ಪದ್ಯ ೬೪: ಕೃಷ್ಣನು ಧರ್ಮಜನಿಗೆ ಏನನ್ನು ಬೋಧಿಸಿದನು?

ಅರಸ ಕೇಳೈ ಕೃಷ್ಣಶಕ್ತಿ
ಸ್ಫುರಣವೈಸಲೆ ನಿಮ್ಮ ಬಲ ಸಂ
ಹರಣಕಾವುದು ಬೀಜ ನಿರ್ದೈವರ ವಿಲಾಸವಿದು
ಹರಿ ಯುಧಿಷ್ಠಿರ ನೃಪನನೆಕ್ಕಟಿ
ಗರೆದು ನಿಜಶಕ್ತಿಪ್ರಯೋಗವ
ನೊರೆದಡೊಡಬಿಟ್ಟನು ಹಸಾದದ ಮಧುರವಚನದಲಿ (ಶಲ್ಯ ಪರ್ವ, ೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ನಿಮ್ಮ ಸೇನೆಯ ವೀರರ ಸಂಹಾರಕ್ಕೆ ಕೃಷ್ಣಶಕ್ತಿಯ ಸ್ಫುರಣವೇ ಕಾರಣ. ನಿಮ್ಮ ಯುದ್ಧವು ದೈವಹೀನರ ವಿಲಾಸ. ಶ್ರೀಕೃಷ್ಣನು ಯುಧಿಷ್ಠಿರನನ್ನು ಪಕ್ಕಕ್ಕೆ ಕರೆದು ತನ್ನ ಶಕ್ತಿಯ ಪ್ರಯೋಗವನ್ನು ಬೋಧಿಸಿದನು. ಧರ್ಮಜನು ಮಹಾಪ್ರಸಾದ ಎಂದು ಸ್ವೀಕರಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲ್ಸಿಉ; ಶಕ್ತಿ: ಬಲ; ಸ್ಫುರಣ: ನಡುಗುವುದು, ಕಂಪನ; ಐಸಲೆ: ಅಲ್ಲವೆ; ಸಂಹರಣ: ನಾಶ; ಬೀಜ: ಮೂಲವಸ್ತು; ದೈವ: ಅಮರ; ವಿಲಾಸ: ವಿಹಾರ; ಹರಿ: ಕೃಷ್ಣ; ನೃಪ: ರಾಜ; ಎಕ್ಕಟಿ: ಒಬ್ಬಂಟಿಗ, ಏಕಾಕಿ, ಗುಟ್ಟು; ಕರೆ: ಬರೆಮಾಡು; ನಿಜ: ನೈಜ, ದಿಟ; ಶಕ್ತಿ: ಬಲ; ಪ್ರಯೋಗ: ಉಪಯೋಗ, ನಿದರ್ಶನ; ಒರೆ: ಶೋಧಿಸಿ; ಹಸಾದ: ಪ್ರಸಾದ, ಅನುಗ್ರಹ; ಮಧುರ: ಹಿತ; ವಚನ: ನುಡಿ;

ಪದವಿಂಗಡಣೆ:
ಅರಸ +ಕೇಳೈ +ಕೃಷ್ಣ+ಶಕ್ತಿ
ಸ್ಫುರಣವ್+ಐಸಲೆ +ನಿಮ್ಮ +ಬಲ +ಸಂ
ಹರಣಕ್+ಆವುದು +ಬೀಜ +ನಿರ್ದೈವರ +ವಿಲಾಸವಿದು
ಹರಿ +ಯುಧಿಷ್ಠಿರ+ ನೃಪನನ್+ಎಕ್ಕಟಿ
ಕರೆದು +ನಿಜಶಕ್ತಿ+ಪ್ರಯೋಗವನ್
ಒರೆದಡ್+ಒಡಬಿಟ್ಟನು +ಹಸಾದದ +ಮಧುರ+ವಚನದಲಿ

ಅಚ್ಚರಿ:
(೧) ಕೌರವರ ಸೋಲಿನ ಮೂಲ ಕಾರಣ – ನಿಮ್ಮ ಬಲ ಸಂಹರಣಕಾವುದು ಬೀಜ ನಿರ್ದೈವರ ವಿಲಾಸವಿದು

ಪದ್ಯ ೧೨: ದ್ರೋಣರು ಕೌರವರನ್ನು ಏನೆಂದು ಕರೆದರು?

