ಪದ್ಯ ೧೫: ದೂತರು ರಾಕ್ಷಸ ರಾಜನಿಗೆ ಏನು ಹೇಳಿದರು?

ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿವೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯಕೇಳುತ ಮೃಗವದಾವುದೆನುತ್ತ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜೀಯ ಬೇಟೆಗೆ ರಾಜಮೃಗಗಳು ಬಂದು ನಗರದ ಸಮೀಪದಲ್ಲಿವೆ. ನೀನು ತಪ್ಪದೆ ಬಲೆಗಳನ್ನು ತೆಗೆಸು, ಬೇಟೆಗೆ ಹೊರಡು. ಅಸುರರು ಆ ಮೃಗಗಳನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಸಿಸುವ ಕಷ್ಟವೇ ತಪ್ಪಿತು ಎಚ್ಚರಿಕೆ ಎಂದು ಹೇಳಲು, ರಾಕ್ಷಸ ರಾಜನು ಯಾವ ಮೃಗ ಬಂದಿದೆ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಬಲೆ: ಜಾಲ, ಬಂಧನ; ತೆಗೆ: ಹೊರತರು; ನಡೆ; ಚಲಿಸು; ನಿರ್ದಾಯದ: ಅಖಂಡ; ನಿಮ್ಮಡಿ: ನಿಮ್ಮ ಪಾದ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವ ಕ್ರೀಡೆ; ರಾಯ: ರಾಜ; ಮೃಗ: ಪ್ರಾಣಿ; ಐತರು: ಬಂದು ಸೇರು; ನಗರ: ಊರು; ಉಪಕಂಠ: ಹತ್ತಿರ; ಹೋಯಿತು:ಕಳೆದುಕೊಳ್ಳು; ಅಸುರ: ರಾಕ್ಷಸ; ಕೈಯ: ಹಸ್ತ; ಹೊಸೆ: ಮಥಿಸು; ಉಪಾಯ: ಯುಕ್ತಿ; ಪಾಯವಧಾರು: ಎಚ್ಚರಿಕೆ; ಖಳರಾಯ: ದುಷ್ಟರಾಜ; ಕೇಳು: ಆಲಿಸು;ಬ ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ಬಲೆಗಳ+ ತೆಗೆಸು+ ನಡೆ +ನಿ
ರ್ದಾಯದಲಿ +ನಿಮ್ಮಡಿಯ +ಬೇಟೆಗೆ
ರಾಯ +ಮೃಗವ್+ಐತಂದವ್+ಇವೆ +ನಗರೋಪಕಂಠದಲಿ
ಹೋಯಿತ್+ಅಸುರರ+ ಕೈಯ +ಹೊಸದಿರ್
ಉಪಾಯ +ಪಾಯವಧಾರೆನಲು +ಖಳ
ರಾಯ+ಕೇಳುತ +ಮೃಗವದ್+ಆವುದೆನುತ್ತ+ ಬೆಸಗೊಂಡ

ಅಚ್ಚರಿ:
(೧) ಜೀಯ, ರಾಯ – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಡೆ ನಿರ್ದಾಯದಲಿ ನಿಮ್ಮಡಿಯ

ಪದ್ಯ ೧೫: ಕರ್ಣನಿಟ್ಟ ಗುರಿಬಗ್ಗೆ ಶಲ್ಯನು ಏನು ಹೇಳಿದ?

ಆಯಿತಿದು ಸರಳೊಳ್ಳಿತೈ ಕುರು
ರಾಯನಭ್ಯುದಯ ಪ್ರಪಂಚವಿ
ದಾಯಿತೌ ಸಂಧಾನವೊಡಬಡದೆನ್ನ ಚಿತ್ತದಲಿ
ಸಾಯಕವ ನೀ ತಿರುಗಿ ತೊಡು ನಿ
ರ್ದಾಯದಲಿ ನೆಲನಹುದಲಾ ರಾ
ಧೇಯ ಎಂದನು ಶಲ್ಯನವನೀಪಾಲ ಕೇಳೆಂದ (ಕರ್ಣ ಪರ್ವ, ೨೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ತನ್ನ ಮಾತನ್ನು ಮುಂದುವರಿಸುತ್ತಾ, ಈ ಅಸ್ತ್ರವೇನೋ ಅತಿ ಶ್ರೇಷ್ಠವಾದುದು, ಇದು ಕುರುರಾಯನ ಅಭ್ಯುದಯಕ್ಕೆ ಸಾಧನವಾಗಿದೆ. ಆದರೆ ನೀನಿಟ್ಟ ಗುರಿ ನನ್ನ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ನೀನು ಈ ಬಾಣವನ್ನು ಮತ್ತೆ ಹೂಡಿದರೆ ಕೌರವನಿಗೆ ನಿಶ್ಚಯವಾಗಿ ರಾಜ್ಯಾಧಿಪತ್ಯ ದೊರಕುತ್ತದೆ ಎಂದನು.

