ಪದ್ಯ ೨೦: ಯುಧಿಷ್ಠಿರನು ಯಾವ ಅರಣ್ಯಪ್ರದೇಶಕ್ಕೆ ಬಂದನು?

ಅರಸಬಂದನು ಗಂಧಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನಸಹಿತ
ಸರಸಿನೆರೆಯವು ಸ್ನಾನಪಾನಕೆ
ತರುಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಯುಧಿಷ್ಠಿರನು ಗಂಧಮಾದನ ಗಿರಿಯ ತಪ್ಪಲಿಗೆ ಅಗ್ನಿಹೋತ್ರಿಗಳಾದ ಬ್ರಾಹ್ಮಣರು, ದ್ರೌಪದಿ ಮತ್ತು ನಿಯೋಗಿಗಳೊಡನೆ ಬಂದನು. ಅಲ್ಲಿನ ಸರೋವರಗಳು ಆ ಸಮೂಹಕ್ಕೆ ಸ್ನಾನಪಾನಗಳಿಗೆ ಸಾಕಾಗಲಿಲ್ಲ. ಅಲ್ಲಿನ ಮಗರಿಡಗಳು ಧರ್ಮರಾಯನ ಪರಿವಾರದವರಿಗೆ ಸಾಕಾಗಲಿಲ್ಲ.

ಅರ್ಥ:
ಅರಸ: ರಾಜ; ಬಂದನು: ಆಗಮಿಸು; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಪಕ್ಕದ ಪ್ರದೇಶ; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ಪರಮ: ಶ್ರೇಷ್ಠ; ಋಷಿ: ಮುನಿ; ಮಡದಿ: ಹೆಂದತಿ; ಸಕಲ: ಎಲ್ಲಾ; ನಿಯೋಗ: ಸೇರು, ಕೆಲಸ; ಸಹಿತ: ಜೊತೆ; ಸರಸಿ: ನೀರು; ಸ್ನಾನ: ಅಭ್ಯಂಜನ; ಪಾನ: ಕುಡಿ; ತರು: ಮರ; ಲತೆ: ಬಳ್ಳಿ; ಆವಳಿ: ಸಾಲು; ಅರಮನೆ: ಆಲಯ; ಸೀವಟ: ಹಿಂಡು, ಹಣ್ಣಿನ ರಸ; ಸಾಲವು: ಕಡಿಮೆಯಾಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ+ಬಂದನು +ಗಂಧಮಾದನ
ಗಿರಿಯ+ತಪ್ಪಲಿಗ್+ಅಗ್ನಿಹೋತ್ರದ
ಪರಮ+ಋಷಿಗಳು +ಮಡದಿ +ಸಕಲ +ನಿಯೋಗಿ +ಜನಸಹಿತ
ಸರಸಿನೆರೆಯವು +ಸ್ನಾನ+ಪಾನಕೆ
ತರು+ಲತಾವಳಿಗಳು +ಯುಧಿಷ್ಠಿರನ್
ಅರಮನೆಯ+ ಸೀವಟಕೆ +ಸಾಲವು +ನೃಪತಿ +ಕೇಳೆಂದ

ಅಚ್ಚರಿ:
(೧) ಅರಸ, ನೃಪತಿ – ಸಮನಾರ್ಥಕ ಪದ

ಪದ್ಯ ೨೧: ವಿದುರನು ಪಾಂಡವರ ವನವಾಸದ ಬಗ್ಗೆ ಏನು ಹೇಳಿದ?