ಎಲೆ ಸುಯೋಧನ ಕಾಳುಗೆಡೆದರೆ
ಫಲವನಿದರಲಿ ಕಾಣೆನಹಿತರ
ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು
ನಳಿನನಾಭನ ಮಂತ್ರಶಕ್ತಿಯ
ಬಲುಹು ನೀವ್ ನಿರ್ದೈವರವರ
ಗ್ಗಳ ಸದೈವರು ಕೆಟ್ಟಿರೆನ್ನೇನೆಂದನಾ ದ್ರೋಣ (ಭೀಷ್ಮ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೆಲಸಕ್ಕೆ ಬಾರದ ಮಾತನ್ನಾಡಿದರೆ, ಯಾವ ಪ್ರಯೋಜನವೂ ಇಲ್ಲ, ಶತ್ರು ಸೈನ್ಯದ ಬಲವು ಬಹು ಹೆಚ್ಚಿನದು, ಭೀಮಾರ್ಜುನರು ಬಲಶಾಲಿಗಳು, ಅವರಿಗೆ ಶ್ರೀಕೃಷ್ಣನ ಮಂತ್ರಾಲೋಚನೆಯ ಬೆಂಬಲವಿದೆ, ಅವರು ದೈವಬಲವುಳ್ಳವರು, ನೀವಾದರೋ ನಿರ್ದೈವಿಗಳು, ಕೇಡನ್ನು ಅನುಭವಿಸುವಿರಿ ಎಂದು ದ್ರೋಣರು ಹೇಳಿದರು.

ಅರ್ಥ:
ಕಾಳು: ಕೆಟ್ಟದ್ದು; ಕೆಡೆ: ಬೀಳು, ಕುಸಿ; ಫಲ: ಪ್ರಯೋಜನ; ಇದಿರು: ಎದುರು; ಕಾಣು: ನೋಡು; ಅಹಿತರು: ಶತ್ರು; ಬಲ: ಸೈನ್ಯ; ಭಾರಣೆ:ಮಹಿಮೆ; ಬಿಗುಹು: ಬಿಗಿ; ಬಲ್ಲಿದ: ಬಲಿಷ್ಠ; ನಳಿನನಾಭ: ಕೃಷ್ಣ; ಮಂತ್ರ: ವಿಚಾರ, ಆಲೋಚನೆ; ಶಕ್ತಿ: ಬಲ; ಬಲುಹು: ಬಲ, ಶಕ್ತಿ; ನಿರ್ದೈವ: ದೈವದ ಬಲಹೀನರು; ಅಗ್ಗಳ: ಶ್ರೇಷ್ಠ; ಸದೈವ: ದೈವದ ಬಲಹೊಂದಿದ; ಕೆಟ್ಟು: ಹಾಳು;

ಪದವಿಂಗಡಣೆ:
ಎಲೆ +ಸುಯೋಧನ+ ಕಾಳು+ಕೆಡೆದರೆ
ಫಲವನ್+ಇದರಲಿ +ಕಾಣೆನ್+ಅಹಿತರ
ಬಲದ +ಭಾರಣೆ +ಬಿಗುಹು +ಭೀಮಾರ್ಜುನರು +ಬಲ್ಲಿದರು
ನಳಿನನಾಭನ+ ಮಂತ್ರ+ಶಕ್ತಿಯ
ಬಲುಹು +ನೀವ್ +ನಿರ್ದೈವರ್+ಅವರ್
ಅಗ್ಗಳ +ಸದೈವರು +ಕೆಟ್ಟಿರ್+ಇನ್ನೇನೆಂದನಾ+ ದ್ರೋಣ

ಅಚ್ಚರಿ:
(೧) ಸದೈವ, ನಿರ್ದೈವ – ವಿರುದ್ಧ ಪದಗಳು
(೨) ಬ ಕಾರದ ಸಾಲು ಪದಗಳ ಬಳಕೆ – ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು