ಪದ್ಯ ೧೨: ಕೃಷ್ಣನು ಕೌರವನೇಕೆ ಸಜ್ಜನನಲ್ಲೆನೆಂದು ಹೇಳಿದನು?

ದ್ಯೂತ ಮೃಗಯಾವ್ಯಸನವಿವು ನೃಪ
ಜಾತಿಗಾದ ವಿನೋದ ಕಪಟ
ದ್ಯೂತವಿದು ನೃಪಧರ್ಮವೇ ಮಾಯಾಭಿಯೋಗದಲಿ
ಸೋತಿರಿಳೆಯನದಂತಿರಲಿ ನಿ
ರ್ಭೀತಿಯಲಿ ನಿಮ್ಮರಸಿಯುಟ್ಟುದ
ನೀತ ಸುಲಿಸಿದನಿವನು ಸುಜನನೆ ಭೂಪ ಹೇಳೆಂದ (ಗದಾ ಪರ್ವ, ೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜೂಜು, ಬೇಟೆಗಳು ಕ್ಷತ್ರಿಯರ ವಿನೋದಗಳು. ಕಪಟದ ಜೂಜನ್ನು ತಿಳಿಯದೆ ಆಡಿ ಮಾಯೆಗೆ ಪರಾಜಿತರಾಗಿ ಭೂಮಿಯನ್ನು ಸೋತಿರಿ. ಅದು ಹಾಗಿರಲಿ, ನಿಮ್ಮ ರಾಣಿಯುಟ್ಟ ಸೀರೆಯನ್ನು ಭಯವಿಲ್ಲದೆ ಸುಲಿಸಿದ ಇವನು ಸಜ್ಜನನೇ ಎಂದು ಕೃಷ್ಣನು ಕೇಳಿದನು.

ಅರ್ಥ:
ದ್ಯೂತ: ಪಗಡೆಯಾಟ, ಜೂಜು; ಮೃಗ: ಪ್ರಾಣಿ; ವ್ಯಸನ: ಗೀಳು, ಚಟ; ನೃಪ: ರಾಜ; ಜಾತಿ: ಕುಲ; ವಿನೋದ: ವಿಹಾರ, ಕ್ರೀಡೆ; ಕಪಟ: ಮೋಸ; ನೃಪ: ರಾಜ; ಧರ್ಮ: ಧಾರಣೆ ಮಾಡಿದುದು; ಮಾಯ: ಗಾರುಡಿ; ಅಭಿಯೋಗ: ಒತ್ತಾಯ; ಸೋತು: ಪರಾಜಯ; ನಿರ್ಭೀತಿ: ಭಯವಿಲ್ಲದ ಸ್ಥಿತಿ; ಇಳೆ: ಭೂಮಿ; ಅರಸಿ: ರಾಣಿ; ಉಟ್ಟು: ಬಟ್ಟೆ, ಸೀರೆ; ಸುಲಿ: ತೆಗೆ, ಕಳಚು; ಸುಜನ: ಒಳ್ಳೆಯ ಮನುಷ್ಯ; ಭೂಪ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ದ್ಯೂತ +ಮೃಗ+ಯಾ+ವ್ಯಸನವಿವು+ ನೃಪ
ಜಾತಿಗಾದ+ ವಿನೋದ +ಕಪಟ
ದ್ಯೂತವಿದು +ನೃಪಧರ್ಮವೇ +ಮಾಯ+ಅಭಿಯೋಗದಲಿ
ಸೋತಿರ್+ಇಳೆಯನ್+ಅದಂತಿರಲಿ +ನಿ
ರ್ಭೀತಿಯಲಿ +ನಿಮ್ಮರಸಿ+ಉಟ್ಟುದನ್
ಈತ +ಸುಲಿಸಿದನ್+ಇವನು +ಸುಜನನೆ +ಭೂಪ +ಹೇಳೆಂದ

ಅಚ್ಚರಿ:
(೧) ನೃಪ ಜಾತಿಗೆ ವಿನೋದ – ದ್ಯೂತ ಮೃಗಯಾವ್ಯಸನವಿವು ನೃಪ ಜಾತಿಗಾದ ವಿನೋದ
(೨) ಕೌರವನ ಬಗ್ಗೆ ಕೃಷ್ಣನಾಡಿದ ಮಾತು – ನಿರ್ಭೀತಿಯಲಿ ನಿಮ್ಮರಸಿಯುಟ್ಟುದ ನೀತ ಸುಲಿಸಿದನಿವನು ಸುಜನನೆ

ಪದ್ಯ ೨೫: ಸಭೆಯಲ್ಲಿದ್ದ ವೀರರು ಅರ್ಜುನನಲ್ಲಿ ಏನನ್ನು ಕಂಡರು?