ಅರ್ಥ:
ಆಯಿತು: ತೀರಿತು, ಮುಗಿಯಿತು; ಸರಳು: ಬಾಣ; ರಾಯ: ರಾಜ; ಅಭ್ಯುದಯ: ಅಭಿವೃದ್ಧಿ; ಪ್ರಪಂಚ: ಜಗತ್ತು; ಸಂಧಾನ: ಸಂಯೋಗ, ಹೊಂದಿಸುವುದು; ಒಡಬಡಿಸು: ಒಪ್ಪಿಸು; ಚಿತ್ತ: ಮನಸ್ಸು; ಸಾಯಕ: ಬಾಣ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ತೊಡು: ಧರಿಸು; ನಿರ್ದಾಯದ: ಅಖಂಡ; ನೆಲ: ಭೂಮಿ; ಅಹುದು: ಸಮ್ಮತಿಸು, ಹೌದು; ರಾಧೇಯ: ಕರ್ಣ; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಯಿತ್+ಇದು +ಸರಳ್+ಒಳ್ಳಿತೈ +ಕುರು
ರಾಯನ್+ಅಭ್ಯುದಯ +ಪ್ರಪಂಚವಿದ್
ಆಯಿತೌ +ಸಂಧಾನವ್+ಒಡಬಡದ್+ಎನ್ನ +ಚಿತ್ತದಲಿ
ಸಾಯಕವ+ ನೀ +ತಿರುಗಿ +ತೊಡು +ನಿ
ರ್ದಾಯದಲಿ +ನೆಲನ್+ಅಹುದಲಾ +ರಾ
ಧೇಯ +ಎಂದನು +ಶಲ್ಯನ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ಸಮನಾರ್ಥಕ ಪದ – ರಾಯ, ಆವನೀಪಾಲ; ಸರಳು, ಸಾಯಕ

ಪದ್ಯ ೧೦: ಮುಕ್ತಿರಾಜ್ಯವನ್ನು ಹೇಗೆ ವಶಪಡಿಸಿಕೊಳ್ಳಬೇಕು?

ಕಾಯವಿದು ನೆಲೆಯಲ್ಲ ಸಿರಿತಾ
ಮಾಯರೂಪಿನ ಮೃತ್ಯು ದೇವತೆ
ಬಾಯಬಿಡುತಿಹಳಾವುದೀತನ ಕಾಲಗತಿಯೆಂದು
ದಾಯವರಿತು ಮಹಾತ್ಮರಿದಕೆ ಸ
ಹಾಯ ಧರ್ಮವ ವಿರಚಿಸುತ ನಿ
ರ್ದಾಯದಲಿ ಕೈ ಸೂರೆಗೊಂಬುದು ಮುಕ್ತಿ ರಾಜ್ಯವನು (ಉದ್ಯೋಗ ಪರ್ವ, ೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಈ ದೇಹವು ಶಾಶ್ವತವಲ್ಲ. ಐಶ್ವರ್ಯವು ಮಾಯರೂಪವಾಗಿರುವು ಮೃತ್ಯು ದೇವತೆ, ಇದು ಬಾಯಿಬಿಡುತ್ತಾ ಇವನ ಕಾಲವೆಂದು ಕೊನೆಗೊಳ್ಳುತ್ತದೆ ಎಂದು ಕಾಯುತ್ತಿದಾಳೆ. ಈ ವ್ಯೂಹವನ್ನು ಯಾವ ಲೆಕ್ಕದಿಂದ ದಾಟಬೇಕು ಎಂದರಿತ ಮಹಾತ್ಮರು, ಧರ್ಮದ ಸಹಾಯದಿಂದ ಜೀವನವನ್ನು ರೂಪಿಸಿಕೊಂಡು, ಮೋಕ್ಷದ ಸ್ಥಾನಕ್ಕೆ ನಿರ್ದಾಕ್ಷಿಣ್ಯದಿಂದ ವಶಪಡಿಸಿಕೊಳ್ಳಬೇಕು.

ಅರ್ಥ:
ಕಾಯ: ದೇಹ; ನೆಲೆ: ಆಶ್ರಯ, ವಾಸಸ್ಥಾನ; ಸಿರಿ: ಐಶ್ವರ್ಯ; ಮಾಯ: ಇಂದ್ರಜಾಲ; ರೂಪ: ಆಕಾರ; ಮೃತ್ಯು: ಸಾವು; ದೇವತೆ: ದೇವಿ; ಬಾಯಿ: ಮುಖದ ಅಂಗ; ಬಿಡು: ಅಡೆಯಿಲ್ಲದಿರು ; ಕಾಲ: ಸಮಯ, ಸಾವು; ದಾಯ: ರೀತಿ; ಪಾಲು; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಸಹಾಯ: ನೆರವು; ಧರ್ಮ: ಧಾರಣೆ ಮಾಡಿರುವುದು; ವಿರಚಿಸು: ಕಟ್ಟು, ನಿರ್ಮಿಸು; ನಿರ್ದಾಯದ: ಅಖಂಡ; ಕೈ: ಕರ; ಸೂರೆ: ಸುಲಿಗೆ; ಮುಕ್ತಿ: ಮೋಕ್ಷ; ರಾಜ್ಯ: ದೇಶ;

