ಪದ್ಯ ೨೦: ಅಶ್ವತ್ಥಾಮನು ಯಾವುದನ್ನು ಮಂತ್ರಿಸಿ ಪಾಂಡವರ ಮೇಲೆ ಬಿಟ್ಟನು?

ಕಾಯಬಲ್ಲೈ ಪಾಂಡವರನು ನಿ
ರಾಯುಧರು ನಾವೆಂದು ನೀ ನಿ
ರ್ದಾಯುದಲಿ ನಿನ್ನವರು ಹೊಗುವರೆ ಹಸ್ತಿನಾಪುರವ
ಸಾಯಕವ ಪರಿಹರಿಸು ಪಾಂಡವ
ರಾಯಜೀವಿ ಗಡೆನುತ ವರ ಚ
ಕ್ರಾಯುಧನ ಬೋಳೈಸಿ ತೃಣದಿಂದಿಟ್ಟನಾ ದ್ರೌಣಿ (ಗದಾ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ಕೃಷ್ಣಾ, ನೀನು ಪಾಂಡವರನ್ನು ಕಾಯಬಲ್ಲೆಯಾ? ನನ್ನಲ್ಲಿ ಆಯುಧವಿಲ್ಲದ ಮಾತ್ರಕ್ಕೆ ನಿನ್ನವರು ಹಸ್ತಿನಾಪುರಕ್ಕೆ ಹೋಗಬಲ್ಲರೇ? ಇದೋ ಈ ಅಸ್ತ್ರವನ್ನು ಪರಿಹರಿಸು, ನೀನು ಪಾಂಡವಜೀವಿಯಲ್ಲವೇ? ಎನ್ನುತ್ತಾ ಮಂತ್ರಿಸಿ ಒಂದು ಹುಲ್ಲುಕಡ್ಡಿಯನ್ನು ಬಿಟ್ಟನು.

ಅರ್ಥ:
ಕಾಯು: ರಕ್ಷಿಸು; ನಿರಾಯುಧ: ಆಯುಧವಿಲ್ಲದಿರುವ ಸ್ಥಿತಿ; ಹೊಗು: ತೆರಳು; ಆಯು: ಕಾಲ; ಸಾಯಕ: ಬಾಣ, ಶರ, ಕತ್ತಿ; ಪರಿಹರಿಸು: ನಿವಾರಿಸು; ರಾಯ: ರಾಜ; ಜೀವಿ: ಜೀವಿಸುವ; ವರ: ಶ್ರೇಷ್ಠ; ಚಕ್ರ: ಗಾಲಿ; ಆಯುಧ: ಶಸ್ತ್ರ; ಬೋಳೈಸು: ಸಂತೈಸು, ಸಮಾಧಾನ ಮಾಡು; ತೃಣ: ಹುಲ್ಲು;

ಪದವಿಂಗಡಣೆ:
ಕಾಯಬಲ್ಲೈ +ಪಾಂಡವರನು +ನಿ
ರಾಯುಧರು +ನಾವೆಂದು +ನೀನಿರ್ದ್
ಆಯುದಲಿ +ನಿನ್ನವರು +ಹೊಗುವರೆ +ಹಸ್ತಿನಾಪುರವ
ಸಾಯಕವ +ಪರಿಹರಿಸು +ಪಾಂಡವರ್
ಆಯಜೀವಿ+ ಗಡೆನುತ+ ವರ +ಚ
ಕ್ರಾಯುಧನ +ಬೋಳೈಸಿ +ತೃಣದಿಂದ್+ಇಟ್ಟನಾ +ದ್ರೌಣಿ

ಅಚ್ಚರಿ:
(೧) ಕೃಷ್ಣನನ್ನು ಚಕ್ರಾಯುಧನ ಎಂದು ಕರೆದಿರುವುದು;
(೨) ನಿರಾಯುಧ, ಚಕ್ರಾಯುಧ – ಪ್ರಾಸ ಪದಗಳು

ಪದ್ಯ ೨೮: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೫?

ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀರನ್ನು ಹೊಕ್ಕವನನ್ನು, ಹುಲ್ಲನ್ನು ಕಚ್ಚಿದ ನೀಚನನ್ನು, ಮರದ ಮೇಲೆ ಬೆಟ್ಟದ ಕೋಡುಗಲ್ಲಿನ ಮೇಲೆ ಕಾಲನ್ನು ಸಿಕ್ಕಿಸಿದವನನ್ನು, ಹುತ್ತವನ್ನೇರಿದವನನ್ನು, ಆಯುಧವಿಲ್ಲದವನನ್ನು ಕೊಲ್ಲುವುದು ಉಚಿತವಲ್ಲೆವೆಂಬ ಶಾಸ್ತ್ರವನ್ನು ನಂಬಿದ್ದರೆ ಕೇಳು, ನಿನ್ನನ್ನು ಕೊಲ್ಲುವುದಕ್ಕೆ ನಾವು ಶಾಸ್ತ್ರವನ್ನು ಕೇಳಿಲ್ಲ, ಅರಿತಿಲ್ಲ ಎಂದು ಭೀಮನು ಗರ್ಜಿಸಿದನು.

ಅರ್ಥ:
ಜಲ: ನೀರು; ಹೊಕ್ಕು: ಸೇರು; ಹುಲ್ಲು: ತೃಣ; ಕಚ್ಚು: ಕಡಿ, ನೋಯು; ಖಳ: ದುಷ್ಟ; ತರು: ಮರ; ಗಿರಿ: ಬೆಟ್ಟ; ಶಿಖರ: ತುದಿ; ಕಾಲು: ಪಾದ; ತೊಳಸಿದ: ಸಿಕ್ಕಿಸಿದ; ವಲ್ಮೀಕ: ಹುತ್ತ; ಸಂಗ: ಜೊತೆ; ನಿರಾಯುಧ: ಶಸ್ತ್ರವಿಲ್ಲದ ಸ್ಥಿತಿ; ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಶಾಸ್ತ್ರ: ಧರ್ಮ ಗ್ರಂಥ; ತಿಳಿ: ಗೊತ್ತುಮಾಡು; ನಂಬು: ವಿಶ್ವಾಸವಿಡು; ಕೊಲು: ಸಾಯಿಸು; ಶ್ರುತ: ಕೇಳಿದ, ಆಲಿಸಿದ;

ಪದವಿಂಗಡಣೆ:
ಜಲವ+ಹೊಕ್ಕನ +ಹುಲ್ಲ +ಕಚ್ಚಿದ
ಖಳನ +ತರು+ಗಿರಿ+ಶಿಖರದಲಿ +ಕಾ
ಲ್ದೊಳಸಿದನ +ವಲ್ಮೀಕ+ಸಂಗತನನು+ ನಿರಾಯುಧನ
ಕೊಲುವುದ್+ಅನುಚಿತವೆಂಬ +ಶಾಸ್ತ್ರವ
ತಿಳಿದು +ನಂಬಿದೆ +ನಿನ್ನನೊಬ್ಬನ
ಕೊಲುವುದಕೆ+ ಶ್ರುತ+ಶಾಸ್ತ್ರರಾವಲ್ಲ್+ಎಂದನಾ +ಭೀಮ

ಅಚ್ಚರಿ:
(೧) ಶಾಸ್ತ್ರದ ಪ್ರಕಾರ ಯಾರನ್ನು ಕೊಲುವುದು ಅನುಚಿತ – ಜಲವಹೊಕ್ಕನ, ಹುಲ್ಲ ಕಚ್ಚಿದ ಖಳನ, ತರು ಗಿರಿ ಶಿಖರದಲಿ ಕಾಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ ಕೊಲುವುದನುಚಿತ

ಪದ್ಯ ೪೦: ನಾರಾಯಣಾಸ್ತ್ರವು ಏನನ್ನು ನೋಡಿತು?

