ಪದ್ಯ ೮೨: ಅರ್ಜುನನು ಕೃಷ್ಣನನ್ನು ಹೇಗೆ ವರ್ಣಿಸಿದನು?

ಪರಮಪುಣ್ಯ ಶ್ಲೋಕ ಪಾವನ
ಚರಿತ ಚಾರುವಿಲಾಸ ನಿರ್ಮಲ
ವರ ಕಥನ ಲೀಲಾ ಪ್ರಯುಕ್ತ ಪ್ರಕಟಭುವನಶತ
ನಿರವಯವ ನಿರ್ದ್ವಂದ್ವ ನಿಸ್ಪೃಹ
ನಿರುಪಮಿತ ನಿರ್ಮಾಯ ಕರುಣಾ
ಕರ ಮಹಾತ್ಮ ಮನೋಜವಿಗ್ರಹ ಕರುಣಿಸೆನಗೆಂದ (ಭೀಷ್ಮ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ನೆನೆದ ಮಾತ್ರದಿಂದ ಪರಮಪುಣ್ಯವನ್ನು ಕೊಡುವವನೇ, ಪಾವನ ಚರಿತ್ರನೇ, ಸುಂದರವಾದ ವಿಲಾಸವುಳ್ಲವನೇ, ನಿರ್ಮಲನೇ, ಲೀಲೆಗಾಗಿ ಅನೇಕ ಭುವನಗಳನ್ನು ಪ್ರಕಟಿಸಿದವನೇ, ಅವಯವಗಳಿಲ್ಲದವನೇ, ದ್ವಂದ್ವಗಳಿಲ್ಲದವನೇ, ನಿಸ್ಪೃಹನೇ, ಸಾಟಿಯಿಲ್ಲದವನೇ, ಮಾಯೆಯನ್ನು ಗೆದ್ದವನೇ, ಕರುಣಾಸಾಗರನೇ, ಶ್ರೇಷ್ಠನೇ, ಸುಂದರ ರೂಪವುಳ್ಳವನೇ ನನ್ನನ್ನು ಕರುಣಿಸು ತಂದೆ ಎಂದು ಅರ್ಜುನನು ಬೇಡಿದನು.

ಅರ್ಥ:
ಪರಮ: ಶ್ರೇಷ್ಠ; ಪುಣ್ಯ: ಶುಭವಾದ; ಶ್ಲೋಕ: ದೇವತಾ ಸ್ತುತಿ; ಪಾವನ: ಮಂಗಳ; ಚರಿತ: ಕಥೆ; ಚಾರು: ಸುಂದರ; ವಿಲಾಸ: ಅಂದ, ಸೊಬಗು; ನಿರ್ಮಲ: ಶುದ್ಧ; ವರ: ಶ್ರೇಷ್ಠ; ಕಥನ: ಹೊಗಳುವುದು; ಪ್ರಯುಕ್ತ: ನಿಮಿತ್ತ; ಪ್ರಕಟ: ತೋರು; ಭುವನ: ಜಗತ್ತು; ಶತ: ನೂರು; ನಿರವಯವ: ಅವಯವಗಳಿಲ್ಲದಿರುವವ; ನಿರ್ದ್ವಂದ್ವ: ದ್ವಂದ್ವಗಳಿಲ್ಲದಿರುವವ; ನಿಸ್ಪೃಹ:ಮುಟ್ಟಲಾಗದ; ನಿರ್ಮಾಯ: ಮಾಯೆಯನ್ನು ಮೀರಿದವನು; ಕರುಣಾಕರ: ದಯಾಸಾಗರ; ಮಹಾತ್ಮ: ಶ್ರೇಷ್ಠ; ಮನೋಜ: ಮನ್ಮಥ; ವಿಗ್ರಹ: ರೂಪ; ಕರುಣಿಸು: ದಯೆತೋರು;

ಪದವಿಂಗಡಣೆ:
ಪರಮಪುಣ್ಯ+ ಶ್ಲೋಕ +ಪಾವನ
ಚರಿತ +ಚಾರುವಿಲಾಸ +ನಿರ್ಮಲ
ವರ +ಕಥನ +ಲೀಲಾ +ಪ್ರಯುಕ್ತ +ಪ್ರಕಟ+ಭುವನ+ಶತ
ನಿರವಯವ +ನಿರ್ದ್ವಂದ್ವ +ನಿಸ್ಪೃಹ
ನಿರುಪಮಿತ +ನಿರ್ಮಾಯ +ಕರುಣಾ
ಕರ+ ಮಹಾತ್ಮ +ಮನೋಜ+ವಿಗ್ರಹ +ಕರುಣಿಸೆನಗೆಂದ

ಅಚ್ಚರಿ:
(೧) ನಿ ಕಾರದ ಪದಗಳು – ನಿರವಯವ ನಿರ್ದ್ವಂದ್ವ ನಿಸ್ಪೃಹ ನಿರುಪಮಿತ ನಿರ್ಮಾಯ

ಪದ್ಯ ೮೯: ಅರ್ಜುನನು ಶಿವನ ಗುಣಗಳನ್ನು ಹೇಗೆ ಹೊಗಳಿದನು?

ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿರ್ದ್ವಂದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ
ನಿರುಪಮ ನಿರಾಮಯ ನಿರಂತರ
ನಿರವಶೇಷ ನಿರಂಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆಂದ (ಅರಣ್ಯ ಪರ್ವ, ೭ ಸಂಧಿ, ೮೯ ಪದ್ಯ)

ತಾತ್ಪರ್ಯ:
ಅತಿಶಯ ಸ್ವರೂಪನೇ, ಮಾಯಾರಹಿತನೇ, ಏನನ್ನೂ ಬಯಸದವನೇ, ಉಪಮಾರಹಿತನೇ, ತನಗೆ ಎರಡನೆಯದಿಲ್ಲದವನೇ, ಗುಣರಹಿತನೇ, ಕರ್ಮದ ಲೇಪವಿಲ್ಲದವನೇ, ಆತಂಕ ಅಡ್ಡಿ ಪ್ರತಿಬಂಧಕಗಳಿಲ್ಲದವನೇ, ಆಧಾರವಿಲ್ಲದವನೇ, ಉಪಮೇಯವಿಲ್ಲದವನೇ, ಉಪದ್ರವಗಳಿಲ್ಲದವನೇ, ಎಂದೆಂದೂ ಇರುವವನೇ, ಸಂಪೂರ್ಣನೇ, ಅಂಗರಹಿತನೇ, ನಿರ್ಮಲನೇ ಹೆಚ್ಚಿನದಿಲ್ಲದವನೇ ಕಳಾತೀತನೇ ಮಹೇಶ್ವರನೇ ಕರುಣಿಸು ಎಂದು ಅರ್ಜುನನು ಶಿವನನ್ನು ಬೇಡಿದನು.

ಅರ್ಥ:
ನಿರವಧಿಕ: ಹೆಚ್ಚಾದುದು; ಮಾಯ: ಇಂದ್ರಜಾಲ; ನಿಸ್ಪೃಹ: ಏನನ್ನು ಬಯಸದ; ನಿರುಪಮಿತ: ಹೋಲಿಕೆ ಇಲ್ಲದವ; ದ್ವಂದ್ವ: ಎರಡು, ಪರಸ್ಪರ ವಿರುದ್ಧ ವಸ್ತುಗಳ ಜೋಡಿ; ಗುಣ: ನಡತೆ, ಸ್ವಭಾವ; ನಿರ್ಗುಣ: ಗುಣವಿಲ್ಲದ; ಅವಯವ: ದೇಹದ ಒಂದು ಭಾಗ, ಅಂಗ; ಗ್ರಹ: ಹಿಡಿಯುವುದು, ಹಿಡಿತ; ಆಧಾರ: ಆಶ್ರಯ; ನಿರುಪಮ:ಸಾಟಿಯಿಲ್ಲದ; ನಿರಂತರ: ಯಾವಾಗಲು; ಅವಶೇಷ: ಉಳಿಕೆ; ಅಂಗ: ದೇಹ, ಶರೀರ; ನಿರ್ಮಲ: ಶುದ್ಧ; ನಿರತಿಶಯ: ಅತಿಶಯವಲ್ಲದ; ನಿಷ್ಕಳ: ಕಳಾತೀತ; ಮಹೇಶ್ವರ: ಶಂಕರ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ನಿರವಧಿಕ+ ನಿರ್ಮಾಯ +ನಿಸ್ಪೃಹ
ನಿರುಪಮಿತ +ನಿರ್ದ್ವಂದ್ವ +ನಿರ್ಗುಣ
ನಿರವಯವ +ನಿರ್ಲೇಪ +ನಿರವಗ್ರಹ+ ನಿರಾಧಾರ
ನಿರುಪಮ +ನಿರಾಮಯ +ನಿರಂತರ
ನಿರವಶೇಷ +ನಿರಂಗ +ನಿರ್ಮಲ
ನಿರತಿಶಯ +ನಿಷ್ಕಳ+ ಮಹೇಶ್ವರ+ ಕರುಣಿಸುವುದೆಂದ

ಅಚ್ಚರಿ:
(೧) ಶಿವನ ಗುಣಗಾನ ನಿ ಕಾರ ಪದಗಳಿಂದ – ೧೮ ಬಾರಿ