ಪದವಿಂಗಡಣೆ:
ಕಾಯವಿದು +ನೆಲೆಯಲ್ಲ +ಸಿರಿ+ತಾ+
ಮಾಯ+ರೂಪಿನ +ಮೃತ್ಯು +ದೇವತೆ
ಬಾಯಬಿಡುತಿಹಳ್ +ಆವುದೀತನ+ ಕಾಲಗತಿಯೆಂದು
ದಾಯವರಿತು +ಮಹಾತ್ಮರ್+ಇದಕೆ +ಸ
ಹಾಯ +ಧರ್ಮವ +ವಿರಚಿಸುತ+ ನಿ
ರ್ದಾಯದಲಿ +ಕೈ +ಸೂರೆಗೊಂಬುದು+ ಮುಕ್ತಿ +ರಾಜ್ಯವನು

ಅಚ್ಚರಿ:
(೧) ಕಾಯ, ಮಾಯ, ದಾಯ, ಸಹಾಯ, ನಿರ್ದಾಯ, ಬಾಯ – ಪ್ರಾಸ ಪದಗಳು
(೨) ಕಾಲ, ಮೃತ್ಯು – ಸಮನಾರ್ಥಕ ಪದ

ಪದ್ಯ ೪೮: ಯಾವುದರಿಂದ ಪಾಪವನ್ನು ಅನುಭವಿಸಬಾರದು?

ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಘಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯಲ
ನ್ಯಾಯ ಹೊದ್ದುವ ಪಾಪವನು ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಆದಾಯವಿಲ್ಲದ ವ್ಯಯವನ್ನು, ಪೂರ್ಣವಾಗಿಲ್ಲದ ಹೊಡೆತವನ್ನು, ನಿಶ್ಚಯ ದೃಢತೆಗಳಿಲ್ಲದ ಮಂತ್ರಾಲೋಚನೆಗಳನ್ನು ಮಾಡಿ, ನಡತೆಯಲ್ಲಿ ನ್ಯಾಯವಿಲ್ಲದೆ, ಅನ್ಯಾಯದಿಂದ ಪಾಪವನ್ನು ಮಾಡಿ ಅದರ ಫಲವನ್ನು ನೀನು ಅನುಭವಿಸುವುದಿಲ್ಲ ತಾನೆ?

ಅರ್ಥ:
ಆಯ: ಆದಾಯ; ಬೀಯ:ವ್ಯಯ; ಪೂರ: ಪೂರ್ಣ; ಘಾಯ:ನೋವು; ನಿರ್ದಾಯ: ಅಖಂಡ; ಮಂತ್ರ: ವಿಚಾರ, ಆಲೋಚನೆ; ಲೇಸು: ಒಳ್ಳೆಯದು; ರಚಿಸು: ನಿರ್ಮಿಸು; ನ್ಯಾಯ: ನೀತಿಬದ್ದವಾದ; ನಡವಳಿ: ನಡತೆ; ಅನ್ಯಾಯ: ನ್ಯಾಯಸಮ್ಮತವಲ್ಲದ; ಪಾಪ:ಕೆಟ್ಟ ಕೆಲಸ; ಕಾಯ: ಶರೀರ; ಧರಿಸು: ಹೊರು; ಭೂಪಾಲ: ರಾಜ;

ಪದವಿಂಗಡಣೆ:
ಆಯವಿಲ್ಲದ +ಬೀಯವನು +ಪೂ
ರಾಯ+ವಿಲ್ಲದ +ಘಾಯವನು +ನಿ
ರ್ದಾಯವಿಲ್ಲದ+ ಮಂತ್ರವನು +ಲೇಸಾಗಿ +ಮಿಗೆ +ರಚಿಸಿ
ನ್ಯಾಯವಿಲ್ಲದ +ನಡವಳಿಯಲ್
ಅನ್ಯಾಯ +ಹೊದ್ದುವ +ಪಾಪವನು +ನಿಜ
ಕಾಯದಲಿ +ನೀ+ ಧರಿಸೆಯೆಲೆ +ಭೂಪಾಲ +ಕೇಳೆಂದ

ಅಚ್ಚರಿ:
(೧) ಆಯ, ಪೂರಾಯ, ನಿರ್ದಾಯ, ನ್ಯಾಯ, ಕಾಯ – ಯ ಕಾರದಿಂದ ಕೊನೆಗೊಳ್ಳುವ ಪದಗಳು
(೨) ನ್ಯಾಯ – ೪, ೫ ಸಾಲಿನ ಮೊದಲ ಪದ