ಪದ್ಯ ೪: ಬಾಲೆಯರು ಹೇಗೆ ವನದಲ್ಲಿ ಅಲೆದಾಡಿದರು?

ಕೆಲರು ಹೊಂದಾವರೆಯ ಹಂತಿಯ
ಕೊಳನ ಹೊಕ್ಕರು ಬಿಲ್ವಫಲಗಳ
ನಿಲುಕಿಕೊಯ್ದರು ಕೊಡಹಿ ಮೊಲೆಗಳ ಮೇಲುದಿನ ನಿರಿಯ
ಕೆಲರು ಹೂಗೊಂಚಲಿನ ತುಂಬಿಯ
ಬಳಗವನು ಬೆಂಕೊಂಡರುಲಿವರೆ
ಗಿಳಿಗೆ ಹಾರದ ಬಲೆಗಳನು ಹಾಯ್ಕಿದರು ಕೊಂಬಿನಲಿ (ಅರಣ್ಯ ಪರ್ವ, ೧೯ ಸಂಧಿ, ೪ ಪದ್ಯ)

ತಾತ್ಪರ್ಯ:
ಕೆಲವರು ಕೆಂದಾವರೆಯ ಸಾಲುಗಳಿದ್ದ ಕೊಳಗಳಲ್ಲಿಳಿದರು. ಕೆಲವರು ತಮ್ಮ ಎದೆಯ ಮೇಲಿನ ಸೆರಗನ್ನು ತೆಗೆದು ಕೊಡವಿ, ಎರಡು ಪಾದಗಳನ್ನು ಮೇಲೆತ್ತಿ ಬಿಲ್ವ ಫಲಗಳನ್ನು ಕೊಯ್ದರು. ಕೆಲವರು ಹೂಗೊಂಚಲನ್ನು ಕೀಳಲು ಅದಕ್ಕೆ ಮುತ್ತಿದ್ದ ದುಂಬಿಗಳು ಅವರನ್ನು ಹಿಂಬಾಲಿಸಿದವು. ಇನ್ನು ಕೆಲವರು ಮರದ ಮೇಲಿನ ಅರಿಗಿಣಿಗಳೊಡನೆ ಮಾತಾಡುತ್ತ ತಾವು ತೊಟ್ಟ ಹಾರಗಳನ್ನು ಬಲೆಯಂತೆ ಉಪಯೋಗಿಸಿ ಹಿಡಿಯಲು ಪ್ರಯತ್ನಿಸಿದರು.

ಅರ್ಥ:
ಕೆಲರು: ಸ್ವಲ್ಪ ಜನ; ಹೊಂದಾವರೆ: ಕೆಂಪಾದ ಕಮಲ; ಹಂತಿ: ಸಾಲು; ಪಂಕ್ತಿ; ಕೊಳ: ಸರೋವರ; ಹೊಕ್ಕು: ಸೇರು; ಫಲ: ಹಣ್ಣು; ನಿಲುಕು: ಕೈಚಾಚಿ ಹಿಡಿ; ಕೊಯ್: ಸೀಳು; ಕೊಡಹು: ಅಲ್ಲಾಡಿಸು, ದೂರತಳ್ಳು; ಮೊಲೆ: ಸ್ತನ; ಮೇಲುದಿನ: ಮೇಲೆ ಹೊದ್ದಿದ, ಬಟ್ಟೆ; ನಿರಿ: ಸೀರೆಯ ಮಡಿಕೆ; ಹೂ: ಪುಷ್ಪ; ಗೊಂಚಲು: ಗುಂಪು; ತುಂಬಿ: ದುಂಬಿ, ಭ್ರಮರ; ಬಳಗ: ಸಮೂಹ; ಬೆಂಕೊಂಡು: ಬೆನ್ನು ಹತ್ತು; ಉಲಿ: ಧ್ವನಿ; ಗಿಳಿ: ಶುಕ; ಹಾರ: ಸರ; ಬಲೆ: ಜಾಲ, ಬಂಧನ; ಹಾಯ್ಕು: ಹೂಡು, ಹೊಡೆ; ಕೊಂಬು: ಕೊಂಬೆ, ಹೆಮ್ಮೆ;

ಪದವಿಂಗಡಣೆ:
ಕೆಲರು +ಹೊಂದಾವರೆಯ +ಹಂತಿಯ
ಕೊಳನ +ಹೊಕ್ಕರು +ಬಿಲ್ವ+ಫಲಗಳ
ನಿಲುಕಿ+ಕೊಯ್ದರು +ಕೊಡಹಿ +ಮೊಲೆಗಳ+ ಮೇಲುದಿನ+ ನಿರಿಯ
ಕೆಲರು +ಹೂ+ಗೊಂಚಲಿನ+ ತುಂಬಿಯ
ಬಳಗವನು+ ಬೆಂಕೊಂಡರ್+ಉಲಿವರೆ
ಗಿಳಿಗೆ +ಹಾರದ+ ಬಲೆಗಳನು +ಹಾಯ್ಕಿದರು +ಕೊಂಬಿನಲಿ

ಅಚ್ಚರಿ:
(೧) ಬಟ್ಟೆ ಕೊಡವಿದರು ಎಂದು ಹೇಳಲು – ಕೊಡಹಿ ಮೊಲೆಗಳ ಮೇಲುದಿನ ನಿರಿಯ