ಹರಿಯ ಬಯ್ಗುಳು ಬೆದರಿಸಲು ನೃಪ
ನಿರೆ ನಿರಾಯುಧನಾಗಿ ಮಾದ್ರೇ
ಯರು ಶಿಖಂಡಿ ಯುಯುತ್ಸು ಸಾತ್ಯಕಿ ಸೃಂಜಯಾದಿಗಳು
ಕರದ ಕದಪಿನ ತಳಿತ ಮುಸುಕಿನ
ಮುರಿದ ಮೋರೆಯ ಮುಂದೆ ಹರಹಿದ
ತರತರದ ಕೈದುಗಳ ಸುಭಟರ ಕಂಡುದಮಳಾಸ್ತ್ರ (ದ್ರೋಣ ಪರ್ವ, ೧೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಬೈಗುಳಿಗೆ ಹೆದರಿ ಧರ್ಮಜನು ನಿರಾಯುಧನಾಗಿ ಕುಳಿತಿದ್ದನು. ನಕುಲ, ಸಹದೇವ, ಶಿಖಂಡಿ, ಯುಯುತ್ಸು, ಸಾತ್ಯಕಿ ಸೃಂಜಯ ಮೊದಲಾದವರೆಲ್ಲಾ ಕೆನ್ನೆಯ ಮೇಲೆ ಕೈಯಿಟ್ಟು ಮುಸುಕು ಹಾಕಿಕೊಂಡು ಆಯುಧಗಳನ್ನೂ ತಮ್ಮ ಮುಂದೆ ಹರಡಿ ಇಟ್ಟುಕೊಂಡಿರುವುದನ್ನು ನಾರಾಯಣಾಸ್ತ್ರವು ನೋಡಿತು.

ಅರ್ಥ:
ಹರಿ: ಕೃಷ್ಣ; ಬಯ್ಗುಳು: ಜರಿದ ಮಾತು; ಬೆದರಿಸು: ಹೆದರಿಸು; ನೃಪ: ರಾಜ; ನಿರಾಯುಧ: ಆಯುಧವಿಲ್ಲದ ಸ್ಥಿತಿ; ಆದಿ: ಮುಂತಾದ; ಕರ: ಕೈ; ಕದಪು: ಕೆನ್ನೆ; ತಳಿತ: ಚಿಗುರಿದ; ಮುಸುಕು: ಹೊದಿಕೆ; ಮುರಿ: ಸೀಳು; ಮೋರೆ: ಮುಖ; ಮುಂದೆ: ಎದುರು; ಹರಹು: ವಿಸ್ತಾರ, ವೈಶಾಲ್ಯ; ತರತರ: ವಿಧವಿಧ; ಕೈದು: ಆಯುಧ; ಸುಭಟ: ಪರಾಕ್ರಮಿ; ಅಮಳ: ನಿರ್ಮಲ; ಅಸ್ತ್ರ: ಶಸ್ತ್ರ;

ಪದವಿಂಗಡಣೆ:
ಹರಿಯ +ಬಯ್ಗುಳು +ಬೆದರಿಸಲು+ ನೃಪ
ನಿರೆ +ನಿರಾಯುಧನಾಗಿ+ ಮಾದ್ರೇ
ಯರು +ಶಿಖಂಡಿ +ಯುಯುತ್ಸು +ಸಾತ್ಯಕಿ+ ಸೃಂಜಯಾದಿಗಳು
ಕರದ +ಕದಪಿನ +ತಳಿತ +ಮುಸುಕಿನ
ಮುರಿದ+ ಮೋರೆಯ +ಮುಂದೆ +ಹರಹಿದ
ತರತರದ +ಕೈದುಗಳ +ಸುಭಟರ +ಕಂಡುದ್+ಅಮಳಾಸ್ತ್ರ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮುಸುಕಿನ ಮುರಿದ ಮೋರೆಯ ಮುಂದೆ
(೨) ಬೇಜಾರು, ನಿರುತ್ಸಾಹ ಎಂದು ಹೇಳುವ ಪರಿ – ಮುರಿದ ಮೋರೆಯ