಬಲವ +ಹೊಕ್ಕನು +ಬಿಟ್ಟ +ಸೂಟಿಯಲಿ

ಅಚ್ಚರಿ:
(೧) ಅತಿರಥ, ಮಹಾರಥ; ಸಂಪ್ರಥಿತ, ನಿರ್ಮಥಿತ – ಪ್ರಾಸ ಪದಗಳು
(೨) ದ್ರೋಣನನ್ನು ಕರೆದ ಪರಿ – ನಿರ್ಮಥಿತ ರಿಪು