ಇವನ ಗತಿ ಮುಖಚೇಷ್ಟೆ ಭಾವೋ
ತ್ಸವ ವಿಲಾಸವುಪೇಕ್ಷೆ ಭರವಂ
ಘವಣೆ ಗರುವಿಕೆ ಗಮಕಭಾವವಭೀತಿ ಭುಲ್ಲವಣೆ
ಇವನ ವಿಮಲಕ್ಷತ್ರವಿಕ್ರಮ
ವಿವನ ಕೊಂಡೆಯತನವಿವೇ ಸಾ
ಕಿವನು ಘಾಟದ ವೀರನೆಂದರು ವೀರರರ್ಜುನನ (ಆದಿ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ಬರುವುದನ್ನು ಕಂಡ ವೀರರು ಇವನ ಗತಿ (ಬರುವ ಠೀವಿ), ಮುಖದ ಹಾವಭಾವ, ಮುಖದಲ್ಲಿದ್ದ ಉತ್ಸಾಹ, ಬಿಲ್ಲಿನ ಬಗ್ಗೆ ಇದ್ದ ಉಪೇಕ್ಷೆ (ಕಡೆಗಣಿಸುವಿಕೆ), ಜೋರು, ನಡೆಗೆಯಲ್ಲಿನ ದರ್ಪ, ಗಾಂಭೀರ್ಯ, ನಿರ್ಭೀತಿ, ದೋಷರಹಿತವಾದ ಕ್ಷಾತ್ರಶಕ್ತಿ, ಇವುಗಳನ್ನು ನೋಡಿ ಅಲ್ಲಿ ನೆರೆದಿದ್ದ ವೀರರು ಇವನು ಮಹಾವೀರನೆಂದರು.

ಅರ್ಥ:
ಗತಿ: ವೇಗ; ಮುಖ: ಆನನ; ಚೇಷ್ಟೆ: ಅಂಗಾಂಗಗಳ ಚಲನೆ; ಭಾವ: ಸ್ವರೂಪ; ಉತ್ಸಾಹ: ಹುಮ್ಮಸ್ಸು, ಚೈತನ್ಯ; ವಿಲಾಸ: ಸೊಬಗು; ಉಪೇಕ್ಷೆ: ಕಡೆಗಣಿಸುವಿಕೆ; ಭರ: ಜೋರು; ಗರುವಿಕೆ: ಗರ್ವ, ದರ್ಪ; ಗಮಕ: ಕ್ರಮ, ಬೆಡಗು, ಸೊಗಸು; ಅವಭೀತಿ: ನಿರ್ಭೀತಿ; ಭುಲ್ಲವಣೆ: ಅತಿಶಯ, ಹೆಚ್ಚಳ; ವಿಮಲ: ನಿರ್ಮಲ; ಕ್ಷತ್ರ: ಕ್ಷತ್ರಿಯ; ವಿಕ್ರಮ: ಶೌರಿ, ಪರಾಕ್ರಮಿ; ಘಾಟ: ಸಮರ್ಥ; ವೀರ: ಶೂರ;

ಪದವಿಂಗಡಣೆ:
ಇವನ +ಗತಿ +ಮುಖಚೇಷ್ಟೆ +ಭಾವೋ
ತ್ಸವ +ವಿಲಾಸವ್+ಉಪೇಕ್ಷೆ +ಭರ+ವಂ
ಘವಣೆ +ಗರುವಿಕೆ +ಗಮಕಭಾವ+ಅವಭೀತಿ +ಭುಲ್ಲವಣೆ
ಇವನ +ವಿಮಲ+ಕ್ಷತ್ರ+ವಿಕ್ರಮವ್
ಇವನ+ ಕೊಂಡೆಯತನವ್+ಇವೇ +ಸಾಕ್
ಇವನು +ಘಾಟದ +ವೀರನೆಂದರು +ವೀರರ್+ಅರ್ಜುನನ

ಅಚ್ಚರಿ:
(೧) ಇವನ – ೪ ಸಾಲಿನ ಮೊದಲ ಪದ
(೨) ಅರ್ಜುನನ ಹಾವಭಾವದ ವರ್ಣನೆ: ಗತಿ, ಮುಖಚೇಷ್ಟೆ, ಉತ್ಸಾಹ, ವಿಲಾಸ, ಉಪೇಕ್ಷೆ, ನಿರ್ಭೀತಿ, ಭರ, ಗರುವಿಕೆ, ಭುಲ್ಲವಣೆ, ವಿಮಲ, ವಿಕ್ರಮ