ಅರಸ ಕೇಳ್ಗಂಗಾ ನದಿಯನು
ತ್ತರಿಸಿದವರಿಗೆ ಕಮಲಮಿತ್ರನ
ಕರುಣವಾಯಿತು ಕನಕಪಾತ್ರೆಯೊಳಕ್ಷಯಾನ್ನದಲಿ
ಪರಿಕರದ ಪರುಟವಣೆಯಲಿ ಸಾ
ವಿರದ ಶತ ಸಂಖ್ಯಾತ ಧರಣೀ
ಸುರ ನಿಯೋಗಿಗಳಾಪ್ತಜನ ಸಹಿತೈದಿದರು ವನವ (ಅರಣ್ಯ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಪಾಂಡವರು ಗಂಗಾ ನದಿಯನ್ನು ದಾಟಿದರು. ಅವರ ಹಿಂದೆ ಅಸಂಖ್ಯಾತ ಜನರು ಪಾಂಡವರನ್ನು ಹಿಂಬಾಲಿಸಿದರು. ಅವರಿಗೆಲ್ಲರಿಗೂ ಊಟದ ವ್ಯವಸ್ಥೆಗೆ ಧರ್ಮಜನು ಸೂರ್ಯನನ್ನು ಬೇಡಿ ಅಕ್ಷಯಪಾತ್ರೆಯನ್ನು ಪಡೆದನು. ಈ ಅಕ್ಷಯಪಾತ್ರೆಯಿಂದ ಅವರ ಸುತ್ತಲ್ಲಿದ್ದ ಲಕ್ಷಾಂತರ ಪರಿಜನರು, ನಿಯೋಗಿಗಳು, ಆಪ್ತರು, ಬ್ರಾಹ್ಮಣರೂ ಇದ್ದರು. ಇವರೆಲ್ಲರೊಡನೆ ಪಾಂಡವರು ಕಾಮಾಕ್ಯವನದತ್ತ ಪ್ರಯಾಣ ಮಾಡಿದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನದಿ: ಸರೋವರ; ಉತ್ತರ: ತರುವಾಯ; ಕಮಲಮಿತ್ರ: ಸೂರ್ಯ; ಮಿತ್ರ: ಸ್ನೇಹಿತ; ಕಮಲ: ಪದ್ಮ; ಕರುಣ: ದಯೆ; ಕನಕ: ಚಿನ್ನ; ಪಾತ್ರೆ: ಕಳಗ, ತಪ್ಪಲೆ; ಅಕ್ಷಯ: ಬರಿದಾಗದುದು; ಅನ್ನ: ಊಟ; ಪರಿಕರ: ಸುತ್ತುಮುತ್ತಲಿನಜನ, ಪರಿಜನ; ಪರುಟವ: ವ್ಯಾಪ್ತಿ, ವಿಸ್ತಾರ; ಸಾವಿರ: ಸಹಸ್ರ; ಶತ: ನೂರು; ಅಸಂಖ್ಯಾತ: ಲೆಕ್ಕವಿಲ್ಲದ; ಧರಣಿಸುರ: ಬ್ರಾಹ್ಮಣ; ಧರಣಿ: ಭೂಮಿ; ನಿಯೋಗಿ: ಸೇವಕ; ಆಪ್ತಜನ: ಹತ್ತಿರದವರು; ಸಹಿತ: ಜೊತೆ; ಐದು: ಹೋಗಿಸೇರು; ವನ: ಕಾಡು;

ಪದವಿಂಗಡಣೆ:
ಅರಸ +ಕೇಳ್+ಗಂಗಾ +ನದಿಯನ್
ಉತ್ತರಿಸಿದವರಿಗೆ+ ಕಮಲಮಿತ್ರನ
ಕರುಣವಾಯಿತು +ಕನಕಪಾತ್ರೆಯೊಳ್+ಅಕ್ಷಯ+ಅನ್ನದಲಿ
ಪರಿಕರದ+ ಪರುಟವಣೆಯಲಿ +ಸಾ
ವಿರದ +ಶತ+ ಸಂಖ್ಯಾತ +ಧರಣೀ
ಸುರ+ ನಿಯೋಗಿಗಳ್+ಆಪ್ತಜನ +ಸಹಿತ್+ಐದಿದರು +ವನವ

ಅಚ್ಚರಿ:
(೧) ಸೂರ್ಯನನ್ನು ಕಮಲಮಿತ್ರ ಎಂದು ಕರೆದಿರುವುದು
(೨) ಹೆಚ್ಚಿನ ಜನ ಎಂದು ಹೇಳಲು – ಸಾವಿರದ ಶತ ಸಂಖ್ಯಾತ ಪದದ ಬಳಕೆ
(೩) ಕ ಕಾರದ ತ್ರಿವಳಿ ಪದ – ಕಮಲಮಿತ್ರನ ಕರುಣವಾಯಿತು ಕನಕಪಾತ್ರೆಯೊಳಕ್ಷಯಾನ್ನದಲಿ